ತಾ| ಯುವ ಪ್ರಶಸ್ತಿ ಘೋಷಣೆ- 4 ಯುವಕ ಮಂಡಲ, 2 ಮಹಿಳಾ ಮಂಡಲ, 7 ಮಂದಿಗೆ ವೈಯಕ್ತಿಕ ಪ್ರಶಸ್ತಿ

0

ಜ.14 ಯುವ ಸಪ್ತಾಹ, ಪ್ರಶಸ್ತಿ ಪ್ರದಾನ

ಪುತ್ತೂರು:ತಾಲೂಕು ಯುವಜನ ಒಕ್ಕೂಟದ ವತಿಯಿಂದ ನೀಡಲಾಗುವ 2021-22ನೇ ಸಾಲಿನ ‘ಯುವ ಪ್ರಶಸ್ತಿ’ಗೆ ವಿಷ್ಣು ಯುವಕರ ಬಳಗ ಮಜ್ಜಾರಡ್ಕ, ವಿಕ್ರಂ ಯುವಕ ಮಂಡಲ ಶಾಂತಿಗೋಡು, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು, ನವೋದಯ ಮಹಿಳಾ ಮಂಡಲ ಬನ್ನೂರು ಹಾಗೂ ಸ್ಪೂರ್ತಿ ಮಹಿಳಾ ಮಂಡಲ ಆಯ್ಕೆಯಾಗಿದೆ. ವೈಯಕ್ತಿಕ ವಿಭಾಗದಲ್ಲಿ ಸಾಂಸ್ಕೃತಿಕ ವಿಭಾಗದಲ್ಲಿ ಮನು ಕುಮಾರ್, ಕ್ರೀಡೆಯಲ್ಲಿ ನಿಶ್ಚಲ್ ಕೆ.ಜೆ., ಯುವ ಜನತೆಯಲ್ಲಿ ಹರಿಪ್ರಸಾದ್, ಧಾರ್ಮಿಕದಲ್ಲಿ ಮನ್ಮಥ ಶೆಟ್ಟಿ, ಕ್ರೀಡೆಯಲ್ಲಿ ಧನ್ವಿ ಜೆ.ರೈ, ಸಾಹಿತ್ಯದಲ್ಲಿ ಅಪೂರ್ವ ಕಾರಂತ್ ಹಾಗೂ ಸಂಘಟನೆಯಲ್ಲಿ ರಾಜೇಶ್ ಮಯೂರ ಆಯ್ಕೆಯಾಗಿದ್ದಾರೆ.

ನಿಶ್ಚಲ್ ಕೆ.ಜೆ: ನೆಹರು ನಗರ ರಕ್ತೇಶ್ವರಿ ವಠಾರದ ಜನಾರ್ದನ ಹಾಗೂ ಜ್ಯೋತಿ ದಂಪತಿ ಪುತ್ರ ನಿಶ್ಚಲ್ ವಿವೇಕಾನಂದ ಪ.ಪೂ ಕಾಲೇಜಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ. ಕ್ರೀಡೆ ಹಾಗೂ ಯೋಗದಲ್ಲಿ ತೊಡಗಿಸಿಕೊಂಡಿರುವ ಇವರು ಯೋಗಾಭ್ಯಾಸದಲ್ಲಿ ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

ಧನ್ವಿ ಜೆ.ರೈ: ಮುಕ್ರಂಪಾಡಿ ಮಲ್ಲಿಕಾ ಜಯರಾಮರೈ ಎನ್ ರವರ ಪುತ್ರಿಯಾಗಿರುವ ಧನ್ವಿ ಯವರು 2019ರಲ್ಲಿ ನಡೆದ ರಾಷ್ಟ್ರ ಲೈಫ್ ಸೇವಿಂಗ್‌ನಲ್ಲಿ ಒಟ್ಟು ಏಳು ಚಿನ್ನ, ಎರಡು ಬೆಳ್ಳಿ, ಒಂದು ಕಂಚು ಪದಕ, ಇನ್ನೂರು ಮೀಟರ್ ಒಬ್ಸ್‌ಸ್ಟೆಲ್‌ಸ್ವಿಮ್‌ನಲ್ಲಿ ರಾಷ್ಟ್ರೀಯ ದಾಖಲೆ ಮಾಡಿರುತ್ತಾರೆ. ಇವರ ಸಾಧನೆಗೆ ನೂರಾರು ಸನ್ಮಾನ,ಪುರಸ್ಕಾರಗಳು ದೊರೆತಿದೆ.‌

ಮನ್ಮಥ ಶೆಟ್ಟಿ; ಕೊಡಿಪ್ಪಾಡಿ ಗ್ರಾಮದ ಶೇರ ದಿ.ಚಂದ್ರಹಾಸ ಶೆಟ್ಟಿಯವರ ಪುತ್ರನಾಗಿರುವ ಮನ್ಮಥ ಶೆಟ್ಟಿಯವರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತುಳುನಾಡಿನ ದೈವಾರಾಧನೆಯಲ್ಲಿ ಹಲವಾರು ವರ್ಷಗಳಿಂದ ಮಧ್ಯಸ್ಥರಾಗಿ ತೊಡಗಿಸಿಕೊಂಡು ದೈವಗಳಿಗೆ ಮದಿಪು ಹೇಳುತ್ತಾ ತುಳುನಾಡಿನ ಮೂಲ ಸಂಪ್ರದಾಯ ಉಳಿಸುವಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಕಾರ್ಯಕ್ರಮ ನಿರೂಪಣೆ ನಡೆಸುತ್ತಿದ್ದಾರೆ. ಇವರ ಸೇವೆಗೆ ಹಲವು ಪ್ರಶಸ್ತಿ ಸನ್ಮಾನಗಳು ಲಭಿಸಿದೆ.

ಹರಿಪ್ರಸಾದ್ ಎಸ್; ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾಗಿರುವ ಹರಿಪ್ರಸಾದ್ ಬಡಗನ್ನೂರು ಕೆಮನಡ್ಕ ರಮೇಶ್ ರೈ ಮತ್ತು ರತ್ನಾವತಿ ಎಸ್ ದಂಪತಿ ಪುತ್ರ. ಸಾಮಾಜಿಕ ಪ್ರಜ್ಞೆ ಮತ್ತು ಪರಿಸರದ ಬಗ್ಗೆ ಕಾಳಜಿಯಿಂದ ವನಪರ್ವ ಅಭಿಯಾನ ಮತ್ತು ಮಳೆಕೊಯ್ಲು ಅಭಿಯಾನ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿ ಬಳಸುವಲ್ಲಿ ತರಬೇತಿ, ಆರೋಗ್ಯ ಜಾಗೃತಿ, ಡಿಜಿಟಲ್ ಜಾಗೃತಿ, ಬಸ್ಸು ತಂಗುದಾಣ ಸ್ವಚ್ಚತೆ, ನಾಯಕತ್ವ ಪೂರಕ ವೇದಿಕೆಗಳನ್ನು ಕಲ್ಪಿಸಿಕೊಟ್ಟಿರುತ್ತಾರೆ.

ಎಚ್.ಎಸ್ ಮನು ಕುಮಾರ್; ನೆಹರುನಗರದ ಶಿವನಗರ ಸುಂದರ ಹಾಗೂ ದೇವಕಿ ದಂಪತಿ ಪುತ್ರನಾಗಿರುವ ಮನುಕುಮಾರ್, ಶಿವಮಣಿ ಕಲಾ ತಂಡವನ್ನು ಸ್ಥಾಪಿಸಿ, ಹಲವಾರು ಹಿರಿಯ, ಕಿರಿಯ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಬೆಳೆಸುತ್ತಾ ವೇದಿಕೆಗಳನ್ನು ಒದಗಿಸಿದ್ದಾರೆ. ಹಲವಾರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ನೃತ್ಯ, ಯಕ್ಷಗಾನ, ಹುಲಿ ಕುಣಿತ ಇನ್ನಿತರ ಕಲೆಗಳಲ್ಲಿ ವೇದಿಕೆಗಳನ್ನು ಒದಗಿಸಿದ್ದಾರೆ. ಸಾಹಿತ್ಯ, ನಾಟಕ ರಚನೆ, ನಿರ್ದೇಶನವನ್ನು ನೀಡುತ್ತಿದ್ದಾರೆ. ಇವರ ಶಿವಮಣಿ ಕಲಾತಂಡ ಸರ್ಕಾರದ ಮಾನ್ಯತೆ ಪಡೆದ ಕಲಾ ಸಂಘವಾಗಿ ಮುನ್ನ ನಡೆಯುತ್ತಿದೆ.

ಅಪೂರ್ವ ಕಾರಂತ; ದರ್ಬೆ ವೆಂಕಟ್ರಮಣ ಕಾರಂತ, ಸಂಧ್ಯಾ ದಂಪತಿ ಪುತ್ರಿ ಯಾಗಿರುವ ಅಪೂರ್ವ ಇಂಜಿನಿಯರಿಂಗ್ ಪದವೀಧರೆ. ಇವರು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ, ಕಾರ್ಯಕ್ರಮ ನಿರೂಪಣೆ, ಸಾಹಿತ್ಯ ಸಮ್ಮೇಳನ ಜಿಲ್ಲೆ, ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಭಾಗವಹಿರುತ್ತಾರೆ. ಹಲವಾರು ಕಥೆ,ಕವನಗಳನ್ನು ರಚಿಸಿರುತ್ತಾರೆ.

ರಾಜೇಶ್ ಮಯೂರ: ಅರಿಯಡ್ಕ ಗ್ರಾಮದ ಗೋಳ್ತಿಲ ನಿವಾಸಿಯಾದ ರಾಜೇಶ್ ಕೆ ಮಯೂರ ಗೋಳ್ತಿಲ ಇವರು ದಿ| ಕೊರಗಪ್ಪ ರೈ ಮತ್ತು ಶ್ಯಾಮಲ ದಂಪತಿ ಪುತ್ರ. ಅತೀ ಮೆಚ್ಚಿನ ಡ್ರಾಯಿಂಗ್ ನಲ್ಲಿ ಒಲವು ಇದ್ದ ಕಾರಣ ಶಾಲಾ ಶಿಕ್ಷಕರ ಪ್ರೋತ್ಸಾಹದೊಂದಿಗೆ ಮುಂದೆ ಕಲಾವಿದನಾಗಿ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದರೂ ಹತ್ತು ಹಲವು ಸಮಾಜಮುಖಿ ಕೆಲಸಗಳೊಂದಿಗೆ ಪರಿಸರದಲ್ಲಿ ಚಿರಪರಿಚತರಾಗಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲು ಮರಣಾನಂತರ ಕೆ.ಎಸ್.ಹೆಗ್ಡೆ ದೇರಲಕಟ್ಟೆಗೆ ದಾನ ಮಾಡಿರುತ್ತಾರೆ. ಈಗಾಗಲೇ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿರುತ್ತಾರೆ. ಜೊತೆಗೆ ಹಲವು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ವಿಷ್ಣು ಯುವ ಶಕ್ತಿ ಬಳಗ; 2018 ರಲ್ಲಿ ಪ್ರಾರಂಭಗೊಂಡ ಮಜ್ಜಾರಡ್ಕ ಶ್ರೀ ವಿಷ್ಣು ಯುವ ಶಕ್ತಿ ಬಳಗವು ಶ್ರಮ, ಸೇವೆ, ಸಹಾಯ ಎಂಬ ಧ್ಯೆಯ ವಾಕ್ಯದೊಂದಿಗೆ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿದೆ. ಗ್ರಾಮದಲ್ಲಿ ಸಣ್ಣ ಪುಟ್ಟ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು, ಸಂಘವು ನೆಹರು ಯುವ ಕೇಂದ್ರ ಮಂಗಳೂರು ಇದರಲ್ಲಿ ನೋಂದಾವಣೆಯನ್ನು ಮಾಡಿಕೊಂಡು ನಿತ್ಯ ನಿರಂತರವಾಗಿ ವಿಭಿನ್ನ ಕಾರ್ಯದ ಮೂಲಕ ಯುವಜನತೆಗೆ ಮಾದರಿಯಾಗುತ್ತಿದೆ. ಕೆಸರುಡೊಂಜಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುತ್ತಿದೆ.

ವಿಕ್ರಂ ಯುವಕ ಮಂಡಲ: ಶಾಂತಿಗೋಡು ವಿಕ್ರಂ ಯುವಕ ಮಂಡಲವು ಸುಮಾರು 30 ವರ್ಷಗಳಿಂದ ಗ್ರಾಮೀಣ ಮಟ್ಟದಲ್ಲಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಕ್ರೀಡಾ, ಸಾಹಿತ್ಯ ಹಾಗೂ ಸಮಾಜ ಮುಖಿ ಕೆಲಸ ಕಾರ್ಯಗಳನ್ನು ನಡೆಸುತ್ತಾ ಬರುತ್ತಿದೆ.

ನವೋದಯ ಮಹಿಳಾ ಮಂಡಲ; ಬನ್ನೂರು ನವೋದಯ ಮಹಿಳಾ ಮಂಡಲವು ಗ್ರಾಮೀಣ ಕ್ರೀಡೆ, ಮಳೆಕೊಯ್ಲ, ಜಲಮರುಪೂರಣ ಮಾಹಿತಿ ಕಾರ್ಯಾಗಾರ, ಡಿಜಿಟಲ್ ಕಾರ್ಯಾಗಾರ, ಚಿಣ್ಣರ ಸಂಭ್ರಮ ಸೇರಿದಂತೆ ಹಲವು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ.

ರೋಟರ‍್ಯಾಕ್ಟ್ ಕ್ಲಬ್; ಸ್ವಯಂ ಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ರೋಟರ‍್ಯಾಕ್ಟ್ ಕ್ಲಬ್ ಸ್ವಚ್ಚತಾ ಅಭಿಯಾನ, ಮೇಕ್ ಇನ್ ಇಂಡಿಯಾ, ಮಣ್ಣಿನ ಸಂರಕ್ಷಣೆ, ನೀರಿನ ಸಂರಕ್ಷಣೆ ಹಾಗೂ ಜಲಮರುಪೂರಣ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿರುತ್ತದೆ. ಜೊತೆಗೆ ಇನ್ನಿತರ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ಸ್ಪೂರ್ತಿ ಮಹಿಳಾ ಮಂಡಲ; ಧಾರ್ಮಿಕ, ಸಮಾಜ ಸೇವೆಯಲ್ಲಿ ಸಕ್ರಿಯವಾಗಿರುವ ಬನ್ನೂರು ಸ್ಪೂರ್ತಿ ಮಹಿಳಾ ಮಂಡಲ ಕಳೆದ ಎಂಟು ವರ್ಷಗಳಿಂದ ಹಲವು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಸ್ವಚ್ಚತೆ, ಗಾಂಧಿ ಜಯಂತಿ, ಆರೋಗ್ಯ ತಪಾಸಣೆ, ಆಯುಷ್ಮಾನ್ ಕಾರ್ಡ್ ನೋಂದಣಿ ಮೊದಲಾದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ಜ.14 ಯುವ ಸಪ್ತಾಹ, ಪ್ರಶಸ್ತಿ ಪ್ರದಾನ: ತಾ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಯುವಜನ ಒಕ್ಕೂಟ ಇದರ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ಜಯಂತಿ ಯುವ ಸಪ್ತಾಹ, ವಿವೇಕ ರಥ-ಯುವ ಪಥ ತಾಲೂಕು ಯುವ ಪ್ರಶಸ್ತಿ ಪ್ರದಾನ ಸಮಾರಂಭ ಜ.14ರಂದು ವಿವೇಕಾನಂದ ಕಾಲೇಜಿನ ಕೇಶವ ಸಂಕಲ್ಪ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಮೇಶ್ ಉಳಯ ಯುವ ಸಂದೇಶ ನೀಡಲಿದ್ದಾರೆ.

ನಗರ ಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್, ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ., ವಿವೇಕಾನಂದ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿ ಕೆ.ಎಂ ಕೃಷ್ಣ ಭಟ್, ತಹಶೀಲ್ದಾರ್ ನಿಸರ್ಗಪ್ರಿಯ ಜೆ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರವಿ ವೈ ನಾಯಕ್, ಪೊಲೀಸ್ ಉಪ ಅಧೀಕ್ಷಕ ಡಾ.ವೀರಯ್ಯ ಹೀರೇಮಠ್, ನಗರ ಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು ಹಾಗೂ ತಾ.ಪಂ ಕಾರ್ಯನಿರ್ವಾಹಕಾಽಕಾರಿ ನವೀನ್ ಭಂಡಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here