ಉಪ್ಪಿನಂಗಡಿ: ಮುಂಬರುವ ಡಿ. 25 ರಿಂದ ಡಿ.30 ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿರುವ ಪೆರ್ನೆ- ಬಿಳಿಯೂರು ಗ್ರಾಮದ ಕಳೆಂಜ ದೇಂತಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬುಧವಾರದಂದು ಗೊನೆ ಮೂಹೂರ್ತ ನೆರವೇರಿತು.
15 ನೇ ಶತಮಾನದಲ್ಲಿ ಸೋದೆ ಮಠಾಧೀಶರಿಂದ ಸ್ಥಾಪನೆಗೊಂಡ ಈ ದೇವಾಲಯ ಪುನರುಜ್ಜೀವನಗೊಂಡು 2010 ರಲ್ಲಿ ಬ್ರಹ್ಮಕಲಶೋತ್ಸವ ನಡೆದಿದ್ದರೆ, ಇದೀಗ ಹನ್ನೆರಡನೇ ವರ್ಷದಲ್ಲಿ ಎರಡನೇ ಬ್ರಹ್ಮಕಲಶೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರು ಗುತ್ತು, ಪುತ್ತೂರು ಶಾಸಕರು ನೀಡಿದ 60 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲ್ಪಟ್ಟ ತಡೆಗೋಡೆಯಿಂದಾಗಿ ದೇವಾಲಯದ ಸುತ್ತಮುತ್ತ ವಿಶಾಲ ಭೂಮಿ ಲಭಿಸಿದಂತಾಗಿದೆ. ದೇವಾಲಯದ ಸುತ್ತ ಗೋಪುರ ಹಾಗೂ ವಸಂತ ಮಂಟಪ ನಿರ್ಮಾಣ , ಬಾವಿ ಕಟ್ಟೆಯ ನಿರ್ಮಾಣ ಗ್ರಾನೈಟ್, ಇಂಟರ್ ಲಾಕ್ ಅಳವಡಿಕೆ ಮೊದಲಾದ ಶಾಶ್ವತ ಕಾಮಗಾರಿಗಳು ಭಕ್ತ ಜನತೆಯ ಸಹಕಾರದೊಂದಿಗೆ ಸುಲಲಿತವಾಗಿ ನಡೆದಿದೆ. ಬ್ರಹ್ಮಕಲಶೋತ್ಸವದ ನಿಮಿತ್ತ ಸಭಾಂಗಣ, ಅನ್ನಛತ್ರ, ಪಾಕಶಾಲೆ, ಪಾರ್ಕಿಂಗ್ ಸ್ಥಳದ ನಿರ್ಮಾಣಗಳು ನಡೆದಿವೆ. ನವೀನ್ ಕುಮಾರ್ ಪದಬರಿ ರವರ ನೇತೃತ್ವದಲ್ಲಿ ಹೊರೆ ಕಾಣಿಕೆ ಸಮರ್ಪಣೆಯ ಬಗ್ಗೆ ಯೋಜನೆ ರೂಪಿಸಲಾಗಿದೆ. ದೇವಳದಲ್ಲಿನ ಎಲ್ಲಾ ಆಭಿವೃದ್ದಿ ಕಾರ್ಯಗಳನ್ನು ಒಳಗೊಂಡು 1.25 ಕೋಟಿ ರೂ. ವೆಚ್ಚದಲ್ಲಿ ಬ್ರಹ್ಮಕಲಶೋತ್ಸವವು ಸಂಪನ್ನಗೊಳ್ಳಲಿದೆ ಎಂದರು.
ದೇವಾಲಯದ ವ್ಯಾಪ್ತಿಯಲ್ಲಿ ಒಟ್ಟು 900 ಮನೆಗಳು ದೇವಳದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದು, ಬಡವ- ಬಲ್ಲಿದ , ಮೇಲು- ಕೀಳೆಂಬ ಬೇಧವಿಲ್ಲದೆ ಎಲ್ಲರಿಗೂ ದೇವಾಲಯದಲ್ಲಿ ಪ್ರಸಾದ ಸಹಿತ ಗೌರವ ಸಮರ್ಪಣೆ ನಡೆಯಲಿದೆ. ಬ್ರಹ್ಮಕಲಶೋತ್ಸದ ಅಂಗವಾಗಿ ಸಮರ್ಪಿತ ಮನೋಭಾವದ ಭಕ್ತ ಜನತೆಯ ಅಗಾಧ ಪ್ರಮಾಣದ ಶ್ರಮದಾನ ನಮೆಲ್ಲಾ ಕನಸುಗಳನ್ನು ನನಸಾಗಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪದ್ಮಾಸಿನಿ ಎನ್. ಜೈನ್, ರೋಹಿತಾಕ್ಷ ಬಾಣಬೆಟ್ಟು, ಉಮಾನಾಥ ಶೆಟ್ಟಿ, ಗೋಪಾಲ ಶೆಟ್ಟಿ ಕಳೆಂಜ, ಶಂಭು ಭಟ್, ಅಶೋಕ್ ಕುಮಾರ್ ಮೋಹನ್ ಶೆಟ್ಟಿ, ಗೋಪಾಲ ಸಪಲ್ಯ, ಗಂಗಾಧರ ರೈ, ನವೀನ್ ಕುಮಾರ್ ಪದಬರಿ, ಮಹೇಶ್ ಪಡಿವಾಳ್, ಯಶೋಧಾ ಜಿ. ಗೌಡ ಮತ್ತಿತರರು ಉಪಸ್ಥಿತರಿದ್ದರು.