ವಾಣಿಜ್ಯ ಶಾಸ್ತ್ರದಲ್ಲಿ “ಮಾರುಕಟ್ಟೆ-ಕೃಷಿ ಬದುಕು” ವಿಷಯದಲ್ಲಿ ಅಧ್ಯಯನ:ವಿದುಷಿ ಸುಚಿತ್ರಾ ಹೊಳ್ಳರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ

0

೦ ಹಂಪಿಯ “ನುಡಿಹಬ್ಬ-31″ರಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರಿಂದ ಪದವಿ ಪ್ರದಾನ.
೦ ಕರ್ನಾಟಕದ ಸುಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ.

ಉಪ್ಪಿನಂಗಡಿ: ಕರ್ನಾಟಕ ಶಾಸ್ರ್ತೀಯ ಸಂಗೀತದಲ್ಲಿ ಖ್ಯಾತಿ ಹೊಂದಿರುವ ವಿದುಷಿ ಸುಚಿತ್ರಾ ಹೊಳ್ಳ ಅವರು ವಾಣಿಜ್ಯ ಶಾಸ್ತ್ರದಲ್ಲಿ “ಮಾರುಕಟ್ಟೆ-ಕೃಷಿ ಬದುಕು” ವಿಷಯದ ಬಗೆಗೆ ಅಧ್ಯಯನ ನಡೆಸಿ ಸಲ್ಲಿಸಿದ ಮಹಾ ಪ್ರಬಂಧವನ್ನು ಮನ್ನಿಸಿ ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ.


ಡಾ. ಸುಚಿತ್ರಾ ಹೊಳ್ಳ ಅವರು ಈ ಅಧ್ಯಯನವನ್ನು ಹಂಪಿ ವಿಶ್ವ ವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಎಚ್.ಡಿ. ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಕೈಗೊಂಡಿದ್ದರು. ಇತ್ತೀಚೆಗೆ ಹಂಪೆಯ ಕನ್ನಡ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ನಡೆದ ಘಟಿಕೋತ್ಸವ “ನುಡಿಹಬ್ಬ-31″ರಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

ಸುಚಿತ್ರಾ ಹೊಳ್ಳ

ಕರ್ನಾಟಕದ ಸುಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ:
ವಿದುಷಿ ಸುಚಿತ್ರಾ ಹೊಳ್ಳ ಕರಾವಳಿ ಕರ್ನಾಟಕದ ಸುಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿಯರಲ್ಲಿ ಒಬ್ಬರು. ಬೆಳ್ತಂಗಡಿ ತಾಲ್ಲೂಕಿನ ಉಜಿರೆಯ ಕಲಾಸಕ್ತ ಕುಟುಂಬದಲ್ಲಿ ಜನಿಸಿ ಬಾಲಪ್ರತಿಭೆಯಾಗಿ ಬೆಳಕಿಗೆ ಬಂದು ಇಂದು ಪ್ರಬುದ್ಧ ಕಲಾವಿದೆಯಾಗಿ ನಾಡಿನೆಲ್ಲೆಡೆ ಹೆಸರು ಗಳಿಸಿರುವವರು. ಸಂಗೀತ, ಹಾಡುಗಾರಿಕೆ ಇವರಿಗೆ ರಕ್ತಗತವಾಗಿ ಬಂದದ್ದು. ಇವರ ಅಜ್ಜಿ ಸರಸ್ವತಿಯಮ್ಮ ಹಸೆಹಾಡು-ಶೋಭಾನೆ ಹಾಡುಗಳನ್ನು ಹೇಳುತ್ತಾ ಮನೆ ಮಾತಾದವರು. ತೀರ್ಥರೂಪರಾದ ಶ್ರೀನಿವಾಸ ಹೊಳ್ಳ ಹವ್ಯಾಸಿ ಯಕ್ಷಗಾನ ಭಾಗವತರಾಗಿ ಹೆಸರು ಮಾಡಿದವರು.

ವಿದ್ವತ್, ಎಂ ಮ್ಯೂಸಿಕ್ ಪದವಿಯಲ್ಲಿ ಪ್ರಥಮ ರ್‍ಯಾಂಕ್:
ಸುಚಿತ್ರಾ ಹೊಳ್ಳ ಸಂಗೀತ ಕ್ಷೇತ್ರವನ್ನು ಪ್ರವೇಶಿಸಿದ್ದು ತಂದೆಯ ಮೂಲಕವೇ. ಉನ್ನತ ಅಭ್ಯಾಸವನ್ನು ಶ್ರೀಮತಿ ಶ್ಯಾಮಲಾ ನಾಗರಾಜ್, ಕುದ್ಮಾರ್ ವೆಂಕಟ್ರಮಣ, ಬೆಂಗಳೂರಿನ ಸಂಗೀತ ಕಲಾ ಆಚಾರ್ಯ ನೀಲಾ ರಾಂಗೋಪಾಲ್ ಇವರಲ್ಲಿ ನಡೆಸಿದರು. ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯವರು ನಡೆಸುವ ಜೂನಿಯರ್, ಸೀನಿಯರ್ ಹಂತದ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದವರು. ಬಳಿಕ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ
ಎಂ ಮ್ಯೂಸಿಕ್ ಪದವಿಯನ್ನು ಪ್ರಥಮ ರ್‍ಯಾಂಕ್‌ನೊಂದಿಗೆ ಗಳಿಸಿದ ಕೀರ್ತಿ ಇವರದು. ಆಕಾಶವಾಣಿ ಕಲಾವಿದೆಯಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಬೋರ್ಡ್ ಆಫ್ ಸ್ಟಡೀಸ್ ಸದಸ್ಯೆಯಾಗಿ ಸತತವಾಗಿ ಸಂಗೀತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ತಮ್ಮ 7ನೆಯ ವರ್ಷದಲ್ಲಿ ಪ್ರಥಮ ಸಂಗೀತ ಕಚೇರಿ ನೀಡಿದ ಸುಚಿತ್ರಾ ಅವರು ಈವರೆಗೆ ಸುಮಾರು 500ಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಪ್ರತಿಷ್ಠಿತ ಸಭಾಗಳಲ್ಲಿ ನೀಡಿ ಸಂಗೀತಾಸಕ್ತರ ಮನರಂಜಿಸಿದ್ದಾರೆ. ಇಂಪಾದ ಏರುಕಂಠ, ಚುರುಕು ನಡೆ ಹಾಗೂ ಶಾಸ್ತ್ರೀಯವಾದ ಸಂಗೀತ ಪ್ರಸ್ತುತಿ ಇವರ ಸಂಗೀತಕ್ಕೆ ವಿಶೇಷ ಮೆರುಗನ್ನು ತಂದುಕೊಟ್ಟಿದೆ. ಸಂಗೀತಕ್ಕಾಗಿ ಇವರ ಪರಿಶ್ರಮ ಹಾಗೂ ನಿಷ್ಠೆ ಶ್ಲಾಘನೀಯವಾದುದು.

ಹಲವಾರು ಪ್ರಶಸ್ತಿಗೆ ಬಾಜನರಾದವರು:
ಉಡುಪಿಯ ರಾಗಧನ ಸಂಸ್ಥೆಯು 2016ರಲ್ಲಿ “ರಾಗಂ ತಾನಂ ಪಲ್ಲವಿ” ಹಾಡುಗಾರಿಕೆಯಲ್ಲಿ ಇವರ ಪರಿಣತಿ ಹಾಗೂ ಪರಿಶ್ರಮವನ್ನು ಗುರುತಿಸಿ “ರಾಗ ಧನ ಪಲ್ಲವಿಪ್ರಶಸ್ತಿ-2016″ನ್ನು ನೀಡಿ ಗೌರವಿಸಿದೆ.

ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು 2018ರ ಸಾಲಿನ ಚಾತುರ್ಮಾಸ್ಯವನ್ನು ಪುತ್ತೂರಿನಲ್ಲಿ ಕೈಗೊಂಡ ಸಂದರ್ಭದಲ್ಲಿ “ಸಂಗೀತ ವಿಶಾರದೆ” ಎಂಬ ಬಿರುದನ್ನು ನೀಡಿ ಗೌರವಿಸಿದ್ದರು. ಇವರ ಸಾಧನೆಗೆ ಕಲಶಪ್ರಾಯವಾಗಿ “ಸಂಗೀತ ಪರಿಷತ್ ಮಂಗಳೂರು” ಹಾಗೂ ಭಾರತೀಯ ವಿದ್ಯಾಭವನ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಜರುಗಿದ “ಸಂಗೀತೋತ್ಸವ-2018″ರಲ್ಲಿ ಇವರಿಗೆ “ಸಂಗೀತ ಕಲಾಧರೆ” ಎಂಬ ಬಿರುದನ್ನು ನೀಡಿ ಪುರಸ್ಕರಿಸಲಾಯಿತು. ಇಷ್ಟೇ ಅಲ್ಲದೆ ನಾಡಿನ ವಿವಿಧ ಸಂಗೀತ ಸಭಾಗಳಲ್ಲಿ, ಸಂಗೀತ ವೇದಿಕೆಗಳಲ್ಲಿ ಹಾಗೂ ನೆರೆಯ ಕೇರಳ, ತಮಿಳುನಾಡುಗಳಲ್ಲೂ ಪ್ರಬುದ್ಧ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಇವರನ್ನು ಸ್ಪಂದನ ಲಲಿತಕಲಾ ಅಕಾಡೆಮಿ, ನಾಗರಿಕ ಸೇವಾ ಟ್ರಸ್ಟ್, ಸಂಗೀತ ಪರಿಷತ್ತು, ಮಂಗಳೂರು ಮುಂತಾದ ಸಂಸ್ಥೆಗಳು ಗೌರವಿಸಿವೆ.

ಸ್ವತಃ ಸಂಗೀತ ಕಚೇರಿಗಳನ್ನು ನೀಡುವುದರ ಜೊತೆಗೆ ಯುವ ಸಂಗೀತಗಾರರನ್ನು ತಯಾರು ಮಾಡುವಲ್ಲಿ ಸತತವಾಗಿ ಪ್ರಯತ್ನಶೀಲರಾಗಿದ್ದಾರೆ. ಪುತ್ತೂರನ್ನು ತನ್ನ ಕಾರ್ಯ ಕ್ಷೇತ್ರವನ್ನಾಗಿಸಿಕೊಂಡು ಸಂಗೀತ ಪ್ರಸಾರಕ್ಕಾಗಿ ಸಾಧನಾ ಸಂಗೀತ ಶಾಲೆಯ ಗುರುಗಳಾಗಿ ಅನೇಕ ಉತ್ತಮ ಗಾಯಕ ಗಾಯಕಿಯರನ್ನು ನಾಡಿಗೆ ಕೊಟ್ಟ ಕೀರ್ತಿ ಇವರದು. ಯುವ ಗಾಯಕರಿಗೆ ವೇದಿಕೆಯನ್ನು ತಯಾರು ಮಾಡುವ ಉದ್ದೇಶದಿಂದ “ಸ್ವರಮಾಲ” ಎಂಬ ತಿಂಗಳ ಸಂಗೀತ ಕಾರ್ಯಕ್ರಮವನ್ನು ಕಳೆದ ಐದು ವರ್ಷಗಳ ಕಾಲ ನಡೆಸಿದ್ದಾರೆ.

ವಿಧುಷಿ ಸುಚಿತ್ರ ಹೊಳ್ಳ ಅವರು ತಮ್ಮ ಹೆಚ್ಚಿನ ಸಮಯವನ್ನು ಸಂಗೀತ ಕ್ಷೇತ್ರಕ್ಕೆ ಸಾಧನೆಗೆ ಮೀಸಲಾಗಿಸಿದ್ದರೂ, ಅಷ್ಟಕ್ಕೇ ಸೀಮಿತವಾಗದೆ ಬಹುಮುಖ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಇವರು ಎಂ.ಕಾಂ., ಎಂ.ಬಿ.ಎ., ಎಲ್.ಎಲ್.ಬಿ., ಪದವೀದರೆ. ವಕೀಲೆಯಾಗಿ ಸೇವೆ ಸಲ್ಲಿಸಿರುವ ಸುಚಿತ್ರಾ ಹೊಳ್ಳ ಸಂದೇಶ ಲಲಿತ ಕಲಾ ಕಾಲೇಜಿನಲ್ಲಿಉಪನ್ಯಾಸಕಿಯಾಗಿ ಕೆಲಸವನ್ನೂ ಮಾಡಿರುವ ಇವರು, ಪ್ರಸ್ತುತ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿಯಲ್ಲಿ ಸಂಗೀತ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉದ್ಯಮಿ ಹರೀಶ್ ಹೊಳ್ಳ ಅವರನ್ನು ವಿವಾಹವಾಗಿದ್ದು, ಪುತ್ರ ತೇಜ ಚಿನ್ಮಯ ಹೊಳ್ಳರೊಡಗೂಡಿ ಪುತ್ತೂರು ಕೊಂಬೆಟ್ಟುನಲ್ಲಿ ನೆಲೆಸಿರುತ್ತಾರೆ.

LEAVE A REPLY

Please enter your comment!
Please enter your name here