ಕನ್ನಡದಲ್ಲಿ ಐ.ಎ.ಎಸ್ ಪರೀಕ್ಷೆ ಬರೆಯುವ ಕುರಿತು ಸಾಹಿತ್ಯ ಪರಿಷತ್ತಿನ ಅಭಿಯಾನ ಶ್ಲಾಘನೀಯ-ಡಾ. ಕಲ್ಲಡ್ಕ ಪ್ರಭಾಕರ್ ಭಟ್

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಐ.ಎ.ಎಸ್ ಐ.ಪಿ.ಎಸ್ ಹಾಗೂ ತತ್ಸಮಾನ ಪರೀಕ್ಷೆಗಳ ಕುರಿತಾದ ಮಾಹಿತಿಯ ಕೊರತೆ ಮಾತ್ರವಲ್ಲದೆ ಈ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ಬರೆಯಬಹುದೆಂಬ ಅರಿವು ಹೆಚ್ಚಿನವರಿಗೆ ಇಲ್ಲ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ಯಶಸ್ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರ ವತಿಯಿಂದ ಹಮ್ಮಿಕೊಂಡಿರುವ ಈ ಅಭಿಯಾನ ನಿಜಕ್ಕೂ ಶ್ಲಾಘನೀಯ. ನಮ್ಮ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಅಧ್ಯಯನ ಮಾಡಿ ದೊಡ್ಡ ಅಧಿಕಾರಿಗಳಾಗಿ ಹೊರಹೊಮ್ಮಬೇಕು ಹಾಗೂ ದೇಶ ಸೇವೆಗಾಗಿ ತಮ್ಮನ್ನು ಮುಡಿಪಾಗಿಡಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ‘ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಿರಿ’ ಎಂಬ ಅಭಿಯಾನ ಹಾಗೂ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ಯಶಸ್, ವಿವೇಕಾನಂದ ಐಎಎಸ್ ಅಧ್ಯಯನ ಕೇಂದ್ರ ಪುತ್ತೂರು ಜಂಟಿ ಆಶ್ರಯದಲ್ಲಿ ನಡೆಯುವ ಈ ಸರಣಿ ಕಾರ್ಯಕ್ರಮವು ಪುತ್ತೂರು ತಾಲೂಕಿನಲ್ಲಿರುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ ಮಾಹಿತಿ ಹಾಗೂ ಈ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಬಹುದೆಂಬ ವಿಚಾರದಲ್ಲಿ ಕಾರ್ಯಗಾರವನ್ನು ನಡೆಸಲಿದೆ.

ಉದ್ಘಾಟನೆಯ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಪಾರ ಅನುಭವವುಳ್ಳ ಸಂಸ್ಥೆಯ ತಜ್ಞ ತರಬೇತುದಾರರಾದ ದರ್ಶನ್ ಗರ್ತಿಕೆರೆ ಅವರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಾಗೂ ವಿವೇಕಾನಂದ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಒಟ್ಟು ಒಂದು ಸಾವಿರ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಮೂರು ವಿಭಾಗಗಳಲ್ಲಿ ಮಾಹಿತಿ ಕಾರ್ಯಾಗಾರ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಧ್ಯಕ್ಷರಾದ ಸುರೇಂದ್ರ ಕಿಣಿ ಅವರು ವಹಿಸಿದ್ದರು. ವಿವೇಕಾನಂದ ಐಎಎಸ್ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕೃಷ್ಣನಾರಾಯಣ ಮುಳಿಯ ಅವರು ಸ್ವಾಗತಿಸಿದರು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಅವರು ವಂದನಾರ್ಪಣೆಗೈದರು. ಕಾರ್ಯಕ್ರಮದ ಸಂಯೋಜಕರೂ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು, ಕ ಸಾ ಪ ಸದಸ್ಯರಾದ ಬಾಬು, ವಿವೇಕಾನಂದ ವಿದ್ಯಾವರ್ಧಕ ಸಂಘದ ಸದಸ್ಯರಾದ ಮುರಳಿಧರ್, ಪತ್ರಕರ್ತರಾದ ಜಯಾನಂದ ಪೆರಾಜೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here