ಬೆಳ್ಳಾರೆಯ ಉದ್ಯಮಿ ನವೀನ್ ‘ಕಾಮಧೇನು’ ಅವರ ಅಪಹರಣ ಯತ್ನ ಪ್ರಕರಣ; ತಂದೆ ಮಾಧವ ಗೌಡ, ಅತ್ತೆ ದಿವ್ಯಪ್ರಭ ಚಿಲ್ತಡ್ಕ ಸೇರಿದಂತೆ 6 ಮಂದಿ ವಿರುದ್ಧ ಕೇಸು

0

  • ದ.19ರಂದು ನಡೆದಿದ್ದ ಘಟನೆ 
  • ಅಪಹರಿಸಲೆಂದು ಆಂಬುಲೆನ್ಸ್‌ನಲ್ಲಿ ಬಲಾತ್ಕಾರದಿಂದ ಕರೆದೊಯ್ಯಲಾಗಿತ್ತು
  • ತಡೆಯಲು ಬಂದಿದ್ದ ನವೀನ್ ತಾಯಿ, ಅತ್ತಿಗೆಗೆ ಗಾಯ-ಆಸ್ಪತ್ರೆಗೆ ದಾಖಲು
  • ಶುಂಠಿಕೊಪ್ಪದಲ್ಲಿ ಆಂಬುಲೆನ್ಸ್ ತಡೆದು ನವೀನ್ ಮತ್ತಿತರರನ್ನು ಪೊಲೀಸರಿಗೆ ಒಪ್ಪಿಸಿದ್ದ ಸಾರ್ವಜನಿಕರು
  • ‘ಯಾರೂ ಕಿಡ್ನ್ಯಾಪ್ ಮಾಡಿಲ್ಲ’- ಮಾಧವ ಗೌಡ ಕಾಮಧೇನು
  • ‘ಇದೆಲ್ಲ ಸೆಟ್ಟಿಂಗ್’-ನವೀನ್ ಕಾಮಧೇನು

ಪುತ್ತೂರು:ಬೆಳ್ಳಾರೆಯ ಯುವ ಉದ್ಯಮಿ ನವೀನ್ ‘ಕಾಮಧೇನು’ ಅವರನ್ನು ಅಪಹರಿಸುವ ಉದ್ದೇಶದಿಂದ ಆಂಬ್ಯುಲೆನ್ಸ್‌ನಲ್ಲಿ ಬಲಾತ್ಕಾರವಾಗಿ ಕರೆದೊಯ್ಯಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ನವೀನ್ ಅವರ ತಂದೆ ಎಂ.ಮಾಧವ ಗೌಡ ‘ಕಾಮಧೇನು’, ಅತ್ತೆ ದಿವ್ಯಪ್ರಭಾ ಚಿಲ್ತಡ್ಕ ಸೇರಿದಂತೆ 6 ಮಂದಿಯ ಮೇಲೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.

ನವೀನ್ ಅವರ ತಾಯಿ ನೀರಜಾಕ್ಷಿಯವರು ಘಟನೆ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಗ ನವೀನ್ ಕುಮಾರ್ ಹಾಗೂ ಆತನ ಪತ್ನಿ ಸ್ಪಂದನಳ ಮಧ್ಯೆ ಸುಮಾರು 3 ತಿಂಗಳಿಂದ ವೈಮನಸ್ಸು ಉಂಟಾಗಿ ಸ್ಪಂದನಳು ತವರು ಮನೆಗೆ ಹೋಗಿದ್ದಳು. ಡಿ.18ರಂದು ಸೊಸೆ ಸ್ಪಂದನ, ಆಕೆಯ ಹೆತ್ತವರಾದ ಪರಶುರಾಮ, ದಿವ್ಯಪ್ರಭಾ ಚಿಲ್ತಡ್ಕ, ತಮ್ಮ ಸ್ಪರ್ಶಿತ್ ಹಾಗೂ ಸಂಬಂಧಿಕರು ಬಂದು ಮಾತುಕತೆ ಮಾಡಿದ್ದರು. ಆ ವೇಳೆ ನವೀನ್ ಕುಮಾರ್, ಪತ್ನಿ ಸ್ಪಂದನಳು ಬೇಡ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದ. ಇದೇ ಕಾರಣದಿಂದ ಡಿ.19ರಂದು ನವೀನ್ ತಂದೆ ಮಾಧವ ಗೌಡ ‘ಕಾಮಧೇನು’, ಸೊಸೆ ಸ್ಪಂದನ, ಸೊಸೆಯ ತಾಯಿ ದಿವ್ಯಪ್ರಭಾ ಚಿಲ್ತಡ್ಕ, ತಂದೆ ಪರಶುರಾಮ, ತಮ್ಮ ಸ್ಪರ್ಶಿತ್, ನವೀನ್ ರೈ ತಂಬಿನಮಕ್ಕಿ ಎಂಬವರು ನವೀನ್ ಕುಮಾರ್‌ನನ್ನು ಅಪಹರಿಸುವ ಉದ್ದೇಶದಿಂದ ಒಟ್ಟು ಸೇರಿ ಬೆಳ್ಳಾರೆ ಗ್ರಾಮದ ಕಾವಿನಮೂಲೆ ಎಂಬಲ್ಲಿನ ಮನೆ ಬಳಿ ಕೈ ಕಾಲು ಕಟ್ಟಿ ಆಂಬ್ಯುಲೆನ್ಸ್ ವಾಹನದಲ್ಲಿ ಎಲ್ಲಿಗೋ ಅಪಹರಿಸಿಕೊಂಡು ಹೋಗಿದ್ದು ಆ ವೇಳೆ ತಡೆಯಲು ಹೋದ ನಮ್ಮನ್ನು ಹೊಡೆದು, ಕಾಲಿನಿಂದ ತುಳಿದು ನೋವು ಉಂಟು ಮಾಡಿದ್ದು ನಾವು ಕೆವಿಜಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದೇವೆ ಎಂದು ನೀರಜಾಕ್ಷಿಯವರು ದೂರಿನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿದ ಪೋಲೀಸರು ಮಾಧವ ಗೌಡ, ದಿವ್ಯಪ್ರಭಾ ಚಿಲ್ತಡ್ಕ, ಪರಶುರಾಮ, ಸ್ಪಂದನ, ಸ್ಪರ್ಶಿತ್ ಹಾಗೂ ನವೀನ್ ರೈ ತಂಬಿನಮಕ್ಕಿ ಎಂಬವರ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.

ಉರುಡಾಟದಲ್ಲಿ ಗಾಯಗೊಂಡ ತಾಯಿ, ಅತ್ತಿಗೆ ಆಸ್ಪತ್ರೆಗೆ ದಾಖಲು: ದ.19ರಂದು ಘಟನೆ ನಡೆದಿದೆ. ನವೀನ್ ಅವರ ಅಪಹರಣವನ್ನು ತಡೆಯಲು ಹೋದ ಅವರ ತಾಯಿ ಮತ್ತು ಅತ್ತಿಗೆ ಗಾಯಗೊಂಡು ಅವರಿಬ್ಬರೂ ಸುಳ್ಯದ ಆಸ್ಪತ್ರೆಗೆ ದಾಖಲಾಗಿದ್ದರು.

ಮಧ್ಯಾಹ್ನ ಬೆಳ್ಳಾರೆಯಿಂದ ಹಿಂತಿರುಗಿದ ನವೀನ್‌ರವರು ತನ್ನ ಮನೆಯಂಗಳದಲ್ಲಿ ನಿಂತುಕೊಂಡಿರುವಾಗ ಆಂಬುಲೆನ್ಸ್‌ನಲ್ಲಿ ಬಂದ ಅಪರಿಚಿತರು ಅವರನ್ನು ಬಲಾತ್ಕಾರವಾಗಿ ಕಾರಿಗೆ ಕೂರಿಸಲು ಕೊಂಡೊಯ್ದರು. ಇದನ್ನು ಕಂಡ ತಾಯಿ ನೀರಜಾಕ್ಷಿ ಮತ್ತು ಅತ್ತಿಗೆ ಪ್ರಜ್ಞಾರವರು ತಡೆಯಲು ಬಂದಾಗ ಅವರ ಮಧ್ಯೆ ಉರುಡಾಟ ನಡೆದು ಅಪರಿಚಿತರು ನವೀನರನ್ನು ಕಾರಲ್ಲಿ ಕೂರಿಸಿಕೊಂಡು ಹೋದರೆಂದು ಹೇಳಲಾಗುತ್ತಿದೆ. ನವೀನ್ ಅವರನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ವ್ಯಾಪಕವಾಗಿ ಸುದ್ದಿ ಹರಡಿತ್ತು. ನವೀನ್‌ರವರ ತಾಯಿ ನೀರಜಾಕ್ಷಿ ಹಾಗೂ ಅಣ್ಣ ವಿನ್ಯಾಸ್ ಬೆಳ್ಳಾರೆ ಪೋಲೀಸರಿಗೆ ವಿಷಯ ತಿಳಿಸಿ, ಬಳಿಕ ನೀರಜಾಕ್ಷಿ ಮತ್ತು ಪ್ರಜ್ಞಾರವರು ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದರು.

ಶುಂಠಿಕೊಪ್ಪದಲ್ಲಿ ಆಂಬ್ಯುಲೆನ್ಸ್‌ಗೆ ತಡೆ: ಬೆಳ್ಳಾರೆಯ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ‘ಕಾಮಧೇನು’ ಅವರನ್ನು ತಂಡವೊಂದು ಆಂಬ್ಯುಲೆನ್ಸ್‌ನಲ್ಲಿ ಅಪಹರಿಸಿ ಕರೆದೊಯ್ದ ಮಾಹಿತಿಯ ಹಿನ್ನೆಲೆಯಲ್ಲಿ ಸುಳ್ಯದ ಶಿವ ಆಂಬ್ಯುಲೆನ್ಸ್‌ನವರು ತಮ್ಮ ಗ್ರೂಪ್‌ಗಳಿಗೆ ಈ ಮಾಹಿತಿ ರವಾನಿಸಿದ್ದರು. ಪರಿಣಾಮ ಶುಂಠಿಕೊಪ್ಪ ಬಳಿ ಅಲ್ಲಿಯ ಆಂಬ್ಯಲೆನ್ಸ್‌ನವರು ಬೆಳ್ಳಾರೆಯಿಂದ ಹೋದ ಆಂಬುಲೆನ್ಸನ್ನು ತಡೆದು ಅದರಲ್ಲಿದ್ದ ನವೀನ್ ಮತ್ತು ಇತರರನ್ನು ಅಲ್ಲಿಯ ಪೊಲೀಸರಿಗೊಪ್ಪಿಸಿದ್ದರು.

ಸಂಜೆ ವೇಳೆಗೆ ನವೀನ್ ಅವರ ತಂದೆ ಮಾಧವ ಗೌಡ, ಪತ್ನಿ ಸ್ಪಂದನ, ಮಾವ ಪರಶುರಾಮ ಮತ್ತಿತರರು ಅಲ್ಲಿಗೆ ತೆರಳಿದ್ದು ನವೀನ್ ಪರವಾಗಿ ಅವರ ಕೆಲವು ಮಿತ್ರರು ಕೂಡ ಅಲ್ಲಿಗೆ ಹೋಗಿದ್ದರು.

ಶುಂಠಿಕೊಪ್ಪ ಠಾಣೆಯಲ್ಲಿ ಮಾತುಕತೆ ನಡೆದಿತ್ತು: ಬೆಳ್ಳಾರೆಯ ಯುವ ಉದ್ಯಮಿ ನವೀನ್ ಕಾಮಧೇನು ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಕೊಂಡೊಯ್ದ ಪ್ರಕರಣಕ್ಕೆ ಸಂಬಂಧಿಸಿ, ಆರಂಭದಲ್ಲಿ ಶುಂಠಿಕೊಪ್ಪ ಠಾಣೆಯಲ್ಲಿ ಮಾತುಕತೆ ನಡೆದಿತ್ತು. ಅಪರಿಚಿತರು ಮಗನನ್ನು ಅಪಹರಿಸಿದ್ದಾರೆ ಎಂದು ನವೀನ್ ಅವರ ತಾಯಿ ನೀರಜಾಕ್ಷಿ ಹೇಳಿದರೆ, ಅಪಹರಣ ನಡೆದಿಲ್ಲ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿತ್ತು ಎಂದು ನವೀನ್ ತಂದೆ ಮಾಧವ ಗೌಡ, ಅತ್ತೆ ದಿವ್ಯಪ್ರಭಾ ಚಿಲ್ತಡ್ಕ ಹೇಳಿದ್ದರು. ನವೀನ್ ಅವರನ್ನು ಬಳಿಕ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದು ಬಂದಿದೆ.

ಯಾರೂ ಕಿಡ್ನ್ಯಾಪ್ ಮಾಡಿಲ್ಲ ಮಾಧವ ಗೌಡ ಸ್ಪಷ್ಟನೆ: ಘಟನೆಯ ಬಗ್ಗೆ ನವೀನರ ತಂದೆ ‘ಕಾಮಧೇನು’ ಮಾಧವ ಗೌಡರವರಲ್ಲಿ ವಿಚಾರಿಸಿದಾಗ, ನವೀನನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲ. ಅವನಿಗೆ ಡಿಹೈಡ್ರೇಷನ್ ಆದ ಕಾರಣ ನಾವೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ’ ಎಂದು ತಿಳಿಸಿದ್ದಾರೆ.

‘ಇದೆಲ್ಲ ಸೆಟ್ಟಿಂಗ್’ ನವೀನ್ ಹೇಳಿಕೆ: ಶುಂಠಿಕೊಪ್ಪದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ನವೀನ್ ಕಾಮಧೇನು ಅವರು, ‘ಅಂದಿನ ಘಟನೆಯ ಬಳಿಕ ಪಂಚಾತಿಕೆ ಮಾಡಲು ಆಗಾಗ ಮನೆಗೆ ಬರುತ್ತಿದ್ದಾರೆ. ನಿನ್ನೆ ಮನೆಗೆ ಬಂದವರು ಹೋಗಲಿಲ್ಲ.ನನಗೆ ಮನೆಯ ಒಳಗೆ ಹೋಗಲು ಆಗಲಿಲ್ಲ. ನಾನು ನಿನ್ನೆ ಬೇರೆ ಕಡೆ ಹೋಗಿ ಮಲಗಿದ್ದೆ. ಇವತ್ತು ಬೆಳಿಗ್ಗೆ ಬರುವಾಗ ಅವರು ಮನೆಯಲ್ಲಿಯೇ ಇದ್ದರು. ನಾನು ಹಟ್ಟಿಗೆ ಹೋಗಿ ಹಾಲು ಕರೆದು ಬಂದು ಮನೆಯ ಹೊರಗೆ ಇದ್ದ ಡ್ರೆಸ್ಸನ್ನು ಹಾಕಿಕೊಂಡು ಸ್ಕೂಟಿಯಲ್ಲಿ ಹೋದೆ.ಅಂಗಡಿಯ ಕೀ ಮನೆಯ ಒಳಗಿತ್ತು.ಆದ್ದರಿಂದ ಶಾಪ್ ಓಪನ್ ಮಾಡಲು ಆಗಲಿಲ್ಲ.ಅಪ್ಪ ಬಾಗಿಲು ಮುರಿಯಲು ಮರದ ಆಚಾರಿಯವರನ್ನು ಕರೆದುಕೊಂಡು ಬರುತ್ತಿರುವುದನ್ನು ನೋಡಿ ವಿಚಾರಿಸಲು ಬಂದಾಗ ಗೇಟ್ ಹತ್ತಿರ ಆಂಬ್ಯುಲೆನ್ಸ್‌ನವರು ನನ್ನನ್ನು ಹಿಡಿದು ಗಾಡಿಯಲ್ಲಿ ಕರೆದುಕೊಂಡು ಹೋದರು.ಪೊಲೀಸರು ಬಂದು ನೋಡಿ ಹೋದ್ರು.ಇದೆಲ್ಲ ಸೆಟ್ಟಿಂಗ್’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ದಂಪತಿ ಮಧ್ಯೆ ಮನಸ್ತಾಪ: ಕೆಲ ದಿನಗಳ ಹಿಂದೆ ಬೆಳ್ಳಾರೆಯಲ್ಲಿ ನಡೆದಿದ್ದ ಘಟನೆಯೊಂದರ ಬಳಿಕ ನವೀನ್ ಕಾಮಧೇನು ಮತ್ತು ಸ್ಪಂದನ ದಂಪತಿ ನಡುವೆ ಮನಸ್ತಾಪ ಉಂಟಾಗಿ ಅವರಿಬ್ಬರೂ ದೂರವಾಗಿದ್ದರು. ಆ ನಂತರದ ಬೆಳವಣಿಗೆಯಲ್ಲಿ ಅವರೀರ್ವರನ್ನು ಮತ್ತೆ ಒಂದು ಮಾಡುವ ಕುರಿತು ಮಾತುಕತೆ ನಡೆಯುತ್ತಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here