- ಪ್ರಾಧಿಕಾರದಿಂದ ಸಂಸ್ಥೆಗೆ ೧೦ ಲಕ್ಷ ರೂ- ತಿಮ್ಮಪ್ಪ ಶೆಟ್ಟಿ
- ಆದರ್ಶ ಜೀವನ- ಸದಾಶಿವ ರೈ
- ಸಂತೋಷವಾಗಿದೆ- ಡಾ. ಜಯಾ ಪೈ
ಚಿತ್ರ ಜೀತ್ ಪುತ್ತೂರು
ಪುತ್ತೂರು: ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಾರ್ಷಿಕೋತ್ಸವ ” ಮಕ್ಕಳ ನಲಿವಿನ ಹಬ್ಬ” ದ. ೧೬ ರಂದು ಜರಗಿತು. ಉನ್ನತವಾದ ಕೀರ್ತಿಯನ್ನು ಉಳಿಸಿಕೊಂಡಿದೆ-ಹೇಮನಾಥ ಶೆಟ್ಟಿ ಸಂಸ್ಥೆಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಕಾರ್‍ಯಕ್ರಮವನ್ನು ಉದ್ಘಾಟಿಸಿ, ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಮಾತನಾಡಿ ನಮ್ಮ ಸಂಸ್ಥೆಯ ೨೨ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡುವ ಮೂಲಕ ಹೆಸರನ್ನು ಪಡೆದಿದ್ದಾರೆ, ಸಂಸ್ಥೆಯು ವಿಜ್ಞಾನದ ವಿಚಾರದಲ್ಲಿ ವಿಶೇಷವಾದ ಒತ್ತು ನೀಡುತ್ತಿದ್ದು, ಇಲ್ಲಿ ಅತ್ಯುತ್ತಮವಾದ ವಿಜ್ಞಾನ ಪ್ರಯೋಗಾಲಯಗಳು ಇದ್ದು, ವಿದ್ಯಾರ್ಥಿಗಳ ಸಂಶೋಧನಾ ಪ್ರವೃತಿಗೆ ಬೆಳಕನ್ನು ತೋರಿಸುವ ಕಾರ್‍ಯ ಶಿಕ್ಷಕರಿಂದ ಆಗುತ್ತಿದೆ. ಉತ್ತಮವಾದ ಕಲಿಕೆ, ಪಠ್ಯೇತರ ಚಟುವಟಿಕೆಗಳಲ್ಲಿ ಶಾಲೆಯು ಉನ್ನತವಾದ ಕೀರ್ತಿಯನ್ನು ಸದಾ ಉಳಿಸಿಕೊಂಡಿದೆ ಎಂದು ಹೇಳಿ, ೨೦೧೩ ರಿಂದ ನಾನು ಸಂಸ್ಥೆಯ ಸಂಚಾಲಕನಾದ ಮೇಲೆ, ಬಂಟರ ಯಾನೆ ನಾಡವರ ಮಾತೃ ಸಂಘ, ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪೋಷಕರ ಪ್ರೋತ್ಸಾಹದಿಂದ ಸಂಸ್ಥೆಯು ವಿಶೇಷವಾದ ಅಭಿವೃದ್ಧಿಯನ್ನು ಕಂಡಿದೆ ಎಂದು ಹೇಳಿದರು.
ಪ್ರಾಧಿಕಾರದಿಂದ ಸಂಸ್ಥೆಗೆ ೧೦ ಲಕ್ಷ ರೂ- ತಿಮ್ಮಪ್ಪ ಶೆಟ್ಟಿ
ಮುಖ್ಯ ಅತಿಥಿಯಾದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ಮಾತನಾಡಿ ಇಂದಿನ ದಿನಗಳಲ್ಲಿ ಗರಿಷ್ಟ ಅಂಕವನ್ನು ನೋಡಿ ಪ್ರವೇಶ ನೀಡುವ ಶಾಲೆಗಳ ಮಧ್ಯೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯು ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದಿದ್ದರೂ, ಅವರಿಗೆ ಅವಕಾಶವನ್ನು ನೀಡಿ, ಅವರನ್ನು ಮುಂದೆ ಉತ್ತಮ ಅಂಕವನ್ನು ಗಳಿಸುವ ಪರಿಪೂರ್ಣವಾದ ಶಿಕ್ಷಣವನ್ನು ನೀಡುವ ಮೂಲಕ ಸಮಾಜದಲ್ಲಿ ಸಂಸ್ಥೆಯು ಹೆಸರನ್ನು ಪಡೆದಿದೆ ಎಂದು ಸಂತಸವನ್ನು ವ್ಯಕ್ತಪಡಿಸಿ, ಕರಾವಳಿ ಪ್ರಾಧಿಕಾರದ ವಾರ್ಷಿಕ ಬಜೆಟ್‌ನಿಂದ ೧೦ ಲಕ್ಷ ರೂಪಾಯಿಯನ್ನು ಶ್ರೀ ರಾಮಕೃಷ್ಣ ಪ್ರೌಢಶಾಲೆಗೆ ನೀಡುವುದಾಗಿ ಹೇಳಿದರು.
ಆದರ್ಶ ಜೀವನ- ಸದಾಶಿವ ರೈ
ಸಹಕಾರ ರತ್ನ ಪುರಸ್ಕೃತ ದಂಬೆಕ್ಕಾನ ಸದಾಶಿವ ರೈಯವರು ಮಾತನಾಡಿ ಸತ್ಯ, ನ್ಯಾಯ, ಧರ್ಮದ ಮೂಲಕ ನಾನು ಜೀವನವನ್ನು ನಡೆಸುತ್ತಿದ್ದೇನೆ, ವಿದ್ಯಾರ್ಥಿಗಳು ಉತ್ತಮವಾದ ಆದರ್ಶವಾದ ಜೀವನವನ್ನು ನಡೆಸಲು ಶಿಕ್ಷಣ ಪಡೆಯಬೇಕು ಎಂದು ಹೇಳಿದರು.
ಸಂತೋಷವಾಗಿದೆ- ಡಾ. ಜಯಾ ಪೈ
ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಡಾ.ಜಯಾ ಪೈಯವರು ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ರಾಮಕೃಷ್ಣ ಪ್ರೌಢಶಾಲೆಯು ಸಾಧಿಸುತ್ತಿರುವ ಸಾಧನೆಯನ್ನು ಕಂಡು ಸಂತೋಷವಾಗಿದೆ ಎಂದು ಹೇಳಿದರು.
ಸನ್ಮಾನ ಸಮಾರಂಭ- ಸಂಸ್ಥೆಯ ವತಿಯಿಂದ ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ, ಹಿರಿಯ ವಿದ್ಯಾರ್ಥಿನಿ ಡಾ.ಜಯಾ ಪೈರವರುಗಳನ್ನು ಸನ್ನಾನಿಸಲಾಯಿತು.
ಹೇಮನಾಥ ಶೆಟ್ಟಿರವರಿಗೆ ಗೌರವರ್ಪಣೆ
– ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಕಾವು ಹೇಮನಾಥ ಶೆಟ್ಟಿರವನ್ನು ಗೌರವಿಸಲಾಯಿತು. ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಿಗೆ ಗೌರವರ್ಪಣೆ, ಪ್ರತಿಭಾ ಪುರಸ್ಕಾರ, ವಿಶಿಷ್ಟವಾದ ಅಂಕವನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಉದ್ಯಮಿ ಸಂಜೀವ ಆಳ್ವ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿಶ್ರಾಂತ ಮುಖ್ಯಗುರುಗಳಾದ ಎನ್. ಮನೋಹರ ರೈ, ರೂಪಕಲಾ ಕೆ, ವಿಶ್ರಾಂತ ವಿಜ್ಞಾನ ಶಿಕ್ಷಕಿ ವಸಂತಿ ಕೆದಿಲ, , ವಿಶ್ರಾಂತ ವೃತ್ತಿ ಕಲಾ ಶಿಕ್ಷಕಿ ವನಿತ ಕುಮಾರಿ, ಡಾ.ಬಿ.ನಳಿನಿ ರೈಯವರ ಪುತ್ರಿ ಪ್ರತಿಮಾ ಹೆಗ್ಡೆ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ. ಶ್ರೀಪ್ರಕಾಶ್ ಬಿ. ರವರುಗಳು ಉಪಸ್ಥಿತರಿದ್ದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುನೀತಾ ಸ್ವಾಗತಿಸಿ, ವರದಿ ವಾಚಿಸಿದರು, ಶಿಕ್ಷಕಿಯರಾದ ಗಾಯತ್ರಿ ಕಾರ್‍ಯಕ್ರಮ ನಿರೂಪಿಸಿ, ಸಂಧ್ಯಾ ವಂದಿಸಿದರು. ಈ ಸಂದರ್ಭದಲ್ಲಿ ಮಕ್ಕಳ ನಲಿವಿನ ಹಬ್ಬದಲ್ಲಿ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು.