2023 ರಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಕ್ಕೆ ಪಾಕಿಸ್ಥಾನ ಕ್ರಿಕೆಟ್ ತಂಡವನ್ನು ಕಳುಹಿಸುವ ಬಗ್ಗೆ ಸರಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪಾಕಿಸ್ಥಾನ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷ ನಜಾಂ ಸೇಥಿ ಹೇಳಿದ್ದಾರೆ. ಪಾಕಿಸ್ಥಾನದಲ್ಲಿ ನಡೆಯುವ ಏಷ್ಯಾಕಪ್ ಟೂರ್ನಮೆಂಟ್ ನಲ್ಲಿ ಭಾರತ ತಂಡ ಭಾಗವಹಿಸದಿದ್ದರೆ, ಭಾರತದಲ್ಲಿ ನಡೆಯುವ ವಿಶ್ವಕಪ್ ಪಂದ್ಯಾವಳಿಯಿಂದ ಹಿಂದೆ ಸರಿಯುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂಬ ಪಿಸಿಬಿ ಮಾಜಿ ಅಧ್ಯಕ್ಷರ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು ಭಾರತಕ್ಕೆ ತೆರಳುವುದು ಬೇಡ ಎಂದು ಸರಕಾರ ಹೇಳಿದರೆ ನಾವು ಹೋಗುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 2023ರಲ್ಲಿ ಪಾಕಿಸ್ಥಾನದ ಆತಿಥ್ಯದಲ್ಲಿ ನಡೆಯುವ ಏಷ್ಯಾಕಪ್ ವಿವಾದದ ಸಂಬಂಧ ಏಷ್ಯನ್ ಕ್ರಿಕೆಟ್ ಮಂಡಳಿ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.