ಚಿತ್ರ: ಕ್ಲಾಸಿಕ್ಲಿಕ್ಸ್ ಪುತ್ತೂರು
ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯ ಡೊನ್ ಬೊಸ್ಕೊ ಕ್ಲಬ್ ಸಂಸ್ಥೆಯು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ದ.25 ರಂದು ಸಂಜೆ ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ, ಸಮೂಹ ನೃತ್ಯ, ಹಾಡುಗಾರಿಕೆ, ಪ್ರಹಸನ ಒಳಗೊಂಡಿದ್ದು ಪುಟಾಣಿಗಳು, ಯುವಕರು, ಯುವತಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮನರಂಜಿಸಿದರು. ಇದೇ ಸಂದರ್ಭದಲ್ಲಿ ಸಂಘಟಕರು ಡ್ಯೂಯೆಟ್ ಹಾಡಿಗೆ ನೃತ್ಯವನ್ನು ಸ್ಪರ್ಧೆಯಾಗಿ ಏರ್ಪಡಿಸಿದ್ದರು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಏರ್ಪಡಿಸಿದ ಅಂತರ್-ವಾಳೆ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಪದವು ವಾಳೆ(ಪ್ರಥಮ), ಗುಂಡ್ಯಡ್ಕ ವಾಳೆ(ದ್ವಿತೀಯ), ಶಿಂಗಾಣಿ ವಾಳೆ(ತೃತೀಯ)ಯ ಸದಸ್ಯರಿಗೆ ಈ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು. ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಡೊನ್ ಬೊಸ್ಕೊ ಕ್ಲಬ್ ಅಧ್ಯಕ್ಷ ಫೆಬಿಯನ್ ಗೋವಿಯಸ್, ಕಾರ್ಯದರ್ಶಿ ಜೆರಾಲ್ಡ್ ಡಿ’ಕೋಸ್ಟ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಸಿಲ್ವೆಸ್ತರ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು. ಪ್ರಕಾಶ್ ಸಿಕ್ವೇರಾ ಚಿಕ್ಕಪುತ್ತೂರು ಕಾರ್ಯಕ್ರಮ ನಿರೂಪಿಸಿದರು.
ಸಾಂತಾಕ್ಲಾಸ್ ಆಕರ್ಷಣೆ..
ಕ್ರಿಸ್ಮಸ್ ಹಬ್ಬದ ಪ್ರಮುಖ ಆಕರ್ಷಣೆ ಸಾಂತಾಕ್ಲಾಸ್. ಮಕ್ಕಳ ಪ್ರೀತಿಯ ಅಜ್ಜ, ಡೊಳ್ಳು ಹೊಟ್ಟೆಯ ಸಾಂತಾಕ್ಲಾಸ್ ವಿವಿಧ ಉಡುಗೊರೆಗಳ ಜೋಳಿಗೆಯೊಂದಿಗೆ ವೇದಿಕೆಗೆ ಆಗಮಿಸಿ ಉಡುಗೊರೆಗಳನ್ನು, ಸಿಹಿ ತಿಂಡಿಯನ್ನು ಹಂಚುತ್ತಾ ಜೊತೆಗೆ ಸಂಘಟಕರು ಏರ್ಪಡಿಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿ, ಬರುವ ವರ್ಷನೂ ತಾನು ಮರಳಿ ಬರುತ್ತೇನೆ ಎಂದು ಹೇಳಿ ನಿರ್ಗಮಿಸಿದರು.
ಸನ್ಮಾನ..
ಕೊರೋನಾ ಕಾಲಘಟದಲ್ಲಿ ಎಲ್ಲರೂ ಮನೆಯಲ್ಲಿರುವಾಗ ಹುಶಾರಿಲ್ಲದ ಸಂದರ್ಭದಲ್ಲಿ ರೋಗಿಗಳನ್ನು ಕ್ರಿಸ್ಟೋಫರ್ ಅಸೋಸಿಯೇಶನ್ ನ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ಹಾಗೂ ಮರಣಿಸಿದ ಮೃತದೇಹಗಳನ್ನು ಸಿಮೆತರಿಗೆ ಕೊಂಡೊಯ್ಯಲು ಚಾಲಕನ ರೂಪದಲ್ಲಿ ಸಹಕರಿಸಿದ ಡೊನ್ ಬೊಸ್ಕೊ ಕ್ಲಬ್ ಮಾಜಿ ಅಧ್ಯಕ್ಷ ರೋಶನ್ ಡಾಯಸ್ ರವರನ್ನು ಸನ್ಮಾನಿಸಲಾಯಿತು.