ವಿದ್ಯಾರ್ಥಿಗಳು ಸಂಸ್ಕಾರಯುತ ಬದುಕಿನ ಶಿಕ್ಷಣ ಕಲಿಯಬೇಕು – ಸುಬ್ಬಪ್ಪ ಕೈಕಂಬ
ಉಪ್ಪಿನಂಗಡಿ: ಕಲಿಕೆ ಎಂದರೆ ಕೇವಲ ಅಂಕ ಮಾತ್ರ ಮಾನದಂಡ ಆಗಬಾರದು, ನಮ್ಮ ಸುತ್ತಮುತ್ತ ಇರುವವರನ್ನು, ವೃದ್ಧರು, ಹಿರಿಯರನ್ನು ಗೌರವಿಸುವ ಸಂಸ್ಕಾರಯುತವಾದ ಮತ್ತು ಬದುಕನ್ನು ಕಲಿಸುವ ಶಿಕ್ಷಣ ನಿಜವಾದ ಶಿಕ್ಷಣವಾಗಿರುತ್ತದೆ, ವಿದ್ಯಾರ್ಥಿಗಳು ಅದನ್ನು ಮೈಗೂಡಿಸಿಕೊಳ್ಳಬೇಕು ಎಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಹೇಳಿದರು.
ಅವರು ಡಿ. 30ರಂದು ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಪ್ರತಿಭಾ ಪುರಸ್ಕಾರ ಹಾಗೂ ದತ್ತಿನಿಧಿ ಪ್ರದಾನ ಕಾರ‍್ಯಕ್ರಮದಲ್ಲಿ ಮಾತನಾಡಿ ನಾವುಗಳು ಸಂಭ್ರಮಿಸುವ ವೇಳೆ ಇನ್ನೊಬ್ಬರಿಗೆ ನೋವು ಉಂಟು ಮಾಡಬಾರದು, ಬದಲಾಗಿ ನಮ್ಮ ಸಂಭ್ರಮದೊಂದಿಗೆ ನಮ್ಮ ಸುತ್ತಮುತ್ತಲಿನವರೂ ಸಂಭ್ರಮಿಸುವುದೇ ಸುಖ ಜೀವನ ಎಂದ ಅವರು ನಮ್ಮಲ್ಲಿ ವಿನಯಶೀಲತೆ ಇರಬೇಕು, ಆಗ ಮಾತ್ರ ಇದೆಲ್ಲ ಸಾಧ್ಯವಾಗುವುದು, ವಿದ್ಯಾರ್ಥಿಗಳು ಇದನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಯೋರ್ವ ವಿದ್ಯಾರ್ಥಿಗಳಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಹೊರ ತರುವಲ್ಲಿ ಶಿಕ್ಷಕರು ಮತ್ತು ಪೋಷಕರು ಪರಸ್ಪರ ಸಹಕಾರಿಗಳಾಗಬೇಕು ಎಂದರು.
ಶಾಲಾ ಅಭಿವೃದ್ಧಿ ಸಮಿತಿ ಕಾರ‍್ಯಾಧ್ಯಕ್ಷ ಎನ್.ಉಮೇಶ್ ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಉಪ ಪ್ರಾಂಶುಪಾಲ ಶ್ರೀಧರ್ ಭಟ್ ಶಾಲಾ ಯೋಜನೆಗಳ ಬಗ್ಗೆ ವರದಿ ಮಂಡಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಧೀರ್ ಕುಮಾರ್, ಕಾರ‍್ಯಾಧ್ಯಕ್ಷ ಸುರೇಶ್ ಅತ್ರಮಜಲು, ನಿವೃತ್ತ ಉಪ ಪ್ರಾಂಶುಪಾಲ ದಿವಾಕರ ಆಚಾರ್ಯ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ರಾಮಚಂದ್ರ ಮಣಿಯಾಣಿ, ಚಂದ್ರಶೇಖರ ಮಡಿವಾಳ, ಉಮೇಶ್ ಅಮೀನ್, ಆದಂ ಕೊಪ್ಪಳ, ಜೆ.ಕೆ. ಪೂಜಾರಿ, ಶ್ರೀಮತಿ ಸರೋಜಿನಿ, ಶ್ರೀಮತಿ ಪರಮೇಶ್ವರಿ, ಶ್ರೀಮತಿ ಉಮಾವತಿ ಉಪಸ್ಥಿತರಿದ್ದರು.
ಅಧ್ಯಾಪಕ ವಿಜಯಕುಮಾರ್ ಸ್ವಾಗತಿಸಿ, ಲಕ್ಷ್ಮೀಶ ವಂದಿಸಿದರು. ದೇವಕಿ, ಪ್ರಾರ್ಥನ ಕಾರ‍್ಯಕ್ರಮ ನಿರೂಪಿಸಿದರು.