ಕಾಣಿಯೂರು ಗ್ರಾ.ಪಂ ಸಾಮಾನ್ಯ ಸಭೆ
ಕಾಣಿಯೂರು: ವೇದಿಕೆಗಳಲ್ಲಿ ದೈವಾರಾದನೆಯ ವೇಷಹಾಕಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟುಮಾಡುವವರ ವಿರುದ್ಧ ಕ್ರಮಕೈಗೊಳ್ಳಲು ಸರಕಾರಕ್ಕೆ ಬರೆಯುವಂತೆ ಗ್ರಾ.ಪಂ.ಸದಸ್ಯ ಲೋಕಯ್ಯ ಪರವ ದೋಳ್ಪಾಡಿ ಕಾಣಿಯೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದ್ದಾರೆ.
ಸಾಮಾನ್ಯ ಸಭೆಯು ಗ್ರಾ.ಪಂ. ಅಧ್ಯಕ್ಷರಾದ ಲಲಿತಾ ದರ್ಖಾಸು ಅವರ ಅಧ್ಯಕ್ಷತೆಯಲ್ಲಿ ಗ್ರಾ. ಪಂ. ಸಭಾಂಗಣದಲ್ಲಿ ನಡೆಯಿತು. ತುಳುನಾಡಿನಲ್ಲಿ ದೈವಾರಾಧನೆ ಸಹಸ್ರಾರು ವರ್ಷಗಳಿಂದ ನಡೆದು ಬಂದಿದ್ದು ಪರವ ನಲಿಕೆ ಜನಾಂಗದವರು ದೈವ ನರ್ತನ ಮಾಡುತ್ತಿದ್ದಾರೆ.
ಈ ಆಚರಣೆಯ ಮೂಲಕ ಸಂಸ್ಕಾರ, ಸಂಸ್ಕೃತಿ ಬದುಕಿಗೆ ನೆಮ್ಮದಿ ಕಂಡುಕೊಂಡಿರುವುದು ತುಳುನಾಡಿನವರು. ಇದೀಗ ವೇದಿಕೆಗಳಲ್ಲಿ ದೈವ ವೇಷವನ್ನು ನಿಷೇಧಿಸಿ ಮತ್ತು ಇದಕ್ಕೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ದೈವಾರಾಧನೆ ಮತ್ತು ದೈವನರ್ತಕರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವವರ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಅವರು ಹೇಳಿದರು.
ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ, ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ವಿಶ್ವನಾಥ ಕೊಪ್ಪ, ವಸಂತ ಪೆರ್ಲೋಡಿ, ದೇವಿಪ್ರಸಾದ್ ದೋಳ್ಪಾಡಿ, ಸುನಂದ ಅಬ್ಬಡ, ಕೀರ್ತಿಕುಮಾರಿ ಅಂಬುಲ, ತೇಜಕುಮಾರಿ ಉದ್ಲಡ್ಡ, ಸುಲೋಚನಾ ಮಿಯೋಳ್ಪೆ, ಅಂಬಾಕ್ಷಿ ಕೂರೇಲು, ಗಂಗಮ್ಮ ಗುಜ್ಜರ್ಮೆ, ಮೀರಾ ಉಪಸ್ಥಿತರಿದ್ದು ಚರ್ಚೆಯಲ್ಲಿ ಪಾಲ್ಗೊಂಡರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವರಾಜ್ ಸಭೆ ನಿರ್ವಹಿಸಿ, ಇಲಾಖೆ ಸುತ್ತೋಲೆ, ಸಾರ್ವಜನಿಕ ಅರ್ಜಿ ಓದಿದರು. ಸಿಬ್ಬಂದಿ ತಿಮ್ಮಪ್ಪ ಗೌಡ ಬೀರುಕುಡಿಕೆ ಜಮಾಖರ್ಚು ವಿವರ ವಾಚಿಸಿದರು. ಸಿಬ್ಬಂದಿಗಳಾದ ಚಿತ್ರಾ, ಕುಮಾರ್, ಶಶಿಕಲಾ, ಕೀರ್ತಿ ಕುಮಾರ್ ಸಹಕರಿಸಿದರು.