ಸಣ್ಣ ಯಂತ್ರೋಪಕರಣಗಳ ಲಭ್ಯತೆ, ಮಾಹಿತಿ ಮೂಲ ಉದ್ದೇಶ-ಡಾ. ಪ್ರಭಾಕರ ಭಟ್
ಪುತ್ತೂರು: ಕೃಷಿಕರಿಗೆ ಬಳಸುವುದಕ್ಕೆ ಅನುಕೂಲಕರವಾದ ಸಣ್ಣ ಸಣ್ಣ ಯಂತ್ರೋಪಕರಣಗಳ ಲಭ್ಯತೆ ಮತ್ತು ಅದರ ಬಳಕೆಗೆ ಪೂರಕವಾದ ಮಾಹಿತಿಗಳು ಸುಲಭವಾಗಿ ದೊರೆಯುವಂತೆ ಮಾಡುವುದು ಐದನೇ ಯಂತ್ರಮೇಳದ ಮೂಲ ಉದ್ದೇಶ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಮತ್ತು ಕ್ಯಾಂಪ್ಕೋ ಲಿಮಿಟೆಡ್ ಇದರ ಸಹಯೋಗದೊಂದಿಗೆ ನಡೆಸಲಾಗುವ 5ನೇ ಕೃಷಿ ಯಂತ್ರಮೇಳದ ರೂಪು ರೇಷೆಯನ್ನು ನಿರ್ಧರಿಸುವ ಸಲುವಾಗಿ ಇಂಜಿನಿಯರಿಂಗ್ ಕಾಲೇಜಿನ ಶ್ರೀರಾಮ ಸಭಾಭವನದಲ್ಲಿ ನಡೆದ ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು. ದಿನ ದಿನವೂ ಹೊಸ ಹೊಸ ತಂತ್ರಜ್ಞಾನಗಳು ಅಭಿವೃದ್ಧಿಯಾಗುತ್ತಿದೆ ತನ್ಮೂಲಕ ನೂತನ ಯಂತ್ರಗಳ ಆವಿಷ್ಕಾರವಾಗುತ್ತಿದೆ ಇವೆಲ್ಲವನ್ನೂ ಒಂದೇ ಸೂರಿನಡಿ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಗರಿಷ್ಟ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ ಬೆಳೆಗಾರರ ಹಿತ ಕಾಪಾಡುವುದಕ್ಕೆ ಕ್ಯಾಂಪ್ಕೋ ಸಂಸ್ಥೆಯು ಬದ್ದವಾಗಿದೆ. ಅಡಿಕೆ, ತೆಂಗು, ಬಾಳೆ, ಕಾಳುಮೆಣಸು, ರಬ್ಬರ್ ಮುಂತಾದವಲ್ಲದೆ ಪರ್ಯಾಯ ಬೆಳೆಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸುವ ಬಗ್ಗೆ ಸಂಸ್ಥೆಯು ಯೋಚಿಸುತ್ತಿದೆ ಎಂದ ಅವರು, ಸಣ್ಣ ರೈತರಿಗೆ ನೆರವಾಗುವ ಕಡಿಮೆ ವೆಚ್ಚದ ಸಣ್ಣ ಉಪಕರಣಗಳ ಉಪಲಭ್ದತೆಯ ಕೊರತೆಯ ಬಗ್ಗೆ ಅನೇಕ ರೈತರು ಹೇಳಿದ್ದಾರೆ. ಇದರ ಬಗ್ಗೆ ಗಮನಹರಿಸಲಾಗುವುದು ಎಂದರು. ವಿವೇಕಾನಂದ ಸಂಸ್ಥೆಗಳ ಜತೆ ಸೇರಿ 5ನೇ ಯಂತ್ರಮೇಳವನ್ನು ರೈತಸ್ನೇಹಿಯಾಗಿ ವಿಜ್ರಂಭಣೆಯಿಂದ ನಡೆಸಲಾಗುವುದು ಎಂದವರು ಹೇಳಿದರು.
ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣ ಕುಮಾರ್.ಎಚ್.ಎಮ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾಲೇಜಿನ ಪ್ರಾಂಶುಪಾಲ ಡಾ| ಮಹೇಶ್ ಪ್ರಸನ್ನ.ಕೆ ವಂದಿಸಿದರು. ಕಾಲೇಜಿನ ಹಿರಿಯ ಪ್ರಯೋಗಾಲಯ ಬೋಧಕ ಹರಿಪ್ರಸಾದ್.ಡಿ ಕಾರ್ಯಕ್ರಮ ನಿರ್ವಹಿಸಿದರು.
ಸಾಕಷ್ಟು ಉತ್ತಮವಾದ ಸಲಹೆಗಳನ್ನು ರೈತ ಬಾಂಧವರು ನೀಡಿದ್ದಾರೆ ಕೆಲವೊಂದಕ್ಕೆ ಸರ್ಕಾರದ ಮಟ್ಟದಲ್ಲಿ ಮಾತ್ರ ಪರಿಹಾರವನ್ನು ಕಂಡುಕೊಳ್ಳಬೇಕಾಗಬಹುದು. ಆ ನಿಟ್ಟಿನಲ್ಲಿಯೂ ಸಂಬಂಧಪಟ್ಟ ಸಚಿವರನ್ನು ಮತ್ತು ಅಧಿಕಾರಿಗಳನ್ನು ಜತೆ ಸೇರಿಸಿ ಉತ್ತರಗಳನ್ನು ಕಂಡುಕೊಳ್ಳುವುದಕ್ಕೆ ಪ್ರಯತ್ನಿಸಲಾಗುವುದು ಎಂದು ಡಾ. ಪ್ರಭಾಕರ ಭಟ್ ಹೇಳಿದರು.