ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರ ಮನೆಯಂಗಳದಲ್ಲಿ ಕೈ ಬಾಂಬ್ ಸಿಡಿಸಿ ಕೊಲೆ ಬೆದರಿಕೆ ಒಡ್ಡಿದ ಪ್ರಕರಣ; ಅಪರಿಚಿತ ವ್ಯಕ್ತಿಗಳ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

0

ಪುತ್ತೂರು: ಕಾಣಿಯೂರಿನಲ್ಲಿರುವ ತನ್ನ ಮನೆಯಲ್ಲಿ ರಾತ್ರಿ ವೇಳೆ ಕುಟುಂಬ ಸಮೇತ ನಿದ್ರಿಸುತ್ತಿದ್ದ ಸಮಯ ಮನೆಯ ಅಂಗಳದಲ್ಲಿ ಕೆಲವರು ಕೈ ಬಾಂಬುಗಳನ್ನು ಸಿಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಒಡ್ಡಿರುವುದಾಗಿ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ನಾನು ಮತ್ತು ನನ್ನ ಪತ್ನಿ ದ.20ರಂದು ರಾತ್ರಿ ಮನೆಯಲ್ಲಿ ನಿದ್ರಿಸುತ್ತಿದ್ದ ಸಮಯ ರಾತ್ರಿ 12 ಗಂಟೆಯ ನಂತರ ನಮ್ಮ ಮನೆಯ ಅಂಗಳದಲ್ಲಿ ಕೈ ಬಾಂಬುಗಳನ್ನು ಸಿಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕುತ್ತಾ ಸುಮಾರು 15ರಿಂದ 20 ಜನರ ತಂಡ ಬಂದು ಕಿಟಕಿಯ ಬಾಗಿಲು ಮತ್ತು ಮನೆಯ ಬಾಗಿಲುಗಳಿಗೆ ಬಡಿದ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ತಿಳಿಸಿದಾಗ ರಾತ್ರಿ ಕರ್ತವ್ಯದಲ್ಲಿದ್ದ ಸುಳ್ಯ ಪೊಲೀಸರು ಬಂದು ಧೈರ್ಯ ತುಂಬಿದ್ದಾರೆ. ಅದಲ್ಲದೆ ದ.21ರಂದು ಪೂರ್ವಾಹ್ನ ಪುತ್ತೂರು ವಲಯ ಅರಣ್ಯ ಅಧಿಕಾರಿಯವರ ಕಚೇರಿಗೆ ನುಗ್ಗಿದ ಮುರಳೀಕೃಷ್ಣ ಹಸಂತಡ್ಕ ಎಂಬವರ ನೇತೃತ್ವದಲ್ಲಿ 50ಕ್ಕೂ ಅಧಿಕ ಜನರಿದ್ದ ತಂಡ ಬಹಿರಂಗವಾಗಿ ನಮಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಅದಲ್ಲದೆ, ಕುದ್ಮಾರಿನಲ್ಲಿರುವ ನನ್ನ ತಂಗಿಯ ಮನೆಗೆ 100ಕ್ಕಿಂತ ಅಧಿಕ ಜನರ ತಂಡ ಬಂದು ದ.21ರಂದು 4 ಗಂಟೆ ಸಮಯಕ್ಕೆ ಕೊಲೆ ಬೆದರಿಕೆ ಹಾಕಿದ ಬಗ್ಗೆ ಬೆಳ್ಳಾರೆ ಠಾಣೆಯ ಪೊಲೀಸ್ ಕೃಷ್ಣಪ್ಪರವರಿಗೆ ದೂರವಾಣಿ ಮೂಲಕ ತಿಳಿಸಿದ್ದು ಗೃಹ ಸಚಿವರಿಗೆ ಬರೆದ ಪತ್ರದ ನಕಲನ್ನು ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟಿದ್ದೇನೆ. ಆದರೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ ಜನರ ಬಗ್ಗೆ ಬೆಳ್ಳಾರೆ ಪೊಲೀಸ್ ಇಲಾಖೆಯ ಎಲ್ಲಾ ಪೊಲೀಸರಿಗೂ ಗೊತ್ತಿದ್ದರೂ, ನಾನು ಹಾಗೂ ನನ್ನ ಪತ್ನಿಗೆ ಬಹಿರಂಗ ಬೆದರಿಕೆ ಹಾಕಿದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದ ಸಂಜೀವ ಪೂಜಾರಿ ಅವರು ವಸಂತ ಎಂ, ತೀರ್ಥೇಶ್ ಎಂ., ಬಿ.ಜಯಂತ ಕುಮಾರ್, ಚೇತನ್, ಸಂತೋಷ್ ದೋಳ, ರವಿಕುಮಾರ್, ಲೋಕೇಶ್, ಪ್ರಸನ್ನ, ಲಕ್ಷ್ಮೀನಾರಾಯಣ ಬೆದರಿಕೆ ಹಾಕಿದವರು ಎಂದು ದೂರಿನಲ್ಲಿ ಹೆಸರಿಸಿದ್ದರು. ಇವರ ದೂರಿನನ್ವಯ ಅಪರಿಚಿತ ವ್ಯಕ್ತಿಗಳ ವಿರುದ್ಧ ಇದೀಗ ಬೆಳ್ಳಾರೆ ಠಾಣೆ ಪೊಲೀಸರು ಐಪಿಸಿ ಕಲಂ 143, 447, 504, 506, 149, 9ಬಿ1 ಸಿಬಿ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here