ಬೈಕ್‌ಗೆ ನಕಲಿ ನಂಬರ್ ಪ್ಲೇಟ್ ಹಾಕಿ ಸಂಚಾರ ನಿಯಮ ಉಲ್ಲಂಘನೆ:ಅಸಲಿ ಮಾಲಕನಿಗೆ ಬಂತು ಪೊಲೀಸ್ ನೋಟಿಸ್…!

0

 ವರದಿ: ಹರೀಶ್ ಬಾರಿಂಜ

ನೆಲ್ಯಾಡಿ: ಮಂಗಳೂರಿಗೆ ಸ್ಕೂಟರ್‌ನಲ್ಲಿ ಹೋಗದೇ ಇದ್ದರೂ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಸಂಬಂಧ ದಂಡ ಪಾವತಿಸುವಂತೆ ಬಜತ್ತೂರು ನಿವಾಸಿಯೋರ್ವರಿಗೆ ಮಂಗಳೂರು ಸಿಟಿ ಸಂಚಾರ ಪೊಲೀಸ್ ಠಾಣೆಯಿಂದ ಬರೋಬ್ಬರಿ ಆರು ನೋಟಿಸ್ ಬಂದಿದ್ದು ಅವರು ಬೆಚ್ಚಿಬೀಳುವಂತೆ ಆಗಿದೆ.


ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಪಂರ್ದಾಜೆ ದರ್ಖಾಸು ನಿವಾಸಿ ಅಣ್ಣಿಗೌಡ ಎಂಬವರು 6 ತಿಂಗಳ ಹಿಂದೆ ಕೆಎ 21 ಎಕ್ಸ್ 8648 ನಂಬರ್‌ನ 2018 ರ ಮೋಡೆಲ್‌ನ ಹೋಂಡಾ ಆಕ್ಟೀವಾ ಸ್ಕೂಟರ್ ಅನ್ನು ಕಬಕ ನಿವಾಸಿಯೋರ್ವರಿಂದ ಖರೀದಿಸಿದ್ದರು. ಬಳಿಕ 1 ತಿಂಗಳೊಳಗೆ ಅವರು ಆ ವಾಹನವನ್ನು ತನ್ನ ಹೆಸರಿಗೆ ನೋಂದಾಯಿಸಿಕೊಂಡಿದ್ದರು. ಕೂಲಿ ಕೆಲಸ ಮಾಡುತ್ತಿರುವ ಅಣ್ಣಿ ಗೌಡರವರು ಈ ತನಕವೂ ಬೈಕ್‌ನಲ್ಲಿ ಎಲ್ಲಿಗೂ ಹೋಗಿಲ್ಲ. ಬೈಕ್ ಚಾಲನೆಯೂ ಅವರಿಗೆ ಬರುತ್ತಿಲ್ಲ. ಬೇರೆ ಯಾರೂ ಸ್ಕೂಟರ್ ಕೊಂಡು ಹೋಗಿಲ್ಲ. ಆದರೂ ಇದೀಗ ಡಿ.22ರಂದು ಅವರ ಮನೆಗೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಮಂಗಳೂರು ಸಿಟಿ ಸಂಚಾರ ಪೊಲೀಸ್ ಠಾಣೆಯಿಂದ ಬರೋಬ್ಬರಿ 6 ನೋಟಿಸ್ ಬಂದಿದ್ದು ತಲಾ 500 ರೂಪಾಯಿಯಂತೆ ದಂಡ ವಿಧಿಸಲಾಗಿದೆ.

ನ.15, ನ.16, ನ.17, ನ.23, ನ.29, ಡಿ.30 ರಂದು ಮಂಗಳಾದೇವಿ ಪ್ರದೇಶದಲ್ಲಿ ಹೆಲ್ಮೆಟ್ ಇಲ್ಲದೇ ವಾಹನ ಸಂಚಾರ ಮಾಡಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇದರಿಂದ ಬೆಚ್ಚಿಬಿದ್ದಿರುವ ಅಣ್ಣಿ ಗೌಡರವರು ನೋಟಿಸ್ ಹಿಡಿದುಕೊಂಡು ಉಪ್ಪಿನಂಗಡಿಯ ನ್ಯಾಯವಾದಿ ರವಿಕಿರಣ್ ಕೊಯಿಲ ಅವರ ಬಳಿಗೆ ಬಂದಿದ್ದು ಅವರು ಸಂಚಾರ ಠಾಣೆ ಪೊಲೀಸರನ್ನು ಸಂಪರ್ಕಿಸಿದಾಗ ಅಸಲಿ ಕಥೆ ಗೊತ್ತಾಗಿದೆ.


ಅಣ್ಣಿ ಗೌಡರವರ ಹೆಸರಿನಲ್ಲಿರುವ ಕೆಎ 21 ಎಕ್ಸ್ 8648 ನಂಬರ್‌ನ ಹೋಂಡಾ ಆಕ್ಟೀವಾದ ನೋಂದಾವಣೆ ನಂಬರನ್ನು ಯಾರೋ ಅಪರಿಚಿತರು ಅವರ ಸ್ಕೂಟರ್‌ಗೆ ಅಳವಡಿಸಿಕೊಂಡು ಮಂಗಳೂರಿನಲ್ಲಿ ಓಡಾಟ ನಡೆಸುತ್ತಿದ್ದಾರೆ. ಆ ವ್ಯಕ್ತಿ ಸಂಚಾರ ನಿಯಮ ಉಲ್ಲಂಸುತ್ತಿದ್ದಂತೆ ಅಸಲಿ ಮಾಲಕ ಬಜತ್ತೂರಿನ ಅಣ್ಣಿ ಗೌಡರವರಿಗೆ ನೋಟಿಸ್ ಬಂದಿದೆ. ನನ್ನ ದ್ವಿಚಕ್ರ ವಾಹನದ ನೋಂದಾವಣೆ ನಂಬರ್ ಅನ್ನು ಯಾರೋ ಅಪರಿಚಿತರು ನಕಲಿ ಮಾಡಿ ಅವರ ಸ್ಕೂಟರ್‌ಗೆ ಅಳವಡಿಸಿಕೊಂಡು ಓಡಾಟ ನಡೆಸುತ್ತಿರುವ ಬಗ್ಗೆ ಅಣ್ಣಿ ಗೌಡರವರು ಮಂಗಳೂರು ಸಿಟಿ ಸಂಚಾರ ಠಾಣೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಪೊಲೀಸರು ತನಿಖೆ ನಡೆಸಿ ಸತ್ಯಾಂಶ ತಿಳಿಯಬೇಕಾಗಿದೆ. ಸಾರ್ವಜನಿಕರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ.

೮ ಪ್ರಕರಣ ಪತ್ತೆ: ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ ಭಾಗದ ದ್ವಿಚಕ್ರ ವಾಹನಗಳ ನಂಬರ್‌ಗಳನ್ನು ಮಂಗಳೂರು ಭಾಗದಲ್ಲಿ ಕೆಲವರು ತಮ್ಮ ಸ್ಕೂಟರ್‌ಗೆ ಅಳವಡಿಸಿಕೊಂಡು ಓಡಾಟ ನಡೆಸುತ್ತಿರುವ ೮ ಪ್ರಕರಣಗಳು ಈ ತನಕ ಬೆಳಕಿಗೆ ಬಂದಿದೆ. ಕಾಟಿಪಳ್ಳ, ಮಂಗಳಾದೇವಿ ವ್ಯಾಪ್ತಿಯಲ್ಲಿ ಈ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ. ನಕಲಿ ನಂಬರ್ ಪ್ಲೇಟ್ ಹಾಕಿ ಓಡಾಟ ನಡೆಸುತ್ತಿದ್ದ ಎರಡು ದ್ವಿಚಕ್ರ ವಾಹನಗಳನ್ನು ಈಗಾಗಲೇ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಳ್ಳಲಾಗಿದೆ. ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ನೋಟಿಸ್ ಬಂದಿರುವ ದ್ವಿಚಕ್ರ ವಾಹನಗಳ ಮಾಲಕರು ದೂರವಾಣಿ ಕರೆ ಮಾಡಿ ಠಾಣೆಗೆ ಮಾಹಿತಿ ನೀಡುತ್ತಿದ್ದಾರೆ. ಕೆಲವರು ಠಾಣೆಗೆ ಬಂದು ಬರೆದುಕೊಟ್ಟು ಹೋಗಿದ್ದಾರೆ. ಈ ರೀತಿಯ ನೋಟಿಸ್ ಬಂದಲ್ಲಿ ಠಾಣೆಗೆ ಮಾಹಿತಿ ನೀಡುವಂತೆ ಮಂಗಳೂರು ಸಿಟಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

6 ತಿಂಗಳ ಹಿಂದೆ ಕಬಕ ನಿವಾಸಿಯೋರ್ವರಿಂದ 2018 ನೇ ಮಾಡೆಲ್‌ನ ಹೋಂಡಾ ಆಕ್ಟೀವಾ ಖರೀದಿಸಿದ್ನೆದೆ. ಖರೀದಿಸಿದ 1 ತಿಂಗಳೊಳಗೆ ನನ್ನ ಹೆಸರಿಗೆ ನೋಂದಾವಣೆ ಮಾಡಿಕೊಂಡಿರುತ್ತೇನೆ. ನನಗೆ ಸ್ಕೂಟರ್ ಓಡಿಸಲು ಬರುತ್ತಿಲ್ಲ. ಆದ್ದರಿಂದ ಸ್ಕೂಟರ್ ಎಲ್ಲಿಗೂ ಕೊಂಡು ಹೋಗಿಲ್ಲ. ಆದರೂ ಸಂಚಾರ ನಿಯಮ ಉಲ್ಲಂಸಲಾಗಿದೆ, ದಂಡ ಪಾವತಿಸುವಂತೆ ಮಂಗಳೂರು ಸಿಟಿ ಸಂಚಾರ ಪೊಲೀಸ್ ಠಾಣೆಯಿಂದ ಬರೋಬ್ಬರಿ ಆರು ನೋಟಿಸ್ ಬಂದಿದೆ. ಈ ವಿಚಾರವನ್ನು ಅಲ್ಲಿನ ಪೊಲೀಸರ ಗಮನಕ್ಕೂ ತಂದಿದ್ದೆವೆ. ಪೊಲೀಸರು ತನಿಖೆ ನಡೆಸಿ ನಕಲಿ ನಂಬರ್ ಪ್ಲೇಟ್ ಹಾಕಿ ವಾಹನ ಓಡಾಟ ನಡೆಸುತ್ತಿರುವವರ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.
-ಅಣ್ಣಿ ಗೌಡ ಬಜತ್ತೂರು

LEAVE A REPLY

Please enter your comment!
Please enter your name here