ಪುತ್ತೂರು: ಮಂಗಳೂರಿನ ದೇರಳಕಟ್ಟೆ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ ನಾಡುನುಡಿ ವೈಭವದ ರತ್ನೋತ್ಸವ-2022 ದಶಮ ಸಂಭ್ರಮದ ಕರಾವಳಿ ಕರ್ನಾಟಕದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನದ ಅಂಗವಾಗಿ ಪುತ್ತೂರು ಸುದ್ದಿ ಬಿಡುಗಡೆಯ ಅಂಕಣಕಾರ, ಮಧು ಪ್ರಪಂಚದ ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿಯವರ ಅಧ್ಯಕ್ಷತೆಯಲ್ಲಿ ಕವಿ ಸಮಯ ಬಹುಭಾಷಾ ಕವಿಗೋಷ್ಠಿ ನಡೆಯಿತು.
ನಾಡಿನ ಕವಿಗಳಾದ ಗುಣಾಜೆ ರಾಮಚಂದ್ರ ಭಟ್ (ಹವ್ಯಕ:ನಾವೆಲ್ಲರೂ ಒಂದೇ..),ಕಾ.ವಿ.ಕೃಷ್ಣದಾಸ್ (ಕನ್ನಡ:ಜಾತಿ ಸತ್ತಿಲ್ಲ,…),ರವೀಂದ್ರನಾಥ್ ಸಣ್ಣಕ್ಕಿ ಬೆಟ್ಟು(ಕನ್ನಡ:ಅಂಕ),ಲಕ್ಷ್ಮೀನಾರಾಯಣ ರೈ ಹರೇಕಳ (ತುಳು:ಬರೋಂದುಲ್ಲಲ್ ತುಳುವ ಪೊಣ್ಣು…),ಫೆಲ್ಸಿ ಲೋಬೋ (ಕೊಂಕಣಿ:ರಕ್ಕಸರ ನಾಡ್ಚೆ ರಕ್ಕಸರ ನಾಡಿನಲ್ಲಿ),ಹಮೀದ್ ಹಸನ್ ಮಾಡೂರು (ಬ್ಯಾರಿ: ತಲಾಕ್…ಹಲಾಕ್…),ಮತ್ತು ವಾಣಿ ಲೋಕಯ್ಯ ಕೊಂಡಾಣ (ಕನ್ನಡ: ಸಹನಾಮಯಿ..) ಕವನಗಳನ್ನು ಪ್ರಸ್ತುತ ಪಡಿಸಿದರು.
ಅಧ್ಯಕ್ಷತೆ ವಹಿಸಿದ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ ಕವಿಗಳು ನಮ್ಮ ನಾಡಿನ ಸಾಂಸ್ಕೃತಿಕ ರಾಯಭಾರಿಗಳು. ಸಾಮಾಜಿಕ ಪ್ರಕೃತ ವಿಷಯಗಳನ್ನು ಆಯ್ದು ಪ್ರಸ್ತುತ ಪಡಿಸಿದ ಸರ್ವಭಾಷಾ ಕವಿಗಳ ಕವನಗಳು ಸಮಾಜದ ಕಣ್ಣು ತೆರೆಸುವಲ್ಲಿ ಯಶಸ್ವಿಯಾಗಿದೆ.
ಮನದ ಭಾವನೆಗಳು ಗರಿಗೆದರಿದಾಗ ಉತ್ತಮ ಕವನಗಳು ಮೂಡಿಬರುತ್ತವೆ. ನಮ್ಮ ವಿದ್ಯಾರ್ಥಿಗಳು ಹೆಚ್ಚು ಓದುವ ಕೇಳುವ ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕೆಂದರು.
ದೇರಳಕಟ್ಟೆ ರತ್ನ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟುರವರು ಶಾಲುಹೊದಿಸಿ ಸ್ಮರಣಿಕೆ ನೀಡಿ ಕವಿಗೋಷ್ಠಿಯ ಅಧ್ಯಕ್ಷರು ಹಾಗೂ ಸರ್ವಭಾಷಾ ಕವಿಗಳನ್ನು ಗೌರವಿಸಿದರು. ರವಿಕುಮಾರ್ ಕೋಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.