ಪುತ್ತೂರು: ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಕ್ರೀಡೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎನ್ನುವ ಉನ್ನತ ದೃಷ್ಟಿಕೋನದೊಂದಿಗೆ ನೆಹರು ನಗರದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್ಇ)ಯಲ್ಲಿ ಡಿ.10ರಂದು ವಾರ್ಷಿಕ ಕ್ರೀಡಾಕೂಟ ನಡೆಯಿತು.
ವಿಟ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ಡಾ| ರಾಮಚಂದ್ರ ಕೆ. ಸಾಂಪ್ರದಾಯಿಕ ದೀಪ ಪ್ರಜ್ವಲನೆ ಹಾಗೂ ಜ್ಯೋತಿಯನ್ನು ಶಾಲಾ ಕ್ರೀಡಾ ನಾಯಕನಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೋಲನ್ನು ಎದುರಿಸಿ, ಛಲದಿಂದ ಮುನ್ನುಗ್ಗುವಲ್ಲಿ ಕ್ರೀಡೆಯು ಸಹಕಾರಿಯಾಗುತ್ತದೆ ಹಾಗೂ ಕ್ರೀಡೆಯೆಂದರೆ ಪಠ್ಯೇತರ ಚಟುವಟಿಕೆಯಲ್ಲ. ಪಠ್ಯದ ಅತೀ ಅಮೂಲ್ಯವಾದ ಒಂದು ಭಾಗವಾಗಿದೆ ಎಂದು ಮಕ್ಕಳಿಗೆ ಮನದಟ್ಟು ಮಾಡಿಸಿದರು.
ಉದ್ಘಾಟನಾ ಸಮಾರಂಭದ ಅಧ್ತಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ವಸಂತಿ ಕೆ. ವಹಿಸಿ ಕ್ರೀಡೆಯಲ್ಲಿ ಗೆಲುವು ಮಾತ್ರವಲ್ಲ, ಭಾಗವಹಿಸುವಿಕೆ ಅತೀ ಮುಖ್ಯ ಎಂದು ನುಡಿದು ಮಕ್ಕಳನ್ನು ಪ್ರೋತ್ಸಾಹಿಸಿ ಶುಭ ಹಾರೈಸಿದರು. ಶಾಲಾ ಮುಖ್ಯಶಿಕ್ಷಕಿ ಸಿಂಧೂ ವಿ. ಜಿ. ಹಾಗೂ ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಡಾ|ದೀಪಕ್ ಕೆ. ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು, ಆಕರ್ಷಕ ಪಥಸಂಚಲನ, ಧ್ವಜಾರೋಹಣ, ಪ್ರತಿಜ್ಞಾ ಸ್ವೀಕಾರ ಹಾಗೂ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಸಂತಸಪಟ್ಟರು. ಶಿಕ್ಷಕರು ಹಾಗೂ ಶಿಕ್ಷಕೇತರ ಬಂಧುಗಳ ಸಹಯೋಗದೊಂದಿಗೆ ನೆರವೇರಿದ ಈ ಕ್ರೀಡಾಕೂಟಕ್ಕೆ ವಿದ್ಯಾರ್ಥಿಗಳ ಪೋಷಕರೂ ಸಾಕ್ಷಿಯಾದರು.