ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ‘ಶ್ರೀ ಆಂಜನೇಯ-54’ ಸಂಪನ್ನ

0

ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯರಿಗೆ ‘ಶ್ರೀಯಕ್ಷಾಂಜನೇಯ’ ಪ್ರಶಸ್ತಿ ಪ್ರದಾನ

ಪುತ್ತೂರು: ಬೊಳ್ವಾರಿನ ಶ್ರೀಆಂಜನೇಯ ಯಕ್ಷಗಾನ ಕಲಾ ಸಂಘದ ‘ಆಂಜನೇಯ 54’ ವಾರ್ಷಿಕ ಕಲಾಪ ಡಿ.25ರಂದು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು. ಮಧ್ಯಾಹ್ನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ‘ಆಂಜನೇಯ-54’ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಶ್ರೀಆಂಜನೇಯ ಯಕ್ಷಗಾನ ಸಂಘದ ಕಲಾವಿದರಿಂದ ಗಾನಶರಧಿ’ ವಿಶಿಷ್ಟ ಕಾರ್ಯಕ್ರಮ, ಹಿರಿಯ ಅರ್ಥಧಾರಿಗಳಿಂದ ‘ಗಾಂಗೇಯ’ ಯಕ್ಷಗಾನ ತಾಳಮದ್ದಳೆ ಜರುಗಿತು.

ಸಭಾ ಕಾರ್ಯಕ್ರಮ:

ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾದ ಡಾ|ವಿಜಯ ಸರಸ್ವತಿ ಮಾತನಾಡಿ, ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎಂಬ ಮಾತಿನಂತೆ ಸಜ್ಜನರ ಸಂಗದಲ್ಲಿ ನಾನು ಭಾಗಿಯಾಗಿದ್ದೇನೆ. ಯಕ್ಷಗಾನ ಹಾಗೂ ತಾಳಮದ್ದಳೆಯಲ್ಲಿ ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆಗಳು ಆಗುತ್ತಿದೆ. ತಾಳಮದ್ದಲೆ, ಯಕ್ಷಗಾನ ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗಬೇಕು ಎಂದರು. ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಮದಾಸ್ ಗೌಡ ಮಾತನಾಡಿ, ಶಿವನ ಕ್ಷೇತ್ರದಲ್ಲಿ ಉತ್ತಮ ಕಾರ್ಯಕ್ರಮ ನಡೆಯುತ್ತಿದೆ. ಆಂಜನೇಯ ಯಕ್ಷಗಾನ ಸಂಘದಿಂದ ನೈಜ ಸಾಧಕನಿಗೆ ಇವತ್ತು ಪ್ರಶಸ್ತಿ ಪ್ರದಾನ ನಡೆದಿದೆ ಎಂದು ಹೇಳಿ ಯಕ್ಷಗಾನದ ಹಿಂದಿನ ಮೇರು ಕಲಾವಿದರ ಬಗ್ಗೆ ತಿಳಿಸಿದರು.

ಶ್ರೀ ಯಕ್ಷಾಂಜನೇಯ ಪ್ರಶಸ್ತಿ ಪುರಸ್ಕೃತ ದಿನೇಶ ಅಮ್ಮಣ್ಣಾಯರ ಕುರಿತು ಅರ್ಥಧಾರಿ, ವೇಷಧಾರಿ ಡಾ.ಎಂ.ಪ್ರದೀಪ ಸಾಮಗರು ಅಭಿನಂದನಾ ಭಾಷಣ ಮಾಡಿ ಶ್ರೀಆಂಜನೇಯ ಯಕ್ಷಗಾನ ಕಲಾ ಸಂಘ 54 ವರ್ಷ ಬೆಳೆದು ಬಂದದ್ದು ದೊಡ್ಡ ಸಾಧನೆಯಾಗಿದೆ. ಕಲಾವಿದರನ್ನು ನೆನಪಲ್ಲಿಟ್ಟುಕೊಂಡು ಸನ್ಮಾನಿಸುವುದು ಉತ್ತಮ ಕೆಲಸ. ಕೀರ್ತಿಶೇಷ ಭಾಗವತ ದಾಮೋದರ ಮಂಡೆಚ್ಚರವರ ಶಿಷ್ಯರಾಗಿ ಮೂಡಿಬಂದ ದಿನೇಶ ಅಮ್ಮಣ್ಣಾಯರು ಸರಳ ಸಜ್ಜನಿಕೆಯ ವ್ಯಕ್ತಿ. ಯಾರಿಗೂ ಕೆಟ್ಟದ್ದು ಬಯಸಿದವರಲ್ಲ. ಯಕ್ಷಗಾನ ಕ್ಷೇತ್ರದಲ್ಲಿ ಹೊಂದಾಣಿಕೆಯ ಸ್ವಭಾವದಲ್ಲಿ ಬೆಳೆದವರಾಗಿದ್ದಾರೆ ಎಂದರು. ಯಕ್ಷಗಾನ ಭಾಗವತಿಕೆಯಲ್ಲಿ ಅಮ್ಮಣ್ಣಾಯರು ಶೈಲಿಯನ್ನು ಹುಟ್ಟುಹಾಕಿದವರು. ಭಾವನಾತ್ಮಕ ಪ್ರಸಂಗಗಳಲ್ಲಿ ಗುರುತಿಸಿಕೊಂಡವರು. ಸೌಜನ್ಯ, ಸಾತ್ವಿಕತೆಯಿಂದ ಜನಮಾನಸದಲ್ಲಿ ಪ್ರತಿನಿಧಿಸಲ್ಪಟ್ಟವರು ಎಂದು ಹೇಳಿದರು. ಪ್ರಶಸ್ತಿ ಸ್ವೀಕರಿಸಿದ ದಿನೇಶ ಅಮ್ಮಣ್ಣಾಯರವರು ಮಾತನಾಡಿ 64ನೇ ವಯಸ್ಸಿನ ನನಗೆ ಆಂಜನೇಯನ ಪ್ರಸಾದ ದೊರೆತಿದೆ. ಈ ಪ್ರಶಸ್ತಿಯನ್ನು ಹೆಮ್ಮೆಯಿಂದ ಸ್ವೀಕರಿಸಿದ್ದೇನೆ. ಯಕ್ಷಗಾನವನ್ನು ಸಮಷ್ಠಿ ಕಲೆ ಎಂದು ಭಾವಿಸಿದವನು ನಾನು. ನನಗೆ ಅನ್ನ ನೀರು ಕೊಟ್ಟು ಬೆಳೆಸಿದ ಯಕ್ಷಗಾನವನ್ನು ನಾನು ಪ್ರೀತಿಸುತ್ತೇನೆ, ಆರಾಧಿಸುತ್ತೇನೆ. ಯಕ್ಷಗಾನ ಕ್ಷೇತ್ರವನ್ನು ನಾನು ಬಿಡಲಿಲ್ಲ. ನನ್ನನ್ನು ನಾನು ತಿಳಿದುಕೊಂಡಿದ್ದೇನೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

ದಿ.ಕುಂಬ್ಳೆ ಸುಂದರರಾವ್‌ರವರಿಗೆ ನುಡಿನಮನ:

ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್‌ರವರು ಯಕ್ಷಗಾನ ಕಲಾವಿದರಾಗಿದ್ದ ದಿ.ಕುಂಬಳೆ ಸುಂದರ ರಾವ್‌ರವರಿಗೆ ನುಡಿನಮನ ಸಲ್ಲಿಸಿ ಕುಂಬ್ಳೆ ಸುಂದರ ರಾವ್‌ರವರು ಆಂಜನೇಯ ಯಕ್ಷಗಾನ ಕಲಾ ಸಂಘದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸುಮಾರು 50 ವರ್ಷಗಳಿಗಿಂತಲೂ ಹೆಚ್ಚು ಕಾಲ ನನ್ನೊಂದಿಗೆ ಒಡನಾಡಿಯಾಗಿದ್ದವರು. ದೇಹ ನಾಶವಾಗುತ್ತದೆ. ಚೇತನ ನಾಶವಾಗುವುದಿಲ್ಲ ಎಂದು ಹೇಳಿದರು. ಬಳಿಕ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕೋಣಾಜೆಯ ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಶ್ರೀಪತಿ ಕಲ್ಲೂರಾಯರವರು ಮಾತನಾಡಿ, ಆಂಜನೇಯ ಯಕ್ಷಗಾನ ಕಲಾ ಸಂಘದ 54 ರ ಸಂಭ್ರಮದ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿದೆ. ಯಕ್ಷಗಾನ ಇಂದು ಅನೇಕ ಪರಿವರ್ತನೆಗಳನ್ನು ಕಂಡಿದೆ. ಸಾರ್ವತ್ರಿಕವಾಗಿ ಯಕ್ಷಗಾನ ಬೆಳೆಯುತ್ತಿದೆ. ಯಕ್ಷಗಾನ ಕ್ಷೇತ್ರ ಬೆಳೆಯಲು ತಳಮಟ್ಟದ ಸಂಘಗಳು ಬಹಳ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಶ್ರೀಆಂಜನೇಯ ಯಕ್ಷಗಾನ ಕಲಾ ಸಂಘದ ಅದ್ಯಕ್ಷ ಭಾಸ್ಕರ ಬಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ 1968 ರಲ್ಲಿ ಸಂಘ ಆರಂಭಗೊಂಡಿದೆ. ಪ್ರತೀ ತಿಂಗಳು ಸಂಘದ ವತಿಯಿಂದ ತಾಳಮದ್ದಳೆ ನಡೆಯುತ್ತಿದೆ. ಮಹಿಳಾ ಯಕ್ಷಗಾನ ಕಲಾ ಸಂಘವು ಜಿಲ್ಲೆಯಲ್ಲಿಯೇ ಪ್ರಥಮವಾಗಿ ಆರಂಭಗೊಂಡ ಮಹಿಳಾ ಸಂಘವಾಗಿದೆ. ಇಲ್ಲಿನ ಮಹಿಳಾ ಕಲಾವಿದರು ಪುರುಷರಿಗೆ ಸರಿಸಮಾನವಾದ ಕಲಾವಿದರಾಗಿದ್ದಾರೆ. ಹಲವು ಪ್ರಶಸ್ತಿಗಳು ನಮ್ಮ ಸಂಘಕ್ಕೆ ದೊರೆತಿದೆ ಎಂದು ಹೇಳಿದರು.

ಮಹಿಳಾ ಯಕ್ಷಗಾನ ಕಲಾ ಸಂಘದ ಅಧ್ಯಕ್ಷೆ ಪ್ರೇಮಲತಾ ರಾವ್‌ರವರು ಸಂಘದ ವಾರ್ಷಿಕ ವರದಿ ವಾಚಿಸಿದರು. ಸದಸ್ಯೆ ಶುಭ ಜೆ.ಸಿ ಅಡಿಗ ಅಭಿನಂದನಾ ಪತ್ರ ವಾಚಿಸಿದರು. ಸಂಘದ ಖಜಾಂಜಿ ಎನ್.ದುಗ್ಗಪ್ಪ ಸ್ವಾಗತಿಸಿ ಕಾರ್ಯದರ್ಶಿ ಗುಡ್ಡಪ್ಪ ಬಲ್ಯ ವಂದಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಾ.ಕಾರಂತ ಪೆರಾಜೆ, ಸ್ವರ್ಣಲತಾ ಬಾರ್ಯ, ದಾಸಪ್ಪ ರೈ, ಕಿಶೋರಿ ದುಗ್ಗಪ್ಪ, ರಂಗನಾಥ ರಾವ್, ಭಾಸ್ಕರ ಬಾರ್ಯ, ರಮೇಶ್ ಬಾಬುರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಯಕ್ಷಾಂಜನೇಯ ಪ್ರಶಸ್ತಿ

ಹಿರಿಯ ಭಾಗವತ ‘ರಸರಾಗ ಚಕ್ರವರ್ತಿ’ ದಿನೇಶ ಅಮ್ಮಣ್ಣಾಯರಿಗೆ ಈ ಸಾಲಿನ ‘ಶ್ರೀಯಕ್ಷಾಂಜನೇಯ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿದ್ದ ಗಣ್ಯರು ಶಾಲು, ಹಾರ, ಹಣ್ಣುಹಂಪಲು ನೀಡಿ ಪೇಟ ತೊಡಿಸಿ ಸನ್ಮಾನಿಸಿದರು.

ಗೋಶಾಲೆಗೆ ದೇಣಿಗೆ
ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ಪುತ್ತೂರು
ಶ್ರೀಮಹಾಲೀಂಗೇಶ್ವರ ದೇವಾಲಯದ ಗೋಶಾಲೆಗೆ ರೂ.10,೦೦೦ ದೇಣಿಗೆಯ ಚೆಕ್ ನೀಡಲಾಯಿತು. ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯರವರು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಮದಾಸ್ ಗೌಡರವರಿಗೆ ಚೆಕ್ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here