ಸುಳ್ಯಪದವು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪುನರ್ ಪ್ರತಿಷ್ಠೆ ಮಹೋತ್ಸವ, ಧಾರ್ಮಿಕ ಸಭೆ

0

ಪ್ರೀತಿ,ವಿಶ್ವಾಸದಿಂದ ಧರ್ಮಸಂರಕ್ಷಣೆಯ ಉದ್ದೀಪನ: ಒಡಿಯೂರು ಶ್ರೀ

ಭಜನೆಯಿಂದ ಧನಾತ್ಮಕ ಶಕ್ತಿ ವೃದ್ಧಿಯಾಗಿ ಸಮಾಜದಲ್ಲಿ ಪರಿವರ್ತನೆ ಆಗಲು ಸಾಧ್ಯ : ಮೋಹನದಾಸ ಶ್ರೀ

ಪುತ್ತೂರು :ಭೋಗ ಜೀವನಕ್ಕಿಂತ ತ್ಯಾಗದ ಜೀವನ ನಿಜವಾದ ಜೀವನ. ಯುವಜನತೆಯಿಂದ ಪ್ರೀತಿ ವಿಶ್ವಾಸದಿಂದ ಧರ್ಮ ಸಂರಕ್ಷಣೆಯ ಉದ್ದೀಪನಗೊಳ್ಳುವ ಬಗ್ಗೆ ಯುವಜನತೆ ಗಮನಹರಿಸಬೇಕು ಎಂದು ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಎಂದು ಹೇಳಿದರು.


ಅವರು ದ.29 ರಂದು ಸುಳ್ಯಪದವು ಅಯ್ಯಪ್ಪ ಸ್ವಾಮಿ ಭಜನ ಮಂದಿರದ ಪುನ:ಪ್ರತಿಷ್ಠೆ ಮಹೋತ್ಸವ, ಶ್ರೀ ಅಯ್ಯಪ್ಪ ಸ್ವಾಮಿಯ ಉಬ್ಬು ಛಾಯಾಚಿತ್ರ ಪ್ರತಿಷ್ಠಾಪನ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀವರ್ಚನ ನೀಡಿದರು. ದೇವರ ಅನುಗ್ರಹ ಸಿಗಬೇಕಾದರೆ ನಮ್ಮಲ್ಲಿ ಭಕ್ತಿ ಇರಬೇಕು, ಕೇವಲ ತೋರ್ಪಡಿಕೆಯ ಭಕ್ತಿಯಿಂದ ದೇವರ ಅನುಗ್ರಹ ಪ್ರಾಪ್ತಿಯಾಗಲ್ಲ ಬದಲಾಗಿ ಮನಸ್ಸಿನೊಳಗಿನಿಂದ ಶುದ್ಧವಾಗ ನಿಷ್ಕಲ್ಮಶವಾದ ಭಕ್ತಿ ಇದ್ದಲ್ಲಿ ಅಂತಹ ಭಕ್ತಿಯಿಂದ ದೇವರ ಆರಾಧನೆ ಮಾಡಿದರೆ ಖಂಡಿತವಾಗಿಯೂ ದೇವರ ಅನುಗ್ರಹ ಸಿಗಲು ಸಾಧ್ಯ ಎಂದ ಸ್ವಾಮೀಜಿಯವರು, ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಲು ಹೋಗುವವರಲ್ಲಿ ಯುವಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿರುವುದು ದೇವರ ಮೇಲಿನ ಭಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದರು.


ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀವರ್ಚನ ನೀಡುತ್ತಾ, ಸನಾತನ ಹಿಂದೂ ಧರ್ಮದ ಅಡಿಪಾಯದಲ್ಲಿ ಜೀವಿಸುತ್ತಿರುವ ನಾವೆಲ್ಲರೂ ಧನ್ಯರು. ತುಳುನಾಡಿನ ಮಣ್ಣಿಗೆ ತನ್ನದೇ ಆದ ಶಕ್ತಿ ಇದೆ. ಇಲ್ಲಿರುವ ದೈವ ದೇವರುಗಳಿಗೂ ಅಪಾರ ಕಾರಣಿಕತೆ ಇದೆ. ಇಂತಹ ಮಣ್ಣಿನ ದೈವ ದೇವರುಗಳ ಬಗ್ಗೆ ನಮ್ಮ ಮುಂದಿನ ಜನಾಂಗಕ್ಕೆ ತಿಳಿಸಬೇಕಾಗಿದೆ. ಶಬರಿಮಲೆಯ ಸ್ವಾಮಿ ಅಯ್ಯಪ್ಪನಿಗೆ ವಿಶೇಷವಾದ ಕಾರಣಿಕತೆ ಇದೆ. ಇದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಭಜನೆಯಿಂದ ಧನಾತ್ಮಕ ಶಕ್ತಿ ವೃದ್ಧಿಯಾಗಿ ಸಮಾಜದಲ್ಲಿ ಪರಿವರ್ತನೆ ಆಗಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಪ್ರತಿ ಮನೆಯಲ್ಲಿ ಭಜನೆ ನಡೆಯಬೇಕು, ಮಕ್ಕಳಿಗೆ ಭಜನೆಯನ್ನು ಹೇಳಿಕೊಡಬೇಕಾದ ಅಗತ್ಯತೆ ಇದೆ. ಇದನ್ನು ಪ್ರತಿಯೊಬ್ಬ ತಂದೆ ತಾಯಂದಿರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿ ಶುಭ ಆಶೀರ್ವಚನ ಮಾಡಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಮಾತನಾಡಿ ಸದಾಚಾರದಲ್ಲಿ ಮನಸ್ಸು ತೊಡಗಿಸಿಕೊಳ್ಳಬೇಕು. ದೇವರಲ್ಲಿ ಭಕ್ತಿ,ಶ್ರದ್ಧೆ ಇದ್ದಾಗ ದೇವರ ಅನುಗ್ರಹ ಪ್ರಾಪ್ತಿ ಆಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪುನ:ಪ್ರತಿಷ್ಠಾ ಮಹೋತ್ಸವ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲು ಮಾತನಾಡಿ, ಸುಳ್ಯಪದವುನಲ್ಲಿ ಅಯ್ಯಪ್ಪನ ಶಕ್ತಿ ಪ್ರಕಟಗೊಂಡಿದೆ. ನಾನು ಕೇವಲ ಸಮಿತಿಯ ಅಧ್ಯಕ್ಷನಾಗಿದ್ದೇನೆ ವಿನಹ ಇಲ್ಲಿ ಎಲ್ಲವೂ ಅಯ್ಯಪ್ಪ ಸ್ವಾಮಿಯ ಕಾರಣಿಕತೆ ಮತ್ತು ಭಕ್ತರ ಶ್ರದ್ಧಾಪೂರ್ವಕ ಭಕ್ತಿಯಿಂದ ಸಾಧ್ಯವಾಗಿದೆ. ಇಲ್ಲಿನ ಜನರು ತೋರಿದ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ. ನನಗೆ ಅಯ್ಯಪ್ಪ ಸ್ವಾಮಿಯ ಸೇವೆ ಮಾಡುವ ಯೋಗ ಸಿಕ್ಕಿದ್ದು ನನ್ನ ಪುಣ್ಯ. ಇಲ್ಲಿ ಅಯ್ಯಪ್ಪನ ಸುಂದರವಾದ ಭಜನಾ ಮಂದಿರ ನಿರ್ಮಾಣದ ಹಿಂದೆ ಅಯ್ಯಪ್ಪನ ಕಾರಣಿಕತೆ ಮತ್ತು ಈ ಭಾಗದ ದಾನಿಗಳ, ಅಯ್ಯಪ್ಪ ಸ್ವಾಮಿಯ ಭಕ್ತಾಧಿಗಳ ಹಾಗೂ ಸರ್ವರ ಸೇವೆಯೇ ಕಾರಣವಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ರವರು ಮಾತನಾಡಿ, ನಮ್ಮ ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಹೇಳಿಕೊಟ್ಟಾಗ ಅವರು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಬದುಕಲು ಸಾಧ್ಯವಿದೆ ಇದನ್ನು ಹೆತ್ತವರು ಆಲೋಚನೆ ಮಾಡಬೇಕಾಗಿದೆ ಎಂದರು. ಭಕ್ತಿಯಿಂದ ದೇವರಲ್ಲಿ ಪ್ರಾರ್ಥನೆ ಮಾಡಿದರೆ ನಮ್ಮ ಸಕಲ ಇಷ್ಟಾರ್ಥಗಳು ಈಡೇರುವುದರೊಂದಿಗೆ ನಮ್ಮ ಕಷ್ಟಗಳು ದೂರವಾಗಲು ಸಾಧ್ಯ, ಸುಳ್ಯಪದವಿನ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಇಡೀ ಸಮಾಜಕ್ಕೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಶ್ರದ್ಧಾಕೇಂದ್ರವಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಸನ್ಮಾನ, ಗೌರವಾರ್ಪಣೆ
ಭಜನಾ ಮಂದಿರದ ನಿರ್ಮಾಣದಲ್ಲಿ ಸ್ಥಳದಾನ ಮಾಡಿದ ದಾನಿ ಪ್ರಭಾಕರ ನಾಯಕ್ ಇಂದಾಜೆ ದಂಪತಿಗಳನ್ನು ಸನ್ಮಾನಿಸಲಾಯಿತು ಅಲ್ಲದೆ ಭಜನಾ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡಿದ ಭಾಸ್ಕರ ಆಚಾರ್ಯ ಮತ್ತು ನಾಗರಾಜ ಮೇಸ್ತಿರವರನ್ನು ಗೌರವಿಸಲಾಯಿತು.

ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಚಿನ್ನಪ್ಪ ಗುರುಸ್ವಾಮಿ, ಬಡಗನ್ನೂರು ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಕೆ, ರಾಮ ಭಟ್ ಬೀರಮೂಲೆ,ಪಂಜ ಉಪವಲಯ ಅರಣಾಧಿಕಾರಿ ಸಂತೋಷ್ ಕುಮಾರ್ ರೈ,ಶಬರಿನಗರ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ, ,ಸರ್ವೋದಯ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎಚ್ ಡಿ ಶಿವರಾಮ್,ಸ್ಥಳೀಯ ಭಜನ ಮಂದಿರಗಳ ಅಧ್ಯಕ್ಷರಾದ ಉದಯ ಕುಮಾರ್ ಪದಡ್ಕ,ಕಮಲಾಕ್ಷ,ವಾಮನ ಎಸ್ ಸಜಂಕಾಡಿ,ಶಿವರಾಮ ಜಿ ಎಂ ಬೆಳೇರಿ, ಸಾಂತಪ್ಪ ಗುರುಸ್ವಾಮಿ,ಅಡಳಿತ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಮೋಹನ್ ದಾಸ್ ರೈ ನಾಟೆಕಲ್ಲು ಸ್ವಾಗತಿಸಿದರು.ನಾಗರಾಜ್ ಕನ್ನಡ್ಕ ಪ್ರಸ್ತಾವನೆಗೈದರು.ಗಿರೀಶ್ ಕುಮಾರ್ ವಂದಿಸಿದರು.ಶ್ರೀಪತಿ ಭಟ್,ಶಿವಶಂಕರ್ ಭಟ್,ಚಂದ್ರಶೇಖರ್ ನಿರ್ವಹಿಸಿದರು.

ಶ್ರೀ ಅಯ್ಯಪ್ಪ ಸ್ವಾಮಿಗೆ ಚಿನ್ನದ ರುದ್ರಾಕ್ಷಿ ಮಾಲೆಯನ್ನು ದಿ| ಯಸ್. ದಯಾನಂದ ನಾಯಕ್ ಇಂದಾಜೆ ಅವರ ಪತ್ನಿ ಯಸ್. ಜಯಲಕ್ಷ್ಮೀ ಡಿ ನಾಯಕ್ ಹಾಗೂ ಮಕ್ಕಳಾದ ಸೀಮಾ ಜಗದೀಶ್ ಪ್ರಭು, ಗೀತಾ ಶೇಷಗಿರಿ ಶೆಣೈ, ಸವಿತಾ ನಾಗೇಶ್ ಪ್ರಭು ಮತ್ತು ಲಕ್ಷ್ಮೀನರಸಿಂಹ ನಾಯಕ್‌ರವರು ಅರ್ಪಣೆ ಮಾಡಿದ್ದಾರೆ. ಬೆಳ್ಳಿಯ ನೀಲಾಂಜನ ಆರತಿಯನ್ನು ದಿ| ಯಸ್. ನಿತ್ಯಾನಂದ ನಾಯಕ್ ಇಂದಾಜೆ ಹಾಗೂ ಬೆಳ್ಳಿ ಕವಳಿಗೆಯನ್ನು ಯಸ್. ಜಯಲಕ್ಷ್ಮೀ ದಯಾನಂದ ನಾಯಕ್ ಅದೇ ರೀತಿ ಭಕ್ತರಿಗೆ ಪಾನಕ ಮತ್ತು ಬೆಲ್ಲವನ್ನು ದಿ| ಯಸ್. ಮೋಹನದಾಸ್ ನಾಯಕ್ ಇಂದಜೆ ಇವರ ಹೆಸರಿನಲ್ಲಿ ಲಕ್ಷ್ಮೀನರಸಿಂಹ ನಾಯಕ್ ಇಂದಾಜೆ ಯವರು ಕೊಡುಗೆಯಾಗಿ ನೀಡಿದ್ದಾರೆ.
ಶ್ರೀ ಅಯ್ಯಪ್ಪ ಸ್ವಾಮಿಯ ಉಬ್ಬು ಛಾಯಾಚಿತ್ರ ಪ್ರತಿಷ್ಠಾಪನೆ

ದ.29 ರಂದು ಬೆಳಿಗ್ಗೆ ಗಣಪತಿ ಹೋಮ ನಡೆದು ಬಳಿಕ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 12.18ರ ಮೀನಾ ಲಗ್ನದಲ್ಲಿ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಅಯ್ಯಪ್ ಸ್ವಾಮಿಯ ಉಬ್ಬು ಛಾಯಾಚಿತ್ರದ ಪ್ರತಿಷ್ಠಾಪನೆ ನಡೆದು ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಿತು. ಸಾವಿರಾರು ಮಂದಿ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.

ಭಜನಾ ಸೇವೆ
ದ.27 ರಂದು ಬೆಳಿಗ್ಗೆ ಕುಣಿತ ಭಜನೆ, ದ.29 ರಂದು ಬೆಳಿಗ್ಗೆ ರಾಮಕೃಷ್ಣ ಕಾಟುಕುಕ್ಕೆ ಮತ್ತು ತಂಡದವರಿಂದ ಭಜನಾಮೃತ ಭಜನಾ ಕಾರ್ಯಕ್ರಮ ನಡೆಯಿತು. ದ.30 ರಂದು ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ಪಾಲೆಕೊಂಬು ಮೆರವಣಿಗೆ, ದ.31 ರಂದು ಪ್ರಾತಃಕಾಲ ಅಯ್ಯಪ್ಪ ವೃತಾಧಾರಿಗಳಿಂದ ಕೆಂಡಸೇವೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು
ದ.27 ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಪ್ರೇಮಾ ಕಲ್ಲೂರಾಯ ನೇತೃತ್ವದಲ್ಲಿ ಗೀತಾ ಪಾರಾಯಣ ನಡೆಯಿತು. ಅಪರಾಹ್ನ ಸತೀಶ್ ಶೆಟ್ಟಿ ಪಟ್ಲ ಇವರ ನೇತೃತ್ವದಲ್ಲಿ ಯಕ್ಷ ಗಾನ ವೈಭವ ನಡೆಯಿತು.

ದ.29 ರಂದು ಮಧ್ಯಾಹ್ನ ಕೃಷ್ಣ ಕಿಶೋರ್ ಪೆರ್ಮುಖ ಮತ್ತು ಬಳಗದವರಿಂದ ಭಕ್ತಿ ಗಾನ ರಸಮಂಜರಿ, ರಾತ್ರಿ ವಿದುಷಿ ಯೋಗಿಶ್ವರಿ ಜಯಪ್ರಕಾಶ್ ಇವರ ಶಿಷ್ಯ ಅಭಿಷೇಕ್ ಮಂಡೆಕೋಲು ಇವರಿಂದ ಭರತನಾಟ್ಯ ಕಾರ್ಯಕ್ರಮ, ರಂಗ್‌ದರಾಜೆ ಸುಂದರ ರೈ ಮಂದಾರ ನಿರ್ದೇಶಿಸಿ ಅಭಿನಯಿಸಿದ ಅಲೇ ಬುಡಿಯೆರ್‌ಗೆ…! ತುಳು ನಾಟಕ ಮನರಂಜಿಸಿತು. ದ.30 ರಂದು ರಾತ್ರಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಮಲ್ಲ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.

LEAVE A REPLY

Please enter your comment!
Please enter your name here