ರಾಮಕುಂಜ: ಯುವಕರು ಅಧ್ಯಯನಶೀಲತೆ ಶ್ರಮಜೀವನ ರಾಷ್ಟ್ರಭಕ್ತಿ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳಿ, ಸಮಾಜಮುಖಿಯಾಗಿ ಬೆಳೆಯಿರಿ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್. ಆರ್. ಹೇಳಿದರು.
ಅವರು ರಾಮಕುಂಜದ ಶ್ರೀರಾಮಕುಂಜೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕವು ಕೊಯಿಲ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತಾಡುತ್ತಿದ್ದರು. ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕುಮಾರ್ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್. ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಕೊಯಿಲ ಶಾಲಾ ಮುಖ್ಯಗುರು ಸುಜಾತ ಎಂ, ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥ ಗೌಡ, ಕೊಯಿಲ ಗ್ರಾ.ಪಂ.ಸದಸ್ಯೆ ಪುಷ್ಪ ಸುಭಾಷ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೇಜಸ್ವಿ ಮತ್ತು ಹರ್ಷಿತ ಪ್ರಾರ್ಥಿಸಿದರು. ಶಿಬಿರಾಧಿಕಾರಿ ಕೃಷ್ಣಪ್ರಸಾದ್ ಸ್ವಾಗತಿಸಿದರು. ಸ್ವಾತಿ ಕೆ.ಎಸ್. ವಂದಿಸಿದರು. ಬಿಂದ್ಯಾಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.