ಪುತ್ತೂರು:ಸುದ್ದಿ ಮಾಹಿತಿ ಟ್ರಸ್ಟ್ ನೇತೃತ್ವದಲ್ಲಿ ದ.ಕ.ಜಿಲ್ಲಾ ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್, ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇಲ್ಲಿನ ಕಿಲ್ಲೆ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಸಸ್ಯಜಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ.ಪುತ್ತೂರಿನಲ್ಲಿ ಇದೇ ಪ್ರಥಮ ಬಾರಿಗೆ ನಡೆದ ಸಸ್ಯಜಾತ್ರೆ ಹೊಸ ಕ್ರಾಂತಿಯನ್ನುಂಟು ಮಾಡಿದೆ ಮಾತ್ರವಲ್ಲದೆ ಪುತ್ತೂರಿನಲ್ಲಿ ಚರಿತ್ರೆ ಸೃಷ್ಟಿಸಿದೆ ಎಂದು ಸಸ್ಯಜಾತ್ರೆಯಲ್ಲಿ ಪಾಲ್ಗೊಂಡವರಿಂದ ಸಾರ್ವತ್ರಿಕ ಅಭಿಪ್ರಾಯ ವ್ಯಕ್ತವಾಗಿದೆ.ಎರಡನೇ ದಿನ ಜಾತ್ರೋಪಾದಿಯಲ್ಲಿ ಜನರು ಆಗಮಿಸಿದ್ದು `ಸುದ್ದಿ’ಯವರು ಆಯೋಜಿಸಿರುವ ಈ ಕಾರ್ಯಕ್ರಮ ಅದ್ಭುತ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳಲ್ಲಿಯೂ ಕೃಷಿ ತಜ್ಞರಿಂದ ವಿಚಾರ ಸಂಕಿರಣ, ಕೃಷಿ ಕುರಿತ ವಿವಿಧ ಸ್ಪರ್ಧೆ, ಕೃಷಿ ಸಾಧಕರಿಗೆ ಗೌರವಾರ್ಪಣೆ, ಸಾಂಸ್ಕೃತಿಕ ರಸಸಂಜೆ, ನೂರಕ್ಕೂ ಮಿಕ್ಕಿದ ವಿವಿಧ ಮಳಿಗೆಗಳು, ವೆರೈಟಿ ಫುಡ್ ಕೋರ್ಟ್‌ಗಳ ಸಮಾಗಮದೊಂದಿಗೆ ನಡೆದ ಅದ್ದೂರಿ ಸಸ್ಯ ಜಾತ್ರೆ ಜ.8 ರಂದು ರಾತ್ರಿ ತೆರೆ ಕಂಡಿದೆ.ಸಸ್ಯ ಜಾತ್ರೆಯ ಎರಡು ದಿನವೂ ಕಿಲ್ಲೆ ಮೈದಾನದಲ್ಲಿ ಜನಜಂಗುಲಿ ತುಂಬಿತ್ತು.ಸಸ್ಯ ಜಾತ್ರೆಯ ಮೂಲಕ ಪುತ್ತೂರಿನಲ್ಲಿ ಮತ್ತೊಂದು ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು.
ಜ.7 ರಂದು ಬೆಳಿಗ್ಗೆ ಸಸ್ಯ ಜಾತ್ರೆಯ ಆಕರ್ಷಕ ಮೆರವಣಿಗೆಗೆ ಖಾಸಗಿ ಬಸ್ ನಿಲ್ದಾಣದ ಬಳಿ ಚಾಲನೆ ದೊರೆತಿತ್ತು.ಮೆರವಣಿಗೆ ಖಾಸಗಿ ಬಸ್ ನಿಲ್ದಾಣದ ಬಳಿಯಿಂದ ಹೊರಟು ಬಸ್ ನಿಲ್ದಾಣದ ಬಳಿಯಿಂದ ಮುಖ್ಯರಸ್ತೆಯ ಮೂಲಕ ಸಾಗಿ ಕಾರ್ಯಕ್ರಮ ನಡೆಯುವ ಕಿಲ್ಲೆ ಮೈದಾನದಲ್ಲಿ ಜಾಥಾ ಸಮಾಪನಗೊಂಡಿತ್ತು.ಬಳಿಕ ಪುರಭವನದಲ್ಲಿ ಸಭಾ ಕಾರ್ಯಕ್ರಮ,ಸಾಧಕರಿಗೆ ಗೌರವಾರ್ಪಣೆ, ಕೃಷಿ ತಜ್ಞರಿಂದ ವಿಚಾರ ಸಂಕಿರಣ, ಕೃಷಿ ಸ್ಪರ್ಧೆ, ಮನೋರಂಜನಾ ಕಾರ್ಯಕ್ರಮ ನಡೆಯಿತು.ಸಸ್ಯಜಾತ್ರೆಯಲ್ಲಿ ಪ್ರಮುಖ ಆಕರ್ಷಣೆಯಾಗಿ ನರ್ಸರಿ ಗಿಡಗಳ ಪ್ರದರ್ಶನ-ಮಾರಾಟ ಮಳಿಗೆ ಸೇರಿದಂತೆ ಸುಮಾರು ನೂರಕ್ಕೂ ಮಿಕ್ಕಿ ಮಾರಾಟ ಮಳಿಗೆಗಳು, ವೆರೈಟಿ ಫುಡ್ ಕೋರ್ಟ್‌ಗಳು ಸಸ್ಯಜಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು.ಸಸ್ಯ ಜಾತ್ರೆಯ ಎರಡೂ ದಿನಗಳಲ್ಲಿಯೂ ಬೆಳಗ್ಗಿನಿಂದ ರಾತ್ರಿ ತನಕ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಭೇಟಿ ನೀಡಿ ವಿವಿಧ ಮಳಿಗೆಗಳಲ್ಲಿ ಖರೀದಿಯಲ್ಲಿ ತೊಡಗಿದ್ದರು.ಕೆಲವೊಂದು ಮಳಿಗೆಗಳಲ್ಲಿ ಖರೀದಿಗೆ ನೂಕುನುಗ್ಗಲು ಇರುವುದೂ ಕಂಡು ಬಂತು.ಎರಡು ದಿನವೂ ಆಗಮಿಸಿದ ಎಲ್ಲರಿಗೂ ಮಜ್ಜಿಗೆ, ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು.
ಜ.8 ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಕೃಷಿ ವಿಚಾರ ಸಂಕಿರಣ, ಸಾಧಕರಿಗೆ ಸನ್ಮಾನ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ,ವಿವಿಧ ರೀತಿಯಲ್ಲಿ ಸಹಕರಿಸಿದವರಿಗೆ ಗೌರವಾರ್ಪಣೆ, ಮನೋರಂಜನಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದು ರಾತ್ರಿ ಸಸ್ಯಜಾತ್ರೆಗೆ ತೆರೆ ಬಿದ್ದಿದೆ.
ಅಭೂತಪೂರ್ವವಾಗಿ ಸಸ್ಯಜಾತ್ರೆ ಆಯೋಜಿಸಿರುವುದಕ್ಕೆ ಅಭಿನಂದನೆ-ಸೀತಾರಾಮ ರೈ ಸವಣೂರು:
ಜ.೮ರಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ `ಸಹಕಾರಿ ರತ್ನ’ ಸವಣೂರು ಕೆ.ಸೀತಾರಾಮ ರೈ ಮಾತನಾಡಿ, ಎರಡು ದಿನಗಳ ಸಸ್ಯಜಾತ್ರೆಯ ಆಯೋಜನೆ ಎಲ್ಲರೂ ಹೆಮ್ಮೆ ಪಡುವಂತದ್ದು.ಇದಕ್ಕಾಗಿ ಅಭಿನಂದನೆ ಸಲ್ಲಿಸಬೇಕು.ಸುಳ್ಯದಲ್ಲಿ ನಡೆದ ಕೃಷಿ ಜಾತ್ರೆ ಅಮೋಘವಾಗಿ ನಡೆದಿದೆ.ಇಲ್ಲಿ ಸಣ್ಣ ಜಾಗದಲ್ಲಿ ಉತ್ತಮ ವ್ಯವಸ್ಥೆ ಸಂಘಟಿಸಿದ್ದು ಅಭೂತಪೂರ್ವವಾಗಿ ನಡೆದಿರುವುದಕ್ಕೆ ಅಭಿನಂದನೆ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.ಇಂದು ರೈತ ದೇಶದ ಬೆನ್ನೆಲುಬು ಎನ್ನುವುದು ಹೇಳಿಕೆಗೆ ಮಾತ್ರ.ಇಂದು ಏನಾಗುತ್ತಿದೆ ಎಂದು ಎಲ್ಲರೂ ಚಿಂತಿಸಬೇಕು.ಆ ಚಿಂತನೆಗಳಿಗೆ ಒರೆಗಲ್ಲನ್ನು ಡಾ.ಯು.ಪಿ ಶಿವಾನಂದರವರು ಕಲ್ಪಿಸಿದ್ದಾರೆ.ಕೃಷಿಗೆ ಜನ ಸಿಗುವುದಿಲ್ಲ.ಮುದುಕರು ಮನೆಯಲ್ಲಿ ಯುವಕರು ಪೇಟೆಯಲ್ಲಿ ಎನ್ನುವ ಕಾಲದಲ್ಲಿಯೂ ಮೇಳ ಆಯೋಜಿಸಿ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.ಶಾಲಾ ಮಕ್ಕಳಿಗೆ ಅಧ್ಯಾಪಕರು ಕೃಷಿಯ ಬಗ್ಗೆ ತಿಳಿಸಬೇಕು, ಯುವಕರಿಗೆ ಪ್ರೋತ್ಸಾಹ ನೀಡಬೇಕು. ಯುವಕರನ್ನೂ ಕೃಷಿಯಲ್ಲಿ ತೊಡಗಿಸಿಕೊಂಡಾಗ ದೇಶ ಅಭಿವೃದ್ಧಿ ಸಾಧ್ಯ ಎಂದರಲ್ಲದೆ, ಸುದ್ದಿಯ ಮೂಲಕ ಶಿವಾನಂದರವರು ಅತ್ಯುತ್ತಮ ಕೆಲಸ ಮಾಡಿದ್ದಾರೆ.ಮುಂದಿನ ದಿನಗಳಲ್ಲಿ ಅವರ ಉತ್ತಮ ಕೆಲಸಗಳಿಗೆ ಸುಳ್ಯ, ಪುತ್ತೂರಿನ ಜನತೆ ಸಂಪೂರ್ಣ ಸಹಕಾರ ನೀಡಬೇಕು ಎಂದರು.
ಮೌಲ್ಯವರ್ಧಿತ ಕೃಷಿಯ ವಿಚಾರ ವಿಶೇಷ ಸ್ಥಾನ ಪಡೆದಿದೆ-ನಿತ್ಯಾನಂದ ಮುಂಡೋಡಿ:
`ಸಹಕಾರಿ ರತ್ನ’ ನಿತ್ಯಾನಂದ ಮುಂಡೋಡಿ ಮಾತನಾಡಿ, ಸಸ್ಯ ಜಾತ್ರೆ ಒಂದು ವಿಶೇಷವಾದ ಕಾರ್ಯಕ್ರಮ.ವಿದ್ಯಾರ್ಥಿಯಾಗಿರುವಾಗ ನೂರಕ್ಕೆ ನೂರು ಅಂಕ ಗಳಿಸಿದ್ದ ಡಾ.ಶಿವಾನಂದರವರ ಯೋಜನೆಗಳು ದೂರದೃಷ್ಟಿಯುಳ್ಳದ್ದು.ಸುಳ್ಯದಲ್ಲಿ ಬಳಕೆದಾರರ ವೇದಿಕೆ ಮೂಲಕ ಶುದ್ಧ ನೀರಿಗಾಗಿ ಹೋರಾಟ ಮಾಡಿದವರು.ಅಂದು ಎಲ್ಲರೂ ಅದನ್ನು ತಾತ್ಸಾರ ಮಾಡಿದ್ದರೂ ಇಂದು ಅದೇ ಬಳಕೆದಾರರ ವೇದಿಕೆ ಕೇಂದ್ರದಲ್ಲಿ ಕೆಲಸ ಮಾಡುತ್ತಿದೆ.ಸಸ್ಯ ಜಾತ್ರೆಯಲ್ಲಿ ಮಳಿಗೆಗಳನ್ನು ಆಯೋಜಿಸಿದ್ದು ಮಹಿಳೆಯರು ಆಸಕ್ತಿಯಿಂದ ಭಾಗವಹಿಸಲು ಸಹಕಾರಿಯಾಗಿದೆ.ಸಸ್ಯ ಜಾತ್ರೆಯಲ್ಲಿ ಮೌಲ್ಯವರ್ಧಿತ ಕೃಷಿಯು ವಿಶೇಷ ಸ್ಥಾನ ಪಡೆದಿದೆ.ಕೃಷಿಯ ಬಗ್ಗೆ ಮೌಲ್ಯ ಮಾಡುವ ಯುವಕರು ಮುಂದೆ ಬರಬೇಕು.ಕೃಷಿಯಲ್ಲಿ ಅಧಿಕ ಲಾಭಗಳಿಸಿದಾಗ ಯುವಕರು ಹೆಚ್ಚಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಖುತ್ತಾರೆ.ಕೊರೋನಾ ಸಂದರ್ಭದಲ್ಲಿ ಇದು ಸಾಬೀತಾಗಿದೆ.ಕೃಷಿಯಲ್ಲಿ ಆದಾಯ ಹೆಚ್ಚು ಗಳಿಸಿದಾಗ ಹೆಚ್ಚು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ.ಸಸ್ಯ ಜಾತ್ರೆಯು ಇನ್ನಷ್ಟು ಕಡೆಗಳಲ್ಲಿ ಆದಾಗ ಹೆಚ್ಚೆಚ್ಚು ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿದೆ ಎಂದರು.
ಸಸ್ಯಜಾತ್ರೆಯಲ್ಲಿ ಕೃಷಿಕರಿಗೆ, ಸಮಾಜಕ್ಕೆ ಪೂರಕ ಮಾಹಿತಿ-ಸದಾಶಿವ ರೈ ದಂಬೆಕ್ಕಾನ:
`ಸಹಕಾರ ರತ್ನ’ ಸದಾಶಿವ ರೈ ದಂಬೆಕ್ಕಾನ ಮಾತನಾಡಿ, ಡಾ.ಯು.ಪಿ.ಶಿವಾನಂದರವರು ಯಾವುದೇ ಯೋಜನೆ ಮಾಡಬೇಕಾದರೆ ಸಾಕಷ್ಟು ಅಧ್ಯಯನ ಮಾಡಿ ಜನತೆಗೆ ನೀಡುವವರು.ಅವರ ಯೋಜನೆಗಳಿಗೆ ನಾವು ಬೆಂಬಲ ನೀಡಬೇಕು.ಸಸ್ಯಜಾತ್ರೆ ಕಾರ್ಯಕ್ರಮವು ಬಹಳಷ್ಟು ಸಂತೋಷ ನೀಡಿದೆ.ಇಂದಿನ ಸಮಾಜಕ್ಕೆ, ಕೃಷಿಕರಿಗೆ ಬೇಕಾದ ಎಲ್ಲಾ ಮಾಹಿತಿಗಳು ಸಸ್ಯ ಜಾತ್ರೆಯಲ್ಲಿ ಜನರಿಗೆ ದೊರೆತಿದೆ.ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ.ಸುದ್ದಿಯ ಮೂಲಕ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.
ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಇತಿಹಾಸ ಸೃಷ್ಠಿ-ಶಶಿಕುಮಾರ್ ರೈ ಬಾಲ್ಯೊಟ್ಟು:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಸಂಘಟನೆ ಪ್ರಾಮುಖ್ಯವಾಗಿದೆ.ಡಾ.ಯು.ಪಿ ಶಿವಾನಂದರು ಉತ್ತಮ ಸಂಘಟನೆ ಮೂಲಕ ಕಾರ್ಯಕ್ರಮ ಆಯೋಜಿಸಿದ್ದಾರೆ.ಯಾವುದೇ ಒತ್ತಡಗಳಿಲ್ಲದೆ 138 ಸ್ಟಾಲ್‌ಗಳನ್ನು ಪುಟ್ಟ ಅಂಗಲದಲ್ಲಿ ಆಯೋಜಿಸಿರುವ ಡಾ.ಶಿವಾನಂದರ ತಂಡ ಅಭಿನಂದನೀಯ.ಮತ್ತಷ್ಟು ಸ್ಟಾಲ್‌ಗಳಿಗೆ ಬೇಡಿಕ ಬಂದಿದ್ದು ಸ್ಟಾಲ್ ದೊರೆಯದೇ ಹೋದವರು ಇದ್ದಾರೆ.ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಸ್ಯಜಾತ್ರೆ ಯಶಸ್ವಿಯಾಗಿ ನಡೆದಿದೆ ಎಂದರು.ಶಿವಾನಂದರವರು ಸುದ್ದಿಯ ಮೂಲಕ ಆಯೋಜಿಸಿದ ಎಲ್ಲ ಕಾರ್ಯಕ್ರಮಗಳು ಉತ್ತಮವಾಗಿ ನಡೆದಿವೆ.ಜನರ ಬೇಡಿಕೆ ಹೆಚ್ಚಾಗಿದ್ದು ಮುಂದಿನ ವರ್ಷ ಸಸ್ಯ ಜಾತ್ರೆಯನ್ನು ಎಂಟು ದಿನಗಳ ಕಾಲ ಮಾಡಬೇಕು.ಮುಂದೆ ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಈ ರೀತಿಯ ಕಾರ್ಯಕ್ರಮ ಮಾಡಬೇಕು ಎಂದವರು ಹೇಳಿದರು.
ಸುದ್ದಿಯಿಂದ ಪುತ್ತೂರಿನಲ್ಲಿ ಹೊಸ ಕ್ರಾಂತಿ-ವಿದ್ಯಾ ಆರ್ ಗೌರಿ:
ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಮಾತನಾಡಿ, ಸುದ್ದಿ ಬಿಡುಗಡೆಯು ಕೇವಲ ಪತ್ರಿಕೆಯಾಗಿ ಉಳಿಯದೆ ಪುತ್ತೂರಿನಲ್ಲಿ ಹೊಸ ಕ್ರಾಂತಿಯನ್ನೇ ನಡೆಸಿದೆ.ಗಾಂಧಿ ವಿಚಾರ,ಸ್ವಚ್ಚತೆಯ ಕುರಿತು ಮೂಲೆ ಮೂಲೆಗಳಲ್ಲಿ ಅರಿವು ಮೂಡಿಸಿದ್ದಾರೆ.ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಕಾರ್ಯಕ್ರಮದ ಮೂಲಕ ಕ್ರಾಂತಿ ಎಬ್ಬಿಸಿದ್ದಾರೆ.ಈಗ ಕೃಷಿ ಬಗ್ಗೆ ಅರಿವು ಮೂಡಿಸಿ, ಜನರಲ್ಲಿ ಆಸಕ್ತಿ ಮೂಡಿಸುವ ಕ್ರಾಂತಿಯನ್ನೇ ಸಸ್ಯಜಾತ್ರೆಯ ಮೂಲಕ ಮಾಡಿದ್ದಾರೆ.ಕೃಷಿಯಲ್ಲಿನ ಸಾಕಷ್ಟು ಸಮಸ್ಯೆಗಳಿಗೆ ಸಸ್ಯ ಜಾತ್ರೆಯಲ್ಲಿ ಪರಿಹಾರ ನೀಡಿದ್ದಾರೆ. ಮೌಲ್ಯಧಾರಿತ ಕೃಷಿಗೆ ವೇದಿಕೆ ಮೂಲಕ ಪ್ರೋತ್ಸಾಹ ನೀಡಿದ್ದಾರೆ.ಯುವಕರಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸಿ, ಪ್ರೋತ್ಸಾಹ ನೀಡಿ ಪರಿಚಯಿಸಲು, ಯಾಂತ್ರೀಕೃತ ಕೃಷಿ ಮುಂದುವರಿಸಲು, ಹೊಸ ಉತ್ಪನ್ನಗಳನ್ನು ಪರಿಚಯಿಸಲು ಸಸ್ಯಜಾತ್ರೆಯ ಮೂಲಕ ವೇದಿಕ ಒದಗಿಸಲಾಗಿದೆ.ಕೃಷಿಯ ಮೌಲ್ಯವನ್ನು ವೃದ್ಧಿಸಿ ಅದನ್ನು ಉಳಿಸಿ ಬೆಳೆಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿಯಾಗಿರುವ ಸಸ್ಯ ಜಾತ್ರೆಯು ಪುತ್ತೂರಿನಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದೆ.ಕೃಷಿಯನ್ನೇ ಪ್ರಮುಖವಾಗಿ ಮುನ್ನಡೆಸಲು ಹಾದಿ ರೂಪಿಸಿದ್ದಾರೆ ಎಂದರು.ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲು, ನೀರಿನ ಸಂರಕ್ಷಣೆಯ ಕರೆ ನೀಡಿರುವ ಪ್ರಧಾನಿಯವರ ಲೋಕಲ್ ಫಾರ್ ವೋಕಲ್‌ಗೆ ಸುದ್ದಿಯ ಮೂಲಕ ಜನರಲ್ಲಿ ಆಂದೋಲನ ಮೂಡಿಸುವ ಕೆಲಸವಾಗಬೇಕು ಎಂದವರು ಕೇಳಿಕೊಂಡರು.
ಕೃಷಿಗೆ ಪ್ರೋತ್ಸಾಹ ನೀಡಲು ಸಣ್ಣ ಕ್ರಾಂತಿ ಸಹಕಾರಿಯಾಗಲಿದೆ- ಡಾ.ಯು.ಪಿ.ಶಿವಾನಂದ:
ಅಧ್ಯಕ್ಷತೆ ವಹಿಸಿದ್ದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ, ಸುದ್ದಿ ಮಾಹಿತಿ ಟ್ರಸ್ಟ್‌ನ ಮುಖ್ಯಪ್ರವರ್ತಕ ಡಾ.ಯು.ಪಿ.ಶಿವಾನಂದರವರು ಮಾತನಾಡಿ, ವೈದ್ಯನಾಗಿ ಕೆಲಸ ಮಾಡಿರುವ ನಾನು ಮಂಗಳೂರಿನ ಏಳು ವೈದ್ಯರನ್ನು ಪುತ್ತೂರಿಗೆ ಕರಿಸಿಕೊಂಡು ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಜನರಿಗೆ ಒಂದೇ ಕಡೆ ದೊರೆಯುವಂತೆ ಮಾಡಿದ್ದೆನೆ.ಇಂತಹ ವ್ಯವಸ್ಥೆಗಳು ಇಂದು ಎಲ್ಲಾ ಆಸ್ಪತ್ರೆಗಳಲ್ಲಿ ದೊರೆಯುತ್ತಿದ್ದು, ಅಂದಿನ ನನ್ನ ಯೋಜನ ಈಗ ಎಲ್ಲಾ ಚಿಕಿತ್ಸೆಗಳು ಒಂದೇ ಕಡೆ ದೊರೆಯಲು ಸಹಕಾರಿಯಾಗಿದೆ.ನಂತರ ಜನರಿಗೆ ಮಾಹಿತಿಗಾಗಿ ಪತ್ರಿಕೆ ಪ್ರಾರಂಭಿಸಿ ಸ್ಥಳೀಯರಿಗೆ ಮಾಹಿತಿ ನೀಡುವುದು, ಸ್ಥಳೀಯ ಸಾಧಕರ ಪರಿಚಯ, ಸ್ಥಳೀಯ ವರದಿಗಳನ್ನು ನೀಡಿದೆ.ಸ್ಥಳೀಯವಾಗಿ ಶಾಲೆ, ಸಂಫ ಸಂಸ್ಥೆಗಳು, ಸಾಧಕರ ಪರಿಚಯವನ್ನು ಪತ್ರಿಕೆ ಮೂಲಕ ನೀಡಿದೆ.ಕೃಷಿಯ ಮಾಹಿತಿಗಳನ್ನು ಮನೆ ಮನೆಗೆ ತಲುಪಿಸುವುದು, ಮಕ್ಕಳು ಹಾಗೂ ಮಹಿಳೆಯರಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸುವುದೇ ನಮ್ಮ ಉzಶವಾಗಿದೆ.ಕೃಷಿಯ ಮಾಹಿತಿ ಜನರಿಗೆ ಒಂದೆ ಕಡೆ ದೊರೆಯಲು ಸುದ್ದಿ ಕೃಷಿ ಮಾಹಿತಿ ಕೇಂದ್ರ ಪ್ರಾರಂಭಿಸಲಾಗಿದೆ.ಸಸ್ಯ ಜಾತ್ರೆಯ ಮೂಲಕ ಕೃಷಿಯ ಮಾಹಿತಿಗಳೆಲ್ಲವೂ ಒಂದೇ ಜಾಗದಲ್ಲಿ ದೊರೆಯುವಂತೆ ಮಾಡಲಾಗಿದೆ.ಕೃಷಿಯ ಮಾಹಿತಿಯನ್ನು ಮಕ್ಕಳು, ಮಹಿಳೆಯರಿಗೆ ತಲುಪಲು ಜಾತ್ರೆ ಆಯೋಜಿಸಲಾಗಿದೆ.ಹಣ್ಣು, ಹೂ, ತರಕಾರಿ ಗಿಡಗಳೆಲ್ಲವೂ ಒಂದೇ ಕಡೆ ದೊರೆತು ಎಲ್ಲರೂ ಉತ್ಸಾಹದಿಂದ ಭಾಗವಹಿಸಿದಾಗ ನಂದನವನ, ನಿರ್ಮಾಣ ಆರೋಗ್ಯ ಪೂರ್ಣ ವಾತಾವರಣ ನಿರ್ಮಾಣವಾಗಲಿದೆ.ಕೃಷಿ ಸಂಸ್ಕೃತಿ ಅರಳಲು,ಮನೆ ಮನೆಯಲ್ಲಿ ಕೃಷಿಗೆ ಪ್ರೋತ್ಸಾಹ ನೀಡಲು ನಮ್ಮ ಸಣ್ಣ ಕ್ರಾಂತಿ ಸಹಕಾರಿಯಾಗಲಿದೆ. ಯಾವುದೇ ಉತ್ಪನ್ನಗಳಿಗೂ ಉತ್ತಮ ಮೌಲ್ಯದೊರೆಯಬೇಕು.ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಯಾಗಬೇಕು.ವಿವಿಧ ಸ್ಪರ್ಧೆಗಳು, ಮೆರವಣಿಗೆ ಮೂಲಕ ಮಕ್ಕಳಲ್ಲಿಯೂ ಕೃಷಿಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ.ವಿಚಾರ ಸಂಕಿರಣಗಳಲ್ಲಿ ಸಾಕಷ್ಟು ಮಂದಿ ಭಾಗವಹಿಸಿದ್ದು ಅರ್ಥಪೂರ್ಣವಾಗಿ ನಡೆದಿದೆ.ಕೃಷಿಗೆ ಪ್ರೋತ್ಸಾಹಕ್ಕಾಗಿ ಉತ್ತಮ ತಳಪಾಯ ಹಾಕಲಾಗಿದೆ. ಸಸ್ಯಜಾತ್ರೆಯಿಂದಾಗಿ ಮಾನಸಿಕವಾಗಿ ದೈಹಿಕವಾಗಿ ಬಹಳಷ್ಟು ಬದಲಾವಣೆ ಕಂಡಿದೆ.ಪುತ್ತೂರಿನ ಚಿತ್ರಣ ಬದಲಾಯಿಸುವ ಸಸ್ಯ ಜಾತ್ರೆಯಾಗಿದೆ.ಈ ಕ್ರಾಂತಿ ಮನೆ ಮನೆಗಳಲ್ಲಿ ಆಗಬೇಕು.ಸುದ್ದಿ ಬಳಗಕ್ಕೆ ಇನ್ನಷ್ಟು ತಜ್ಞರನ್ನು ಸೇರಿಸಿಕೊಳ್ಳಲಾಗುವುದು.ಸಸ್ಯ ಜಾತ್ರೆಯ ಮೂಲಕ ಕೃಷಿ ಕ್ಷೇತ್ರವು ಸಾಕಷ್ಟು ಬದಲಾವಣೆಯಾಗಿ ಇಂಜಿನಿಯರ್ ಡಾಕ್ಟರ್‌ಗಳಿಗೆ ಮಾತ್ರವಲ್ಲದೆ ಕೃಷಿಕನಿಗೂ ಹೆಣ್ಣು ಕೊಡಲು ಜನ ಮುಂದೆ ಬರುವಂತಾಗಬೇಕು.ಆ ರೀತಿಯಾದಾಗ ಸಸ್ಯಜಾತ್ರೆಯ ಉದ್ದೇಶ ಸಾರ್ಥಕ ಎಂದು ಹೇಳಿ ಸಸ್ಯಜಾತ್ರೆಯ ಯಶಸ್ಸಿಗೆ ಕಾರಣಕರ್ತರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಾಧಕ ಕೃಷಿಕರಿಗೆ ಸನ್ಮಾನ:
ಎರಡನೇ ದಿನವೂ ಸಾಧಕರಿಗೆ ಸನ್ಮಾನ ನಡೆಯಿತು.ಸಮಗ್ರ ಕೃಷಿಯ ಸಾಧಕ ವಾಸು ಪೂಜಾರಿ ಗುಂಡ್ಯಡ್ಕ, ಪಿ.ನಾಗೇಶ ಸರ್ವೆ ಮುಂಡೂರು, ಜಿನ್ನಪ್ಪ ಗೌಡ ಕಲ್ಲಾಜೆ ಬೆಳ್ಳಿಪ್ಪಾಡಿ, ವಿಕ್ಟರ್ ಮಾರ್ಟಿಸ್ ಹಳ್ಳಂಗೇರಿ ಕುಟ್ರುಪ್ಪಾಡಿ, ಭತ್ತದ ಕೃಷಿಕ ಕೇಶವ ಭಂಡಾರಿ ಕೈಪ, ಹೈನುಗಾರಿಕೆಯಲ್ಲಿ ದಿವ್ಯನಾಥ ಶೆಟ್ಟಿ ಕಾವು, ಲಕ್ಷ್ಮಣ ದೇವಾಡಿಗ ನಗಾರಿ ಆಲಂಕಾರು, ಪಿ.ವಿ.ತೋಮಸ್ ಉಲ್ಲಗಡ್ಡಿ ಕುಟ್ರುಪ್ಪಾಡಿ, ಜೇನು ಕೃಷಿಯಲ್ಲಿ ಭರತ್‌ರಾಜ್ ಸೊರಕೆ, ಮನಮೋಹನ ಅರಂಬ್ಯ, ಸುರೇಶ್ ಕೋಡಿಂಬಾಳ, ಸುರೇಶ್ ರೈ ಬಾಳೆಹಿತ್ಲು ಇರ್ದೆ, ತರಕಾರಿ ಕೃಷಿಯಲ್ಲಿ ಸತೀಶ್ ಗೌಡ ಬಲ್ನಾಡು, ಸಾವಯವ ಕೃಷಿಯಲ್ಲಿ ಹರಿಕೃಷ್ಣ ಕಾಮತ್, ಮಂಜುನಾಥ ಭಟ್ ಪೆರಿಯಡ್ಕ ಉಪ್ಪಿನಂಗಡಿ, ಗಣಪತಿ ಭಟ್ ಎಕ್ಕಡ್ಕ ಕೊಳ್ತಿಗೆ, ಐರಿನ್ ಲೋಬೋ ಆದರ್ಶನಗರ ಉಪ್ಪಿನಂಗಡಿ, ತೋಟಗಾರಿಕಾ ಕೃಷಿಯಲ್ಲಿ ವಿವೇಕ್ ಆಳ್ವ ನಡುಮನೆ ಪುಣ್ಚಪ್ಪಾಡಿ,ನಿತ್ಯ ಫುಡ್ ಪ್ರಾಡಕ್ಟ್‌ನ ರಾಧಾಕೃಷ್ಣ ಇಟ್ಟಿಗುಂಡಿ, ತೋಟಗಾರಿಕೆಯಲ್ಲಿ ಅಣ್ಣು ಪೂಜಾರಿ ಸರ್ವೆ, ವಿಶ್ವನಾಥ ಶೆಟ್ಟಿ ಪೆರ್ಲಂಪಾಡಿ,ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ಚೇತನ್ ಎ.,ಅರಮನೆ ಮಜಲು ಐವತ್ತೊಕ್ಲು ಸುಳ್ಯ, ಗುತ್ತಿಗಾರು ಅಮರ ಸಂಜೀವಿನಿ ಒಕ್ಕೂಟದ ದಿವ್ಯಾ ಹರೀಶ್, ಕಾಣಿಯೂರು ಭ್ರಾಮರಿ ಸ್ವ ಸಹಾಯ ಸಂಘದ ಚಂದ್ರಾವತಿ ರೈ ಕಾಣಿಯೂರು, ಧನಲಕ್ಷ್ಮೀ ಹಾಗೂ ನಾಗಶ್ರೀ ಒಕ್ಕೂಟದ ನೇತ್ರಾವತಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಗೌರವಾರ್ಪಣೆ:
ಸಸ್ಯಜಾತ್ರೆಯ ಅಂಗವಾಗಿ ಜ.7 ರಂದು ನಡೆದ ಮೆರವಣಿಗೆಯಲ್ಲಿ ಸಹಕರಿಸಿದ ಅಕ್ಷಯ ಕಾಲೇಜು ಸಂಪ್ಯ, ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು, ಎನ್‌ಎಸ್‌ಎಸ್ ಘಟಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ, ಸ್ಪರ್ಧೆಗಳನ್ನು ನಡೆಸಲು ಸಹಕರಿಸಿದ ಪಶುಪತಿ ಶರ್ಮ, ಮೌನೇಶ್ ವಿಶ್ವಕರ್ಮ,ವಿಚಾರಗೋಷ್ಠಿ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಡೆಸಿಕೊಟ್ಟ ಅಡಿಕೆ ಪತ್ರಿಕೆ ಉಪಸಂಪಾದಕ ನಾ.ಕಾರಂತ ಪೆರಾಜೆ, ಸ್ಪರ್ಧೆಯ ತೀರ್ಪುಗಾರರಾಗಿದ್ದ ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ, ಸಂಜೀವಿನಿ ಒಕ್ಕೂಟದ ಜಗತ್‌ರವರನ್ನು ಗೌರವಿಸಲಾಯಿತು.
ಸಂಪ್ಯ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಸುದ್ದಿ ಬಿಡುಗಡೆ ಪತ್ರಿಕೆ ಮತ್ತು ಸುದ್ದಿ ನ್ಯೂಸ್ ಚಾನೆಲ್‌ನ ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಸ್ವಾಗತಿಸಿದರು. ಸುದ್ದಿ ಚಾನೆಲ್‌ನ ಮುಖ್ಯಸ್ಥ ದಾಮೋದರ ದೊಂಡೋಲೆ ಹಾಗೂ ಪ್ರಧಾನ ನಿರೂಪಕ ಗೌತಮ್ ಶೆಟ್ಟಿ ಸನ್ಮಾನಿತರ ಪರಿಚಯ ಮಾಡಿದರು.ಹಿರಿಯ ವರದಿಗಾರ ಉಮೇಶ್ ಮಿತ್ತಡ್ಕ ಬಹುಮಾನ ವಿಜೇತರ ಪಟ್ಟಿ ಓದಿದರು.ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ವರದಿಗಾರ ಗಣೇಶ್ ಎನ್.ಕಲ್ಲರ್ಪೆ ವಂದಿಸಿದರು.ಸುದ್ದಿ ಬಳಗದ ಸಿಬಂದಿಗಳು ಸಹಕರಿಸಿದರು.
ಲಂಚ, ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಸ್ವೀಕಾರ
ಸಮಾರೋಪ ಸಮಾರಂಭದಲ್ಲಿ ಸುದ್ದಿ ಬಿಡುಗಡೆಯ ಹಿರಿಯ ವರದಿಗಾರ ಉಮೇಶ್ ಮಿತ್ತಡ್ಕರವರು, ಸಸ್ಯಜಾತ್ರೆಯ ಧ್ಯೇಯ ಮತ್ತು ಉzಶವನ್ನು ತಿಳಿಸಿದರು.ಲಂಚ, ಭ್ರಷ್ಟಾಚಾರದ ನಿರ್ಮೂಲನೆಯೇ ದೊಡ್ಡ ಜನಸೇವೆ ಮತ್ತು ದೇಶ ಸೇವೆ, ಉತ್ತಮ ಸೇವೆಗೆ ಪುರಸ್ಕಾರ, ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಎಂಬ ಪ್ರತಿಜ್ಞಾ ವಿಧಿ ಬೋಧಿಸಿದರು.ವೇದಿಕೆಯಲ್ಲಿದ್ದ ಅತಿಥಿಗಳು ಹಾಗೂ ಸಭೆಯಲ್ಲಿದ್ದವರು ಪ್ರತಿಜ್ಞಾ ಸ್ವೀಕರಿಸಿದರು.
ಸುದ್ದಿ ಪುತ್ತೂರು
ಯೂ ಟ್ಯೂಬ್ ಚಾನೆಲ್ ನೋಡಿ…..
ಸುದ್ದಿ ಮಾಹಿತಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಕಿಲ್ಲೆ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಸಸ್ಯಜಾತ್ರೆ ಕಾರ್ಯಕ್ರಮ ಸುದ್ದಿ ಪುತ್ತೂರು ಯೂ ಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಿದೆ.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ಟಾಲ್‌ಗಳ ವಿಶೇಷತೆ, ಕೃಷಿ ವಿಚಾರಗೋಷ್ಠಿ, ಸಸ್ಯಜಾತ್ರೆಯಲ್ಲಿ ಪಾಲ್ಗೊಂಡವರ ಅನಿಸಿಕೆ,ಸಾಂಸ್ಕೃತಿಕ ಕಾರ್ಯಕ್ರಮದ ಪೂರ್ತಿ ಮಾಹಿತಿ ಸುದ್ದಿ ಪುತ್ತೂರು ಯೂ ಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ.