ನೆಲ್ಯಾಡಿ: ಅಪಘಾತ ಸ್ಥಳದ ಪಕ್ಕ ನಿರ್ಮಾಣಗೊಂಡಿರುವ ತಾತ್ಕಾಲಿಕ ಶೆಡ್ ತೆರವುಗೊಳಿಸುವ ಸಂಬಂಧ ಕ್ರಮ ಕೈಗೊಳ್ಳಲು ಬಜತ್ತೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಭೆ ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ ಬಿ. ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ವಳಾಲು ಮುಗೇರಡ್ಕ ರಸ್ತೆ ತಿರುವಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಪದೇ ಪದೇ ಅಪಘಾತ ನಡೆಯುತ್ತಿದೆ. ಆದರೂ ಇದರ ಪಕ್ಕ ತಾತ್ಕಾಲಿಕ ಶೆಡ್ ರಚಿಸಿ ವ್ಯಾಪಾರ ನಡೆಸಲು ತಯಾರಿ ಮಾಡುತ್ತಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪಗೊಂಡು ಚರ್ಚೆ ನಡೆಯಿತು. ಅಪಘಾತಕ್ಕೆ ಕಾರಣವಾಗುವುದರಿಂದ ಸದ್ರಿ ಶೆಡ್ ತೆರವುಗೊಳಿಸಲು ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.
ಲಾಯರ್ ನೋಟಿಸ್ ಬಗ್ಗೆ ಚರ್ಚೆ:
ಪಂರ್ದಾಜೆ ಎಂಬಲ್ಲಿ ರಸ್ತೆ ಜಾಗ ಅತಿಕ್ರಮಣ ಮಾಡಿ ಬೇಲಿ ನಿರ್ಮಿಸಿರುವುದನ್ನು ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗೆ ಲಾಯರ್ ನೋಟಿಸ್ ಬಂದಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮಕ್ಕೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಯವರೊಂದಿಗೆ ಪತ್ರ ವ್ಯವಹಾರ ಮಾಡಲು ನಿರ್ಣಯಿಸಲಾಯಿತು. ಗುಂಪಲಕೋಡಿ ರಸ್ತೆಯ ತುರ್ತು ಅಭಿವೃದ್ಧಿಗೆ ನಿರ್ಣಯಿಸಲಾಯಿತು. ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ದೂರದೃಷ್ಟಿ ಯೋಜನೆ ಕರಡು ಪ್ರತಿ ತಯಾರಿ ಮಂಡಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಸ್ಮಿತಾ, ಸದಸ್ಯರಾದ ಮೋನಪ್ಪ ಗೌಡ ಬೆದ್ರೋಡಿ, ಗಂಗಾಧರ ಪಿ.ಎನ್., ನಝೀರ್ ಬೆದ್ರೋಡಿ, ಗಂಗಾಧರ ಕೆ.ಎಸ್., ಉಮೇಶ್ ಓಡ್ರಪಾಲು, ಸಂತೋಷ್‌ಕುಮಾರ್ ಪಿ., ಪ್ರೆಸಿಲ್ಲಾ ಡಿ.ಸೋಜ, ರತ್ನ, ಭಾಗೀರಥಿ, ಯಶೋಧಾ, ವಿಮಲ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್‌ಕುಮಾರ್ ಸ್ವಾಗತಿಸಿ ಸರಕಾರದ ಸುತ್ತೋಲೆಯನ್ನು ಸಭೆಗೆ ಮಂಡಿಸಿದರು. ಕಾರ್ಯದರ್ಶಿ ಗಿರಿಯಪ್ಪ ಗೌಡ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.