ಪುತ್ತೂರು: ಪುತ್ತೂರಿನಿಂದ ಪುರುಷರಕಟ್ಟೆ ಮಾರ್ಗವಾಗಿ ಆನಡ್ಕಕ್ಕೆ ಪ್ರತೀದಿನ ಸಂಜೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕಳೆದ ನಾಲ್ಕೈದು ದಿನಗಳಿಂದ ಸಂಚಾರ ಸ್ಥಗಿತಗೊಳಿಸಿರುವ ಕಾರಣ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆನ್ನುವ ದೂರು ವ್ಯಕ್ತವಾಗಿದೆ.
ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಿಂದ ಪ್ರತಿದಿನ ಸಂಜೆ ೫ಗಂಟೆಗೆ ಹೊರಟು ಪುರುಷರಕಟ್ಟೆ ಮಾರ್ಗವಾಗಿ ಆನಡ್ಕಕ್ಕೆ ಹೋಗಿ ಹಿಂತಿರುಗುತ್ತಿದ್ದ ಬಸ್ ಸೌಲಭ್ಯದಿಂದ ಆನಡ್ಕ, ಪುರುಷರಕಟ್ಟೆ ವ್ಯಾಪ್ತಿಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಸಂಚಾರಕ್ಕೆ ಅನುಕೂಲವಾಗುತ್ತಿತ್ತು. ವಿದ್ಯಾರ್ಥಿಗಳು ಬಸ್ ಪಾಸ್‌ನ ಮೂಲಕ ಸಂಚರಿಸುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಏಕಾಏಕಿ ಬಸ್ ಸಂಚಾರ ಸ್ಥಗಿತಗೊಂಡಿದ್ದು ನಾಗರಿಕರು ಹಾಗೂ ವಿದ್ಯಾರ್ಥಿಗಳು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ವ್ಯವಸ್ಥೆ ಇಲ್ಲದ ಕಾರಣ ಅವರು ರಿಕ್ಷಾಗಳನ್ನು ಅವಲಂಬಿಸಬೇಕಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ನಾಗರಿಕರಿಗೆ ರಿಕ್ಷಾದಲ್ಲಿ ಬಾಡಿಗೆ ನೀಡಿ ಪ್ರಯಾಣಿಸಲು ತೊಂದರೆಯಾಗುತ್ತಿದ್ದು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಫೋನ್ ಮಾಡಿ ವಿಚಾರಿಸಿದರೆ ಇವತ್ತು ಬಸ್ ಇದೆ ಎಂಬ ಉತ್ತರ ಬರುತ್ತಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸ್ಪಂದಿಸಿ ಬಸ್ ವ್ಯವಸ್ಥೆ ಪುನರಾರಂಭಿಸಬೇಕೆಂದು ವಿದ್ಯಾರ್ಥಿಗಳ ಸಹಿತ ನಾಗರಿಕರು ಆಗ್ರಹಿಸಿದ್ದಾರೆ.