ಬಂಟ್ವಾಳ:ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗದ ಲೋಕಾಯುಕ್ತ ಎಸ್ಪಿ ಲಕ್ಷ್ಮೀಗಣೇಶ್ ನೇತೃತ್ವದ ತಂಡ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿತು.
ಆಸ್ಪತ್ರೆಯಲ್ಲಿ ಕಳೆದ ಹಲವು ಸಮಯದಿಂದ ಪ್ರಸೂತಿ ವೈದ್ಯರಿಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ ತಾಲೂಕು ಕಚೇರಿಯಲ್ಲಿ ಅಹವಾಲು ಸ್ವೀಕಾರದ ವೇಳೆ ಬಂದ ದೂರಿನ ಹಿನ್ನಲೆಯಲ್ಲಿ ಲೋಕಾಯುಕ್ತ ಎಸ್ಪಿ ಲಕ್ಷ್ಮೀಗಣೇಶ್ ಮತ್ತವರ ತಂಡ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸೇವೆ ಮತ್ತು ಸೌಲಭ್ಯಗಳ ಬಗ್ಗೆ, ಚಿಕಿತ್ಸೆಗೆ ಬಂದಿದ್ದ ಸಾರ್ವಜನಿಕರಲ್ಲಿ ಹಾಗೂ ಒಳರೋಗಿಗಳಲ್ಲಿ ಮಾಹಿತಿ ಪಡೆದ ಲೋಕಾಯುಕ್ತ ಪೊಲೀಸರ ತಂಡ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರ ಹುದ್ದೆ, 4 ಸಿ.ಎಂ.ಒ, ವೈದ್ಯರು ಹಾಗೂ ಅರೆವಳಿಕೆ ತಜ್ಞರ ಹುದ್ದೆ ಖಾಲಿ ಇರುವುದು ಗಮನಕ್ಕೆ ಬಂತು.
ಆದೇರೀತಿ ಎಕ್ಸ್-ರೇ ಆಪರೇಟರ್ ಓರ್ವರೇ ಇದ್ದು, ಇನ್ನೊಬ್ಬರು ಅವಶ್ಯವಿರುವ ಬಗ್ಗೆ ಮತ್ತು ಔಷಧ ಹೆಚ್ಚು ಪೂರೈಕೆಯಾಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಕೆಲ ರೋಗಿಗಳು ಲೋಕಾಯುಕ್ತರ ಗಮನಕ್ಕೆ ತಂದರು.
ಲೋಕಾಯುಕ್ತ ಡಿವೈಎಸ್ಪಿ ಚೆಲುವರಾಜ್, ಇನ್ಸ್‌ಪೆಕ್ಟರ್ ಅಮಾನುಲ್ಲಾ, ಸಿಬ್ಬಂದಿಗಳಾದ ಮಹೇಶ್, ರಾಜಪ್ಪ, ವಿನಾಯಕ, ಚಾಲಕರಾದ ದುಂಡಪ್ಪ, ರಾಜಶೇಖರ್ ಉಪಸ್ಥಿತರಿದ್ದರು.
ದಿನವೊಂದಕ್ಕೆ 200ರಿಂದ 250 ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದು, ಹೆರಿಗೆಗಾಗಿ ಸುಮಾರು 40ರಷ್ಟು ಗರ್ಭಿಣಿಯರು ಬರುತ್ತಿದ್ದಾರೆ. ಆದರೆ ಪ್ರಸೂತಿತಜ್ಞರ ಹುದ್ದೆ ಖಾಲಿ ಇರುವುದರಿಂದ ತೊಂದರೆಯಾಗಿದೆ ಎಂದು ಪರೀಕ್ಷೆಗಾಗಿ ಬಂದಿದ್ದ ಗರ್ಭಿಣಿಯರು ಲೋಕಾಯುಕ್ತರ ಗಮನಕ್ಕೆ ತಂದರು. ಆಸ್ಪತ್ರೆಯ ಶುಚಿತ್ವದ ಬಗ್ಗೆ ಲೋಕಾಯುಕ್ತ ತಂಡ ಮೆಚ್ಚುಗೆ ವ್ಯಕ್ತಪಡಿಸಿತು. ಪ್ರಸೂತಿ ವೈದ್ಯರ ಕೊರತೆ, ಹೆಚ್ಚುವರಿ ಔಷಧ ಪೂರೈಕೆ ಸಹಿತ ಎಲ್ಲವನ್ನು ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿ ಹಾಗೂ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ಎಸ್ಪಿ ಲಕ್ಷ್ಮೀಗಣೇಶ್ ತಿಳಿಸಿದರು.ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪುಷ್ಪಲತಾ ಅವರು ಪೂರಕ ಮಾಹಿತಿ ನೀಡಿದರು.