ಶಾಂತಿನಗರ ಶಾಲಾ ರಜತ ಮಹೋತ್ಸವ

0

ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಇರಲಿ: ಕಾಂಚನ ಸುಂದರ ಭಟ್

  •  ಶಿಕ್ಷಕರ ನೇಮಕಾತಿ ವಿಳಂಬದಿಂದ ಹಿನ್ನಡೆ: ಟಿ.ನಾರಾಯಣ ಭಟ್
  •  ಎಲ್ಲರ ಪ್ರೋತ್ಸಾಹದಿಂದ ಶಾಲೆ ಉತ್ತುಂಗಕ್ಕೇರಲಿ: ಕೆ.ಎಸ್.ರಾಧಾಕೃಷ್ಣ
  •  ಪೋಷಕರು ಮಕ್ಕಳಿಗೆ ಸಮಯ ಮೀಸಲಿಡಬೇಕು: ಸ್ಟೀಫನ್ ವೇಗಸ್
  •  ಶಿಕ್ಷಣ, ಸವಲತ್ತುಗಳಿಗೆ ಕೊರತೆ ಇಲ್ಲ: ತೇಜಸ್ವಿನಿ
  •  ವಿದ್ಯೆ ಕಳೆದುಹೋಗದ ಸಂಪತ್ತು: ಶಿವಪ್ರಸಾದ್ ಶೆಟ್ಟಿ
  •  ಅಕ್ಷರದ ಜೊತೆಗೆ ಬದುಕೂ ಕಲಿಸುತ್ತದೆ : ವಿಮಲ್‌ಕುಮಾರ್
  •  ಮಕ್ಕಳಲ್ಲಿ ಕೀಳರಿಮೆ ಬೇಡ: ಯಶೋಧರ
  •  ಶಾಲೆಯ ಅಭಿವೃದ್ಧಿಗೆ ದಾನಿಗಳ ಸಹಕಾರ: ಗಿರಿಜ
  •  ಪಂಚಾಯತ್‌ನಿಂದ ಅನುದಾನ: ಜನಾರ್ದನ ಗೌಡ

ನೆಲ್ಯಾಡಿ: ಮಕ್ಕಳಿಗೆ ಆಸಕ್ತಿ ಇಲ್ಲದಿದ್ದರೂ ಆಂಗ್ಲಭಾಷೆಯ ವ್ಯಾಮೋಹದಿಂದ ಪೋಷಕರೇ ಸಾಲ ಮಾಡಿಯಾದರೂ ತಮ್ಮ ಮಕ್ಕಳನ್ನು ಆಂಗ್ಲಮಾಧ್ಯಮ ಶಾಲೆಗೆ ಕಳಿಸುತ್ತಿದ್ದಾರೆ. ಭಾಷೆ ಮಾಧ್ಯಮವನ್ನು ವಂಚಿಸುವುದಿಲ್ಲ, ಪ್ರತಿಭೆ ಎಲ್ಲರಲ್ಲೂ ಇದೆ. ಆದ್ದರಿಂದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ನೀಡಬೇಕೆಂದು ನಿವೃತ್ತ ವಿದ್ಯಾಧಿಕಾರಿಯೂ ಆಗಿರುವ ಪುತ್ತೂರು ಕಾಂಚನ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ಕಾಂಚನ ಸುಂದರ ಭಟ್‌ರವರು ಹೇಳಿದರು.

ಅವರು ಡಿ.17ರಂದು ರಾತ್ರಿ ಕಡಬ ತಾಲೂಕಿನ ಗೋಳಿತ್ತಟ್ಟು ಗ್ರಾಮದ ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆದ ರಜತ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಇನ್ನೂ ಬ್ರಿಟಿಷರ ಕಾಲದಲ್ಲಿ ಜಾರಿಯಲ್ಲಿದ್ದ ಮಕ್ಕಳ ಸಂಖ್ಯೆಯ ಆಧಾರದಲ್ಲಿಯೇ ಶಿಕ್ಷಕರ ನೇಮಕಾತಿ ಆಗುತ್ತಿದೆ. ಇದರ ಬದಲು ಕೇರಳ ಮಾದರಿಯಲ್ಲಿ 15 ಮಕ್ಕಳಿಗೆ ಒಬ್ಬರಂತೆ ಶಿಕ್ಷಕರ ನೇಮಕ ಆಗಬೇಕು. ನಿವೃತ್ತಿಯಾದ ಮರುದಿನವೇ ಹೊಸ ಶಿಕ್ಷಕರ ನೇಮಕ ಮಾಡಬೇಕು. ಸರಕಾರ ಸಾಕಷ್ಟು ಸವಲತ್ತು ನೀಡಿದರೂ ಶಿಕ್ಷಕರ ನೇಮಕಾತಿ ಮಾಡುತ್ತಿಲ್ಲ. ಶಿಕ್ಷಕರ ನೇಮಕಾತಿ ವಿಳಂಬ ಮಾಡಿದಲ್ಲಿ ಮಕ್ಕಳ ಕಲಿಕೆಯೂ ಕುಂಠಿತ ಆಗುತ್ತದೆ. ಸರಕಾರ ಎಸ್‌ಡಿಎಂಸಿಗೆ 1 ಲಕ್ಷ ರೂ., ಅನುದಾನ ನೀಡಿ ಶಿಕ್ಷಕರ ನೇಮಕಕ್ಕೆ ಎಸ್‌ಡಿಎಂಸಿಗೆ ಅನುಮತಿ ನೀಡಬೇಕೆಂದು ಕಾಂಚನ ಸುಂದರ ಭಟ್ ಹೇಳಿದರು.

ಶೈಕ್ಷಣಿಕ ಉಪನ್ಯಾಸ ನೀಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ನಾರಾಯಣ ಭಟ್ ರಾಮಕುಂಜರವರು, ಸರಕಾರ ಎಲ್ಲಾ ಸವಲತ್ತು ನೀಡಿದರೂ ಶಿಕ್ಷಕರ ನೇಮಕಾತಿ ಮಾಡುತ್ತಿಲ್ಲ. ಈ ಶಿಕ್ಷಣ ವ್ಯವಸ್ಥೆಯಿಂದಾಗಿ ಹಿನ್ನಡೆ ಆಗುತ್ತಿದೆ. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವೂ ಕನ್ನಡ ಮಾಧ್ಯಮದಲ್ಲೇ ಸಿಗಬೇಕು. ಇದರಿಂದ ಅವರಿಗೆ ಬದುಕಿನ ಶಿಕ್ಷಣ ಸಿಗುತ್ತಿದೆ. ಈ ಮಣ್ಣಿನ ಪ್ರೀತಿ ಸಿಗುತ್ತದೆ. ದೇಶವನ್ನು ಪ್ರೀತಿಸುವ ಸಂಸ್ಕಾರಯುತ ಮಕ್ಕಳು ದೇಶಕ್ಕೆ ಬೇಕು. ಈ ಚಿಂತನೆಯೊಂದಿಗೆ ಶಿಕ್ಷಣ ನೀಡಬೇಕಿದೆ ಎಂದು ಹೇಳಿದರು.

ದೀಪ ಪ್ರಜ್ವಲನೆ ಮಾಡಿದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್.ಅವರು ಮಾತನಾಡಿ, 25 ವರ್ಷ ಇಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೇರಿದ್ದಾರೆ. ಅವರ ಪ್ರೋತ್ಸಾಹದೊಂದಿಗೆ ಶಾಲೆ ಮುಂದೆ ಒಳ್ಳೆಯ ರೀತಿಯಲ್ಲಿ ನಡೆದು ಉತ್ತುಂಗಕ್ಕೆ ಏರಲಿ ಎಂದರು. ಅತಿಥಿಯಾಗಿದ್ದ ಪುತ್ತೂರು ಕ್ಷೇತ್ರ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ ಮಾತನಾಡಿ, ಪೋಷಕರು ದಿನದ ಬೆಳಿಗ್ಗೆ ಹಾಗೂ ಸಂಜೆ ತಲಾ ಅರ್ಧತಾಸು ಸಮಯ ಮಕ್ಕಳಿಗಾಗಿ ವಿನಿಯೋಗಿಸಬೇಕು. ಪೋಷಕರಿಗೂ ಮಕ್ಕಳನ್ನು ಬೆಳೆಸುವ ತರಬೇತಿ ನೀಡಬೇಕು. ವಿದ್ಯಾರ್ಥಿಗಳೂ ಸಾಧಕರಾಗಬೇಕೆಂದು ಹೇಳಿದರು.

ಇನ್ನೋರ್ವ ಅತಿಥಿ ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಕಟ್ಟಪುಣಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರ ತಂಡವಿದೆ. ಶಿಕ್ಷಣ, ಸಲವತ್ತುಗಳಿಗೆ ಕೊರತೆ ಇಲ್ಲ. ತಮ್ಮ ಮಕ್ಕಳಿಗೆ ಪೋಷಕರು ಸಮೀಪದ ಶಾಲೆಗಳಲ್ಲಿಯೇ ಶಿಕ್ಷಣ ನೀಡಬೇಕೆಂದು ಹೇಳಿದರು. ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿಯವರು ಮಾತನಾಡಿ, ವಿದ್ಯೆ ಎಂದಿಗೂ ಕಳೆದುಹೋಗದ ಸಂಪತ್ತು. ಮಕ್ಕಳನ್ನು ದೇಶದ ಸತ್ಪ್ರಜೆಗಳನ್ನಾಗಿಸುವಲ್ಲಿ ಪ್ರಾಥಮಿಕ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಳ್ಳಿಗಾಡಿನ ವಿದ್ಯಾರ್ಥಿಗಳೂ ಉನ್ನತ ಸಾಧನೆ ಮಾಡಬಹುದು ಎಂದರು.

ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವಿಮಲ್‌ಕುಮಾರ್ ನೆಲ್ಯಾಡಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಕನಸುಗಳಿಗೆ ಕೊರತೆ ಇಲ್ಲ. ಸರಕಾರಿ ಶಾಲೆಯ ಮಕ್ಕಳು ಬದುಕಿನಲ್ಲಿ ಎಂದಿಗೂ ದಾರಿತಪ್ಪುವುದಿಲ್ಲ. ಅಕ್ಷರದ ಜೊತೆಗೆ ಬದುಕುವುದನ್ನೂ ಕಲಿಸುತ್ತವೆ ಎಂದರು.

ಮಂಗಳೂರಿನ ನ್ಯಾಯವಾದಿ ಯಶೋಧರ ಪಿ.ಕರ್ಕೇರ ಮಾತನಾಡಿ, ಕನ್ನಡ ಮಾಧ್ಯಮ, ಸರಕಾರಿ ಶಾಲೆ ಎಂಬ ಕೀಳರಿಮೆ ಮಕ್ಕಳಲ್ಲಿ ಬೇಡ. ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳೇ ದೇಶದ ಸತ್ಪ್ರಜೆಗಳಾಗುತ್ತಾರೆ ಎಂದರು. ಕೊಣಾಲು ಶಾಲಾ ಮುಖ್ಯಶಿಕ್ಷಕಿ ಗಿರಿಜ ಪಿ. ಮಾತನಾಡಿ, ಈ ಶಾಲೆಯಲ್ಲಿ 12 ವರ್ಷ ಸೇವೆ ಸಲ್ಲಿಸಿದ್ದೇನೆ. ಈ ಶಾಲೆಯಲ್ಲಿ ಮೂಲಭೂತ ಸಮಸ್ಯೆಗಳಿಗೆ ಕೊರತೆ ಇಲ್ಲ. ಶಾಲೆಯ ಅಭಿವೃದ್ಧಿಯಲ್ಲಿ ಊರಿನ ನಾಗರಿಕರ, ದಾನಿಗಳ ಸಹಕಾರ ಇದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೋಳಿತ್ತಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಗೌಡ ಪಠೇರಿ ಮಾತನಾಡಿ, ಶಾಲಾ ರಜತ ಮಹೋತ್ಸವ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿದೆ. ಸರಕಾರದ ನಿಯಮದಂತೆ ಪಂಚಾಯತ್‌ನಿಂದ ಶಾಲೆಗೆ ಅನುದಾನ ನೀಡಲು ಬದ್ಧರಿದ್ದೇವೆ. ಶಾಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಇದಕ್ಕೆ ಎಲ್ಲರ ಸಹಕಾರ ಇರಲಿ ಎಂದರು.

ದಾನಿಗಳಿಗೆ ಸನ್ಮಾನ; ಶಾಲಾಭಿವೃದ್ಧಿ ಸಮಿತಿ ಸ್ಥಾಪಕಾಧ್ಯಕ್ಷ ವೆಂಕಪ್ಪ ಗೌಡ ಪೆರ್ಲ, ನಿವೃತ್ತ ವಿದ್ಯಾಧಿಕಾರಿ, ಪುತ್ತೂರು ಕಾಂಚನ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷರೂ ಆದ ಕಾಂಚನ ಸುಂದರ ಭಟ್, ಕಟ್ಟಡ ದಾನಿ ವಾಯುಪ್ರಭಾ ಹೆಗ್ಡೆ ಶಾಂತಿಮಾರು, ನಿವೃತ್ತ ಮುಖ್ಯಶಿಕ್ಷಕ, ಕಟ್ಟಡ ದಾನಿಗಳೂ ಆದ ಗಣಪಯ್ಯ ಬಿ., ಶಾಲಾಭಿವೃದ್ಧಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಮೋನಪ್ಪ ಪೂಜಾರಿ ಡೆಂಬಲೆ, ಶಾಂತಿನಗರ ಅಂಗನವಾಡಿ ಕಾರ್ಯಕರ್ತೆ ರೀತಾಕ್ಷಿ, ಕಟ್ಟಡ ದಾನಿ ಮೋನಪ್ಪ ಗೌಡ ಅಲೆಕ್ಕಿ, ಶಾಲಾ ಪ್ರವೇಶದ್ವಾರದ ದಾನಿ ವಸುಮತಿ ಡೆಂಬಲೆ ಅವರಿಗೆ ಸ್ಮರಣಿಕೆ, ಫಲತಾಂಬೂಲ, ಶಾಲು ಹಾಕಿ ಸನ್ಮಾನಿಸಲಾಯಿತು.

ಶಿಕ್ಷಕರಿಗೆ ಗೌರವಾರ್ಪಣೆ: ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ ಶಿಕ್ಷಕರಿಗೆ ಸ್ಮರಣಿಕೆ, ಶಾಲು ಹಾಕಿ ಗೌರವಿಸಲಾಯಿತು. ದಿ.ಪ್ರಭಾಕರ ಕೆ. ಅವರ ಪರವಾಗಿ ಶ್ರೀಮತಿ ಸುಧಾ, ಲವಿನಾ ಪಿಂಟೋ, ಗಿರಿಜ, ಸೀತಮ್ಮ ಕೆ.ಎಸ್., ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಮಂಜುನಾಥ ಮಣಕವಾಡ, ಪ್ರದೀಪ್ ಬಾಕಿಲ ಅವರಿಗೆ ಸ್ಮರಣಿಕೆ, ಶಾಲು ಹಾಕಿ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ: ಶಾಲಾ ರಜತ ಮಹೋತ್ಸವದ ಅಂಗವಾಗಿ ಅಂಗನವಾಡಿ ಹಾಗೂ ಶಾಲೆಯ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಾಲೆಯಲ್ಲಿ ಸೇವೆ ಸಲ್ಲಿಸಿದ ಗೌರವ ಶಿಕ್ಷಕರಿಗೆ, ವಿಶೇಷ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳಿಗೆ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರುಗಳಿಗೆ ಹಾಗೂ ಸಾಧಕರಿಗೆ ಸ್ಮರಣಿಕೆ,ಶಾಲು ಹಾಕಿ ಗೌರವಿಸಲಾಯಿತು.

ಗೋಳಿತ್ತಟ್ಟು ಗ್ರಾ.ಪಂ.ಸದಸ್ಯರಾದ ಬಾಲಕೃಷ್ಣ ಅಲೆಕ್ಕಿ, ಹೇಮಲತಾ ಮುರಿಯೇಲು, ರಜತ ಮಹೋತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಕಾಂಚನ, ಎಸ್‌ಡಿಎಂಸಿ ಅಧ್ಯಕ್ಷ ಪುರುಷೋತ್ತಮ ಗುರುಂಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾರಾಯಣ ಪೂಜಾರಿ ಡೆಂಬಲೆ, ರಂಜಿತ್ ಜೈನ್ ಮೇಲೂರು, ದೇವಪ್ಪ ಮುರಿಯೇಲು, ಶಿವಪ್ರಸಾದ್, ರೇವತಿ ಚಂದ್ರಕಟ್ಟ, ರಂಜಿತ್, ದೇಜಪ್ಪ ಗೌಡ, ರಜತ್ ಶಾಂತಿಮಾರು, ಗೀತಾ ಕಲ್ಲಂಡ, ಮಹಮ್ಮದ್ ಎನ್., ಹೇಮಲತಾ ಕಿನ್ಯಡ್ಕ, ಮೂಲಚಂದ್ರರವರು ಅತಿಥಿಗಳಿಗೆ ಗೌರವಾರ್ಪಣೆ ಮಾಡಿದರು. ಶಿಕ್ಷಕ ಮಂಜುನಾಥ ಮಣಕವಾಡ ವರದಿ ಮಂಡಿಸಿದರು. ರಜತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ, ಮುಖ್ಯಶಿಕ್ಷಕ ಪ್ರದೀಪ್ ಬಾಕಿಲ ಸ್ವಾಗತಿಸಿ, ರಜತ ಮಹೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ಜನಾರ್ದನ ಗೌಡ ಬರಮೇಲು ವಂದಿಸಿದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಶಾಲಪ್ಪ ನಾಯ್ಕ್, ಶಿಕ್ಷಕಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿಯರಾದ ಪ್ರಮೀಳಾ, ಚಿತ್ರಾವತಿ, ಜ್ಞಾನದೀಪ ಶಿಕ್ಷಕಿ ತಾರ, ಗೌರವ ಶಿಕ್ಷಕಿ ವೀಕ್ಷಿತಾ ವಿವಿಧ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಮಾಜಿ ಸದಸ್ಯ ಮುಕುಂದ ಗೌಡ ಬಜತ್ತೂರು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಸೇರಿದಂತೆ ವಿವಿಧ ಇಲಾಖೆಯ ಇಲಾಖಾಽಕಾರಿಗಳು, ನೆರೆಯ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು.

1 ಸಾವಿರ ರೂ.,ಪ್ರೋತ್ಸಾಹಧನ ಘೋಷಣೆ

ಮುಂದಿನ ಶೈಕ್ಷಣಿಕ ವರ್ಷ ಶಾಂತಿನಗರ ಶಾಲೆಯಲ್ಲಿ 1ನೇ ತರಗತಿಗೆ ದಾಖಲಾಗುವ ಪ್ರತಿ ಮಗುವಿಗೂ ಕಾಂಚನ ಫೌಂಡೇಶನ್ ಟ್ರಸ್ಟ್ ವತಿಯಿಂದ 1 ಸಾವಿರ ರೂ. ಪ್ರೋತ್ಸಾಹಧನ ನೀಡುವುದಾಗಿ ನಿವೃತ್ತ ವಿದ್ಯಾಧಿಕಾರಿ, ಕಾಂಚನ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷರೂ ಆದ ಕಾಂಚನ ಸುಂದರ ಭಟ್‌ರವರು ಘೋಷಣೆ ಮಾಡಿದರು. 2 ರಿಂದ ಮೇಲಿನ ತರಗತಿಗಳಿಗೆ ದಾಖಲಾಗುವ ಮಕ್ಕಳಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಊರಿನ ದಾನಿಗಳು ಮುಂದೆ ಬರಬೇಕೆಂದು ಸುಂದರ ಭಟ್ ಹೇಳಿದರು.

ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದಿಂದ 1 ಶಿಕ್ಷಕರ ನೇಮಕ: ಮುಂದಿನ ಶೈಕ್ಷಣಿಕ ವರ್ಷದ ಜೂನ್‌ನಿಂದ ಮಾರ್ಚ್ ತನಕದ ಅವಧಿಗೆ ಶಾಂತಿನಗರ ಶಾಲೆಗೆ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ವತಿಯಿಂದ 1 ಗೌರವ ಶಿಕ್ಷಕರಿಗೆ ವೇತನ ನೀಡುವುದಾಗಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣರವರು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮ:

ರಾತ್ರಿ ಶಾಂತಿನಗರ ಅಂಗನವಾಡಿ ಕೇಂದ್ರ, ಶಾಲಾ ಮಕ್ಕಳಿಂದ, ಹಿರಿಯ ವಿದ್ಯಾರ್ಥಿಗಳು ಹಾಗೂ ಊರವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿ ಶಾಂತಿನಗರ ಆದರ್ಶ ಯುವಕ ಮಂಡಲ ಹಾಗೂ ಊರ ಕಲಾಭಿಮಾನಿಗಳ ಪ್ರಾಯೋಜಕತ್ವದಲ್ಲಿ ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ಇವರಿಂದ ’ಯಾನ್ ಉಲ್ಲೆತ್ತ’ ತುಳು ನಾಟಕ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here