ಕುಂಬ್ರ ವರ್ತಕರ ಸಂಘದ ಕಛೇರಿ ಉದ್ಘಾಟನೆ, ಜ.1 ಕುಂಬ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಪುತ್ತೂರು: ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಕುಂಬ್ರ ವರ್ತಕರ ಸಂಘದ ನೂತನ ಕಛೇರಿಯು ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯಲ್ಲಿದ್ದು ಇದರ ಉದ್ಘಾಟನಾ ಕಾರ್ಯಕ್ರಮ ದ.29 ರಂದು ನಡೆಯಿತು.

ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರು ರಿಬ್ಬನ್ ತುಂಡರಿಸುವ ಮೂಲಕ ಕಛೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯರವರ ಅಧ್ಯಕ್ಷತೆಯಲ್ಲಿ ಸಂಘದ ಮಾಸಿಕ ಸಭೆಯು ನಡೆಯಿತು. ಸಂಘದ ವತಿಯಿಂದ ಜ.1ರಂದು ಕುಂಬ್ರ ಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು. ಸ್ವಚ್ಛತಾ ಕಾರ್ಯಕ್ರಮಕ್ಕೆ ಒಳಮೊಗ್ರು ಮತ್ತು ಕೆದಂಬಾಡಿ ಗ್ರಾಪಂನ ಸಹಕಾರ ಪಡೆದುಕೊಳ್ಳುವುದು ಮತ್ತು ರಿಕ್ಷಾ ಚಾಲಕ ಮಾಲಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದುಕೊಂಡು ಕಾರ್ಯಕ್ರಮ ನಡೆಸುವುದು ಎಂದು ನಿರ್ಣಯಿಸಲಾಯಿತು. ಅಂಗಡಿ ಮಾಲಕರು ತಮ್ಮ ವ್ಯಾಪಾರ ಪರವಾನಗೆಯನ್ನು ನವೀಕರಿಸುವ ಬಗ್ಗೆ ತಿಳಿಸಲಾಯಿತು. ಬೀದಿ ಬದಿಯಲ್ಲಿ ದಿನಸಿ ಸಾಮಾಗ್ರಿಗಳನ್ನು ರಾಶಿ ಹಾಕಿ ವ್ಯಾಪಾರ ನಡೆಸುವವರ ಬಗ್ಗೆ ಚರ್ಚೆ ನಡೆಯಿತು. ಬೀದಿ ವ್ಯಾಪಾರಸ್ಥರು ವಾಹನಗಳಲ್ಲಿ ಬಂದು ದಿನಸಿ ಸಾಮಾಗ್ರಿಗಳನ್ನು ಕಟ್ಟೆಯು ಹತ್ತಿರ ರಾಶಿ ಹಾಕಿ ಮಾರಾಟ ಮಾಡುವುದು ಸರಿಯಲ್ಲ ಇದರಿಂದ ಅಂಗಡಿದಾರರಿಗೆ ತೊಂದರೆಯಾಗುತ್ತದೆ ಎಂದು ರಮೇಶ್ ಆಳ್ವ ಕಲ್ಲಡ್ಕ ತಿಳಿಸಿದರು. ಬೇಕಾದರೆ ಅವರು ವಾಹನಗಳಲ್ಲಿ ಸಾಮಾಗ್ರಿ ಇಟ್ಟು ದಾರಿಯುದ್ದಕ್ಕೂ ಮಾರಾಟ ಮಾಡುತ್ತಾ ಹೋಗಲಿ ನಮಗೆ ತೊಂದರೆ ಇಲ್ಲ ಎಂದರು. ಈ ಬಗ್ಗೆ ಪಂಚಾಯತ್‌ಗೆ ಮನವಿ ಸಲ್ಲಿಸಲಾಗಿದೆ, ಪಿಡಿಓರವರು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಅಧ್ಯಕ್ಷ ರಫೀಕ್ ಅಲ್‌ರಾಯ ತಿಳಿಸಿದರು. ಪಟ್ಟೆ ಶಾಲೆಯಲ್ಲಿ ಕೊಠಡಿ ನಿರ್ಮಾಣವಾಗುತ್ತಿದೆ ಇದಕ್ಕೆ ವರ್ತಕರ ಸಂಘದಿಂದ ಧನ ಸಹಾಯ ಮಾಡಬೇಕು ಎಂದು ಆ ಶಾಲೆಯ ಶಿಕ್ಷಕರೋರ್ವರು ಸಂಘಕ್ಕೆ ಮನವಿ ಕೊಟ್ಟಿದ್ದು ಈ ಬಗ್ಗೆ ಚರ್ಚೆ ನಡೆಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ಯಾಮ್‌ಸುಂದರ ರೈ ಕೊಪ್ಪಳರವರು ಶಾಲೆಗೆ ಕೊಠಡಿ ನಿರ್ಮಾಣಕ್ಕೆ ಧನ ಸಹಾಯ ಮಾಡುವುದಾದರೆ ಮಾಡುವ, ಒಂದು ವಿದ್ಯಾಸಂಸ್ಥೆಗೆ ಒಳ್ಳೆಯ ಕೆಲಸಕ್ಕೆ ಧನ ಸಹಾಯ ಮಾಡಿದರೆ ತೊಂದರೆ ಇಲ್ಲ, ಎಲ್ಲರ ಒಪ್ಪಿಗೆ ಇದ್ದರೆ ಮಾಡುವ ಎಂದರು. ಇದಕ್ಕೆ ಎಲ್ಲರ ಒಪ್ಪಿಗೆ ಸೂಚಿಸಿದರೆ ಸ್ಥಳದಲ್ಲೇ ಹಲವು ಮಂದಿ ವರ್ತಕರು ತಮ್ಮ ಕೈಯಲ್ಲಾದ ಧನ ಸಹಾಯವನ್ನು ನೀಡಿದರು.

ಸಂಘದ ಕಛೇರಿಗೆ ಹನೀಫ್ ಶೇಖಮಲೆಯವರು ಫ್ಯಾನ್ ಅನ್ನು ಕೊಡುಗೆಯಾಗಿ ನೀಡುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು. ಕುಂಬ್ರಕ್ಕೆ ನೂತನ ಎಟಿಎಂ ಬರಬೇಕು ಹಾಗೂ ಹೊಸ ಬ್ಯಾಂಕ್ ಕೂಡ ಆರಂಭವಾಗಬೇಕು ಎಂಬ ವಿಷಯದ ಬಗ್ಗೆ ಚರ್ಚಿಸಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶ್ಯಾಮ್‌ಸುಂದರ ರೈಯವರು, ಕುಂಬ್ರಕ್ಕೆ ಹೊಸ ಬ್ಯಾಂಕ್ ಬರಬೇಕು ಇಲ್ಲಿ ಬ್ಯಾಂಕ್‌ಗೆ ಬೇಕಾದ ಜಾಗವೂ ಇದೆ ಈ ಬಗ್ಗೆ ಸಂಘದಿಂದ ಪ್ರಯತ್ನಿಸೋಣ ಎಂದರು. ರಸ್ತೆ ನಾಮಫಲಕ ಅಳವಡಿಸುವುದು, ಪೊಲೀಸ್ ಚೌಕಿಯನ್ನು ಸ್ವಚ್ಛಗೊಳಿಸುವುದು, ನೂತನ ವಾಟ್ಸಫ್ ಗ್ರೂಪ್ ಮಾಡುವುದು, ವರ್ತಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚಿಟ್‌ಫಂಡ್ ಮಾಡುವುದು ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಫುಟ್‌ಪಾತ್‌ನ ಸ್ಲ್ಯಾಬ್‌ಕಲ್ಲು ಜಾರಿದ್ದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿತ್ತು, ಸಭೆ ಮುಗಿದ ತಕ್ಷಣವೇ ಇದನ್ನು ವರ್ತಕರ ಸಂಘದ ಸದಸ್ಯರುಗಳು ದುರಸ್ತಿ ಮಾಡಿದರು.

ಮಾಜಿ ಅಧ್ಯಕ್ಷರುಗಳಾದ ಸುಂದರ ರೈ ಮಂದಾರ, ನಾರಾಯಣ ಪೂಜಾರಿ ಕುರಿಕ್ಕಾರ, ದಿವಾಕರ ಶೆಟ್ಟಿ, ಎಸ್.ಮಾಧವ ರೈ ಕುಂಬ್ರ, ಮೆಲ್ವಿನ್ ಮೊಂತೆರೋರವರುಗಳು ವಿವಿಧ ಸಲಹೆಗಳನ್ನು ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಉದಯ ಆಚಾರ್ಯ ಕೃಷ್ಣನಗರ, ಕೋಶಾಧಿಕಾರಿ ಸಂಶುದ್ದೀನ್ ಎ.ಆರ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅಝರ್ ಷಾ ಕುಂಬ್ರ, ಹನೀಫ್, ಶೇಷಪ್ಪ ಸಹಸ್ರ, ಜಯರಾಮ ಆಚಾರ್ಯ, ಹನೀಫ್ ಶೇಖಮಲೆ, ಶುತಿಚಂದ್ರ ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ ಭವ್ಯ ರೈ ಸ್ವಾಗತಿಸಿ, ಜತೆ ಕಾರ್ಯದರ್ಶಿ ಚರಿತ್ ಕುಮಾರ್ ವಂದಿಸಿದರು.

“ಕಾಂಪ್ಲೆಕ್ಸ್‌ನ ಮಾಲಕರು ತಾತ್ಕಾಲಿಕವಾಗಿ ನೀಡಿದ ಕೊಠಡಿಯಲ್ಲಿ ಕಛೇರಿ ಆರಂಭಿಸಿದ್ದೇವೆ. ಜ.1 ರಂದು ನಡೆಯುವ ಸ್ವಚ್ಛತಾ ಕಾರ್ಯಕ್ರಮಕ್ಕೆ ಸರ್ವರೂ ಸಹಕಾರ ನೀಡಬೇಕು, ಪರವಾನಗೆ ನವೀಕರಿಸದೇ ಇರುವ ವರ್ತಕರು ತಕ್ಷಣವೇ ಪರವಾನೆಗೆ ನವೀಕರಿಸಿ ಪಂಚಾಯತ್‌ನೊಂದಿಗೆ ಕೈಜೋಡಿಸಬೇಕು. ಸಂಘದ ಸಮಾಜಮುಖಿ ಕಾರ್ಯಕ್ಕೆ ಸರ್ವ ವರ್ತಕರ, ಗ್ರಾಹಕರ ಸಹಕಾರವನ್ನು ಬಯಸುತ್ತೇವೆ.’

ರಫೀಕ್ ಅಲ್‌ರಾಯ, ಅಧ್ಯಕ್ಷರು ವರ್ತಕರ ಸಂಘ ಕುಂಬ್ರ

LEAVE A REPLY

Please enter your comment!
Please enter your name here