ಜ.8: ಡೊನ್ ಬೊಸ್ಕೊ ಕ್ಲಬ್‌ನಿಂದ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ‘ಸಿಪಿಎಲ್ 2023, ಸೀಸನ್ 2’ ಕ್ರಿಕೆಟ್-ಕ್ಷಣಗಣನೆ ಆರಂಭ

ವರದಿ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಮಾಯಿದೆ ದೇವುಸ್ ಚರ್ಚ್‌ನ ಡೊನ್ ಬೊಸ್ಕೊ ಕ್ಲಬ್ ಸಂಘಟನೆಯ ವತಿಯಿಂದ ಪುತ್ತೂರು ಮಾಯಿದೆ ದೇವುಸ್ ಚರ್ಚ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಸಮುದಾಯದ ಕ್ರಿಕೆಟ್ ಆಟಗಾರರನ್ನೊಳಗೊಂಡ ‘ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) 2023-ಸೀಸನ್ 2’ ಜ.8 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಲಿದ್ದು, ಕ್ರಿಕೆಟ್ ಪಂದ್ಯಾಟಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ.

ಡೊನ್ ಬೊಸ್ಕೊ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ಫೆಬಿಯನ್ ಗೋವಿಯಸ್‌ರವರು ಬೆಳಿಗ್ಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಗೌರವ ಅತಿಥಿಯಾಗಿ ದರ್ಬೆ ಸೈಂಟ್ ಲಾರೆನ್ಸ್ ಸಾ ಮಿಲ್‌ನ ಮಾಲಕ ಹಾಗೂ ಎಸ್.ಎಲ್ ಗ್ಲ್ಯಾಡಿಯೇಟರ‍್ಸ್ ಕ್ರಿಕೆಟ್ ತಂಡದ ಮಾಲಕ ಸಿಲ್ವೆಸ್ಟರ್ ಡಿ’ಸೋಜರವರು ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್, ಬನ್ನೂರು ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ, ಮಂಗಳೂರಿನ ಚಾರ್ಟರ್ಡ್ ಎಕೌಂಟೆಂಟ್ ಓಲ್ವಿನ್ ಹೆನ್ರಿ ರೊಡ್ರಿಗಸ್, ಪುತ್ತೂರು ನಗರಸಭಾ ಸದಸ್ಯ ರಾಬಿನ್ ತಾವ್ರೋ ಸಾಲ್ಮರರವರು ಭಾಗವಹಿಸಲಿರುವರು.

ಐಪಿಎಲ್ ಮಾದರಿ ಪಂದ್ಯ: ಪಂದ್ಯಾಕೂಟದಲ್ಲಿ ಲೀಗ್, ಕ್ವಾಲಿಫಯರ್, ಎಲಿಮಿನೇಟರ್, ಫೈನಲ್ ಹೀಗೆ ಒಟ್ಟು 18 ಪಂದ್ಯಗಳು ಜರಗಲಿದ್ದು, ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಗ್ರೌಂಡ್ ‘ಎ’ ಹಾಗೂ ಗ್ರೌಂಡ್ ‘ಬಿ’ ಎಂಬಂತೆ ಪಿಚ್ ಅನ್ನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋರವರ ನೇತೃತ್ವ ಹಾಗೂ ರಾಜೇಶ್ ಮೂಲ್ಯರವರ ಸಹಕಾರದಲ್ಲಿ ನಿರ್ಮಿಸಲಾಗುತ್ತಿದ್ದು, ಕ್ರಿಕೆಟ್ ಪ್ರಿಯರಿಗೆ ಏಕಕಾಲದಲ್ಲಿ ಎರಡು ಪಂದ್ಯಗಳನ್ನು ವೀಕ್ಷಣೆ ಮಾಡುವ ಸುವರ್ಣಾವಕಾಶವನ್ನು ಸಂಘಟಕರು ಒದಗಿಸಿಕೊಟ್ಟಿದ್ದಾರೆ.

ಬಹುಮಾನಗಳ ಆಗರ: ಈ ಟೂರ್ನಿಯಲ್ಲಿ ಚಾಂಪಿಯನ್ ತಂಡಕ್ಕೆ ರೂ.23333/-ಹಾಗೂ ಸಿಪಿಎಲ್ ಟ್ರೋಫಿ, ರನ್ನರ‍್ಸ್ ವಿಜೇತ ತಂಡಕ್ಕೆ ರೂ.18888/-ಹಾಗೂ ಸಿಪಿಎಲ್ ಟ್ರೋಫಿ ಜೊತೆಗೆ ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟರ್, ಬೆಸ್ಟ್ ಅಲೌರೌಂಡರ್, ಸರಣಿಶ್ರೇಷ್ಟ, ಗೇಮ್ ಚೇಂಜರ್, ಬೆಸ್ಟ್ ಕೀಪರ್, ಬೆಸ್ಟ್ ಫೀಲ್ಡರ್, ಬೆಸ್ಟ್ ಸ್ಟ್ಯಾಂಡಿಂಗ್ ಪ್ಲೇಯರ್, ಪಿಂಚ್ ಹಿಟ್ಟರ್, ವ್ಯಾಲ್ಯುವೇಬಲ್ ಪ್ಲೇಯರ್ ಪ್ರಶಸ್ತಿ ಜೊತೆಗೆ ಪ್ರತಿ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿನ ಸಾಧನೆಗಾಗಿ ಆಸ್ಕರ್ ಆನಂದ್ ಹಾಗೂ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ.ಡೋನ್ ಗ್ರೆಗೋರಿ ಮಸ್ಕರೇನ್ಹಸ್ ಕಲ್ಲಿಮಾರುರವರನ್ನು ಸನ್ಮಾನಿಸುವ ಕಾಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಫೆಬಿಯನ್ ಗೋವಿಯಸ್, ಕಾರ್ಯದರ್ಶಿ ಜೆರಾಲ್ಡ್ ಡಿ’ಕೋಸ್ಟ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಸಿಲ್ವೆಸ್ಟರ್ ಗೊನ್ಸಾಲ್ವಿಸ್, ಸಂಯೋಜಕರಾದ ರಾಕೇಶ್ ಜೆ.ಮಸ್ಕರೇನ್ಹಸ್, ಪ್ರಕಾಶ್ ಸಿಕ್ವೇರಾ, ಆಲನ್ ಮಿನೇಜಸ್, ರೋಹನ್ ಡಾಯಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೆರ್ಸಿ ಬಿಡುಗಡೆ

ಸಿಪಿಎಲ್ ಸೀಸನ್-2 ಆವೃತ್ತಿಯಲ್ಲಿ ಭಾಗವಹಿಸುವ ಆರು ತಂಡಗಳ ವಿವಿಧ ವಿನ್ಯಾಸದ ಜೆರ್ಸಿ ಬಿಡುಗಡೆ ಕಾರ್ಯಕ್ರಮವನ್ನು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಡೊನ್ ಬೊಸ್ಕೊ ಕ್ಲಬ್ ಅಧ್ಯಕ್ಷ ಫೆಬಿಯನ್ ಗೋವಿಯಸ್‌ರವರು ಜೆರ್ಸಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಆರು ತಂಡಗಳ ಮಾಲಕರು, ನಾಯಕರು, ಮತ್ತಿತರರು ಉಪಸ್ಥಿತರಿದ್ದರು.

ಯಾರ ಪಾಲಾಗಲಿದೆ ಸಿಪಿಎಲ್-2 ಟ್ರೋಫಿ?.

ಪಂದ್ಯಾಕೂಟದಲ್ಲಿ ಕಲ್ಲಾರೆ ರೋಶನ್ ರೆಬೆಲ್ಲೋ ಮಾಲಕತ್ವದ ಸಿಝ್ಲರ್ ಸ್ಟ್ರೈಕರ‍್ಸ್, ದರ್ಬೆ ದೀಪಕ್ ಮಿನೇಜಸ್ ಮಾಲಕತ್ವದ ಸೋಜಾ ಸೂಪರ್ ಕಿಂಗ್ಸ್, ಕಿರಣ್ ಡಿ’ಸೋಜ ನೀರ್ಪಾಜೆ ಹಾಗೂ ಮೆಲ್ವಿನ್ ಪಾಸ್ ನೂಜಿ ಮಾಲಕತ್ವದ ಕ್ರಿಶಲ್ ವಾರಿಯರ‍್ಸ್, ಪ್ರದೀಪ್ ವೇಗಸ್(ಬಾಬಾ) ಶಿಂಗಾಣಿ ಮಾಲಕತ್ವದ – ಝೋನ್ ಅಟ್ಯಾಕರ‍್ಸ್, ಕೂರ್ನಡ್ಕ ಸಿಲ್ವೆಸ್ತರ್ ಡಿ’ಸೋಜ ಮಾಲಕತ್ವದ ಎಸ್.ಎಲ್ ಗ್ಲ್ಯಾಡಿಯೇಟರ‍್ಸ್, ಓಸ್ವಾಲ್ಡ್ ಲೂವಿಸ್ ಹಾಗೂ ಲೆಸ್ಟರ್ ಲೂವಿಸ್ ಮಾಲಕತ್ವದ ಲೂವಿಸ್ ಕ್ರಿಕೆಟರ‍್ಸ್ ತಂಡಗಳ ನಡುವೆ ದ್ವಿತೀಯ ಆವೃತ್ತಿಯ ಪಂದ್ಯಾಕೂಟದ ಟ್ರೋಫಿಯನ್ನು ಮುತ್ತಿಕ್ಕಲು ಜಿದ್ದಾಜಿದ್ದಿನ ಹೋರಾಟ ನಡೆಯಲಿದ್ದು ಯಾರ ಪಾಲಾಗಲಿದೆ ಸಿಪಿಎಲ್-2 ಟ್ರೋಫಿ ಎಂದು ಕ್ರಿಕೆಟ್ ಪ್ರಿಯರು ಕಾದು ನೋಡಬೇಕಾಗಿದೆ. ಚೊಚ್ಚಲ ಆವೃತ್ತಿಯಲ್ಲಿ ಸಿಝ್ಲರ್ ಸ್ಟ್ರೈಕರ‍್ಸ್ ಚಾಂಪಿಯನ್ ಆಗಿ, ಸೋಜಾ ಸೂಪರ್ ಕಿಂಗ್ಸ್ ರನ್ನರ್ಸ್ ಆಗಿ ಹೊರ ಹೊಮ್ಮಿತ್ತು.

ಬೆಳಿಗ್ಗೆ 8 ಗಂಟೆಗೆ ಪಂದ್ಯಗಳು ಆರಂಭವಾಗಲಿದ್ದು ಗ್ರೌಂಡ್ ‘ಎ’ಯಲ್ಲಿ – ಝೋನ್ ಅಟ್ಯಾಕರ‍್ಸ್ ಹಾಗೂ ಲೂವಿಸ್ ಕ್ರಿಕೆಟರ‍್ಸ್, ಗ್ರೌಂಡ್ ‘ಬಿ’ಯಲ್ಲಿ ಸೋಜಾ ಸೂಪರ್ ಕಿಂಗ್ಸ್ ಹಾಗೂ ಎಸ್.ಎಲ್ ಗ್ಲ್ಯಾಡಿಯೇಟರ‍್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. ಗ್ರೌಂಡ್ ‘ಎ’ಯಲ್ಲಿ ನಡೆಯುವ ಪ್ರತಿಯೊಂದು ಪಂದ್ಯಗಳನ್ನು ಸುದ್ದಿ ಯೂಟ್ಯೂಬ್ ಚಾನೆಲ್ ನೇರಪ್ರಸಾರ ಮಾಡಲಿದೆ. ಸಿಪಿಎಲ್ ಪ್ರಥಮ ಆವೃತ್ತಿಯಲ್ಲಿಯೂ ಸುದ್ದಿ ಯೂಟ್ಯೂಬ್ ಚಾನೆಲ್ ನೇರಪ್ರಸಾರ ಮಾಡಿದ್ದು ಸಾವಿರಾರು ಮಂದಿ ಕ್ರಿಕೆಟ್ ಪ್ರಿಯರು ವೀಕ್ಷಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.