ಸಂಜೀವಿನಿ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ 6 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿಗೆ ಚಾಲನೆ

0

ಮಹಿಳಾ ಸ್ವ-ಉದ್ಯಮಕ್ಕೆ ಉಚಿತ ತರಬೇತಿ ಪಡೆದು ಯಶಸ್ವಿ ಉದ್ಯಮಿಯಾಗಿ- ನವೀನ್ ಭಂಡಾರಿ

ಪುತ್ತೂರು: ಕೇಂದ್ರ ಮತ್ತು ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಸ್ವ-ಸಹಾಯ ಸಂಘದ ಸದಸ್ಯರಿಗೆ ನೀಡುತ್ತಿದೆ. ಇದರಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಜೀವನಮಟ್ಟ ಸುಧಾರಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಂಡು ಮಾದರಿ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನವನ್ನು ಮಾಡಿ, ಯಶಸ್ವಿ ಉದ್ಯಮಿಯಾಗುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೇಳಿದರು.


ತಾ.ಪಂ ಕಿರು ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ, ಸಂಜೀವಿನಿ ಕೆ.ಎಸ್.ಆರ್.ಎಲ್.ಪಿ.ಎಸ್. ಬೆಂಗಳೂರು, ದ.ಕ.ಜಿ.ಪಂ. ಮಂಗಳೂರು ಹಾಗೂ ತಾಲೂಕು ಪಂಚಾಯತ್ ಪುತ್ತೂರು ಇವರ ಸಂಯುಕ್ತಾಶ್ರಯದಲ್ಲಿ ಡಿ.13ರಂದು ಸಂಜೀವಿನಿ ಸ್ವ-ಸಹಾಯ ಗುಂಪುಗಳ ಸದಸ್ಯರುಗಳಿಗೆ 6 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರ ಮುಂದಿನ ಜೀವನಕ್ಕೆ ಸ್ವಂತ ಉದ್ದಿಮೆ ಮಾಡಲು ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ ಸಹಕಾರಿ. ಜೀವನ ಕೌಶಲ್ಯ, ಬ್ಯಾಂಕಿಂಗ್, ಸಾಲ ಸೌಲಭ್ಯದ ಕುರಿತು ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಂಡು ಮಾದರಿ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನವನ್ನು ಮಾಡಿ, ಯಶಸ್ವಿ ಉದ್ಯಮಿಯಾಗುವಂತೆ ಹಾರೈಸಿದರು.


ಇಲಾಖೆಯ ಸಲಹೆ ಸೂಚನೆ ಪಾಲಿಸಿ:
ಮಂಗಳೂರಿನ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದ ಜಂಟಿ ನಿರ್ದೇಶಕ ಅರವಿಂದ ಡಿ. ಬಾಳೇರಿ ಮಾತನಾಡಿ, ಸಿಡಾಕ್ ಇಲಾಖೆಯ ಮೂಲಕ ಈ ತರಬೇತಿಯನ್ನು ಹಮ್ಮಿಕೊಂಡಿದ್ದು, ತಾಲೂಕು ಮಟ್ಟದಲ್ಲಿ ಈ ರೀತಿಯ ತರಬೇತಿ ಆಯೋಜನೆಯನ್ನು ಮಾಡುವುದರ ಮೂಲಕ ಗ್ರಾಮೀಣ ಭಾಗದ ಮಹಿಳೆಯರಿಗೆ ಉದ್ಯಮದ ಕುರಿತು ಉತ್ಪನ್ನ, ಸಂಸ್ಕರಣೆ, ಮಾರುಕಟ್ಟೆ ಮಾಡಲು ಇಲಾಖೆಯಿಂದ ಸಲಹೆ- ಸೂಚನೆಗಳನ್ನು ನೀಡಲಾಗುವುದು ಎಂದು ಹೇಳಿದರು.

ಉದ್ಯಮ ಕ್ಷೇತ್ರದಲ್ಲೂ ಮಹಿಳೆಯು ತಮ್ಮ ಛಾಪನ್ನು ಮೂಡಿಸಿ:
ಪುತ್ತೂರು ತಾ.ಪಂ. ಸಹಾಯಕ ನಿರ್ದೇಶಕರು (ಗ್ರಾ.ಉ.) ಶೈಲಜಾ ಪ್ರಕಾಶ್ ಮಾತನಾಡಿ, ಈಗಾಗಲೇ ಸಣ್ಣ ಪ್ರಮಾಣದಲ್ಲಿ ಉದ್ಯಮ ನಡೆಸುತ್ತಿರುವ ಮಹಿಳೆಯರು ಈ ತರಬೇತಿ ಪಡಕೊಂಡು ದೊಡ್ಡ ಪ್ರಮಾಣದ ಉದ್ಯಮವನ್ನು ಯಶಸ್ವಿಯಾಗಿ ನಡೆಸಿ ಈ ಕೇತ್ರದಲ್ಲಿ ಕೂಡ ಮಹಿಳೆಯರು ತಮ್ಮ ಛಾಪನ್ನು ಮೂಡಿಸಬೇಕು ಎಂದು ಹೇಳಿದರು.

ಸನ್ಮಾನ:
ಸಿಡಾಕ್ ಸಂಸ್ಥೆಯಿಂದ ಕೌಶಲ್ಯ ತರಬೇತಿಯನ್ನು ಪಡೆದು ಯಶಸ್ವಿ ಉದ್ಯಮಿಗಳಾಗಿ ಗುರುತಿಸಿಕೊಂಡಿರುವ ಪಿಕ್ಸೆಲ್ ಎಲ್.ಇ.ಡಿ. ವಾಲ್ ಮಾಲಕರಾದ ಪ್ರಶಾಂತ್ ಪಿ.ಆರ್. ಪಲ್ಲತಡ್ಕ ಹಾಗೂ ಎಕ್ಸೆಲ್ ಕ್ರಿಯೇಟಿವ್ಸ್ ಮಾಲಕರಾದ ಪ್ರಜ್ವಲ್ ನರಿಮೊಗ್ರು ಅವರನ್ನು ಸನ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ನವೀನ್ ಹಾಗೂ ಪಿಎಂಎಫ್‌ಎಂಇ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾದ ಸತೀಶ್ ಮಾಬೆನ್ ಕೌಶಲ್ಯಅಭಿವೃದ್ಧಿ ತರಬೇತಿಯನ್ನು ನಡೆಸಿಕೊಟ್ಟರು.

ಪುತ್ತೂರು ತಾಲೂಕು ಪಂಚಾಯತ್‌ನ ಯೋಜನಾಧಿಕಾರಿ ಸುಕನ್ಯಾ ವೇದಿಕೆಯಲ್ಲಿದ್ದರು. ಎನ್‌ಆರ್‌ಎಲ್‌ಎಂ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಚಾರ್ವಕ ಸ್ವಾಗತಿಸಿದರು. ಸಿಡಾಕ್ ಸಂಸ್ಥೆಯ ತರಬೇತುದಾರರಾದ ವಿದ್ಯಾ ವಂದಿಸಿದರು. ತಾಲೂಕು ಸಂಪನ್ಮೂಲ ವ್ಯಕ್ತಿ ಅಂಕಿತಾ, ವಲಯ ಮೇಲ್ವಿಚಾರಕಿ ನಮಿತಾ ಸಹಕರಿಸಿದರು. ತಾಲೂಕಿನ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here