ನಮ್ಮಲ್ಲಿ ಧರ್ಮ ಪ್ರಜ್ಞೆ ಜಾಗೃತಿಯಾಗಬೇಕಿದೆ: ಡಾ| ವಿಜಯ ಸರಸ್ವತಿ
ಧಾರ್ಮಿಕತೆಯಿಂದ ಹಿಂದೂ ಸಮಾಜ ಗಟ್ಟಿಯಾಗಿದೆ: ದಯಾನಂದ ಉಜಿರೆಮಾರ್
ನಮ್ಮಲ್ಲಿ ಸಂಘಟನಾ ಶಕ್ತಿ ಬೆಳೆಯಬೇಕು: ಸುಧೀರ್ ಕುಮಾರ್ ಶೆಟ್ಟಿ
ವಿಟ್ಲ: ನಮ್ಮಲ್ಲಿ ಧರ್ಮ ಪ್ರಜ್ಞೆ ಜಾಗೃತಿಯಾಗಬೇಕಿದೆ. ಮಾತಿಗೆ ಪ್ರೇರಕ ಶಕ್ತಿ ಅಗತ್ಯ. ನಮ್ಮ ಧರ್ಮ ನಮಗೆ ಶ್ರೇಷ್ಠ. ಸನಾತನ ಹಿಂದೂ ಧರ್ಮ ಎಂದರೆ ಮಾನವ ಮಾಧವನಾಗುವ ಪ್ರಕ್ರಿಯೆ. ಜಗತ್ತಿಗೆ ಒಳಿತು ಮಾಡುವುದೇ ನಿಜವಾದ ಧರ್ಮ ಎಂದು ನೆಹರೂನಗರ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ| ವಿಜಯ ಸರಸ್ವತಿರವರು ಹೇಳಿದರು.
ಅವರು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.೩ರಿಂದ ಜ.೮ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ ಜ.೩ರಂದು ಕ.ಶಿ.ವಿಶ್ವನಾಥ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಭಾರತೀಯ ಸಂಸ್ಕೃತಿ ಆಧ್ಯಾತ್ಮಿಕತೆ. ಪರಿವರ್ತನೆ ಪ್ರೀತಿಯಿಂದ ಸಾಧ್ಯ. ಧರ್ಮ ಜಾಗೃತಿಯಾಗಲು ಇಂತಹ ಕಾರ್ಯಕ್ರಮ ಪೂರಕ. ಧರ್ಮ ಜಾಗೃತಿಯಾಗಲು ತ್ಯಾಗಪೂರ್ಣ ಮನಸ್ಸು ಅಗತ್ಯ. ಪರಿವರ್ತನೆಗೆ ಬದಲಾವಣೆ ಅಗತ್ಯ. ಒಳ್ಳೆಯ ಯೋಚನೆ ಎಲ್ಲೆಡೆಯಿಂದ ಬರಲಿ. ಬದಲಾವಣೆ ತನ್ನಿಂದಲೇ ಪ್ರಾರಂಭವಾಗಬೇಕು. ನಮ್ಮ ಆಚಾರ ವಿಚಾರಗಳು ಮತ್ತೆ ನಮ್ಮನ್ನು ಎತ್ತಿಹಿಡಿಯಲಿದೆ ಎಂದರು.
ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್ ರವರು ಮಾತನಾಡಿ ಶ್ರೇಷ್ಟರನ್ನು, ಎಲ್ಲವನ್ನೂ ಬಲ್ಲವರನ್ನು ಕೂಡಿಸಿಕೊಂಡು ಕೆಲಸ ಮಾಡುವ ಜಾಣ್ಮೆ ನಮ್ಮಲ್ಲಿರಬೇಕು. ಅತೀ ಕಡಿಮೆ ಅವಧಿಯಲ್ಲಿ ಈ ಗ್ರಾಮದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬ್ರಹ್ಮಕಲಶ ನಡೆಸುತ್ತಿರುವುದು ತುಂಬಾ ಸಂತಸದ ವಿಚಾರ. ಧಾರ್ಮಿಕತೆಯಿಂದ ಹಿಂದೂ ಸಮಾಜ ಗಟ್ಟಿಯಾಗಿದೆ. ಧಾರ್ಮಿಕ ಉಪನ್ಯಾಸದಲ್ಲಿ ಸಮಾಜಕ್ಕೆ ಒಳಿತಾಗುವ ವಿಚಾರವಿದೆ. ನಮ್ಮಲ್ಲಿರುವ ನ್ಯೂನತೆಯನ್ನು ಸರಿಪಡಿಸಿಕೊಂಡು ಹೋಗುವ ಮನಸ್ಸು ನಮ್ಮಲ್ಲಿರಬೇಕು. ನಮ್ಮಲ್ಲಿರುವ ವ್ಯತ್ಯಾಸವನ್ನು ಮರೆಮಾಚಿಕೊಂಡು ಹೋಗಬೇಕು.
ಇಂದಿನ ಕಾರ್ಯಕ್ರಮ ಮುಗಿದ ಬಳಿಕ ನಾಳೆಯ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದಾಗ ಮುಂದಿನ ಕಾರ್ಯಕ್ರಮಗಳು ಯಶಸ್ಸಾಗಲು ಸಾಧ್ಯ. ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ಜಾಣ್ಮೆ ನಮ್ಮಲ್ಲಿರಬೇಕು. ಇದೊಂದು ಉತ್ತಮ ಕಾರ್ಯಕ್ರಮವಾಗಲಿ ಎಂದು ಅವರು ಶುಭಹಾರೈಸಿದರು.
ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಎಂ.ಸುಧೀರ್ ಕುಮಾರ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮಲ್ಲಿ ಸಂಘಟನಾ ಶಕ್ತಿ ಬೆಳೆಯಬೇಕು. ಸಮಾಜಮುಖಿ ಚಿಂತನೆ ನಮ್ಮಲ್ಲಿರಬೇಕು. ಯುವಪೀಳಿಗೆ ಮತ್ತಷ್ಟು ಬದಲಾವಣೆಯಾಗಬೇಕು. ಕ್ಷೇತ್ರದ ಬೆಳವಣಿಗೆಗೆ ಗ್ರಾಮದ ಬಂಧುಗಳ ತ್ಯಾಗಪೂರ್ಣ ಸೇವೆ ಮಹತ್ತರವಾದುದು. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುರೇಶ್ ಕೆ.ಎಸ್. ಮುಕ್ಕುಡ, ಇಡ್ಕಿದು ಸೇವಾ ಸಹಕಾರ ಸಂಘ ನಿ. ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲು, ವಿಟ್ಲ ಮೆಸ್ಕಾಂ ನ ಜೆ. ಇ.ಸತೀಶ್ ಸಪಲ್ಯ, ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ದಾಸ್ ಭಕ್ತ, ಕಬಕ ಅಡ್ಯಲಾಯ ಮತ್ತು ಸಪರಿವಾರ ದೈವಸ್ಥಾನದ ಅಧ್ಯಕ್ಷರಾದ ಸತೀಶ್ ರೈ ಡಿಂಬ್ರಿಗುತ್ತು, ಅಳಕೆಮಜಲು ಶ್ರೀ ಶಾರದಾಂಬ ಭಜನಾ ಮಂದಿರದ ಅಧ್ಯಕ್ಷರಾದ ಜಗದೀಶ ಪೂಜಾರಿ ಅಳಕೆಮಜಲು, ಇಡ್ಕಿದು ಸೇವಾ ಸಹಕಾರ ಸಂಘ ನಿ. ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ , ವಾಸ್ತು ತಜ್ಞರಾದ ನಾಗೇಶ ಕುಂಡಡ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇಜಪ್ಪ ಕೋಲ್ಪೆ, ಉಷಾ ಮುಂಡ್ರಬೈಲು, ಶಶಿಪ್ರಭಾ ಮಿತ್ತೂರು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಾಬು ಸೂರ್ಯ, ಮೋಂಟ ಮುಗೇರ ಮಿತ್ತೂರು, ಸೀತ ಉರಿಮಜಲು, ಓಬಯ್ಯ ಅನಂತಾಡಿ, ಸುಮತಿ ವೀರಪ್ಪ ನಾಯ್ಕ್ ಅರ್ಕೆಚ್ಚಾರ್, ಸಂಜೀವ ಸಪಲ್ಯ, ಜನಾರ್ದನ ಕುಲಾಲ್ ರವರನ್ನು ಗೌರವಿಸಲಾಯಿತು.
ಶ್ರಾವ್ಯ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.ಬ್ರಹ್ಮಕಲಶ ಮತ್ತು ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಪುಲ್ಲಚಂದ್ರ ಪಿ.ಜಿ.ಕೋಲ್ಪೆ ವಂದಿಸಿದರು. ಈಶ್ವರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ೫.೩೦ ರಿಂದ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ಕೋಳ್ಯೂರು ಇವರಿಂದ ನೃತ್ಯಭಜನೆ ನಡೆಯಿತು.
ರಾತ್ರಿ ಗಂಟೆ ೯ರಿಂದ ನಾಟ್ಯರಂಗ ಪುತ್ತೂರು ಇವರಿಂದ ವಿದುಷಿ ಮಂಜುಳಾ ಸುಬ್ರಹ್ಮಣ್ಯರವರ ನಿರ್ದೇಶನದಲ್ಲಿ ಭರತನಾಟ್ಯ ನೃತ್ಯಾರ್ಪಣಂ ನಡೆಯಿತು. ರಾತ್ರಿ ಗಂಟೆ ೧೦:೩೦ರಿಂದ ಸ್ಥಳೀಯ ಯುವ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ಕಂದಶ್ರೀ ಕಲಾವೃಂದ ಕೋಲ್ಪೆ ಇವರಿಂದ ತುಳು ನಾಟಕ ‘ಕಾರ್ಣಿಕದ ಕಲ್ಕುಡೆ’ ನಡೆಯಿತು.
ಜ.೪ರಂದು ಬೆಳಗ್ಗೆ ೫ರಿಂದ ವೈದಿಕ ಕಾರ್ಯಕ್ರಮಗಳು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ, ಸಾಯಂಕಾಲ ದೀಪಾರಾಧನೆ ಅಂಕುರಪೂಜೆ, ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ.
ಸಾಯಂಕಾಲ ಸಭಾ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಕಲಶ ಹಾಗೂ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ರಮೇಶ್ ಭಟ್ ಭಂಡಾರಮನೆರವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. ರಾಜ್ಯಧಾರ್ಮಿಕ ಪರಿಷತ್ ನ ಸದಸ್ಯರಾದ ಸೂರ್ಯನಾರಾಯಣ ಭಟ್ ಕಶೆಕೋಡಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಉಳಿದಂತೆ ಸಾಮಾಜಿಕ, ಧಾರ್ಮಿಕ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ೯ರಿಂದ ಶ್ರೀ ಸೀತಾರಾಮಾಂಜನೇಯ ಮಹಿಳಾ ಭಜನಾ ಮಂಡಳಿ ಮಿತ್ತೂರು ಇವರಿಂದ ಭಜನೆ ನಡೆಯಲಿದೆ. ಬೆಳಗ್ಗೆ ೧೧ರಿಂದ ಶ್ರೀ ದುರ್ಗಾಪರಮೇಶ್ವರೀ ಉಳ್ಳಾಲ್ತಿ ಮಲರಾಯ ಯಕ್ಷಗಾನ ಪ್ರತಿಷ್ಠಾನ ಬೊಳ್ವಾರು ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಾಯಂಕಾಲ ೫ ರಿಂದ ಶ್ರೀದೇವಿ ಭಜನಾ ಮಂಡಳಿ ಮುಡಿಪು ಇವರಿಂದ ನೃತ್ಯ ಭಜನೆ ನಡೆಯಲಿದೆ. ರಾತ್ರಿ ೯ಗಂಟೆಯಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ತುಳುನಾಟಕ ಶಿವದೂತೆ ಗುಳಿಗೆ ನಡೆಯಲಿದೆ.