ನೆಲ್ಯಾಡಿ ಹಾ.ಉ.ಸಹಕಾರಿ ಸಂಘದ ವಿಸ್ತೃತ ಕಟ್ಟಡದ ಸಭಾಂಗಣ ಉದ್ಘಾಟನೆ, ಬೆಳ್ಳಿಹಬ್ಬ

0

ಕೃಷಿ, ಹೈನುಗಾರಿಕೆಯಿಂದ ದೇಶಕ್ಕೆ ಉತ್ತಮ ಭವಿಷ್ಯ; ಕೆ.ಪಿ.ಸುಚರಿತ ಶೆಟ್ಟಿ

ನೆಲ್ಯಾಡಿ: ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಿಸ್ತೃತ ಕಟ್ಟಡದ ಸಭಾಂಗಣ ಉದ್ಘಾಟನೆ ಮತ್ತು ಬೆಳ್ಳಿಹಬ್ಬ ಡಿ.29ರಂದು ಬೆಳಿಗ್ಗೆ ನಡೆಯಿತು.

ದ.ಕ.ಸಹಕಾರಿ ಹಾಲು ಒಕ್ಕೂಟ ಮಂಗಳೂರು ಇದರ ಉಪಾಧ್ಯಕ್ಷರಾದ ಎಸ್.ಬಿ.ಜಯರಾಮ ರೈ ಬಳಜ್ಜ ಅವರು ವಿಸ್ತೃತ ಕಟ್ಟಡದ ಸಭಾಂಗಣದ ಉದ್ಘಾಟನೆ ನೆರವೇರಿಸಿದರು. ದ.ಕ.ಸಹಕಾರಿ ಹಾಲು ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಅವರು ದೀಪ ಪ್ರಜ್ವಲನೆ ಮಾಡಿದರು. ಬಳಿಕ ಮಾತನಾಡಿದ ಕೆ.ಪಿ.ಸುಚರಿತ ಶೆಟ್ಟಿಯವರು, ಸಾಂಪ್ರದಾಯಿಕ ಪರಂಪರೆಯ ಕಸುಬುಗಳಾದ ಕೃಷಿ ಹಾಗೂ ಹೈನುಗಾರಿಕೆಯಿಂದ ದೇಶಕ್ಕೆ ಉತ್ತಮ ಭವಿಷ್ಯವಿದೆ. ಆದ್ದರಿಂದ ಯುವಶಕ್ತಿ ಕೃಷಿ ಹಾಗೂ ಹೈನುಗಾರಿಕೆ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಕೊಳ್ಳಬೇಕೆಂದು ಹೇಳಿದರು. ಹೈನುಗಾರಿಕೆಗೆ ಕರಾವಳಿ ಭಾಗ ಸೂಕ್ತವಲ್ಲ ಎಂಬ ವರದಿ ಇದ್ದರೂ ಅವಿಭಜಿತ ಜಿಲ್ಲೆಯ ರೈತರು ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸುವುದರೊಂದಿಗೆ ದ.ಕ.ಸಹಕಾರಿ ಹಾಲು ಒಕ್ಕೂಟವೂ ಗುಣಮಟ್ಟದಲ್ಲಿ ಅತ್ಯುತ್ತಮ ಒಕ್ಕೂಟ ಎಂಬ ಹೆಸರು ಪಡೆದುಕೊಂಡಿದೆ. ಜಾನುವಾರುಗಳಿಗೆ ಚರ್ಮಗಂಟು ರೋಗ ಕಂಡುಬಂದಿರುವುದರಿಂದ ಹಾಲಿನ ಉತ್ಪಾದನೆಯಲ್ಲಿಯೂ ಕೊರತೆ ಉಂಟಾಗಿದೆ. ಹಾಲು ಉತ್ಪಾದಕರಿಗೆ ಹೆಚ್ಚು ದರ ನೀಡುವ ಸಂಬಂಧ ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದ ಸುಚರಿತ ಶೆಟ್ಟಿಯವರು, ದ.ಕ. ಸಹಕಾರಿ ಹಾಲು ಒಕ್ಕೂಟ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಯಾವ ರೀತಿ ಪ್ರಗತಿ ಕಾಣುತ್ತಿದೆ ಎಂಬುದಕ್ಕೆ ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಮಾದರಿಯಾಗಿದೆ. ಸಂಘ ಇನ್ನಷ್ಟೂ ಅಭಿವೃದ್ಧಿಯಾಗಲಿ. ಮುಂದೆ 10 ಸಾವಿರ ಲೀ.ಸಾಮರ್ಥ್ಯದ ಬಿಎಂಸಿ ಅಳವಡಿಸಿಕೊಳ್ಳಲಿ ಎಂದು ಹೇಳಿದರು.

ದ.ಕ.ಸಹಕಾರಿ ಹಾಲು ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ ಮಾತನಾಡಿ, ಕೃಷಿ ಹಾಗೂ ಹೈನುಗಾರಿಕೆ ಕ್ಷೇತ್ರ ಈಗ ಸಂಕಷ್ಟ ಎದುರಿಸುತ್ತಿದೆ. ಜಾನುವಾರುಗಳಿಗೆ ಬಂದಿರುವ ಚರ್ಮಗಂಟು ರೋಗದಿಂದ ತೊಂದರೆಗೊಳಗಾಗಿರುವ ಹೈನುಗಾರರಿಗೆ ಒಕ್ಕೂಟದಿಂದ ನೆರವು ನೀಡುವ ನಿಟ್ಟಿನಲ್ಲಿ ಚಿಂತನೆ ಮಾಡುತ್ತಿದ್ದೇವೆ. ಹಾಲು ಉತ್ಪಾದನೆಯ ವೆಚ್ಚವೂ ಅಽಕಗೊಂಡಿದ್ದು ಹೈನುಗಾರರಿಗೆ ಹೆಚ್ಚಿನ ಪ್ರೋತ್ಸಾಹ ಧನ ನೀಡುವ ನಿಟ್ಟಿನಲ್ಲಿ ನಿಯೋಗದೊಂದಿಗೆ ತೆರಳಿ ಸರಕಾರದ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದರು.

ಅತಿಥಿಯಾಗಿದ್ದ ದ.ಕ.ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ ಮಾತನಾಡಿ, ಮೇವಿನ ಕೊರತೆ, ಜಾನುವಾರುಗಳಿಗೆ ಚರ್ಮಗಂಟು ರೋಗದಿಂದಾಗಿ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಇದನ್ನು ಸರಿದೂಗಿಸಲು ಒಕ್ಕೂಟದಿಂದ ಪ್ರಯತ್ನ ನಡೆಯುತ್ತಿದೆ ಎಂದರು.

ಇನ್ನೋರ್ವ ಅತಿಥಿ ದ.ಕ.ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್‌ರವರು ಮಾತನಾಡಿ, ಸಹಕಾರದ ವ್ಯವಸ್ಥೆಯೂ ಸಹಕಾರಿಗಳಿಗೆ ಗೌರವಯುತ ಬದುಕು ಕೊಟ್ಟಿದೆ. ಸಹಕಾರಿಗಳಿಗೆ ತೊಂದರೆಯಾದಾಗ ತಮ್ಮ ಬೇಡಿಕೆಗಾಗಿ ಕಾನೂನಿನ ಚೌಕಟ್ಟಿನೊಳಗೆ ಪ್ರಯತ್ನಿಸಬೇಕು. ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಇರಲಿ ಎಂದರು.

ಇನ್ನೋರ್ವ ನಿರ್ದೇಶಕಿ ಸವಿತಾ ಎನ್.ಶೆಟ್ಟಿ ಮಾತನಾಡಿ, ಸಂಘದ ಸದಸ್ಯರೆಲ್ಲರೂ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು. ಸದಸ್ಯರ ಆರ್ಥಿಕ ಸಬಲತೆಗೆ ಸಂಘ ಕಾರಣ ಆಗಲಿ ಎಂದರು. ದ.ಕ.ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಅಶೋಕ್‌ರವರು ಮಾತನಾಡಿ, ಪುತ್ತೂರು ತಾಲೂಕಿನಲ್ಲಿ 91 ಹಾಲು ಉತ್ಪಾದಕರ ಸಹಕಾರಿ ಸಂಘಗಳಿದ್ದು ಈ ಪೈಕಿ 16 ಸಂಘಗಳಲ್ಲಿ ಬಿಎಂಸಿ ಇದೆ. ಇದರಲ್ಲಿ ಪಾಣಾಜೆ ಹಾಗೂ ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಪೂರ್ಣ ಪ್ರಮಾಣದ ಸೌಲಭ್ಯಗಳೊಂದಿಗೆ ಕಂಗೊಳಿಸುತ್ತಿದೆ ಎಂದ ಅವರು, ಹೈನುಗಾರರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಒಕ್ಕೂಟವೂ ಸಿದ್ಧವಿದೆ ಎಂದು ಹೇಳಿದರು.

ದ.ಕ.ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ, ಉಪವ್ಯವಸ್ಥಾಪಕ ಡಾ| ಸತೀಶ್ ರಾವ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಘದ ಸ್ಥಾಪಕಾಧ್ಯಕ್ಷ ಎನ್.ವಿ.ವ್ಯಾಸ ನೆಕ್ಕರ್ಲ ಅವರು, ನೆಲ್ಯಾಡಿ ಸಂತೆಮಾರುಕಟ್ಟೆ ಬಳಿ ಪಂಚಾಯತ್ ಕಟ್ಟಡದಲ್ಲಿ ಸಂಘ ಆರಂಭಗೊಂಡಿತು. ಆರಂಭದಲ್ಲಿ 7ಲೀ.ಹಾಲು ಸಂಗ್ರಹ ಆಗುತ್ತಿತ್ತು. ನೆಲ್ಯಾಡಿ, ಹಿರೇಬಂಡಾಡಿ ಹಾಗೂ ಎಂಜಿರದಲ್ಲಿ ಹಾಲು ಉ.ಸ.ಸಂಘ ಒಟ್ಟಿಗೆ ಆರಂಭಗೊಂಡಿತು. ರೈತರಿಗೆ ಬ್ಯಾಂಕ್‌ನಿಂದ ಸಾಲ ಕೊಡಿಸಿ ಬೆಂಗಳೂರಿನಿಂದ ಲಾರಿಯಲ್ಲಿ ಹಸುಗಳನ್ನು ತಂದು ಸಾಕಾಣಿಕೆ ಮಾಡಲಾಗಿತ್ತು. ಸಾಲ ಮರುಪಾವತಿಯ ಜವಾಬ್ದಾರಿಯನ್ನೂ ಸಂಘವೇ ಪಡೆದುಕೊಂಡಿತ್ತು. ಬಳಿಕ ಸಂಘಕ್ಕೆ ನಿವೇಶನ ದೊರೆತು ಸ್ವಂತ ಕಟ್ಟಡವೂ ಆಯಿತು. ಸಂಘದ ಕಟ್ಟಡ ಆದ ಬಳಿಕ ಹೈನುಗಾರಿಕೆಯಿಂದಲೇ ಹಲವು ಮಂದಿ ಅಭಿವೃದ್ಧಿಯಾಗಿದ್ದಾರೆ. ಇದರಿಂದ ಇಲ್ಲಿನ ಜನರಿಗೆ ಬಹಳಷ್ಟು ಪ್ರಯೋಜನವಾಗಿದೆ ಎಂದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಮಹಾಬಲ ಶೆಟ್ಟಿಯವರು, 30 ವರ್ಷದ ಹಿಂದೆ ನೆಲ್ಯಾಡಿ ಭಾಗದಲ್ಲಿ ಹಾಲು ಮಾರಾಟಕ್ಕೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಸಿಕ್ಕಿದ ಬೆಲೆಗೆ ಹಾಲನ್ನು ಹೋಟೇಲ್‌ಗಳಿಗೆ ಮಾರಾಟ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಎನ್.ವಿ.ವ್ಯಾಸರವರು ನೆಲ್ಯಾಡಿ, ಕೌಕ್ರಾಡಿ ಹಾಗೂ ಕೊಣಾಲು ಗ್ರಾಮದ ವ್ಯಾಪ್ತಿಗೆ ಒಳಪಟ್ಟಂತೆ ನೆಲ್ಯಾಡಿ ಸಂತೆಕಟ್ಟೆ ಬಳಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಆರಂಭಿಸಿದ್ದರು. ಆ ಸಂದರ್ಭದಲ್ಲಿ 7 ಲೀ. ಹಾಲು ಸಂಗ್ರಹವೂ ಆಗುತಿತ್ತು. 1996ರಲ್ಲಿ ಸ್ವಂತ ನಿವೇಶನದಲ್ಲಿ 1.75ಲಕ್ಷ ರೂ., ಅನುದಾನದಲ್ಲಿ ಸಣ್ಣ ಕಟ್ಟಡ ನಿರ್ಮಾಣ ಮಾಡಲಾಯಿತು. ಸುಮಾರು 14 ವರ್ಷ ಎನ್.ವಿ.ವ್ಯಾಸ ಅವರು ಸಂಘವನ್ನು ಮುನ್ನಡೆಸಿದ್ದಾರೆ. ಅವರು ನೆಟ್ಟ ಸಸಿಯನ್ನು ನಾವು ಪೋಷಣೆ ಮಾಡುತ್ತಿದ್ದೇವೆ. ಈಗ ಸಂಘದಲ್ಲಿ ಸುಮಾರು 5 ಸಾವಿರ ಲೀ.ಸಾಮರ್ಥ್ಯದ ಬಿಎಂಸಿ ಇದ್ದು ಪ್ರತಿದಿನ 1500 ಲೀ.ಹಾಲು ಸಂಗ್ರಹ ಆಗುತ್ತಿದೆ. ಸಂಘದ ಬೆಳವಣಿಗೆಗೆ ಹೈನುಗಾರರೇ ಕಾರಣ. ಈಗ ಸಭಾಂಗಣವೂ ಉದ್ಘಾಟನೆಗೊಂಡಿದ್ದು ಮುಂದಕ್ಕೆ ಸಂಘದ ಸದಸ್ಯರಿಗೆ ನಿಶ್ಚಿತಾರ್ಥ, ಹುಟ್ಟುಹಬ್ಬ ಆಚರಣೆಯಂತಹ ಕಾರ್ಯಕ್ರಮಗಳಿಗೆ ನಿರ್ವಹಣಾ ವೆಚ್ಚ ಪಡೆದುಕೊಂಡು ನೀಡಲಿದ್ದೇವೆ ಎಂದರು.

ಸಂಘದ ಉಪಾಧ್ಯಕ್ಷ ವೆಂಕಪ್ಪ ನಾಯ್ಕ, ನಿರ್ದೇಶಕರಾದ ಎನ್.ವಿಠಲ್ ಶೆಟ್ಟಿ, ಕಾಂತಪ್ಪ ಗೌಡ, ಜಯರಾಮ ಬಿ., ಹೊನ್ನಪ್ಪ ಗೌಡ, ಹೆಚ್.ಬಿ.ಜೋಗಿತ್ತಾಯ, ಚಂದ್ರಶೇಖರ ಹೆಚ್., ಸೇಸಮ್ಮ, ವಾರಿಜ, ಗಿರಿಜ, ಹೇಮಾವತಿ, ಪ್ರೇಮಾವತಿಯವರು ಅತಿಥಿಗಳನ್ನು ಗೌರವಿಸಿದರು. ಕಾರ್ಯದರ್ಶಿ ಅನುರಾಧಾ ಹೆಚ್. ವರದಿ ವಾಚಿಸಿ, ಕೊನೆಯಲ್ಲಿ ವಂದಿಸಿದರು. ಕೌಕ್ರಾಡಿ-ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಸುಧೀರ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ರಕ್ಷಿತಾ ಪ್ರಾರ್ಥಿಸಿದರು. ಸಿಬ್ಬಂದಿಗಳಾದ ಹಾಲು ಪರೀಕ್ಷಕಿ ನಳಿನಾಕ್ಷಿ, ಸಹಾಯಕಿ ಗಿರಿಜ, ಬ್ರಾಂಚ್ ಸಹಾಯಕಿಯರಾದ ವಿಜಯ, ಜಯಂತಿ, ಬಿಎಂಸಿ ನಿರ್ವಾಹಕ ಪರಮೇಶ್ವರ, ಕೃ.ಗ.ಕಾರ್ಯಕರ್ತ ಜಯರಾಮ ಬಿ., ಸಹಕರಿಸಿದರು.

ಕಡಬ ಶಿಬಿರ ಕಚೇರಿಯ ಪಶುವೈದ್ಯಾಧಿಕಾರಿ ಡಾ.ಸಚಿನ್, ವಿಸ್ತರಣಾಧಿಕಾರಿಗಳಾದ ಯಮುನಾ, ಆದಿತ್ಯ, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ನೆಲ್ಯಾಡಿ ಸೀನಿಯರ್ ಛೇಂಬರ್‌ನ ಅಧ್ಯಕ್ಷ ವೆಂಕಟ್ರಮಣ ಆರ್., ತಾ.ಪಂ.ಮಾಜಿ ಸದಸ್ಯೆ ಬೇಬಿ ಸದಾನಂದ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸನ್ಮಾನ/ ಗೌರವಾರ್ಪಣೆ

ಸಂಘದ ಸ್ಥಾಪಕಾಧ್ಯಕ್ಷರಾಗಿದ್ದು 14 ವರ್ಷ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ ಎನ್.ವಿ.ವ್ಯಾಸ ನೆಕ್ಕರ್ಲ ಅವರಿಗೆ ಶಾಲು, ಹಾರ, ಫಲತಾಂಬೂಲು, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ವಿಸ್ತೃತ ಕಟ್ಟಡದ ಸಭಾಂಗಣ, ಇಂಟರ್‌ಲಾಕ್ ಕಾಮಗಾರಿ ನಿರ್ವಹಿಸಿದ ಇಂಜಿನಿಯರ್ ಚಾಕೋ ಅವರನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ನಿರ್ದೇಶಕರಾದ ಪಿ.ಸಿ.ಅಬ್ರಹಾಂ, ಕೆ.ಜೆ.ಜೋಸ್, ಕೊರಗಪ್ಪ ಗೌಡ, ನಾರಾಯಣ ನಾಯ್ಕ, ಸದಾನಂದ ಪಿ., ವೆಂಕಪ್ಪ ನಾಯ್ಕ, ವಲ್ಸಮ್ಮ ಮ್ಯಾಥ್ಯು, ರವಿಚಂದ್ರ, ಶೇಖರ ಗೌಡ, ಎನ್.ಜೋಯಿ, ಮಾರ್ಸೆಲ್ ಡಿ.ಸೋಜ, ಹರಿಪ್ರಸಾದ್, ಗುರುಪ್ರಸಾದ್, ಸೇಸಮ್ಮ, ಗಿರಿಜ, ವಾರಿಜ, ಜಯರಾಮ ಬಿ., ಹೊನ್ನಪ್ಪ ಗೌಡ, ಕಾಂತಪ್ಪ ಗೌಡ, ಎನ್.ವಿಠಲ ಶೆಟ್ಟಿ, ಪ್ರೇಮಾವತಿ, ಚಂದ್ರಶೇಖರ ಹೆಚ್. ಹೇಮಾವತಿ, ಹೆಚ್.ಬಿ ಜೋಗಿತ್ತಾಯರವರಿಗೆ ಸ್ಮರಣಿಕೆ, ಶಾಲು ಹಾಕಿ ಗೌರವಾರ್ಪಣೆ ಮಾಡಲಾಯಿತು.

LEAVE A REPLY

Please enter your comment!
Please enter your name here