ಪುತ್ತೂರು: ಭಜನೆ ಮತ್ತು ಭಜಕರು ಹಾಗೂ ಹಿಂದೂ ಧರ್ಮದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅವಹೇಳನಕಾರಿ ಸಂದೇಶಗಳನ್ನು ಹಾಕುತ್ತಿರುವ ಆರೋಪದಡಿ ಕೊಲ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಇನ್ನೂ ಅವರನ್ನು ಬಂಧಿಸಿಲ್ಲ ಎಂದು ಆರೋಪಿಸಿ ಮತ್ತು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳದ ವತಿಯಿಂದ ಡಿ.29ರಂದು ಪುತ್ತೂರು ನಗರ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಲಾಯಿತು.
ಬೆಳಿಗ್ಗೆ ಪ್ರತಿಭಟನಾಕಾರರು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ಧಿಕ್ಕಾರ ಕೂಗಿ ಭಜನೆಯ ಮೂಲಕ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ಕೊಲ ಉಪವಲಯ ಅರಣ್ಯಾಧಿಕಾರಿಯಾಗಿರುವ ಸಂಜೀವ ಪೂಜಾರಿ ಸರಕಾರಿ ಉದ್ಯೋಗದಲ್ಲಿದ್ದರೂ ಪ್ರಧಾನಿ, ಮುಖ್ಯಮಂತ್ರಿ, ಸಂಘಟನೆಗಳು ಮತ್ತು ಹಿಂದುತ್ವಕ್ಕೆ ಧಕ್ಕೆ ತರುವಂತಹ
ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸಮಯಗಳಿಂದ ಹಾಕುತ್ತಿದ್ದಾರೆ. ವಿಶೇಷವಾಗಿ ಭಜನೆಯ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಇದರ ವಿರುದ್ಧ ವಾರದ ಹಿಂದೆ ಪುತ್ತೂರಿನಲ್ಲಿ ಅರಣ್ಯ ಕಚೇರಿಯ ಎದುರು ಪ್ರತಿಭಟನೆ ನಡೆಸಿದಾಗ ಆತನನ್ನು ರಜೆಯ ಮೇಲೆ ಕಳುಹಿಸುವ, ಅಮಾನತು ಮಾಡುವ ಭರವಸೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಬೆನ್ನಲ್ಲಿಯೇ ಸಂಜೀವ ಪೂಜಾರಿ ವಿರುದ್ಧ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದರೂ ಅವರನ್ನು ಇನ್ನೂ ಬಂಧಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಆತನನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಗತ್ಯ ಬಿದ್ದರೆ ರಸ್ತೆಯಲ್ಲಿಯೂ ಸಾವಿರಾರು ಮಂದಿಯಿಂದ ಭಜನೆ:
ಬಜರಂಗದಳ ಕರ್ನಾಟಕ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ ಕೊಲ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಅವರ ಹುಚ್ಚುತನಕ್ಕೆ ಬೆಂಬಲ ಕೊಡುವವರಿಗೆ ನೇರವಾದ ಸಂದೇಶ ಹೋಗಬೇಕು. ಈ ನಿಟ್ಟಿನಲ್ಲಿ ಹಿಂದು ಸಮಾಜ ಜಾಗೃತಗೊಂಡಿದೆ. ಇವತ್ತು ಪೊಲೀಸ್ ಠಾಣೆಯ ಮುಂದೆ ಭಜನೆ ನಡೆದಿದೆ. ಮುಂದೆ ಅಗತ್ಯ ಬಿದ್ದರೆ ರಸ್ತೆಯಲ್ಲೂ ಸಾವಿರಾರು ಮಂದಿಯಿಂದ ಭಜನೆ ನಡೆಯಲಿದೆ. ಈ ಹೋರಾಟ ಹಿಂದು ಸಮಾಜಕ್ಕೆ ನ್ಯಾಯ ಸಿಗುವ ತನಕ ಮುಂದುವರಿಯಲಿದೆ ಎಂದು ಹೇಳಿದರು.
ಹಿಂದು ಸಮಾಜದಿಂದ ಒಕ್ಕೊರಳ ಖಂಡನೆ:
ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಮಾತನಾಡಿ, ಓರ್ವ ಸರಕಾರಿ ಅಧಿಕಾರಿಯಾಗಿದ್ದುಕೊಂಡು ಹಿಂದು ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮತ್ತೆ ಬರೆಯುತ್ತಿದ್ದಾರೆಂದಾದರೆ ನಮ್ಮ ದೇಶದ ಕಾನೂನು ಗಟ್ಟಿಯಾಗಿದೆಯೋ ಇಲ್ಲವೋ ಎಂಬ ಸಂಶಯ ಬಂದಿದೆ. ಭಜಕರನ್ನು ಮತ್ತು ಭಜನೆಯನ್ನು ನಿಂದಿಸಿರುವ ಆರೋಪಿ ಸಂಜೀವ ಪೂಜಾರಿ ಅವರನ್ನು ಹುದ್ದೆಯಿಂದ ಅಮಾನತು ಮಾಡಬೇಕು ಎಂದರು. ಅವರ ಈ ಕೃತ್ಯವನ್ನು ಹಿಂದು ಸಮಾಜ ಒಕ್ಕೊರಳಿನಿಂದ ಖಂಡಿಸುತ್ತದೆ ಎಂದು ಅವರು ಹೇಳಿದರು.
ನಮ್ಮ ಬಗ್ಗೆ ಪ್ರಮಾಣಪತ್ರ ನೀಡಲು ಅವರ್‍ಯಾರು?:
ವಿಶ್ವಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನರವರು ಮನವಿ ನೀಡುವ ಸಂದರ್ಭ ಮಾತನಾಡಿ ಸಂಜೀವ ಪೂಜಾರಿ ಅವರು ನಮ್ಮನ್ನು ನಕಲಿ ಭಜಕರು ಎಂದು ಉಲ್ಲೇಖಿಸಿದ್ದಾರೆ. ನಮ್ಮನ್ನು ಅಸಲಿಯೋ ನಕಲಿಯೋ ಎಂದು ಪ್ರಮಾಣ ಪತ್ರ ನೀಡಲು ಅವರ್‍ಯಾರು ಎಂದು ಪ್ರಶ್ನಿಸಿದರು. ಅವರಿಗೆ ಏನು ಸರಕಾರಿ ಕರ್ತವ್ಯ ಇದೆಯೋ ಅದನ್ನು ಮಾಡುವುದು ಬಿಟ್ಟು ಸಮಾಜನ್ನು ನಿಂದಿಸಿದರೆ ನಾವು ಸಹಿಸುವುದಿಲ್ಲ ಎಂದು ಅವರು ಹೇಳಿದರು. ವಿಶ್ವಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಬಿ.ಎಸ್, ಉಪಾಧ್ಯಕ್ಷ ಸೇಸಪ್ಪ ಬೆಳ್ಳಿಪ್ಪಾಡಿ, ಜಿಲ್ಲಾ ಸಾಪ್ತಾಹಿಕ್ ಪ್ರಮುಖ್ ಜೀತೇಶ್ ಬಲ್ನಾಡು, ಬಜರಂಗದಳ ಸಂಚಾಲಕ ಹರೀಶ್ ದೋಳ್ಪಾಡಿ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ್ ಭಟ್, ವಿಶ್ವಹಿಂದು ಪರಿಷತ್ ಗ್ರಾಮಾಂತರ ಕಾರ್ಯದರ್ಶಿ ರವಿಕುಮಾರ್ ಕೈಂದಡ್ಕ, ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ಜಯಂತ್ ಕುಂಜಾರು, ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ, ಗ್ರಾಮಾಂತರ ಪ್ರಖಂಡದ ಸಂಚಾಲಕ ವಿಶಾಖ್ ರೈ ಸಸಿಹಿತ್ಲು, ಹಿರಿಯ ಮುಖಂಡ ಲಕ್ಷ್ಮೀಪ್ರಸಾದ್ ಬೆಟ್ಟ, ಜನಾರ್ದನ ಬೆಟ್ಟ ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯ ಕೊನೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆ ನಿರೀಕ್ಷಕ ಸುನಿಲ್ ಕುಮಾರ್ ಅವರಿಗೆ ಸಂಜೀವ ಪೂಜಾರಿ ಅವರನ್ನು ಬಂಧಿಸುವಂತೆ ಮನವಿ ನೀಡಲಾಯಿತು.
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಬಿ.ಎಸ್, ವಿಹಿಂಪ ಉಪಾಧ್ಯಕ್ಷ ಸೇಸಪ್ಪ ಬೆಳ್ಳಿಪ್ಪಾಡಿ, ಜಿಲ್ಲಾ ಸಾಪ್ತಾಹಿಕ್ ಪ್ರಮುಖ್ ಜೀತೇಶ್ ಬಲ್ನಾಡು, ಬಜರಂಗದಳ ಸಂಚಾಲಕ ಹರೀಶ್ ದೋಳ್ಪಾಡಿ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ್ ಭಟ್, ವಿಶ್ವಹಿಂದು ಪರಿಷತ್ ಗ್ರಾಮಾಂತರ ಕಾರ್ಯದರ್ಶಿ ರವಿಕುಮಾರ್ ಕೈಂದಡ್ಕ, ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ಜಯಂತ್ ಕುಂಜಾರು, ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ, ಗ್ರಾಮಾಂತರ ಪ್ರಖಂಡದ ಸಂಚಾಲಕ ವಿಶಾಖ್ ರೈ ಸಸಿಹಿತ್ಲು, ಹಿರಿಯ ಮುಖಂಡ ಲಕ್ಷ್ಮಿಪ್ರಸಾದ್ ಬೆಟ್ಟ, ಡಾ ಸುರೇಶ್ ಪುತ್ತೂರಾಯ ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.