- ನವೀನ್‌ರನ್ನು ಹೈಕೋರ್ಟಿಗೆ ಹಾಜರುಪಡಿಸುವಂತೆ ಪೊಲೀಸ್ ಇಲಾಖೆಗೆ ಆದೇಶ
- ಆಸ್ಪತ್ರೆಗೆ ದಾಖಲು ಗೊಳಿಸಿರುವುದಾಗಿ ಪೊಲೀಸರಿಂದ ಹೈಕೋರ್ಟಿಗೆ ವರದಿ
- ಆಸ್ಪತ್ರೆಗೆ ವಕೀಲರನ್ನು ಕಳುಹಿಸಿದ ಹೈಕೋರ್ಟು
- ವಕೀಲರ ವರದಿಯಂತೆ ನವೀನರನ್ನು ತಾಯಿಯ ವಶಕ್ಕೊಪ್ಪಿಸಿದ ನ್ಯಾಯಾಲಯ
- ಮಂಗಳವಾರದ ವರೆಗೆ ಬೆಂಗಳೂರಲ್ಲೇ ಇರುವಂತೆ ಆದೇಶ
ಪುತ್ತೂರು: ಬೆಳ್ಳಾರೆಯ ಕಾಮಧೇನು ಮಾಧವ ಗೌಡರ ಪುತ್ರನನ್ನು, ಕುಡಿತದ ಚಟವನ್ನು ಬಿಡಿಸುವುದಕ್ಕೆಂದು ಹೇಳಿಕೊಂಡು ಆಂಬುಲೆನ್ಸ್‌ನಲ್ಲಿ ಬಲಾತ್ಕಾರವಾಗಿ ಬೆಂಗಳೂರಿಗೆ ಕರೆದೊಯ್ದ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯದ ಮಧ್ಯಪ್ರವೇಶದಿಂದ ನವೀನ್ ಆಸ್ಪತ್ರೆಯಿಂದ ಬಿಡುಗಡೆಗೊಂಡು, ತಾಯಿಯ ವಶಕ್ಕೆ ಸೇರಿರುವ ಘಟನೆ ವರದಿಯಾಗಿದೆ.
ದ.19 ರಂದು ಕಾಮಧೇನು ಗೋಲ್ಡ್ ಪ್ಯಾಲೇಸ್, ಕಾಮಧೇನು ಬಾರ್ ಮತ್ತು ಕಾಮಧೇನು ವಾಣಿಜ್ಯ ಸಂಕೀರ್ಣದ ಮಾಲಕ ನವೀನ್ ಗೌಡರನ್ನು ಆಂಬುಲೆನ್ಸ್ ನಲ್ಲಿ ಬಂದ ಅಪರಿಚಿತರು ಅಪಹರಿಸಿದ್ದರು. ಆ ವೇಳೆ ನವೀನರ ತಾಯಿ ನೀರಜಾಕ್ಷಿಯವರು ಮತ್ತು ಅಣ್ಣ ವಿನ್ಯಾಸ್ ರವರು ಅಪಹರಣಕಾರರಿಂದ ನವೀನರನ್ನು ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ ಅಪಹರಣಕಾರರು ಅವರನ್ನು ದೂಡಿ ಹಾಕಿ ನವೀನರನ್ನು ಆಂಬುಲೆನ್ಸ್ ನಲ್ಲಿ ಹಾಕಿಕೊಂಡು ದೌಡಾಯಿಸಿದ್ದರು. ತಾಯಿ ಮತ್ತು ಅಣ್ಣ ಬೆಳ್ಳಾರೆ ಪೊಲೀಸರಿಗೆ ವಿಷಯ ತಿಳಿಸಿದರೂ ಅವರು ಸ್ಪಂದಿಸಲಿಲ್ಲವೆಂದು ಬೇಸರಗೊಂಡ ನೀರಜಾಕ್ಷಿ ಮತ್ತು ವಿನ್ಯಾಸ್ ಸುಳ್ಯಕ್ಕೆ ಬಂದು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಇವರ ದೂರಿನನ್ವಯ ನವೀನ್ ಗೌಡರ ತಂದೆ ಬೆಳ್ಳಾರೆಯ ಕಾಮಧೇನು ಉದ್ಯಮ ಸಂಸ್ಥೆಗಳ ಮಾಲಕ ಎಂ.ಮಾಧವ ಗೌಡ, ನವೀನರ ಅತ್ತೆ , ಕಾಂಗ್ರೆಸ್ ನಾಯಕಿ ದಿವ್ಯಪ್ರಭ ಚಿಲ್ತಡ್ಕ, ನವೀನರ ಪತ್ನಿ ಸ್ಪಂದನ ಮತ್ತಿತರ ಆರು ಮಂದಿಯ ಮೇಲೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಅದೇ ವೇಳೆ ಆಂಬುಲೆನ್ಸ್ ನವರ ಮೂಲಕ ವಿಷಯ ತಿಳಿದ ಶುಂಠಿಕೊಪ್ಪ ಪೊಲೀಸರು ಆಂಬುಲೆನ್ಸ್ ಅನ್ನು ತಡೆದು ಅದರಲ್ಲಿದ್ದವರೆಲ್ಲರನ್ನು ಅಲ್ಲಿಯ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ನವೀನರ ತಂದೆ ಎಂ.ಮಾಧವ ಗೌಡರು, ನವೀನರ ಪತ್ನಿ ಸ್ಪಂದನಾ ಮತ್ತಿತರರು ಶುಂಠಿಕೊಪ್ಪ ಠಾಣೆಗೆ ಬಂದು ಮಾತುಕತೆ ನಡೆಸಿ, ನವೀನರ ಆಕ್ಷೇಪದ ನಡುವೆ ತಾವು ನವೀನರನ್ನು ಕುಡಿತ ಬಿಡಿಸುವ ಒಳ್ಳೆಯ ಉದ್ದೇಶದಿಂದ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯತ್ತಿರುವುದಾಗಿ ಹೇಳಿ ಅದೇ ಆಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ಕರೆದೊಯ್ದು ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು.
ಆದರೆ ಈ ಬಗ್ಗೆ ನವೀನರ ತಾಯಿ, ಅಣ್ಣ ಮತ್ತಿತರರಿಗೆ ಸರಿಯಾದ ಮಾಹಿತಿ ಇರಲಿಲ್ಲ. ತಾಯಿ ನೀರಜಾಕ್ಷಿಯವರು ನ್ಯಾಯವಾದಿ ಪಿ.ಪಿ.ಹೆಗ್ಡೆಯವರ ಮೂಲಕ ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು. ಪೊಲೀಸ್ ಉನ್ನತಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ನವೀನರನ್ನು ದ.22 ರಂದು ಹೈಕೋರ್ಟಿಗೆ ಹಾಜರುಪಡಿಸಲು ಕೋರ್ಟು ನೋಟೀಸು ಮಾಡಿತ್ತು.
ದ.22 ರಂದು ಬೆಳ್ಳಾರೆ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ನವೀನರನ್ನು ಕುಡಿಯುವ ಚಟ ಬಿಡಿಸಲು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದರು. ಆಸ್ಪತ್ರೆಯಲ್ಲಿರುವ ನವೀನರನ್ನು ಕಂಡು ಮಾತನಾಡಿ ಅವರ ಅಭಿಪ್ರಾಯ ತಿಳಿದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನ್ಯಾಯವಾದಿಯೊಬ್ಬರಿಗೆ ಸೂಚಿಸಿದ ಹೈಕೋರ್ಟ್ ಸಂಜೆ 5 ಗಂಟೆಗೆ ವಿಚಾರಣೆಯನ್ನು ಮುಂದೂಡಿತು.
ಹೈಕೋರ್ಟ್ ಆದೇಶದಂತೆ ನ್ಯಾಯವಾದಿಯೊಬ್ಬರು ಆಸ್ಪತ್ರೆಗೆ ಹೋಗಿ ನವೀನರೊಡನೆ ಮಾತನಾಡಿದಾಗ, ತನ್ನನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ತಂದು ಹಾಕಿರುವುದಾಗಿಯೂ, ತನ್ನನ್ನು ಇಲ್ಲಿಂದ ಹೊರಗೆ ಕರೆದುಕೊಂಡು ಹೋಗುವಂತೆಯೂ ಆತ ಹೇಳಿದರೆನ್ನಲಾಗಿದೆ. ನ್ಯಾಯವಾದಿ ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಾಗ, ನ್ಯಾಯಾಲಯವು ಮಹತ್ವದ ಆದೇಶ ಹೊರಡಿಸಿತು ಎಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿರುವ ನವೀನರನ್ನು ಡಿಸ್ಚಾರ್ಜ್ ಮಾಡಿ ತಾಯಿ ನೀರಜಾಕ್ಷಿಯವರ ವಶಕ್ಕೆ ಒಪ್ಪಿಸಬೇಕು. ಆದರೆ ಮುಂದಿನ ಮಂಗಳವಾರದ ವರೆಗೆ ನವೀನ್ ಬೆಂಗಳೂರಲ್ಲೇ ತಾಯಿ ಜತೆ ಇರಬೇಕು. ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಹೈಕೋರ್ಟು ಆದೇಶ ಮಾಡಿದೆ. ಅದರಂತೆ ಸಂಜೆ ನವೀನ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮುಂದಿನ ಬೆಳವಣಿಗೆ ಕಾದುನೋಡಬೇಕಾಗಿದೆ.