ಪುತ್ತೂರು: ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಸ್ಕೌಟ್ಸ್-ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆಯಲ್ಲಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಕೀರ್ಣದಲ್ಲಿ ಡಿ. 21ರಿಂದ 27ರವರೆಗೆ ನಡೆಯಲಿದ್ದು, ಪುತ್ತೂರಿನಿಂದ 1007 ವಿದ್ಯಾರ್ಥಿಗಳು ಮತ್ತು 180 ಶಿಕ್ಷಕರು ತೆರಳುವ ಕಾರ್ಯಕ್ರಮಕ್ಕೆ ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಡಿ.20ರಂದು ಸುದಾನ ವಸತಿಯುತ ಶಾಲೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಜೊತೆಯಾಗಿ ಸೇರಿ ಸುಮಾರು 30ಕ್ಕೂ ಅಧಿಕ ಬಸ್‌ಗಳಲ್ಲಿ ಜಾಂಬೂರಿ ಕಾರ್ಯಕ್ರಮಕ್ಕೆ ತೆರಳಿದರು.
ಸುವರ್ಣ ಕ್ಷಣವನ್ನು ಚೆನ್ನಾಗಿ ಬಳಸಿಕೊಳ್ಳಿ:
ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ಜಾಂಬೂರಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಸಿರು ನಿಶಾನೆ ತೋರಿಸಿದರು. ಬಳಿಕ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಇದುವರೆಗೆ ಏನೆಲ್ಲಾ ಮಾಡಿದ್ದೀರಾ ಮತ್ತು ಮುಂದೇನು ಮಾಡಲಿದ್ದೀರಾ ಅದಕ್ಕಿಂತ ಹೆಚ್ಚಾಗಿ ಜಾಂಬೂರಿಯ ಕ್ಷಣ ನೆನಪಿನಲ್ಲಿರುತ್ತದೆ. ಹಾಗಾಗಿ ಸುವರ್ಣ ಕ್ಷಣವನ್ನು ಚೆನ್ನಾಗಿ ಬಳಸಿಕೊಳ್ಳಿ. ಬೇರೆ ಬೇರೆ ದೇಶಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಇಂತಹ ಸಂದರ್ಭದಲ್ಲಿ ತಮ್ಮ ಕೌಶಲ್ಯವನ್ನು ಉತ್ತಮವಾಗಿ ಪ್ರದರ್ಶಿಸಿ ಎಂದರು. ಪೌರಾಯುಕ್ತ ಮಧು ಎಸ್ ಮನೋಹರ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಗೌರವಾಧ್ಯಕ್ಷರೂ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ಲೋಕೇಶ್ ಎಸ್.ಆರ್ ಅವರು ಶುಭ ಹಾರೈಸಿದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಸ್ಥಳೀಯ ಸಂಸ್ಥೆಯ ಅಧ್ಯಕ್ಷ ರೇ ವಿಜಯ ಹಾರ್ವೀನ್, ಕಾರ್ಯಾಧ್ಯಕ್ಷ ಶ್ರೀಧರ್ ರೈ, ಸ್ಥಳೀಯ ಸಂಸ್ಥೆಯ ಎಡಿಸಿ ಜಯಮಾಲ, ಉಪಾಧ್ಯಕ್ಷರಾದ ಉಮಾ ಪ್ರಸನ್ನ, ಝೇವಿಯರ್ ಡಿಸೋಜ, ಅಂಬಿಕಾ ವಿದ್ಯಾಲಯದ ಅಧ್ಯಕ್ಷ ಎನ್.ಸುಬ್ರಹ್ಮಣ್ಯ ನಟ್ಟೋಜ, ಸುದಾನ ವಸತಿಯುತ ಶಾಲೆಯ ಮುಖ್ಯಗುರು ಶೋಭಾನಾಗರಾಜ್, ಸ್ಥಳೀಯ ಸಂಸ್ಥೆಯ ವನಿತಾ, ಹರಿಣಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಸಂಸ್ಥೆ ಉಪಾಧ್ಯಾಕ್ಷೆ ವಿದ್ಯಾ ಆರ್ ಗೌರಿ ಸ್ವಾಗತಿಸಿ, ಎಲ್.ಟಿ ಗೈಡ್ ಸುನಿತಾ ಅವರು ವಂದಿಸಿದರು. ವೇದಾವತಿ ಕಾರ್ಯಕ್ರಮ ನಿರೂಪಿಸಿದರು.
ನಗರಸಭೆಯಿಂದ ರೂ. 1 ಲಕ್ಷ ಹಸ್ತಾಂತರ:
ಸ್ಕೌಟ್ಸ್-ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಪುತ್ತೂರು ನಗರಸಭೆಯಿಂದ ರೂ. 1ಲಕ್ಷವನ್ನು ಸ್ಥಳೀಯ ಸಂಸ್ಥೆಯ ಮೂಲಕ ಜಾಂಬೂರಿಗೆ ನೀಡಲಾಯಿತು. ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಚೆಕ್ ಅನ್ನು ಹಸ್ತಾಂತರಿಸಿದರು.