ಪುತ್ತೂರು: ವೀರಮಂಗಲ ಶಾಲೆಯ ವಾರ್ಷಿಕೋತ್ಸವ ದ. 31 ರಂದು ನಡೆಯಲಿದೆ. 60 ವರ್ಷಗಳನ್ನು ಪೂರೈಸಿದ ಗ್ರಾಮೀಣ ಪ್ರದೇಶದ ಕುಮಾರನದಿಯ ತಟದಲ್ಲಿರುವ ಈ ಶಾಲೆಯಲ್ಲಿ 155 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮುಖ್ಯ ಗುರುಗಳು ಸೇರಿದಂತೆ ಐದು ಮಂದಿ ಶಿಕ್ಷಕರು ಹಾಗೂ ಓರ್ವ ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯು 60ನೇ ವರ್ಷಾಚರಣೆ ಆಚರಿಸಿ ವರ್ಷಾಚರಣೆಯ ಸಮಿತಿಯು ಶಾಲೆಗೆ ಶಾಶ್ವತ ಕೊಡುಗೆ ನೀಡಿದೆ. ಶಾಸಕ ಸಂಜೀವ ಮಠಂದೂರುರವರು 15 ಲಕ್ಷ ರೂ, ವೆಚ್ಚದಲ್ಲಿ ನಿರ್ಮಾಣವಾದ ಸುಂದರವಾದ ಸುಜ್ಞಾನ ಸಭಾಂಗಣಕ್ಕೆ 5 ಲಕ್ಷ, ನೂತನ ಕೊಠಡಿಗೆ 5 ಲಕ್ಷ ಧನಸಹಾಯವನ್ನು ನೀಡಿದ್ದಾರೆ. 2022-23 ನೇ ಸಾಲಿನಲ್ಲಿ 3 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಹಾಗೂ ಕುಡಿಯುವ ನೀರಿನ ಘಟಕ ಒದಗಿಸಿ ಕೊಟ್ಟಿದ್ದಾರೆ.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ವಾರ್ಷಿಕೋತ್ಸವ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ಪೋಷಕರು ಹಾಗೂ ಊರವರ ನೆರವಿನಿಂದ ಈ ವರ್ಷದ ವಾರ್ಷಿಕೋತ್ಸವ ಸಂಭ್ರಮದ ಜೊತೆಯಲ್ಲಿ ಅಭಿವೃದ್ಧಿಯ ಕೆಲಸಗಳಿಗೆ ಶಾಲಾ ಆಡಳಿತ ವ್ಯವಸ್ಥೆಯು ಕೈ ಜೋಡಿಸಿದೆ. ನಿವೃತ್ತ ರೈಲ್ವೆ ಇಂಜಿನಿಯರ್ ಗೋಪಕುಮಾರ್ ಆನಾಜೆಯವರು 800 ಚದರ ಅಡಿ ಸ್ಮಾರ್ಟ್ ತರಗತಿ ಕೋಣೆಗೆ ಟೈಲ್ಸ್ ಖರೀದಿಸಲು ಆರ್ಥಿಕ ನೆರವು ನೀಡಿದ್ದಾರೆ. ವೀರಂಮಗಲ ಬದ್ರಿಯಾ ಜುಮ್ಮಾ ಮಸೀದಿಯ ವತಿಯಿಂದ 450 ಚದರ ಅಡಿ ಇರುವ ನಲಿ ಕಲಿ ತರಗತಿಗೆ ಹಾಗೂ ವಾರ್ಷಿಕೋತ್ಸವ ಸಮಿತಿಯು 450 ಚದರ ಅಡಿ ಇರುವ ಇನ್ನೊಂದು ನಲಿಕಲಿ ತರಗತಿ ಕೋಣೆಗೆ ಟೈಲ್ಸ್ ಅಳವಡಿಸಿದೆ. ಹೈಟೆಕ್ ಶೌಚಾಲಯಕ್ಕೆ ರೋಟರಿ ಕ್ಲಬ್ ಪುತ್ತೂರು ಶೌಚಾಲಯದ ಸಾಮಗ್ರಿಗಳನ್ನು ಹಾಗೂ ಸುಮಾರು 10,000 ವೆಚ್ಚದ ಸಿಮೆಂಟ್ ರಿಂಗ್ ಸಾಮಗ್ರಿಗಳನ್ನು, ಗಣೇಶ್ ಸಾಲ್ಯಾನ್ ಇವರು 1000 ಲೀಟರ್ ನೀರಿನ ಟ್ಯಾಂಕ್ ನ್ನು, ಸುಬ್ರಹ್ಮಣ್ಯ ಕರಂಬಾರು ಷಣ್ಮುಖ ಯುವಕ ಮಂಡಲ ಸರ್ವೆ ಹಾಗೂ ಬಾಲಚಂದ್ರ ಬೆಂಗಳೂರು 6000 ವೆಚ್ಚ ಭರಿಸಿ ನೀಡಿದ್ದಾರೆ. ಪೈಪ್ ಪರಿಕರಗಳನ್ನು ಉದಯರವರು ನೀಡಿದ್ದಾರೆ. ಪೀಠೋಪಕರಣವನ್ನು ಜತ್ತಪ್ಪಗೌಡ ಬೆಂಗಳೂರುರವರು ನೀಡಿದ್ದಾರೆ. ಹಿರಿಯ ವಿದ್ಯಾರ್ಥಿಗಳು 25000 ವೆಚ್ಚದ ಬಯಲು ರಂಗಮಂದಿರ ನಿರ್ಮಿಸಿಕೊಟ್ಟಿದ್ದಾರೆ.
ವಾರ್ಷಿಕೋತ್ಸವ ಸಂಭ್ರಮದಂದು ವಿವಿಧ ಕಾಮಗಾರಿಗಳನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ್, ವೀರಮಂಗಲ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಿವರಾಮ ಭಟ್ ಬಾವ, ವೀರಮಂಗಲ ಜುಮ್ಮಾ ಮಸೀದಿಯ ಅಧ್ಯಕ್ಷ ರಝಾಕ್ ವಿ ಎಸ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿ ಯಜ್ಣ, ದಾನಿಗಳಿಗೆ ಹಾಗೂ ವಿಶೇಷವಾಗಿ ಶಾಲೆಗಾಗಿ ತೊಡಗಿಸಿಕೊಂಡ ಹಿರಿಯ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಯಲಿದೆ. ಮಕ್ಕಳಿಂದ ವೈವಿದ್ಯಮಯ ನೃತ್ಯಗಳು, ಭಾರತೀಯ ಸಂಸ್ಕೃತಿ ಬಿಂಬಿಸುವ ಏಕ್ ಭಾರತ್ ಶ್ರೇಷ್ಠ ಭಾರತ್ ಸಂಸ್ಕೃತಿಗಳ ಅನಾವರಣ ಗೊಳ್ಳಲಿದೆ ಎಂದು ಶಾಲಾ ಮುಖ್ಯಗುರು ತಾರಾನಾಥ ಸವಣೂರು, ಎಸ್.ಡಿಎಂಸಿ ಅಧ್ಯಕ್ಷೆ ಅನುಪಮ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಾಬಲ ಶೆಟ್ಟಿ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಆನಂದ ಗೌಡ ಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಧ್ವಜಾರೋಹಣವನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ ಕುಲಾಲ್ ಮಾಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಎಸ್.ಡಿಎಂಸಿ ಅಧ್ಯಕ್ಷೆ ಅನುಪಮ ವಹಿಸಲಿದ್ದಾರೆ. ಗ್ರಾ.ಪಂ ಸದಸ್ಯ ಬಾಬು ಶೆಟ್ಟಿ ಬಹುಮಾನ ವಿತರಣೆ ಮಾಡಲಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರಾದ ಪದ್ಮಾವತಿ, ವಸಂತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ಸಮನ್ವಯಾಧಿಕಾರಿ ನವೀನ್ ವೇಗಸ್, ಸಿ ಆರ್ ಪಿ ಪರಮೇಶ್ವರಿ ಉಪಸ್ಥಿತರಿರುತ್ತಾರೆ ಎಂದು ಶಾಲಾ ಪ್ರಕಟನೆ ತಿಳಿಸಿದೆ.