ಪುತ್ತೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125 ನೇ ಸಿನಿಮಾ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿರುವ ವೇದ ಸಿನಿಮಾದಲ್ಲಿ ಪುತ್ತೂರಿನ ಪ್ರತಿಭೆ ಪ್ರಸನ್ನ ಬಾಗಿನ ‘ನಂಜಪ್ಪ’ನ ಪಾತ್ರದಲ್ಲಿ ಮಿಂಚಿ ಹೈಲೈಟ್ ಆಗಿದ್ದಾರೆ.
ಪ್ರಸನ್ನ ಬಾಗಿನರವರು ನಟ ಶಿವರಾಜ್ ಕುಮಾರ್ ಅವರೊಂದಿಗೆ ಹಲವು ಚಿತ್ರಗಳಲ್ಲಿ ಮಿಂಚಿದ್ದಾರೆ. ಇವರ ಕಾಂಬಿನೇಷನ್ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದೆ. ಕೆಜಿಎಫ್, ಮಫ್ತಿ, ಕಿರಿಕ್ ಪಾರ್ಟಿ ಸಹಿತ ಹಲವು ಸಿನಿಮಾಗಳ ಸಣ್ಣ ಪುಟ್ಟ ಪಾತ್ರಗಳೂ ಕೂಡ ಇವರ ನಟನಾ ಸಾಮರ್ಥ್ಯವನ್ನು ಎತ್ತಿಹಿಡಿದಿದೆ.
ಕಿರುತೆರೆಯಲ್ಲೂ ತನಗೆ ಸಿಕ್ಕ ಅವಕಾಶಕ್ಕೆ ಸಮನಾದ ಪ್ರತಿಭೆ ಮೆರೆದಿರುವ ಪ್ರಸನ್ನ ಬಾಗಿನ, ಉದಯ ಟಿವಿಯ ಜೈ ಹನುಮಾನ್ ಧಾರವಾಹಿಯಲ್ಲಿ ನಿರ್ವಹಿಸಿದ ಬಾಲಹನುಮನ ತಂದೆಯ ಪಾತ್ರ ಪ್ರೇಕ್ಷಕರ ಮನಸ್ಸುಗೆದ್ದಿದೆ. ಝೀ ಕನ್ನಡದ ಉಘೇ ಉಘೇ ಮಾದೇಶ್ವರಯಲ್ಲಿಯೂ ಗಮನೀಯ ಪಾತ್ರ ನಿರ್ವಹಿಸಿದ ಹಿರಿಮೆ ಇವರದಾಗಿದೆ.
ಕಳೆದ ವರ್ಷ ಬಿಡುಗಡೆಯಾದ ಭಜರಂಗಿ 2 ಸಿನಿಮಾದಲ್ಲಿ ಪ್ರಮುಖ ಖಳನಾಯಕ ಜಾಗ್ರವನ ಪಾತ್ರ ಇವರಿಗೆ ವಿಶೇಷ ಪ್ರಸಿದ್ಧಿ ತಂದುಕೊಟ್ಟಿತ್ತು. ಆ ಬಳಿಕ ಅಪ್ಪು ನಟನೆಯ ಜೇಮ್ಸ್, ಶಿವಣ್ಣ ನಟನೆಯ ಬೈರಾಗಿಯಲ್ಲೂ ನಟಿಸಿದ್ದಾರೆ. ಇದೀಗ ಶಿವಣ್ಣನ 125 ನೇ ಸಿನಿಮಾ ವೇದದಲ್ಲೂ ಪ್ರಮುಖ ಪಾತ್ರ `ನಂಜಪ್ಪ’ನ ಪಾತ್ರದಲ್ಲಿ ಮಿಂಚಿದ್ದಾರೆ.
ಪ್ರಸನ್ನ ಬಾಗಿನ ಅವರು ಪುತ್ತೂರು ಬಪ್ಪಳಿಗೆ ನಿವಾಸಿ ನಾರಾಯಣ ಗೌಡ ಹಾಗೂ ಭಾಗೀರಥಿ ದಂಪತಿಯ ಪುತ್ರ. ಪುತ್ತೂರು ವಿವೇಕಾನಂದ ಆಂಗ್ಲಮಾಧ್ಯಮ ಮತ್ತು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ.
ಶಾಲಾ ಹಂತದಲ್ಲಿಯೇ ನಟನೆಯ ಕುರಿತಾಗಿ ಒಲವು ಇರಿಸಿಕೊಂಡವರು. ಕಾಲೇಜು ವ್ಯಾಸಂಗದ ಬಳಿಕ ಪುತ್ತೂರಿನ ಆರ್ವಿ ಇಂಟರ್‌ಗ್ರಾಫಿಕ್ಸ್‌ನಲ್ಲಿ ಕೆಲ ಸಮಯ ಉದ್ಯೋಗದಲ್ಲಿದ್ದ ಇವರು, ಮೈಸೂರಿನ ವಿಪ್ರೋ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ್ದರು. ಬಳಿಕ ಸಿನಿಮಾ ಲೋಕಕ್ಕೆ ಕಾಲಿಟ್ಟ ಇವರು, ಕಳೆದ ಏಳು ವರ್ಷಗಳಿಂದ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.