ಪುತ್ತೂರು: 34 ನೆಕ್ಕಿಲಾಡಿ, ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಗಳ ತ್ರಿವೇಣಿ ಸಂಗಮ ಸ್ಥಳವಾದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ದ.20ರಿಂದ ಭಕ್ತಿ, ಸಡಗರದಿಂದ ನಡೆಯುತ್ತಿದ್ದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವಕ್ಕೆ ದ.25ರಂದು ಸಂಭ್ರಮದ ತೆರೆ ಬಿದ್ದಿದೆ.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮಹಾವಿಷ್ಣು ದೇವರು, ಗಣಪತಿ ದೇವರು, ಧರ್ಮ ದೈವಗಳಾದ ರಕ್ತೇಶ್ವರಿ, ಮಹಿಷಂದಾಯ, ಪಂಜುರ್ಲಿ, ಗುಳಿಗ ದೈವಗಳ ಗುಡಿ, ನಾಗನಕಟ್ಟೆ ಮತ್ತು ಅಶ್ವತ್ಥಕಟ್ಟೆಯಲ್ಲಿ ದ.20ರಿಂದ ವಿವಿಧ ವೈದಿಕ ಕಾರ್ಯಕ್ರಮ, ನಿರಂತರವಾಗಿ ಅನ್ನಸಂತರ್ಪಣೆ, ಭಜನಾ ಸೇವೆ, ಸಾಂಸ್ಕೃತಿಕ ಸಂಭ್ರಮ, ಧಾರ್ಮಿಕ ಸಭೆ ಯಶಸ್ವಿಯಾಗಿ ನಡೆದಿದ್ದು ದ.25ರಂದು ಬೆಳಿಗ್ಗೆ 5ರಿಂದ ಮಹಾಗಣಪತಿ ಹವನ, ದಿವಾಗಂಟೆ 10.36ರಿಂದ 11.20ರವರೆಗೆ ನಡೆಯುವ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಮಹಾವಿಷ್ಣು ದೇವರಿಗೆ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾಭಿಷೇಕ, ನಾಗಪ್ರತಿಷ್ಠೆ, ಆಶ್ಲೇಷಾ ಬಲಿ, ನಾಗತಂಬಿಲ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5ಕ್ಕೆ ಶೃತಿಲಯ ಕ್ಲಾಸಿಕಲ್ಸ್ ಮಡಂತ್ಯಾರ್ ಇವರಿಂದ ವಿದುಷಿ ಶ್ಯಾಮಲಾ ನಾಗರಾಜ್ ಕುಕ್ಕಿಲ ಮತ್ತು ಬಳಗದವರಿಂದ ಕರ್ನಾಟಕ ಶಾಸೀಯ ಸಂಗೀತ, ರಾತ್ರಿ 7ಕ್ಕೆ ರಂಗಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಿತು. ರಾತ್ರಿ 9.30ರಿಂದ ಯಕ್ಷನಾಟ್ಯ ಗುರು ಮಾಣಿ ಸತೀಶ್ ಆಚಾರ್ಯ ರಚಿಸಿ ಉಪ್ಪಿನಂಗಡಿಯ ಶ್ರೀರಾಮ ಶಾಲೆಯ ಯಕ್ಷನಾಟ್ಯ ತರಬೇತಿ ಕೇಂದ್ರ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕನ್ನಡ ಯಕ್ಷಗಾನ ‘ಶ್ರೀ ಮಹಾವಿಷ್ಣು ಸಾನಿಧ್ಯ’ (ಶಾಂತಿನಗರ ಶ್ರೀ ಮಹಾವಿಷ್ಣು ಕ್ಷೇತ್ರ ಮಹಾತ್ಮೆ) ನಡೆಯಿತು. 2023ರ ಫೆಬ್ರವರಿ 11ರ ಶನಿವಾರ ಮಧ್ಯಾಹ್ನ ಶ್ರೀ ದೇವರಿಗೆ ದೃಢಕಲಶಾಭಿಷೇಕ ಜರಗಲಿದೆ.
ಧಾರ್ಮಿಕ ಸಭೆ; ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ದ.24ರಂದು ರಾತ್ರಿ ‘ರಾಮ ಜಾನಕಿ’ ವೇದಿಕೆಯಲ್ಲಿ ದೇವಳದ ಹಿರಿಯ ಮೊಕ್ತೇಸರ ವಸಂತ ಕಾಮತ್ ಪರನೀರು ಅವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ವೇದವ್ಯಾಸ ರಾಮಕುಂಜ ಧಾರ್ಮಿಕ ಉಪನ್ಯಾಸ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎಂ. ನಿರಂಜನ ರೈ ಮಠಂತಬೆಟ್ಟು, ಕೋಡಿಂಬಾಡಿ ಗ್ರಾ.ಪಂ.ಅಧ್ಯಕ್ಷ ಕೆ.ರಾಮಚಂದ್ರ ಪೂಜಾರಿ ಶಾಂತಿನಗರ, ಉಪ್ಪಿನಂಗಡಿ ಸಿ.ಎ.ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಎನ್.ಗೋಪಾಲ ಹೆಗ್ಡೆ, ಅರ್ಚಕ ಬಾಲಕೃಷ್ಣ ಐತಾಳ್, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮೋಹನ ಪಕ್ಕಳ ಕುಂಡಾಪು, ಮೊಕ್ತೇಸರರಾದ ದಿವಾಕರ ಶೆಟ್ಟಿ ಕಾರ್ನೋಜಿ, ರಮೇಶ್ ಗೌಡ ಬೇರಿಕೆ, ಬೈಲುವಾರು ಪ್ರಮುಖರಾದ ಸುಜಾತ ರೈ ಅಲಿಮಾರ ಮತ್ತು ರುದ್ರಯ್ಯ ಆಚಾರ್ಯ ಭಾಗವಹಿಸಿದ್ದರು. ವೇದಿಕೆಯ ಮುಂಭಾಗದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಧಾರ್ಮಿಕ ಸಭೆಗೆ ಚಾಲನೆ ನೀಡಲಾಯಿತು.
ಕು. ತೇಜಸ್ವಿನಿ ಕುಕ್ಕಿಲ ಪ್ರಾರ್ಥಿಸಿದರು. ಸಚಿನ್ ಜೈನ್ ಹಳಿಯೂರು ಸ್ವಾಗತಿಸಿ, ಅಚಲ್ ಉಬರಡ್ಕ ವಂದಿಸಿದರು. ರತ್ನಾಕರ ಇಪ್ಪನೊಟ್ಟು ಅತಿಥಿಗಳಿಗೆ ವೀಳ್ಯ ನೀಡಿ ಸ್ವಾಗತಿಸಿದರು. ಕರುಣಾಕರ ಸಾಮಾನಿ ಸಂಪಿಗೆದಡಿ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆಯಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ಭಜನಾ ಸೇವೆ, ಅನ್ನಸಂತರ್ಪಣೆ, ಸಂಜೆ ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ‘ಸಾಂಸ್ಕೃತಿಕ ಸಿಂಚನ’ ನಡೆಯಿತು. ನಂತರ ಧಾರ್ಮಿಕ ಸಭೆ, ಅನ್ನಸಂತರ್ಪಣೆ ನಡೆದು ಮಂಗಳೂರಿನ ಅಂಬುರುಹ ಯಕ್ಷಕಲಾ ಕೇಂದ್ರದವರಿಂದ ಕುಮಾರ್ ಮಾಲೆಮಾರ್ ಸಾರಥ್ಯದಲ್ಲಿ ಮಹಿಮೆದ ಮಂತ್ರದೇವತೆ ಖ್ಯಾತಿಯ ವಿಜಿತ್ ಶೆಟ್ಟಿ ಅಕಾಶ್‌ಭವನ ರಚಿಸಿ ನಿರ್ದೇಶಿಸಿರುವ ‘ಮಹಿಮೆದ ಬಬ್ಬುಸ್ವಾಮಿ’ ತುಳು ಯಕ್ಷಗಾನ ನಡೆಯಿತು. ದೇವಳದ ಆಡಳಿತ ಮೊಕ್ತೇಸರ ಯು.ಜಿ.ರಾಧಾ, ಮೊಕ್ತೇಸರರು, ಬೈಲುವಾರು ಸಮಿತಿಯ ಮುಖ್ಯಸ್ಥರು, ಅರ್ಚಕ ನಾಗರಾಜ ಭಟ್ ಕುಕ್ಕಿಲ ಮತ್ತು ನೂರಾರು ಸ್ವಯಂಸೇವಕರ ಶ್ರಮದೊಂದಿಗೆ ದ.20ರಿಂದ 25ರವರೆಗೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು ಊರ, ಪರವೂರ ಸಾವಿರಾರು ಮಂದಿ ಭಾಗವಹಿಸಿದ್ದರು.
ಸುದ್ದಿಯಲ್ಲಿ ನೇರಪ್ರಸಾರ
ದ.25ರಂದು ರಾತ್ರಿ ನಡೆದ ಶ್ರೀ ವಿಷ್ಣು ಸಾನಿಧ್ಯ(ಶಾಂತಿನಗರ ಶ್ರೀ ಮಹಾವಿಷ್ಣು ಕ್ಷೇತ್ರ ಮಹಾತ್ಮೆ) ಯಕ್ಷಗಾನ ಸುದ್ದಿ ಪುತ್ತೂರು ಯೂ ಟ್ಯೂಬ್ ಚಾನೆಲ್ ಮತ್ತು ಸುದ್ದಿ ಬಿಡುಗಡೆ ಫೇಸ್ಬುಕ್ ಪೇಜಿನಲ್ಲಿ ನೇರಪ್ರಸಾರಗೊಂಡಿತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ದೇವಳದ ಒಳಗೆ ನಡೆದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವೇದಿಕೆಯಲ್ಲಿ ಎಲ್.ಇ.ಡಿ. ಮೂಲಕ ಪ್ರಸಾರ ಮಾಡಲಾಗಿತ್ತು.