ನಾಟಕ ಕಲಾವಿದ ದಯಾನಂದ ಕುಂತೂರು ಅವರಿಗೆ ತುಳುನಾಡ ಅಭಿನೇತ್ರಿ ಬಿರುದು, ಸನ್ಮಾನ

0

ನೆಲ್ಯಾಡಿ: ಕಡಬ ತಾಲೂಕಿನ ಬಲ್ಯ ಗ್ರಾಮದ ಪಾಲ್ತಿಮಾರ್ ಶ್ರೀ ಮೂಕಾಂಬಿಕ ಕ್ಷೇತ್ರ ಪಂಜುರ್ಲಿ ಸಾನಿಧ್ಯದ ವಾರ್ಷಿಕ ಉತ್ಸವ ಸಮಾರಂಭದಲ್ಲಿ ದಿ. ಗಂಗಯ್ಯ ಪೂಜಾರಿ ಪಾಲ್ತಿಮಾರ್ ಅವರ ಸ್ಮರಣಾರ್ಥ ಖ್ಯಾತ ನಾಟಕ ಕಲಾವಿದ ಪೆರಾಬೆ ಗ್ರಾಮದ ಅಗತ್ತಾಡಿ ನಿವಾಸಿ ದಯಾನಂದ ಕುಂತೂರು ಅವರಿಗೆ ತುಳುನಾಡ ಅಭಿನೇತ್ರಿ ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಾಲ್ತಿಮಾರ್ ಕ್ಷೇತ್ರ ಧರ್ಮದರ್ಶಿ ಕೇಶವ ಜ್ಯೋತಿಷ್ಯರು, ಉದ್ಯಮಿ ವಿಜಯಕುಮಾರ್ ರೈ ಮನವಳಿಕೆ ಮತ್ತಿತರರು ಉಪಸ್ಥಿತರಿದ್ದರು.

ಕಲಾ ಬದುಕಿನ 45 ವರ್ಷದಲ್ಲಿ ಪ್ರತಿಭಾನ್ವಿತ ಕಲಾವಿದನಾಗಿ ತುಳು ರಂಗ ಭೂಮಿಯಲ್ಲಿ ಅವಿರತ ಸೇವೆ ಸಲ್ಲಿಸಿರುವ ಅವರ ಕಲಾ ಸೇವೆಯನ್ನು ಗುರುತಿಸಿ ಈ ಬಿರುದು ನೀಡಿ ಗೌರವಿಸಲಾಗಿದೆ. ಎಳವೆಯಲ್ಲಿಯೇ ನಾಟಕರಂಗದ ಕಡೆಗೆ ಆಕರ್ಷಿತರಾಗಿದ್ದ ಇವರು ಈ ತನಕ ಸುಮಾರು 2500 ತುಳು ಮತ್ತು ಕನ್ನಡ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕರ್ನಾಟಕ ಸಾಂಸ್ಕೃತಿಕ ಇಲಾಖೆಯ ಮುಖಾಂತರ ಕರ್ನಾಟಕದ ಪ್ರತಿನಿಧಿಯಾಗಿ ಜಮ್ಮು ಕಾಶ್ಮೀರದಲ್ಲಿ ನಡೆದ ರಾಷ್ಟ್ರಮಟ್ಟದ ಸಾಂಸ್ಕೃತಿಕ ಮೇಳದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ನೂರಕ್ಕೂ ಮಿಕ್ಕಿದ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಇವರು ಕುಂತೂರು ಅಗತ್ತಾಡಿ ನಿವಾಸಿ ಹೇಮಾವತಿ ಮತ್ತು ಶೀನಪ್ಪ ಪೂಜಾರಿ ಅಗತ್ತಾಡಿ ದೋಳ ಬಾರಿಕೆ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here