ನರಿಮೊಗರು ಸಾಂದೀಪನಿ ಶಾಲಾ ಕ್ರೀಡೋತ್ಸವ-ವಾರ್ಷಿಕೋತ್ಸವ

0

ಪುತ್ತೂರು:ಪರೀಕ್ಷೆ ಒಂದು ಹಂತ ಮಾತ್ರ. ಜೀವನ ಇನ್ನೊಂದು. ಪರೀಕ್ಷೆಗಿಂತಲೂ ಜೀವನ ದೊಡ್ಡದು. ಶಿಕ್ಷಣದ ಜೊತೆಗೆ ಸಾಧನೆ ಮುಖ್ಯವಾಗಿದ್ದು ಅದರ ಅನಿವಾರ್ಯತೆಯಿದೆ. ಸಾಂದೀಪನಿ ವಿದ್ಯಾ ಸಂಸ್ಥೆಯು ಇದಕ್ಕೆ ಪೂರಕವಾಗಿದ್ದು ಇಂತಹ ಉತ್ತಮ ಸಂಸ್ಥೆ ಇದೆಯೆಂಬುದು ಶಿಕ್ಷಣ ಇಲಾಖೆಗೂ ಹೆಮ್ಮೆ. ಇಂತಹ ಸಂಸ್ಥೆಗಳಿಂದ ಇಲಾಖೆಯು ಏನೂ ಬೇಕಾದರೂ ನಿರೀಕ್ಷಿಸಬಹುದು. ಇದು ನಮ್ಮ ಶಕ್ತಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೆ.ಸುಧಾಕರ ಪುತ್ತೂರಾಯ ಹೇಳಿದರು.


ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಜ.4 ರಂದು ನಡೆದ ಶಾಲಾ ಕ್ರೀಡೋತ್ಸವ-ವಾರ್ಷಿಕೋತ್ಸವ-2022-23 ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಾಂದೀಪನಿ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣವಿದೆ. ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿ ಮಕ್ಕಳನ್ನು ಬೆಳೆಸಲಾಗುತ್ತಿದ್ದು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳು ಅದೃಷ್ಠವಂತರು. ದೈಹಿಕ ಕಸರತ್ತುಗಳಿಗೆ ಆಧ್ಯತೆಯಿದೆ. ಜಿಲ್ಲೆಯ ಕೆಲವೇ ವಿದ್ಯಾ ಸಂಸ್ಥೆಗಳಲ್ಲಿ ಸಾಂದೀಪನಿಯೂ ಒಂದಾಗಿದೆ ಎಂದರು. ಗ್ರಾಮಿಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಲೆಯಲ್ಲಿ ಎನ್‌ಎಂಎಂಎಸ್ ಪರೀಕ್ಷೆಗೆ ಒತ್ತು ನೀಡಬೇಕು. ಇನ್‌ಸ್ಪೈಯರ್ ಅವಾರ್ಡ್, ಎನ್‌ಟಿಎಸ್‌ಸಿಯಲ್ಲಿ ಸಾಧನೆ ಮಾಡುವ ಗುರಿಯಿರಬೇಕು. ಸಂಸ್ಥೆ ಇನ್ನಷ್ಟು ಪ್ರತಿಭಾನ್ವಿತರನ್ನು ಹೊರತರುವಂತಾಗಲಿ. ಇಲಾಖೆಯಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಮಾತನಾಡಿ,ವಿದ್ಯಾದಾನವು ಇತರ ದಾನಗಳಂತಲ್ಲ. ಇತರ ಯಾವುದೇ ದಾನ ಹೆಚ್ಚು ಕಾಲ ಉಳಿಯುವುದಿಲ್ಲ. ಆದರೆ ವಿದ್ಯಾದಾನ ವ್ಯಕ್ತಿಯ ಬದುಕಿನುದ್ದಕ್ಕೂ ಶಾಶ್ವತವಾಗಿರುತ್ತದೆ. ಅದನ್ನು ಕದಿಯಲು ಸಾಧ್ಯವಿಲ್ಲ. ಪೋಷಕರು ಮಕ್ಕಳ ಮೇಲೆ ಬಹಳಷ್ಟು ಕನಸ್ಸುಗಳನಿಟ್ಟು ವಿದ್ಯಾಬ್ಯಾಸ ನೀಡುತ್ತಾರೆ. ಇದಕ್ಕೆ ಪೂರಕವಾಗಿ ಮಕ್ಕಳು ಬೆಳೆದು ಹೆಮ್ಮರವಾಗಬೇಕು. ಕೆಲವು ಮಕ್ಕಳಲ್ಲಿ ಉತ್ತಮ ಕನಸ್ಸುಗಳಿದ್ದರೆ ಇನ್ನು ಕೆಲಸ ಮಕ್ಕಳಲ್ಲಿ ಯಾವುದೇ ಕನಸುಗಳಿರುವುದಿಲ್ಲ. ಇಂತಹ ಮಕ್ಕಳನ್ನು ಕನಸ್ಸು ಪೋಷಕರು ಹಾಗೂ ಶಿಕ್ಷಕರ ಮಕ್ಕಳ ಭವಿಷ್ಯವನ್ನು ರೂಪಿಸುವ ಕೆಲಸವಾಗಬೇಕು. ಓದುವ ಕೌಶಲ್ಯವನ್ನು ನೀಡಬೇಕು. ಸ್ಪರ್ಧಾತ್ಮಕ ಜಗತ್ತನ್ನು ಎದುರಿಸುವ ಶಕ್ತಿ ನೀಡಬೇಕು ಎಂದರು.

 ಹಿತ ಚಿಂತಕ ಬಬು ಗೌಡ ಪಾಟೀಲ್ ಬಾಗಲಕೋಟೆ ಮಾತನಾಡಿ, ಗುರುಕುಲ ಮಾದರಿಯಲ್ಲಿ ಶಿಕ್ಷಣ ನೀಡಿ ಮಕ್ಕಳನ್ನು ಉತ್ತಮವಾಗಿ ಬೆಳೆಸುತ್ತಿದೆ. ಸಂಸ್ಥೆಯು ಇನ್ನಷ್ಟು ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿ ಹೆಮ್ಮರವಾಗಿ ಬೆಳೆಯಲಿ ಎಂದರು.

ಸಂಸ್ಥೆಯ ಹಿರಿಯ ವಿದ್ಯಾರ್ಥಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುಪ್ರಿಯಾ ನಾಯಕ್ ಮಾತನಾಡಿ, ಹಿರಿಯ ವಿದ್ಯಾರ್ಥಿ ಎನ್ನಲು ಹೆಮ್ಮೆಯಾಗುತ್ತಿದೆ. ಇಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುತ್ತಿದೆ. ಇದರಿಂದಾಗಿ ಪ್ರಖ್ಯಾತಿ ಯುವತಿ ಮಂಡಲ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು, ಗುರುಕುಲ ಸಂಗೀತ ಶಾಲೆಯನ್ನು ಮುನ್ನಡೆಸಲು ಸಾಂದೀಪನಿ ಶಾಲೆಯಲ್ಲಿ ಪಡೆದ ಶಿಕ್ಷಣದಿಂದ ಸಾಧ್ಯವಾಗಿದೆ. ಇಲ್ಲಿನ ಸಾಹಸ ಮಯ ಕ್ರೀಡೆಗಳು ಜೀವನದಲ್ಲಿ ಸಾಧನೆಗೆ ಪೂರಕವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಜಯರಾಮ ಕೆದಿಲಾಯ ಮಾತನಾಡಿ, ಕೋರೋನಾ ಕಾರಣದಿಂದ ಕಳೆದ ವರ್ಷ ಕ್ರೀಡೋತ್ಸವವನ್ನು ನಡೆಸಲು ಅಸಾಧ್ಯವಾಗಿತ್ತು. ಈ ವರ್ಷ ಅದ್ದೂರಿಯಾಗಿ ನಡೆಸಲಾಗುತ್ತಿದೆ. ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ನಾನಾ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ ಎಂದರು.


ಬೆಳ್ಳಾರೆ ಠಾಣೆ ಹೆಡ್‌ಕಾನ್‌ಸ್ಟೇಬಲ್ ಜಗದೀಶ್ ಪಿ.ಎಸ್., ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಕೆ.ಸುಧಾಕರ ಪುತ್ತೂರಾಯ, ಮಲ್ಲಕಂಬ ಸ್ಪರ್ಧೆ ತರಬೇತಿ ನೀಡಿದ ಬಾಗಲಕೋಟೆಯ ಲಕ್ಷ್ಮಣ್, ಶ್ರೀಕೃಷ್ಣ, ಹನುಮಂತ, ಯೋಗ ಚಾಂಪಿಯನ್ ಪಡೆದ ನಿಖಿಲ್ ಬಿ.ಕೆ, ಅಮನ್‌ರಾಜ್, 2021-22 ನೇ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ರಾಜ್ಯದಲಿ 3 ನೇ ರ್‍ಯಾಂಕ್ ಶಾರ್ವರಿ ಎಸ್., ಅತಿಥಿ ಜೈನ್, ನಿಶಿತಾ ಪಿ.ಆರ್., ಧನುಜಾ, 2019-20 ನೇ ಸಾಲಿನಲ್ಲಿ ಅತ್ಯಧಿಕ ಅಂಕ ಗಳಿಸಿದ ಚೈತ್ರಾ ಭಟ್ ವೈ, ಪೂರ್ವಿ ರೈ ಕೆ. ಹಾಗೂ ಆಕಾಶ್ ಜೆ.ರಾವ್‌ರವರನ್ನು ಕಾರ್ಯುಕ್ರಮದಲ್ಲಿ ಸನ್ಮಾನಿಸಲಾಯಿತು. ಹಾಗೂ ಶೇ.95  ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಜಯಮಾಲ ವಿ.ಎನ್ ವರದಿ ವಾಚಿಸಿದರು. ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ ವಂದಿಸಿದರು. ಶಿಕ್ಷಕರಾದ ನೀತು ನಾಯಕ್ ಹಾಗೂ ಮುರಳೀಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ಶಾಲಾ ಆಡಳಿತ ಮಂಡಳಿ ಸದಸ್ಯರಾದ ಎಸ್.ಜಿ ಕೃಷ್ಣ, ಡಾ.ಶಿವಾನಂದ, ಪ್ರಸನ್ನ ಭಟ್ ಎನ್., ಹರೀಶ್ ಪುತ್ತೂರಾಯ, ವಿದ್ಯಾರ್ಥಿ ನಾಯಕ ಹರ್ಷಿತ್ ಎಸ್. ನಾಯಕ್, ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಪುತ್ತಿಲ ಅತಿಥಿಗಳನ್ನು ಹೂ ಹಾರ ಹಾಕಿ ಸ್ವಾಗತಿಸಿದರು.

ಶೋಭಾ ಕರಂದ್ಲಾಜೆ ಭೇಟಿ:
ಶಾಲಾ ಕ್ರೀಡೋತವ್ಸ, ವಾರ್ಷಿಕೋತ್ಸವಕ್ಕೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ, ಶಾಲಾ ಸಾಧನೆ, ವಿದ್ಯಾರ್ಥಿಗಳ ಸಾಹಸಮಯ ಕ್ರೀಡೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಮತ್ತು ಸಾಹಸ ಪ್ರದರ್ಶನ, ಯಕ್ಷಗಾನ ಆಧಾರಿತ ನೃತ್ಯ ರೂಪಕ, ಸಮೂಹ ನೃತ್ಯಗಳು, ಯೋಗಾಸನ, ಕರಾಟೆ, ಕೂಪಿಕಾ, ಸಮತೋಲನ, ಬೆಂಕಿಯಲ್ಲಿ ಸಾಹಸಗಳು, ಕೋಲಾಟ, ಗೋಪುರ, ಮಲ್ಲಕಂಬ, ತಾಲೀಮು, ಸೈಕಲ್ ಸಾಹಸಗಳು ಹಾಗೂ ದೀಪಾರತಿ ಮೊದಲಾದ ಮೈರೋಮಾಂಚನಗೊಳಿಸುವ ಸಾಹಸಮಯ ಕ್ರೀಡೆಗಳು ಪ್ರೇಕ್ಷಕರ ಮನ ಸೆಳೆಯಿತು.

LEAVE A REPLY

Please enter your comment!
Please enter your name here