ಬಂಟ್ವಾಳ ತಾ| ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಇದರ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ, ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ

0

ಪುತ್ತೂರು: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ, ಶಾಂತಿನಗರ ವಿಟ್ಲ ಇದರ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ಸಭಾ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಡಿ.18ರಂದು ವಿಟ್ಲ ಶಾಂತಿನಗರ ಅಕ್ಷಯ ಶ್ರೀಮತಿ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ನಡೆಯಿತು.


ಬೆಳಿಗ್ಗೆ ಗಣಪತಿ ಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷ ಡಾ.ಕೆ.ವಿ ರೇಣುಕಾ ಪ್ರಸಾದ್ ಮಾತನಾಡಿ ಒಕ್ಕಲಿಗ ಸಮುದಾಯ ಈ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದು ಸಮಾಜದ ಅಭಿವೃದ್ಧಿಯಲ್ಲಿ ಒಕ್ಕಲಿಗ ಸಂಘದ ಪಾತ್ರ ಬಹಳಷ್ಟಿದೆ ಎಂದು ಹೇಳಿದರು. ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಡುವ ಕಾರ್ಯ ನಮ್ಮಿಂದಾಗಬೇಕು. ವಿಟ್ಲ ಒಕ್ಕಲಿಗರ ಸಂಘವು ಒಗ್ಗಟ್ಟಿನಿಂದ ಉತ್ತಮ ಕೆಲಸಕಾರ್ಯಗಳನ್ನು ಮಾಡುತ್ತಿರವುದು ಪ್ರಶಂಸನೀಯ. ಇಲ್ಲಿಗೆ ನಾನು ನಿರಂತರ ಸಹಕಾರವನ್ನು ನೀಡುತ್ತಾ ಬಂದಿದ್ದೇನೆ ಎಂದು ಅವರು ಹೇಳಿದರು.

ಎಲ್ಲರೂ ಸದಸ್ಯರಾಗಲು ಮನವಿ:
ಮುಂದಿನ ಜನವರಿ 16ರಂದು ಬೆಂಗಳೂರಿನಲ್ಲಿ ಒಕ್ಕಲಿಗ ಸಂಘದ ಸದಸ್ಯತ್ವ ಅಭಿಯಾನ ಆನ್‌ಲೈನ್ ಮೂಲಕ ಪ್ರಾರಂಭಗೊಳ್ಳಲಿದ್ದು ಇದರಲ್ಲಿ ಸದಸ್ಯರಾಗಲು ಬಾಕಿಯಿರುವ ಸಮಾಜ ಬಾಂಧವರೆಲ್ಲರೂ ಸದಸ್ಯರಾಗಬೇಕು ಎಂದು ಡಾ.ಕೆ.ವಿ ರೇಣುಕಾ ಪ್ರಸಾದ್ ಮನವಿ ಮಾಡಿದರು.

ಒಕ್ಕಲಿಗ ಸಂಘ ಒಗ್ಗಟ್ಟಿನಲ್ಲಿ ಮಾದರಿ-ಮೋಹನ್ ಕಾಯರ್‌ಮಾರ್
ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಇದರ ಗೌರವಾಧ್ಯಕ್ಷ ಮೋಹನ್ ಕಾಯರ್‌ಮಾರ್ ಮಾತನಾಡಿ ಒಕ್ಕಲಿಗ ಸಂಘದ ಮೂಲಕ ಒಂದೇ ತಾಯಿಯ ಮಕ್ಕಳಂತೆ ನಾವೆಲ್ಲರೂ ಸೇರಿಕೊಂಡು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಒಗ್ಗಟ್ಟಿನಿಂದ ಕೆಲಸ ಕಾರ್ಯಗಳು ನಡೆಯುತ್ತಿದೆ. ಮುಂದಕ್ಕೂ ಒಕ್ಕಲಿಗ ಸಂಘವು ಒಗ್ಗಟ್ಟಿನ ಮೂಲಕ ಈ ಸಮಾಜಕ್ಕೆ ಮಾದರಿಯಾಗಿ ಮುಂದುವರಿಯಬೇಕು ಎಂದು ಅವರು ಹೇಳಿದರು.

ಒಕ್ಕಲಿಗ ಸಂಘ ಮಾದರಿಯಾಗಿ ಕಾರ್ಯಾಚರಿಸುತ್ತಿದೆ-ಮೋನಪ್ಪ ಗೌಡ
ಸಭಾಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ ಮೋನಪ್ಪ ಗೌಡ ಶಿವಾಜಿನಗರ ಮಾತನಾಡಿ ನಮ್ಮ ಒಕ್ಕಲಿಗ ಸಂಘವು ವ್ಯವಸ್ಥಿತವಾಗಿ ಮತ್ತು ಮಾದರಿಯಾಗಿ ಕಾರ್ಯಾಚರಿಸುತ್ತಿದ್ದು ವಿವಿಧ ಯೋಜನೆಗಳನ್ನು ಹಾಕಿಕೊಂಡು ಅದನ್ನು ಅನುಷ್ಠಾನಗೊಳಿಸುತ್ತಾ ಉತ್ತಮವಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು. ಸಂಘದ ಸದಸ್ಯರಿಗೆ ಸಹಾಯ ಹಸ್ತ ನೆಲೆಯಲ್ಲಿ `ಆಪತ್ತು ನಿಧಿ’ಯನ್ನು ಪ್ರಾರಂಭಿಸಲಾಗಿದೆ ಎಂದ ಅವರು ಸಂಘದಲ್ಲಿ ನಮ್ಮ ಸಮಾಜದ ಪ್ರತಿಯೋರ್ವರೂ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಹೇಳಿದರು.

7 ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ:
ಕಾರ್ಯಕ್ರಮದಲ್ಲಿ ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಪುತ್ತೂರು ಇದರ ಅಧೀನದಲ್ಲಿ ಕುಳ, ಇಡ್ಕಿದು, ನೆಟ್ಲಮುಡ್ನೂರು, ಕೆದಿಲ, ಪುಣಚ, ಬಿಳಿಯೂರು ಪೆರ್ನೆ, ವಿಟ್ಲಮುಡ್ನೂರು ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ನಡೆಯಿತು. ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷ ಮನೋಹರ ಡಿ.ವಿ ಅವರು ಸ್ವ-ಸಹಾಯ ಟ್ರಸ್ಟ್‌ನ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಮೇಲ್ವಿಚಾರಕಿ ಸುಮಲತಾ ಕಾರ್ಯಕ್ರಮ ನಿರ್ವಹಿಸಿದರು.

ಸನ್ಮಾನ:
ಬಂಟ್ವಾಳ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಚಂದಳಿಗೆ ಹಿ.ಪ್ರಾ.ಶಾಲೆಯ ಶಿಕ್ಷಕ ವಿಶ್ವನಾಥ ಗೌಡ ಕುಳಾಲ್ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ನಂತರ ನೆಟ್‌ಬಾಲ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಶ್ರೀನಿವಾಸ ಗೌಡ ಅಳಿಕೆ, ಹಾಗೂ ಅಗ್ನಿವೀರರಾಗಿ ನೇಮಕಾತಿ ಹೊಂದಿರುವ ಉಲ್ಲಾಸ್ ಅನಂತಾಡಿ ಮತ್ತು ಸಚಿನ್ ಮೈರ ಅವರನ್ನು ಗೌರವಿಸಲಾಯಿತು. ಸಂಘಕ್ಕೆ ಕೊಡುಗೆ, ದೇಣಿಗೆ ನೀಡಿದವರನ್ನೂ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ:
ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಕ್ಕಲಿಗ ಸಮಾಜದ ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾಯಿತು.

ಗ್ರಾನೈಟ್ ಅಳವಡಿಕೆ-ಉದ್ಘಾಟನೆ
ಸಭಾಭವನದ ಭೋಜನಾಲಯಕ್ಕೆ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷ ಡಾ.ಕೆ.ವಿ ರೇಣುಕಾ ಪ್ರಸಾದ್‌ರವರು ದೇಣಿಗೆಯಾಗಿ ನೀಡಿದ್ದ ರೂ. ೫ ಲಕ್ಷ ವೆಚ್ಚದಲ್ಲಿ ಗ್ರಾನೈಟ್‌ನ್ನು ಅಳವಡಿಸಲಾಗಿದ್ದು ಅದನ್ನು ದ.ಕ ಜಿಲ್ಲಾ ಗೌಡ ಸೇವಾ ಸಂಘ ಮಂಗಳೂರು ಇದರ ಅಧ್ಯಕ್ಷ ಲೋಕಯ್ಯ ಗೌಡ ಉದ್ಘಾಟಿಸಿದರು.

ವೇದಿಕೆಯಲ್ಲಿ ಮಂಗಳೂರು ತಾಲೂಕು ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಸದಾನಂದ ಗೌಡ, ದ.ಕ ಜಿಲ್ಲಾ ಗೌಡ ಸೇವಾ ಸಂಘ ಮಂಗಳೂರು ಇದರ ಅಧ್ಯಕ್ಷ ಲೋಕಯ್ಯ ಗೌಡ, ಒಕ್ಕಲಿಗ ಸಂಘ ಬಂಟ್ವಾಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಜಲಜಾಕ್ಷಿ, ಒಕ್ಕಲಿಗ ಸಂಘ ಯುವವೇದಿಕೆ ಬಂಟ್ವಾಳ ತಾಲೂಕು ಇದರ ಕಾರ್ಯದರ್ಶಿ ವೇಣುಕುಮಾರ್ ಸಿ.ಎಚ್, ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷ ಮನೋಹರ ಡಿ.ವಿ ಉಪಸ್ಥಿತರಿದ್ದರು. ಸಭೆಯಲ್ಲಿ ಸಂಘದ ಮೇಲ್ವಿಚಾರಕಿ ಸುಮಲತಾ, ಪ್ರೇರಕಿಯರಾದ ನಮಿತಾ ಮತ್ತು ಮೋಹಿನಿ ಉಪಸ್ಥಿತರಿದ್ದರು. ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ಪುತ್ತೂರು ಇದರ ಕಾರ್ಯದರ್ಶಿ ದಿವ್ಯ ಪ್ರಸಾದ್, ಸಲಹಾ ಸಮಿತಿ ಸದಸ್ಯ ವೆಂಕಪ್ಪ ಗೌಡ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಕೃಪಾ ದೇವರಮನೆ ಪ್ರಾರ್ಥಿಸಿದರು. ಮೋಹನ್ ಕಾಯರ್‌ಮಾರ್ ಸ್ವಾಗತಿಸಿದರು. ಜಲಜಾಕ್ಷಿ ವಂದಿಸಿದರು. ಯತೀಶ್, ಲೀಲಾ, ತನುಜಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here