ಶಾಂತಿನಗರ ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆ ಸಮರ್ಪಣೆ: ಉಗ್ರಾಣ ಮುಹೂರ್ತ, ಅನ್ನಛತ್ರ ಉದ್ಘಾಟನೆ

0

ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ದ.25ರವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವಕ್ಕೆ ದ.20ರಂದು ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.


ಬೆಳಿಗ್ಗೆ ದೇವಳದಲ್ಲಿ ನಿತ್ಯ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ ನಡೆದ ಬಳಿಕ ಕೋಡಿಂಬಾಡಿ, ಬೆಳ್ಳಿಪ್ಪಾಡಿ, ನೆಕ್ಕಿಲಾಡಿ, ಕರ್ವೇಲು ಸಹಿತ ವಿವಿದೆಡೆಯಿಂದ ಮೆರವಣಿಗೆಯಲ್ಲಿ ಸಾಗಿ ಬಂದು ಶ್ರೀ ದೇವಳಕ್ಕೆ ಹೊರೆಕಾಣಿಕೆ‌ ಸಮರ್ಪಿಸಲಾಯಿತು. ದೇವಳದ ಆಡಳಿತ ಮೊಕ್ತೇಸರ ಯು.ಜಿ.ರಾಧ, ಮೊಕ್ತೇಸರರು ಮತ್ತು ಬೈಲುವಾರು ಸಮಿತಿಯ ಮುಖ್ಯಸ್ಥರು ಹೊರೆಕಾಣಿಕೆ ಮೆರವಣಿಗೆ ಸ್ವಾಗತಿಸಿದರು.

ನಂತರ ಉಗ್ರಾಣ ಮುಹೂರ್ತ ನೆರವೇರಿಸಿದ ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಅವರು ಬಳಿಕ ಅನ್ನಛತ್ರ ಉದ್ಘಾಟಿಸಿ ಶುಭ ಹಾರೈಸಿದರು. ಶೇಖರ ಪೂಜಾರಿ ಜೇಡರಪಾಲು, ಪ್ರೀತಂ ಶೆಟ್ಟಿ ಬಿ.ಕೆ. ಮತ್ತು ಸೇಸಪ್ಪ ಎಸ್. ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಿತು. ಸಂಜೆ ಕ್ಷೇತ್ರದ ತಂತ್ರಿಗಳಿಗೆ ಹಾಗೂ ಇತರ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ನಂತರ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ.

ನಾಳೆ ದೇವಳದಲ್ಲಿ

ದ.21ರಂದು ದೇವಳದಲ್ಲಿ ಮಹಾವಿಷ್ಣು ಯಾಗ ಸಹಿತ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದ್ದು ಈ ಸಂದರ್ಭದಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರಗಲಿದೆ. ಸಂಜೆ ನೆಕ್ಕಿಲಾಡಿ ಮತ್ತು ಶಾಂತಿನಗರ ಹಿ.ಪ್ರಾ.ಶಾಲೆ ಹಾಗೂ ಶಾಂತಿನಗರ ಅಂಗನವಾಡಿ ಕೇಂದ್ರದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ರಾತ್ರಿ ದೇವಳದ ಮೊಕ್ತೇಸರ ಪುರುಷೋತ್ತಮ ಪ್ರಭು ಹನಂಗೂರು ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು ಉಡುಪಿಯ ಭಾರತೀಯ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಹೆಬ್ಬಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಬಳಿಕ ಗಯಾಪದ ಕಲಾವಿದೆರ್ ಉಬಾರ್ ಇವರಿಂದ ರವಿಶಂಕರ್ ಶಾಸ್ತ್ರಿ ಮಣಿಲ ರಚಿಸಿ ನಿರ್ದೇಶಿಸಿರುವ ತುಳು ಹಾಸ್ಯ ನಾಟಕ ‘ನಮ ತೆರಿಯೊನುಗ ಇನಿ ಅತ್ತ್ಂಡ ನನ‌ ಏಪ….?’ ನಡೆಯಲಿದೆ.

LEAVE A REPLY

Please enter your comment!
Please enter your name here