ಶಾಂತಿನಗರ ಮಹಾವಿಷ್ಣು ದೇವಸ್ಥಾನದಲ್ಲಿ  ಡಿ.20ರಿಂದ 25ರವರೆಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ

0

 

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ, ತಾಂತ್ರಿಕ ಹಾಗೂ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಡಿ.20ರಿಂದ 25ರವರೆಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮೊಕ್ತೇಸರ ಯು.ಜಿ.ರಾಧಾ ತಿಳಿಸಿದರು.
ದ.16ರಂದು ಶ್ರೀ ದೇವಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.20ರಂದು ಬೆಳಗ್ಗೆ 8:35ಕ್ಕೆ ನಿತ್ಯ ಮಹಾಪೂಜೆ, 9:30ಕ್ಕೆ ಸಾಮೂಹಿಕ ಪ್ರಾರ್ಥನೆ, 10ಕ್ಕೆ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಬಳಿಕ ಉಗ್ರಾಣ ಮುಹೂರ್ತ ನಡೆಯಲಿದ್ದು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ 11ಕ್ಕೆ ಅನ್ನಛತ್ರ ಉದ್ಘಾಟನೆ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5:30ಕ್ಕೆ ಕ್ಷೇತ್ರದ ತಂತ್ರಿಗಳಿಗೆ ಹಾಗೂ ಇತರ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ ನಡೆಯಲಿದ್ದು, ರಾತ್ರಿ 7ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಆಚಾರ್ಯಾದಿ ಋತ್ವಿಗ್ವರಣ, ಪ್ರಸಾದ ಶುದ್ಧಿ, ಅಂಕುರಾರೋಪಣ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಪ್ರಸಾದ ವಿತರಣೆ ನಡೆಯಲಿದೆ ಎಂದರು.
ಡಿ.21ರಂದು ಬೆಳಗ್ಗೆ 5ರಿಂದ ಉಷಃ ಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಚತುಃಶುದ್ಧಿ ಧಾರೆ, ಅವಗಾಹ, ಪಂಚಕ ಬಿಂಬಶುದ್ಧಿ, ಖನನಾದಿ ಸ್ಥಳಶುದ್ಧಿ, ಪ್ರಾಯಶ್ಚಿತ ಹೋಮಗಳು, ಮಹಾವಿಷ್ಣು ಯಾಗ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 5:30ರಿಂದ ದೀಪಾರಾಧನೆ, ಅಂಕುರಪೂಜೆ, ಕುಂಡ ಶುದ್ಧಿ, ಸುದರ್ಶನ ಹೋಮ, ದುರ್ಗಾಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಲಿದ್ದು, ದಿನವಿಡೀ ಭಜನಾ ಸೇವೆಗಳು ನಡೆಯಲಿವೆ. ಸಂಜೆ 5:30ರಿಂದ ನೆಕ್ಕಿಲಾಡಿ ಹಾಗೂ ಶಾಂತಿನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶಾಂತಿನಗರ ಅಂಗನವಾಡಿ ಕೇಂದ್ರದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 7:30ರಿಂದ 9ರವರೆಗೆ ಧಾರ್ಮಿಕ ಸಭೆ ನಡೆಯಲಿದ್ದು ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಮೊಕ್ತೇಸರ ಪುರುಷೋತ್ತಮ ಪ್ರಭು ಹನಂಗೂರು ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಹೆಬ್ಬಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 9ರಿಂದ ಉಪ್ಪಿನಂಗಡಿ ಗಯಾಪದ ಕಲಾವಿದೆರ್ ಉಬಾರ್ ಇವರಿಂದ ‘ನಮ ತೆರಿಯೊನುಗ’ ಇನಿ ಅತ್ತ್ಂಡ ನನ ಏಪ…? ತುಳು ಹಾಸ್ಯ ನಾಟಕ ನಡೆಯಲಿದೆ ಎಂದು ಅವರು ತಿಳಿಸಿದರು.
ಡಿ.22ರಂದು ಬೆಳಗ್ಗೆ 5ರಿಂದ ಉಷಃ ಪೂಜೆ, ಮಹಾಗಣಪತಿ ಹವನ, ಅಂಕುರಪೂಜೆ, ಸ್ವಶಾಂತಿ, ಶ್ವಾನ ಶಾಂತಿ, ಅದ್ಭುತ ಶಾಂತಿ, ಚೋರ ಶಾಂತಿ, ಹೋಮಾದಿಗಳು ನಡೆಯಲಿದ್ದು, ಮಧ್ಯಾಹ್ನ 12ಕ್ಕೆ ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5:30ರಿಂದ ದೀಪಾರಾಧನೆ, ಅಂಕುರಪೂಜೆ, ಕುಂಭೇಶ ಕರ್ಕರೀಪೂಜೆ, ಅನುಜ್ಞಾ ಕಲಶಪೂಜೆ, ಪರಿಕಲ ಪೂಜೆ, ಅಧಿವಾಸಹೋಮ, ಕಲಶಾಧಿವಾಸ, ದುರ್ಗಾಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಪ್ರಸಾದ ವಿತರಣೆ ನಡೆಯಲಿದೆ. ದಿನವಿಡೀ ಭಜನಾ ಸೇವೆಗಳು ನಡೆಯಲಿವೆ. ಸಂಜೆ 5:30ರಿಂದ ಶಾಂತಾ ಕುಂಟಿನಿ ಸಾರಥ್ಯದ ಸತ್ಯಶಾಂತಾ ಪ್ರತಿಷ್ಠಾನದಿಂದ ದ.ಕ. ಜಿಲ್ಲೆಯ ಹೆಸರಾಂತ ಕಲಾವಿದರಿಂದ ‘ಗಾನ- ನೃತ್ಯ- ವೈಭವ’ ನಡೆಯಲಿದ್ದು, ರಾತ್ರಿ 7:30ರಿಂದ 9ರವರೆಗೆ ಧಾರ್ಮಿಕ ಸಭೆ ನಡೆಯಲಿದೆ. ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ. ರಾಧಾ ಅಧ್ಯಕ್ಷತೆ ವಹಿಸಲಿದ್ದು, ಶಿಕ್ಷಕಿ ಪುಷ್ಪಾ ತಿಲಕ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 9ರಿಂದ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ‘ಗೀತ- ಸಾಹಿತ್ಯ- ಸಂಭ್ರಮ’ ನಡೆಯಲಿದೆ ಎಂದರು.
ಡಿ.23ರಿಂದ ಬೆಳಗ್ಗೆ 5ರಿಂದ ಉಷಃ ಪೂಜೆ, ಅಂಕುರಪೂಜೆ, ಮಹಾಗಣಪತಿ ಹವನ, ತ್ರಿಕಾಲ ಪೂಜೆ, ಸೃಷ್ಠಿತತ್ತ್ವ ಹೋಮ, ತತ್ತ್ವಕಲಶಪೂಜೆ, ತತ್ತ್ವಕಲಶಾಭಿಷೇಕ, ಚಂಡಿಕಾಹೋಮ, ಅನುಜ್ಞಾ ಕಲಶಾಭಿಷೇಕ ನಡೆಯಲಿದ್ದು, ಮಧ್ಯಾಹ್ನ 12ರಿಂದ ತ್ರಿಕಾಲ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5ರಿಂದ ದೀಪಾರಾಧನೆ, ತ್ರಿಕಾಲಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಪ್ರಸಾದ ವಿತರಣೆ ನಡೆಯಲಿದೆ. ದಿನವಿಡೀ ಭಜನಾ ಸೇವೆಗಳು ನಡೆಯಲಿವೆ. ಸಂಜೆ 5:30ರಿಂದ ಶಾಂತಿನಗರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ‘ಸಾಂಸ್ಕೃತಿಕ ಸೌರಭ’ ನಡೆಯಲಿದ್ದು, ರಾತ್ರಿ 7:30ರಿಂದ 9ರವರೆಗೆ ಧಾರ್ಮಿಕ ಸಭೆ ನಡೆಯಲಿದೆ. ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಬಿ. ರಘು ಅಧ್ಯಕ್ಷತೆ ವಹಿಸಲಿದ್ದು, ಹೊಸದಿಗಂತ ಪತ್ರಿಕೆಯ ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 9ರಿಂದ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ‘ಹರಿ ಕುಣಿದಾ… ನಮ್ಮ ಹರಿ ಕುಣಿದಾ...’ ಭಕ್ತಿಗಾನ ನಿನಾದ ನಡೆಯಲಿದೆ ಎಂದು ಯು.ಜಿ.ರಾಧ ತಿಳಿಸಿದರು.
ಡಿ.24ರಂದು ಸಂಜೆ 5ರಿಂದ ಉಷಃ ಪೂಜೆ, ಅಂಕುರಪೂಜೆ, ಮಹಾಗಣಪತಿ ಹವನ, ಮಂಟಪ ಸಂಸ್ಕಾರ, ಅಗ್ನಿಜನನ, ಕುಂಭೇಶ ಕರ್ಕರೀ ಪೂಜೆ, ಬ್ರಹ್ಮಕಲಶಪೂಜೆ, ಪರಿಕಲಶ ಪೂಜೆ ನಡೆಯಲಿದ್ದು, 12:30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5:30ರಿಂದ ದೀಪಾರಾಧನೆ, ಅಧಿವಾಸಹೋಮ, ಕಲಶಾಧಿವಾಸ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಲಿದ್ದು, ಸಂಜೆ 5:30ರಿಂದ ಕೋಡಿಂಬಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ‘ಸಾಂಸ್ಕೃತಿಕ ಸಿಂಚನ’ ನಡೆಯಲಿದೆ. ದಿನವಿಡೀ ಭಜನಾ ಸೇವೆಗಳು ನಡೆಯಲಿವೆ. ರಾತ್ರಿ 7:30ರಿಂದ 9ರವರೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಮೊಕ್ತೇಸರ ವಸಂತ ಕಾಮತ್ ಪರನೀರು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ವೇದವ್ಯಾಸ ರಾಮಕುಂಜ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾತ್ರಿ 9ರಿಂದ ಅಂಬುರುಹ ಯಕ್ಷಕಲಾ ಕೇಂದ್ರದವರಿಂದ ‘ಮಹಿಮೆದ ಬಬ್ಬುಸ್ವಾಮಿ’ ತುಳು ಯಕ್ಷಗಾನ ನಡೆಯಲಿದೆ ಎಂದು ತಿಳಿಸಿದ ಅವರು ಡಿ.25ರಂದು ಬೆಳಿಗ್ಗೆ 5ರಿಂದ ಮಹಾಗಣಪತಿ ಹವನ ನಡೆಯಲಿದ್ದು, ಪೂರ್ವಾಹ್ನ 10:36ರಿಂದ 11:20ರವರೆಗೆ ನಡೆಯುವ ಕುಂಭಲಗ್ನದ ಶುಭಮಹೂರ್ತದಲ್ಲಿ ಶ್ರೀ ಮಹಾವಿಷ್ಣು ದೇವರಿಗೆ ಅಷ್ಟಬಂಧ ಕ್ರಿಯೆ, ಬ್ರಹ್ಮಕಲಶಾಭಿಷೇಕ, ನಾಗಪ್ರತಿಷ್ಠೆ, ಆಶ್ಲೇಷಾ ಬಲಿ, ನಾಗತಂಬಿಲ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ 7ಕ್ಕೆ ರಂಗಪೂಜೆಯಾಗಿ ಪ್ರಸಾದ ವಿತರಣೆ, ಅನ್ನ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5ರಿಂದ ವಿದುಷಿ ಶ್ಯಾಮಲಾ ನಾಗರಾಜ್ ಕುಕ್ಕಿಲ ಮತ್ತು ಬಳಗದವರಿಂದ ‘ಕರ್ನಾಟಕ ಶಾಸ್ತ್ರೀಯ ಸಂಗೀತ’ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 9:30ರಿಂದ ಯಕ್ಷನಾಟ್ಯ ಗುರು ಮಾಣಿ ಸತೀಶ್ ಆಚಾರ್ಯ ವಿರಚಿತ, ಉಪ್ಪಿನಂಗಡಿಯ ಶ್ರೀ ರಾಮ ಶಾಲೆಯ ಯಕ್ಷನಾಟ್ಯ ತರಬೇತಿ ಕೇಂದ್ರ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀ ವಿಷ್ಣು ಸಾನಿಧ್ಯ’ (ಶಾಂತಿನಗರ ಶ್ರೀ ಮಹಾವಿಷ್ಣು ಕ್ಷೇತ್ರ ಮಹಾತ್ಮೆ) ಕನ್ನಡ ಯಕ್ಷಗಾನ ನಡೆಯಲಿದೆ. ಫೆ.11ರಂದು ಶ್ರೀ ದೇವರಿಗೆ ದೃಢಕಲಶಾಭಿಷೇಕ ನಡೆಯಲಿದೆ ಎಂದು ತಿಳಿಸಿದರು.
ಈ ದೇವಾಲಯಕ್ಕೆ ಸುಮಾರು 800 ವರ್ಷಗಳ ಮೌಖಿಕ ಇತಿಹಾಸವಿದ್ದು, ಇಲ್ಲೊಂದು ದೈವೀಶಕ್ತಿ ಇದೆ ಎಂದು ಕಳೆದ ಮೂರು ದಶಕಗಳವರೆಗೆ ಯಾರಿಗೂ ತಿಳಿದಿರಲಿಲ್ಲ. ಅದು ತಿಳಿದು ಬಂದಿದ್ದು 1990ರಲ್ಲಿ ನಡೆದ ಅಯೋಧ್ಯೆ ರಾಮರಥ ಯಾತ್ರೆ ವೇಳೆ. ರಾಮರಥ ಉಪ್ಪಿನಂಗಡಿಯಿಂದ 34 ನೆಕ್ಕಿಲಾಡಿ ಗ್ರಾಮ ಪ್ರವೇಶಿಸಿ ಶಾಂತಿನಗರದಲ್ಲಿ ಇಂದು ದೇವಾಲಯವಿರುವ ಜಾಗದ ಮುಂದೆಯೇ ರಥ ಮುಂದಕ್ಕೆ ಚಲಿಸದೇ, ಅಲುಗಾಡದೇ ನಿಂತಿತ್ತು. ಮೆಕ್ಯಾನಿಕ್‌ಗಳನ್ನು ಸ್ಥಳಕ್ಕೆ ಕರೆಸಿ, ರಥದ ವಾಹನವನ್ನು ದುರಸ್ತಿಗೊಳಿಸಿದರೂ ಒಂದಿಂಚೂ ಅದು ಅಲ್ಲಾಡಲಿಲ್ಲ. ಕೊನೆಗೆ ಪಾಳುಬಿದ್ದ ದೇವಸ್ಥಾನದ ಕುರುಹು ಇದ್ದ ಜಾಗದಲ್ಲಿ ಹಣ್ಣುಕಾಯಿ ಒಡೆದು ಪ್ರಾರ್ಥಿಸಿದ ನಂತರವಷ್ಟೇ ರಥ ಚಲಿಸಿತು. ಇಲ್ಲೊಂದು ದೇವರ ಸಾನಿಧ್ಯವಿದೆ ಎಂಬುದು ಊರಿನವರಿಗೆ ತಿಳಿದದ್ದು ಅಂದೇ. ಬಳಿಕ ಅಷ್ಟಮಂಗಲ ಪ್ರಶ್ನಾ ಚಿಂತನೆಯನ್ನು ನಡೆಸಿ, ಶ್ರೀ ಮಹಾವಿಷ್ಟು ಸಾನಿಧ್ಯವನ್ನು ತಿಳಿದುಕೊಂಡು ಶಿಲ್ಪಿ ಮುನಿಯಂಗಳ ಎಂ.ಎಸ್. ಪ್ರಸಾದರವರ ಮಾರ್ಗದರ್ಶನದಲ್ಲಿ ಶ್ರೀ ಮಹಾವಿಷ್ಣು ದೇವರು, ಗಣಪತಿ ದೇವರು, ಧರ್ಮದೈವಗಳಾದ ಶ್ರೀ ರಕ್ತೇಶ್ವರಿ, ಮಹಿಂಷದಾಯ, ಪಂಜುರ್ಲಿ, ಗುಳಿಗ ದೈವಗಳ ಗುಡಿ, ನಾಗನಕಟ್ಟೆ, ಅಶ್ವತ್ಥಕಟ್ಟೆ ನಿರ್ಮಾಣ ಕಾರ್ಯವಾಗಿ 2009ರ ಮೇ 6ರಂದು ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಉತ್ಸವಗಳು ಜರಗಿದವು ಎಂದು ಯು.ಜಿ.ರಾಧಾ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಶ್ರೀ ದೇವಾಲಯದ ಮೊಕ್ತೇಸರರಾದ ರಾಜೇಶ್ ಮುಖಾರಿ ಶಾಂತಿನಗರ, ರಾಜೀವ ರೈ ಅಲಿಮಾರ, ರಮೇಶ್ ಗೌಡ ಬೇರಿಕೆ, ಗಣಪತಿ ಭಟ್ ಪರನೀರು, ಪುರುಷೋತ್ತಮ ಪ್ರಭು ಹನಂಗೂರು, ಕೋರ್ ಕಮಿಟಿ ಸದಸ್ಯರಾದ ಪ್ರಿಯಾ ರಮೇಶ್ ಗೌಡ ಶಾಂತಿನಗರ, ಗೋಪಾಲಕೃಷ್ಣ ಭಟ್, ಸಪ್ನ ಜೀವನ್ ಶಾಂತಿನಗರ, ಬೈಲುವಾರು ಸಮಿತಿಯ ಗಣೇಶ್ ದರ್ಬೆ, ಭಜನಾ ಸಂಯೋಜಕ ಶಿವಾನಂದ ಕಜೆ ಉಪಸ್ಥಿತರಿದ್ದರು. ಪತ್ರಕರ್ತ ಸಂತೋಷ್ ಕುಮಾರ್ ಶಾಂತಿನಗರ ಸ್ವಾಗತಿಸಿದರು.

ಅನಗತ್ಯ ಆಡಂಬರ ಇಲ್ಲ, ಅತಿಥಿಗಳಾಗಿ ರಾಜಕೀಯ ವ್ಯಕ್ತಿಗಳಿಲ್ಲ, ಹಾರ, ತುರಾಯಿ, ಸನ್ಮಾನ ಇಲ್ಲ

ವ್ಯಕ್ತಿಗಿಂತ ಶಕ್ತಿ ಪ್ರಧಾನ ಬ್ರಹ್ಮಕಲಶ ನಮ್ಮದಾಗಬೇಕು ಎಂಬ ನಿಟ್ಟಿನಲ್ಲಿ ಅನಗತ್ಯ ಆಡಂಬರಗಳಿಲ್ಲದೆ ನಾವು ಈ ಬ್ರಹ್ಮಕಲಶೋತ್ಸವವನ್ನು ಆಯೋಜಿಸಿದ್ದೇವೆ. ಇಲ್ಲಿ ಮೊದಲೇ ಇದ್ದ ಆಡಳಿತ ಸಮಿತಿಯಲ್ಲದೇ, ಬೇರ‍್ಯಾವುದೇ ಇದಕ್ಕಾಗಿ ವಿಶೇಷ ಸಮಿತಿಗಳನ್ನು ರಚಿಸಿಲ್ಲ. ಆಮಂತ್ರಣ ಪತ್ರದಲ್ಲಿ ಧಾರ್ಮಿಕ ಸಭೆಯ ವೇದಿಕೆಯಲ್ಲಿ ಪಾಲು ಪಡೆಯುವವರ ಹೆಸರು ಬಿಟ್ಟು ದೇವಾಲಯದ ಆಡಳಿತ ಸಮಿತಿ, ಬೈಲುವಾರು ಸಮಿತಿಯವರ ಹೆಸರುಗಳನ್ನು ಮುದ್ರಿಸಿಲ್ಲ. ಇದರಿಂದ ಆಮಂತ್ರಣ ಪತ್ರದ ಮುದ್ರಣ ವೆಚ್ಚದಲ್ಲಿಯೇ ಸುಮಾರು ರೂ 1.50 ಲಕ್ಷದಷ್ಟು ಉಳಿತಾಯವಾಗುವಂತಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ರಾಜಕೀಯೇತರವಾಗಿ ಇರಬೇಕು ಎನ್ನುವ ನಿಟ್ಟಿನಲ್ಲಿ ಧಾರ್ಮಿಕ ಸಭೆಯ ವೇದಿಕೆಯಲ್ಲಿ ಅತಿಥಿಗಳಾಗಿ ಯಾವುದೇ ರಾಜಕೀಯ ವ್ಯಕ್ತಿಗಳನ್ನು ಕರೆದಿಲ್ಲ. ಅವರೆಲ್ಲರನ್ನು ಇಲ್ಲಿಗೆ ಭಕ್ತರಾಗಿ ಮಾತ್ರ ಕರೆದಿದ್ದೇವೆ. ಅತಿಥಿ ಸೇರಿದಂತೆ ಎಲ್ಲರಿಗೂ ಇಲ್ಲಿ ದೇವರ ಪ್ರಸಾದ ನೀಡಲಾಗುತ್ತದೆಯೇ ಹೊರತು ಯಾವುದೇ ಹಾರ, ತುರಾಯಿಯ ಸನ್ಮಾನಗಳನ್ನು ನಡೆಸುವುದಿಲ್ಲ. ಈ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಬೈಲುವ್ಯಾಪ್ತಿಯಲ್ಲಿ 640 ಮನೆಗಳಿವೆ. ಈ ದೇವಾಲಯದ ಅಭಿವೃದ್ಧಿಯಲ್ಲಿ ಇವರ ಶ್ರಮವಿದೆ. ಆದ್ದರಿಂದ ಬ್ರಹ್ಮಕಲಶದ ಸಂದರ್ಭದಲ್ಲಿ ಈ ಎಲ್ಲಾ ಮನೆಯವರನ್ನು ಗರ್ಭಗುಡಿಯ ಮುಂದೆಯೇ ಕರೆದು ಎಲ್ಲರಿಗೂ ದೇವರ ಮುಂದೆ ವಿಶೇಷ ಪ್ರಾರ್ಥನೆ ನಡೆಸಿ ಪ್ರಸಾದ ನೀಡಲಾಗುವುದು. ವ್ಯವಹಾರದಿಂದ ದೇವಾಲಯವನ್ನು ದೂರವಿಡಬೇಕು ಎನ್ನುವ ದೃಷ್ಠಿಯಿಂದ ರಜತ, ತಾಮ್ರ ಎಂಬ ಬೇಧಭಾವವಿಲ್ಲದೆ ಒಂದೇ ಸಮನಾದ 217 ಕಲಶಗಳನ್ನಷ್ಟೇ ಮಾಡಿದ್ದು, ಇಷ್ಟನ್ನು ಮಾತ್ರ ಪೂಜೆಗೆ ಇಡಲಾಗುವುದು. ಅವುಗಳನ್ನು ಮಾತ್ರ ಪ್ರಸಾದ ರೂಪದಲ್ಲಿ ಕೊಡಲಾಗುತ್ತದೆ. ಬೈಲುವಾರು ಮನೆಗಳವರಿಗೆ ಇಂತಿಷ್ಟೇ ದೇಣಿಗೆ ನೀಡಬೇಕೆಂಬ ಒತ್ತಡವನ್ನು ಇಲ್ಲಿ ಹಾಕಿಲ್ಲ. ಅದನ್ನು ಅವರ ಮನಸ್ಸೋ ಇಚ್ಚೆಗೆ ಬಿಟ್ಟಿದ್ದೇವೆ. ಇದಕ್ಕೆಲ್ಲಾ ಸುಮಾರು ಎರಡು ವರ್ಷದಿಂದ ಹಲವಾರು ಬೈಲುವಾರು ಸಭೆಗಳನ್ನು ನಡೆಸಿ ಯೋಜನೆ ರೂಪಿಸಿದ್ದು, ಬ್ರಹ್ಮಕಲಶದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಬಣ್ಣ, ಪ್ರಾಕೃತಿಕ ಶೈಲಿಯ ಚಿತ್ರಕೂಟ ಮಾದರಿಯಲ್ಲಿ ನಾಗನಕಟ್ಟೆಯನ್ನು ನಿರ್ಮಿಸಲಾಗಿದೆ. ಸುಮಾರು 35 ಲಕ್ಷ ರೂ ಖರ್ಚು ವೆಚ್ಚದಲ್ಲಿ ಬ್ರಹ್ಮಕಲಶದ ಕಾರ್ಯಕ್ರಮಗಳೆಲ್ಲಾ ನಡೆಯಬೇಕು ಎನ್ನುವ ಯೋಜನೆ ರೂಪಿಸಿದ್ದೇವೆ. ಶ್ರೀ ದೇವರ ಆಶೀರ್ವಾದ, ಬೈಲುವಾರು ಮನೆಗಳವರ ಹಾಗೂ ಎಲ್ಲಾ ಭಕ್ತಾದಿಗಳ ಸಹಕಾರಿಂದ ಯಶಸ್ವಿಯಾಗಿ ಹಾಗೂ ಮಾದರಿಯಾಗಿ ನಮ್ಮ ಶಾಂತಿನಗರದ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ನಡೆಯಲಿವೆ ಎಂಬ ವಿಶ್ವಾಸವಿದೆ ಎಂದು ದೇವಾಲಯದ ಆಡಳಿತ ಮೊಕ್ತೇಸರ ಯು.ಜಿ.ರಾಧಾ ತಿಳಿಸಿದರು.

LEAVE A REPLY

Please enter your comment!
Please enter your name here