ಉಪ ವಲಯಾರಣ್ಯಾಧಿಕಾರಿ ಸಂಜೀವ ಪೂಜಾರಿ ಬಂಧನಕ್ಕೆ ಆಗ್ರಹ : ಕಡಬ ಠಾಣೆ ಎದುರು ವಿ.ಹಿಂ.ಪ, ಬಜರಂಗದಳ ಪ್ರತಿಭಟನೆ, ಭಜನೆ

0

ಕಡಬ: ಭಜನೆ ಮತ್ತು ಭಜಕರು ಹಾಗೂ ಹಿಂದೂ ಧರ್ಮದ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಅವಹೇಳನಕಾರಿ ಸಂದೇಶ ಹಾಕುತ್ತಿರುವ ಆರೋಪದಡಿ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದ್ದರೂ ಅವರನ್ನು ಇನ್ನೂ ಪೊಲೀಸರು ಬಂಧಿಸಿಲ್ಲ ಎಂದು ಆರೋಪಿಸಿ ಮತ್ತು ಕೂಡಲೇ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಡಬ ಪ್ರಖಂಡದ ನೇತೃತ್ವದಲ್ಲಿ ಕಡಬ ಪೊಲೀಸ್ ಠಾಣಾ ಗೇಟಿನ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ದ.29ರಂದು ಪ್ರತಿಭಟನೆ ನಡೆಸಲಾಯಿತು.


ಪ್ರತಿಭಟನೆ ಉದ್ದೇಶಿಸಿ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಮಾತನಾಡಿ, ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಸರ್ಕಾರಿ ನೌಕರ ಸಂಜೀವ ಪೂಜಾರಿ ವಿರುದ್ಧ ಇಲಾಖೆ ಈಗಾಗಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರೂ ಅದು ಈಡೇರಿಲ್ಲ. ಜೊತೆಗೆ ಈತನ ವಿರುದ್ಧ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಾದರೂ ಇನ್ನೂ ಬಂಧಿಸಿಲ್ಲ. ಹೀಗಾಗಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್‍ಯವಾಗಿದೆ ಎಂದರು.

ಹಿಂದೂ ಸಮಾಜವನ್ನು ಅಪಹಾಸ್ಯ ಮಾಡಿದ ಈತನ ಹಿಂದೆ ಯಾವೂದೋ ಶಕ್ತಿಯಿದೆ ಎನ್ನುವ ಅನುಮಾನವಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಸಂಜೀವನಂತೆ ಹಿಂದೂ ಸಮಾಜದಲ್ಲಿ ಒಡಕು ಸೃಷ್ಠಿಸುವ ಹುನ್ನಾರ ನಡೆಯುತ್ತಿದೆ. ಇಂತಹ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಸಮಾಜದ ವಿರುದ್ಧ ನಿಂದನೆಗಳು ಮುಂದೆ ನಡೆಯದಂತೆ ಆಗಬೇಕು, ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಹೇಳಿದ ಅವರು, ಸಂಜೀವರವರನ್ನು ತಕ್ಷಣ ಬಂಧಿಸದಿದ್ದಲ್ಲಿ ಹಿಂದೂ ಸಮಾಜ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ವಿ.ಹಿಂ.ಪ. ಜಿಲ್ಲಾ ಗೋರಕ್ಷಾ ಪ್ರಮುಖ್ ಉಮೇಶ್ ಶೆಟ್ಟಿ ಸಾಯಿರಾಂ ಪ್ರತಿಭಟನೆ ಉದ್ದೆಶಿಸಿ ಮಾತನಾಡಿ, ಸಂಜೀವ ಪೂಜಾರಿಯವರನ್ನು ಸೋಮವಾರದೊಳಗೆ ಬಂಧಿಸದಿದ್ದಲ್ಲಿ ಮಂಗಳವಾರ ಜಿಲ್ಲಾ ಅರಣ್ಯಾಧಿಕಾರಿಯವರ ಕಛೇರಿಯ ಎದುರು ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು. ಬಳಿಕ ಪ್ರತಿಭಟನಾಕಾರರು ರಸ್ತೆಯಲ್ಲಿ ಕುಳಿತು ಭಜನೆ ಮಾಡಿದರು. ಕೆಲಕಾಲ ರಸ್ತೆ ತಡೆದು ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ಮಾತೃಶಕ್ತಿ ಜಿಲ್ಲಾ ಸಹಪ್ರಮುಖ್ ಗೀತಾ ಕೇವಳ, ಬಜರಂಗದಳ ಕಡಬ ತಾಲೂಕು ಸಂಯೋಜಕ ಮನೋಜ್ ಖಂಡಿಗ, ವಿಹಿಂಪ ಕಡಬ ತಾಲೂಕು ಗೋರಕ್ಷಾ ಪ್ರಮುಖ್ ಜಯಂತ ಕಲ್ಲುಗುಡ್ಡೆ, ಕಡಬ ತಾಲೂಕು ಮಾತೃ ಶಕ್ತಿ ಪ್ರಮುಖ್ ಪ್ರಮಿಳಾ ಲೋಕೇಶ್, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ಸತೀಶ್ ಎರ್ಕ, ಶ್ರೀ ಶ್ರೀಕಂಠ ಸ್ವಾಮಿ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಮುತ್ತುಕುಮಾರ್, ನೂಜಿಬಾಳ್ತಿಲ ಗ್ರಾ.ಪಂ. ಸದಸ್ಯ ಚಂದ್ರಶೇಖರ ಹಳೆನೂಜಿ, ಬಿಜೆಪಿ ಕೊಲ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುರೇಶ್ ದೇಂತಾರು, ಮನೋಹರ್ ರೈ ಬೆದ್ರಾಜೆ, ಅಶೋಕ್ ಕುಮಾರ್ ಪಿ. ರಕ್ಷಿತ್ ಕೇಪು, ಅಜಿತ್ ಆರ್ತಿಲ ಮೊದಲಾದವರು ಉಪಸ್ಥಿತರಿದ್ದರು. ವಿ.ಹಿಂ.ಪ ಕಡಬ ತಾಲೂಕು ಕಾರ್ಯದರ್ಶಿ ಪ್ರಮೋದ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷ ರಾಧಾಕೃಷ್ಣ ವಂದಿಸಿದರು.

LEAVE A REPLY

Please enter your comment!
Please enter your name here