ಕೆಮ್ಮಾರ: ಇಲ್ಲಿನ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ಹಳೆ ವಿದ್ಯಾರ್ಥಿಗಳ ವತಿಯಿಂದ ನಿರ್ಮಾಣಗೊಂಡ ಸುಸಜ್ಜಿತ ಕೈತೊಳೆಯುವ ಬೇಸಿನ್ನನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನದಾಸ್ ಶೆಟ್ಟಿಯವರು ಡಿ.26 ರಂದು ಉದ್ಘಾಟಿಸಿದರು.
ಉದ್ಘಾಟಿಸಿದ ಮೋಹನದಾಸ್ ಶೆಟ್ಟಿಯವರು ಮಾತನಾಡಿ, ನಮ್ಮೂರ ಶಾಲೆಯ ಅಭಿವೃದ್ಧಿ ನಮ್ಮಿಂದಲೇ ಅನ್ನೋ ದೃಷ್ಟಿಕೋನವನ್ನು ಇಟ್ಟುಕೊಂಡು ಹಳೆ ವಿದ್ಯಾರ್ಥಿಗಳು ಮಾಡಿದ ಈ ಸೇವೆ ಶ್ಲಾಘನೀಯ. ಹಳೆ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ನಮ್ಮೂರ ಶಾಲೆ ಇನ್ನೂ ಉತ್ತುಂಗಕ್ಕೇರುವುದರಲ್ಲಿ ಸಂಶಯವಿಲ್ಲ ಎಂದು ಹೇಳಿ ಹಳೆ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಶಾಲಾ ಮುಖ್ಯಶಿಕ್ಷಕಿ ಜಯಶ್ರೀ ಎಮ್.,ರವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಶಾಲಾ ಹಾಗೂ ಸಾರ್ವಜನಿಕ ಸ್ವತ್ತುಗಳು ನಮ್ಮ ಸ್ವತ್ತುಗಳು, ಇದರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಕೆಮ್ಮಾರ ಒಕ್ಕೂಟದ ರವಿಕಾಂತ ಬಡ್ಡಮೆಯವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಗ್ರಾ.ಪಂ.ಸದಸ್ಯೆ ವಾರಿಜಾಕ್ಷಿ ಬಡ್ಡಮೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಝೀಝ್ ಬಿ.ಕೆ, ಉಪಾಧ್ಯಕ್ಷೆ ಸುಮಯ್ಯ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಖಾದರ್ ಅಡೆಕ್ಕಲ್, ಅಬ್ಬಾಸ್, ಪದ್ಮನಾಭ ಶೆಟ್ಟಿ ಬಡಿಲ, ವಾಮನ ಬರಮೇಲು, ಅಧ್ಯಾಪಕ ವೃಂದ, ಅಕ್ಷರ ದಾಸೋಹ ಸಿಬ್ಬಂದಿಗಳು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಪದ್ಮನಾಭ ಶೆಟ್ಟಿ ಬಡಿಲ ಇವರ ವತಿಯಿಂದ ಸಿಹಿತಿಂಡಿ ವಿತರಣೆ ನಡೆಯಿತು. ಶಿಕ್ಷಕಿ ಸುಮನಾ ಸ್ವಾಗತಿಸಿದರು, ದೈಹಿಕ ಶಿಕ್ಷಣ ಶಿಕ್ಷಕಿ ಮೋಹನಾಂಗಿ ವಂದಿಸಿದರು. ಶಿಕ್ಷಕಿ ಮೆಹನಾಝ್ ನಿರೂಪಿಸಿದರು.