ಪುತ್ತೂರು: ಬೊಳ್ಳಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ‘ಆಂಜನೇಯ 54 ವಾರ್ಷಿಕ ಕಲಾಪವು ಡಿ.25 ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ‘ನಟರಾಜ ವೇದಿಕೆ’ಯಲ್ಲಿ ನಡೆಯಲಿದೆ, ಈ ಸಂದರ್ಭದಲ್ಲಿ ಹಿರಿಯ ಭಾಗವತ ರಸರಾಗ ಚಕ್ರವರ್ತಿ ದಿನೇಶ ಅಮ್ಮಣ್ಣಾಯರಿಗೆ ಈ ಸಾಲಿನ ‘ಶ್ರೀ ಯಕ್ಷಾಂಜನೇಯ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗುವುದು ಎಂದು ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅವರು ತಿಳಿಸಿದ್ದಾರೆ.
ಪುತ್ತೂರು ಸುದ್ದಿ ಮೀಡಿಯಾದಲ್ಲಿ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಮಧ್ಯಾಹ್ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ‘ಆಂಜನೇಯ 54 ನ್ನು ಉದ್ಘಾಟಿಸಲಿದ್ದಾರೆ. ಬಳಿಕ ಶ್ರೀ ಆಂಜನೇಯ ಯಕ್ಷಗಾನ ಸಂಘದ ಕಲಾವಿದರಿಂದ “ಗಾನಶರಧಿ’ ಎನ್ನುವ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ.
ಗಂಟೆ 2-30ಕ್ಕೆ ಹಿರಿಯ ಅರ್ಥದಾರಿಗಳಿಂದ ‘ಗಾಂಗೇಯ’ ಪ್ರಸಂಗದ ತಾಳಮದ್ದಳೆ ಜರುಗಲಿದೆ. ದಿನೇಶ ಅಮ್ಮಣ್ಣಾಯ, ನಾರಾಯಣ ಶಬರಾಯ (ಭಾಗವತರು), ಪದ್ಯಾಣ ಶಂಕರನಾರಾಯಣ ಭಟ್, ಅಕ್ಷಯರಾವ್ ವಿಟ್ಲ (ಚಂಡೆ, ಮದ್ದಳೆ), ಸೂರಿಕುಮೇರು ಗೋವಿಂದ ಭಟ್, ಶಂಭು ಶರ್ಮ, ಉಜಿರೆ ಆಶೋಕ ಭಟ್, ಜಬ್ಬಾರ್ ಸಮೋ, ಡಾ. ಪ್ರದೀಪ ಸಾಮಗ, ರಾಮ ಜೋಯಿಸ್ ಬೆಳ್ಳಾರೆ ಅರ್ಥದಾರಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 5 ಗಂಟೆಗೆ ಕೋಣಾಜೆಯ ಡಾ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಶ್ರೀಪತಿ ಕಲ್ಲೂರಾಯ ಇವರ ಅಧ್ಯಕ್ಷತೆಯಲ್ಲಿ ‘ಶ್ರೀ ಆಂಜನೇಯ 54 ‘ ವಾರ್ಷಿಕ ಸಮಾವೇಶ ಸಂಪನ್ನವಾಗಲಿದೆ.
‘ಶ್ರೀ ಯಕ್ಷಾಂಜನೇಯ ಪ್ರಶಸ್ತಿ’ ಪುರಸ್ಕೃತ ದಿನೇಶ ಅಮ್ಮಣ್ಣಾಯರ ಕುರಿತು ಅರ್ಥದಾರಿ, ವೇಷಧಾರಿ ಡಾ.ಎಂ.ಪ್ರದೀಪ ಸಾಮಗರು ಅಭಿನಂದನಾ ಭಾಷಣ ಮಾಡಲಿದ್ದಾರೆ.
ಮತ್ತೂರು ಮಹತ್ತೊಲ್ದಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಮದಾಸ್ ಗೌಡ ಹಾಗು ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾದ ಡಾ.ವಿಜಯ ಸರಸ್ವತಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಗೌರವ ಕಾರ್ಯದರ್ಶಿ ರಂಗನಾಥ್ ರಾವ್, ಖಜಾಂಜಿ ಎನ್. ದುಗ್ಗಪ್ಪ, ಮಹಿಳಾ ಯಕ್ಷಗಾನ ಕಲಾ ಸಂಘದ ಸದಸ್ಯೆ ಶುಭ ಜೆ.ಸಿ ಅಡಿಗ ಉಪಸ್ಥಿತರಿದ್ದರು.