ಪುತ್ತೂರು:ಕಳೆದ ಒಂಬತ್ತು ತಿಂಗಳಿನಿಂದ ನಿರಂತರವಾಗಿ ತಿಂಗಳಿಗೊಂದು ವಿಶೇಷ ಚಿಕಿತ್ಸೆಗಳನ್ನು ಜೋಡಿಸಿಕೊಂಡು ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿರುವ ಸಂಪ್ಯ ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನ ಹಾಗೂ ಆರೋಗ್ಯ ರಕ್ಷಾ ಸಮಿತಿಯ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ 10 ನೇ ತಿಂಗಳ ಶಿಬಿರವು ಜ.೧ರಂದು ದೇವಸ್ಥಾನದ ಆವರಣದಲ್ಲಿ ನೆರವೇರಿತು.
ಶಿಬಿರವನ್ನು ಉದ್ಘಾಟಿಸಿದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮಾತನಾಡಿ, ದೇವಸ್ಥಾನದಲ್ಲಿ ಶಿಬಿರ ಆಯೋಜಿಸುವ ಮೂಲಕ ಚಿಕಿತ್ಸೆಗಾಗಿ ಜನರಿಗೆ ಅಲೆದಾಡುವುದು ತಪ್ಪಿದೆ. ವೈದ್ಯರುಗಳು ಜನರಿಗೆ ಸುಲಭವಾಗಿ ದೊರೆತು ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲಕರವಾದ ವಾತಾವರಣ ಕಲ್ಪಿಸಿರುವುದನ್ನು ಅವರು ಶ್ಲಾಘಿಸಿದರು.
ಮುಖ್ಯ ಅತಿಥಿ ಧ್ವಾರಕಾ ಕನ್ಸ್ಟ್ರಕ್ಷನ್ ಗೋಪಾಲಕೃಷ್ಣ ಭಟ್ ಮಾತನಾಡಿ, ಶಿಬಿರ ಆಯೋಜಿಸುವುದು ಸುಲಭದ ಕೆಲಸವಲ್ಲ. ನಿರಂತರವಾಗಿ 10 ಶಿಬಿರಗಳನ್ನು ಆಯೋಜಿಸಿ, ವಿಶೇಷ ಪರಿಣಿತ ವೈದ್ಯರುಗಳನ್ನು ಹುಡುಕಿ ಅವರ ಮೂಲಕ ಚಿಕಿತ್ಸೆ ನೀಡುತ್ತಿರುವ ಸಾಧನೆಯನ್ನು ಅಭಿನಂದಿಸಿದರು.
ಆರೋಗ್ಯ ರಕ್ಷಾ ಸಮಿತಿ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಅಧ್ಯಕ್ಷತೆ ವಹಿಸಿದ್ದರು. ಕೀಲು ಮತ್ತು ಎಲುಬು ತಜ್ಞರಾದ ಡಾ.ಭಾಸ್ಕರ್ ಎಂ, ಇಎನ್ಟಿ ತಜ್ಞೆ ಡಾ. ಅರ್ಚನಾ, ಆಯುರ್ವೇದ ತಜ್ಞರಾದ ಡಾ. ಸಾಯಿಪ್ರಕಾಶ್, ಡಾ. ವೇಣುಗೋಪಾಲ್, ಮುಕ್ರಂಪಾಡಿ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಸೋಮಶೇಖರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೈಥಿಲಿ ಪ್ರಾರ್ಥಿಸಿದರು. ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಇಳಂತಾಜೆ ಸ್ವಾಗತಿಸಿದರು. ಉದಯ ಕುಮಾರ್ ರೈ ಎಸ್ ಸಂಪ್ಯ ಕಾರ್ಯಕ್ರಮ ನಿರೂಪಿಸಿ, ಹರಿಣಿ ಪುತ್ತೂರಾಯ ವಂದಿಸಿದರು.
ಈ ಬಾರಿಯ ಶಿಬಿರದಲ್ಲಿ ಹೃದ್ರೋಗ ತಪಾಸಣೆ, ಕೀಲು ಮತ್ತು ಎಲುಬು ತಪಾಸಣೆ, ಇಎನ್ಟಿ, ತಜ್ಞರಿಂದ ವೈದ್ಯಕೀಯ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಮೂಳೆ ಸಾಂದ್ರತೆ ಪರೀಕ್ಷೆ, ಮಧುಮೇಹ ರಕ್ತಪರೀಕ್ಷೆ ಹಾಗೂ ಉಚಿತ ಔಷಧಿಗಳು ವಿತರಿಸಲಾಯಿತು. ಕೀಲು ಮತ್ತು ಎಲುಬು ತಜ್ಞರಾದ ಡಾ.ಭಾಸ್ಕರ್ ಎಂ, ಡಾ. ಸಚಿನ್ ಶಂಕರ್ ಹಾರಕೆರೆ, ಇಎನ್ಟಿ ತಜ್ಞೆ ಡಾ. ಅರ್ಚನಾ, ತಜ್ಞ ವೈದ್ಯ ಡಾ.ಸುರೇಶ್ ಪುತ್ತೂರಾಯ, ಆಯುರ್ವೇದ ತಜ್ಞರಾದ ಡಾ. ಸಾಯಿಪ್ರಕಾಶ್, ಡಾ. ದೀಕ್ಷಾ, ಡಾ. ವೇಣುಗೋಪಾಲ್ರವರು ಶಿಬಿರದಲ್ಲಿ ಸಹಕರಿಸಿದರು.
ನವಚೇತನ ಯುವಕ ಮಂಡಲ ಸಂಪ್ಯ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಐಡಿಯಲ್ ಲ್ಯಾಬೊರೇಟರಿ ಪುತ್ತೂರು, ಮಹಾವೀರ ಆಸ್ಪತ್ರೆ ಪುತ್ತೂರು, ಭಾರತೀಯ ಜನೌಷಧಿ ಕೇಂದ್ರಗಳು ಪುತ್ತೂರು, ಉಷಾ ಸ್ಕ್ಯಾನ್ ಸೆಂಟರ್ ದರ್ಬೆ, ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್ ತೆಂಕಿಲ, ವಿ ಕೇರ್ ಲ್ಯಾಬ್ ಹಾಗೂ ಹಲವು ಔಷಧಿ ಕಂಪೆನಿಗಳು ಶಿಬಿರದಲ್ಲಿ ಸಹಕರಿಸಿದ್ದರು. ಶಿಬಿರಾರ್ಥಿಗಳಿಗೆ ಉಚಿತ ಚಿಕಿತ್ಸೆ, ಔಷಧಿಗಳ ಜೊತೆಗೆ ಊಟ, ಉಪಾಹಾರಗಳನ್ನು ಒದಗಿಸಿಲಾಗಿತ್ತು.