ಬೆಟ್ಟಂಪಾಡಿ: ಕಾಲೇಜು ವಿದ್ಯಾರ್ಥಿಗಳಿಂದ ಬಸ್‌ಗಾಗಿ ಪ್ರತಿಭಟನೆ

0

ಬಸ್ ಇಲ್ಲದ ಮೇಲೆ ಪಾಸ್ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು

ಬೆಳಗ್ಗಿನ ಬಸ್ ಟ್ರಿಪ್ ಗೆ ಭರವಸೆ – ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದ ವಿದ್ಯಾರ್ಥಿಗಳು

ಪುತ್ತೂರು: ರೆಂಜ ಮಾರ್ಗವಾಗಿ ಸುಳ್ಯ ಪದವಿಗೆ ಬಸ್ ಸಂಪರ್ಕ ಕಲ್ಪಿಸಬೇಕೆಂದು ಆಗ್ರಹಿಸಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಜ.3 ರಂದು ಪುತ್ತೂರು ತಾಲೂಕು ಆಡಳಿತ ಸೌಧ ಮತ್ತು ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ‌ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಬಸ್ ಇಲ್ಲದ ಮೇಲೆ ನಮಗೆ ಪಾಸ್ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುತ್ತೂರು ರೆಂಜ ಮಾರ್ಗವಾಗಿ ಸುಳ್ಯಪದವಿಗೆ ಈ ಹಿಂದೆ ಬಸ್ ಸಂಪರ್ಕ ವ್ಯವಸ್ಥೆ ಇದ್ದು ಸೇತುವೆ ನಿರ್ಮಾಣದ ಕಾರಣಕ್ಕೆ ಸ್ಥಗಿತಗೊಂಡಿತ್ತು, ಸೇತುವೆ ನಿರ್ಮಾಣದ ಕಾರ್ಯ ಪೂರ್ಣಗೊಂಡು ಸಂಪರ್ಕ ರಸ್ತೆ ಸುಸ್ಥಿತಿಗೆ ಬಂದ ಬಳಿಕ ಬಸ್ ಸಂಪರ್ಕ ಮರು ಆರಂಭಿಸದೆ ವಿದ್ಯಾರ್ಥಿಗಳನ್ನು ಸತಾಯಿಸುತ್ತಿದ್ದಾರೆ. ಬಸ್ ಇಲ್ಲದ ಹಿನ್ನಲೆಯಲ್ಲಿ ಸುಳ್ಯ ಪದವಿನಿಂದ ಬರುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ನಮಗೆ ಸಂಜೆ ಗಂ 4.15 ಕ್ಕೆ ಪತ್ತೂರಿನಿಂದ ಇದ್ದ ಹಾಗೂ ಬೆಳಿಗ್ಗೆ ಸುಳ್ಯಪದವಿನಿಂದ 8.00 ಗಂಟೆಗೆ ಇದ್ದ ಬಸ್‌ ಸಂಪರ್ಕ ವ್ಯವಸ್ಥೆಯನ್ನು ಮರು ಆರಂಭಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು.

ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ನಾಯಕ ರಕ್ಷಿತ್ ರೈ ಮಾತನಾಡಿ ಬಸ್ ಸೌಲಭ್ಯ ಒದಗಿಸದಿದ್ದರೆ ನಾವು ಉಗ್ರ ಪ್ರತಿಭಟನೆ ಕೈಗೊಳ್ಳಲಿದ್ದೇವೆ ಎಂದು ಎಚ್ಚರಿಸಿದರು. ವಿದ್ಯಾರ್ಥಿನಿ ಶೃತಿ ಬಸ್ ಸಮಸ್ಯೆಯನ್ನು ವಿವರಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹರೀಶ್ಚಂದ್ರ ಸಹಿತ 53 ಮಂದಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು. ತಾಲೂಕು ಸೌಧದ ಎದುರು ಪ್ರತಿಭಟನೆ ಮಾಡಿ ಸಹಾಯಕ ಕಮೀಷರ್ ಕಚೇರಿ ಮೂಲಕ ಸಹಾಯಕ ಕಮೀಷನರ್ ಅವರಿಗೆ ಮನವಿ ನೀಡಲಾಯಿತು. ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಮುಂದೆಯೂ ಪ್ರತಿಭಟನೆ ವೇಳೆ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಕಚೇರಿ ಕೊಠಡಿಗೆ ಕರೆಸಿ ಬಸ್ ಸೌಲಭ್ಯ ಒದಗಿಸುವ ಕರಿತು ಚರ್ಚಿಸಿದರು.


ನಾಳೆಯಿಂದ ಬೆಳಗ್ಗಿನ ಟ್ರಿಪ್ , 2 ದಿನದ ಬಳಿಕ ಸಂಜೆಯ ಟ್ರಿಪ್ – ಅಧಿಕಾರಿಗಳ ಭರವಸೆ

ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಬಳಿಗೆ ಬಂದ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಅವರು ವಿದ್ಯಾರ್ಥಿಗಳ ಬೇಡಿಕೆಯನ್ನು ಆಲಿಸಿ ಸದ್ಯದ ಮಟ್ಟಿಗೆ ಸಿಬ್ಬಂದಿಗಳ ಕೊರತೆ ಇದೆ. ಆದರೆ ನಾಳೆಯಿಂದಲೇ( ಜ.4 )ರಿಂದ ಬೆಳಗ್ಗಿನ ಟ್ರಿಪ್ ಗೆ ಅವಕಾಶ ಮಾಡಿ ಕೊಡುತ್ತೇನೆ. ಸಂಜೆಯ ಟ್ರಿಪ್ ಗೆ 2 ದಿನ ಬಿಟ್ಟು ರೂಟ್ ಸರ್ವೆ ಮಾಡಿ ಬಳಿಕ ಟ್ರಿಪ್ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ವಿದ್ಯಾರ್ಥಿಗಳು ನಮಗೆ ಸಂಜೆಯೂ ಬಸ್ ಬೇಕೇ ಬೇಕೆಂದು ಪಟ್ಟು ಹಿಡಿದರೂ. ಈ ವೇಳೆ ನಾನು ಸರ್ವೆ ಮಾಡಿ ನೋಡುತ್ತೇನೆ ಎಂದು ಭರವಸೆ ನೀಡಿದಂತೆ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.

 

LEAVE A REPLY

Please enter your comment!
Please enter your name here