ತೆರವುಗೊಳಿಸುವ ಗ್ರಾಮಸ್ಥರ ಮನವಿಗೆ ಮೆಸ್ಕಾಂ ಇಲಾಖೆ ಮೌನ?
ಕಡಬ: ಕೋಡಿಂಬಾಳ ಗ್ರಾಮದ ಮಜ್ಜಾರು ಎಂಬಲ್ಲಿ ರಸ್ತೆಯಲ್ಲಿಯೇ ಬೆಳಕು ಯೋಜನೆಯ ವಿದ್ಯುತ್ ಕಂಬಗಳನ್ನು ಹಾಕಿದ ಪರಿಣಾಮ, ಇದೀಗ ರಸ್ತೆ ಕಾಂಕ್ರೀಟಿಕರಣಗೊಳ್ಳಲು ರಸ್ತೆ ಅಗಲಿಕರಣ ನಡೆಯುತ್ತಿದ್ದು ಇದಕ್ಕೆ ವಿದ್ಯುತ್ ಕಂಬಗಳು ಅಡ್ಡಿಯಾಗಿ ಪರಿಣಮಿಸಿದೆ ಈ ಬಗ್ಗೆ ಗ್ರಾಮಸ್ಥರು ಮೆಸ್ಕಾಂ ಇಲಾಖೆಗೆ ಮನವಿ ಮಾಡಿದ್ದರೂ ಮೆಸ್ಕಾಂ ಇಲಾಖೆ ಮಾತ್ರ ಕಂಬ ತೆರವುಗೊಳಿಸಲು ಮೀನಾಮೇಷ ಎನಿಸುತ್ತಿದೆ. ಈ ಬಗ್ಗೆ ಡಿ.26ರಂದು ಗ್ರಾಮದ ಪ್ರಮುಖರು ಒಟ್ಟು ಸೇರಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಸುಮಾರು 35 ಲಕ್ಷ ರೂ.ಅನುದಾನದಲ್ಲಿ ರಸ್ತೆ ಕಾಂಕ್ರೀಟಿಕರಣಕ್ಕೆ ಕಾಮಗಾರಿ ಪ್ರಾರಂಭಗೊಂಡಿದ್ದು, ರಸ್ತೆಯಲ್ಲಿಯೇ ಕಂಬಗಳನ್ನು ಹಾಕಿದ್ದರಿಂದ ರಸ್ತೆಯ ದುರಸ್ತಿಗೆ ತೊಂದರೆಯಾಗಿದೆ. ಕೋಡಿಂಬಾಳ ಮಜ್ಜಾರು ರಸ್ತೆಯು ನೂರಾರು ಮನೆಗಳನ್ನು ಸಂಪರ್ಕಿಸುತ್ತಿದ್ದು, ಅಲ್ಲದೆ ಪ್ರಸಿದ್ಧ ಕಾರ್ಣಿಕ ಕ್ಷೇತ್ರವಾದ ಮಜ್ಜಾರು ದೈವಸ್ಥಾನಕ್ಕೆ ಸಂಪರ್ಕ ಕಲ್ಪಿಸುತ್ತಿದೆ, ಈ ರಸ್ತೆಯಲ್ಲಿ ನೂರಾರು ಜನರು ದಿನನಿತ್ಯ ಸಂಚರಿಸುತ್ತಿದ್ದಾರೆ. ಈಗಾಗಲೇ ರಸ್ತೆಯ ಅಭಿವೃದ್ದಿಗೆ ಗ್ರಾಮಸ್ಥರು ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಅನುದಾನ ಮಂಜೂರುಗೊಂಡು ಕಾಮಗಾರಿ ಪ್ರಾರಂಭಗೊಂಡಿದೆ.
2 ಕಂಬದ ಬದಲು 7 ಕಂಬಗಳು?: ಈಗಾಗಲೇ ರಸ್ತೆಯನ್ನು ಆಕ್ರಮಿಸಿದ ವಿದ್ಯುತ್ ಕಂಬಗಳು ಹಾಕಿರುವುದು ಅನಗತ್ಯ ಎಂಬ ಮಾತುಗಳು ಕೇಳಿಬಂದಿದೆ. ಬೆಳಕು ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಪಡೆಯುವ ಮನೆಯೊಂದಕ್ಕೆ ಕೇವಲ 2 ಕಂಬಗಳನ್ನು ಹಾಕಿ ಸಮೀಪದಿಂದಲೇ ವಿದ್ಯುತ್ ಪಡೆಯಲು ಅವಕಾಶವಿದ್ದರೂ ಬೆಳಕು ಯೋಜನೆಯಲ್ಲಿ ಎಷ್ಟು ಕಂಬಗಳನ್ನು ಹಾಕಿ ವಿದ್ಯುತ್ ಪಡೆಯಲು ಅವಕಾಶ ಇರುವ ಕಾರಣ ಈ ರೀತಿ ರಸ್ತೆಯಲ್ಲಿಯೇ ಬೇಕಾಬಿಟ್ಟಿ ಕಂಬ ಹಾಕಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಗ್ರಾಮಸ್ಥರು ಈ ಕಂಬಗಳನ್ನು ತೆರವುಗೊಳಿಸಲು ಮೆಸ್ಕಾಂ ಅಧಿಕಾರಿಗಳಲ್ಲಿ ಮನವಿ ಮಾಡಿದರೆ ನೀವು ಅರ್ಜಿ ಕೊಡಿ ಎಂಬ ಉತ್ತರ ಬರುತ್ತಿದ್ದರೆ, ಗ್ರಾಮಸ್ಥರಲ್ಲಿ ಕೇಳಿ ವಿದ್ಯುತ್ ಕಂಬಗಳನ್ನು ಹಾಕಿದ್ದೀರಾ, ಮತ್ತೆ ನಾವು ಯಾಕೆ ಕಂಬ ತೆರವುಗೊಳಿಸಲು ಅರ್ಜಿ ಕೊಡಬೇಕು ಎಂದು ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ಮೊದಲೇ ಅಗಲ ಕಿರಿದಾದ ರಸ್ತೆ ಇದ್ದು ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ, ಒಟ್ಟಿನಲ್ಲಿ ಕಂಬ ತೆರವುಗೊಳಿಸದೆ ರಸ್ತೆ ಕಾಮಗಾರಿಗೆ ಅಡ್ಡಿಯಾಗಿದೆ, ಕೂಡಲೇ ಕಂಬ ತೆರವುಗೊಳಿಸಬೇಕು ಇಲ್ಲದಿದ್ದಲ್ಲಿ ಮೆಸ್ಕಾಂ ಕಛೇರಿಯ ಎದುರು ಪ್ರತಿಭಟಿಸಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಸಾದ ಕೆದಿಲಾಯ, ಸುದರ್ಶನ ಗೌಡ ಕೋಡಿಂಬಾಳ, ರಾಮಚಂದ್ರ ಕುತ್ಯಾಡಿ, ವೆಂಕಟ್ರಮಣ ಕುತ್ಯಾಡಿ, ಮೋಹನ್ ಕೋಡಿಂಬಾಳ, ನಾಗೇಶ್ ಮಾಸ್ತಿಮನೆ, ವಿಜಿತ್ ಮಾಸ್ತಿ ಮನೆ, ಭಾಸ್ಕರ, ಗಿರಿಯಪ್ಪ ಗೌಡ ಮಜ್ಜಾರು, ಕಾರ್ತಿಕ್ ಮಜ್ಜಾರು, ಶರತ್ ಮಜ್ಜಾರು, ವೆಂಕಟ್ರಮಣ ದೇಂತಾರು, ಲಿಂಗಪ್ಪ ಗೌಡ ಕುತ್ಯಾಡಿ, ದಿವಾಕರ ಮಜ್ಜಾರು, ಸುರೇಶ್ ಮಜ್ಜಾರು, ಹರೀಶ್ ಹರಿಮನೆ, ಜಿನ್ನಪ್ಪ ಮಾಸ್ತಿ ಮನೆ ಮೊದಲಾದವರು ಉಪಸ್ಥಿತರಿದ್ದರು.
ಕಂಬಗಳ ಸ್ಥಳಾಂತರ ಮಾಡಲಾಗುವುದು -ಸತ್ಯನಾರಾಯಣ
ಈ ಬಗ್ಗೆ ಮೆಸ್ಕಾಂ ಸಹಾಯಕ ಇಂಜಿನಿಯರ್ ಸತ್ಯನಾರಾಯಣ ಅವರು ಪ್ರತಿಕ್ರಿಯೆ ನೀಡಿ, ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದೇವೆ, ಕಂಬಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.