ಬೀದಿಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಝೋನ್ ಯುಜಿಡಿ ಯೋಜನೆ ಅತೀ ಅಗತ್ಯ:ನಗರಸಭೆ ಆಯವ್ಯಯ ತಯಾರಿ 2 ನೇ ಪೂರ್ವಭಾವಿ ಸಭೆಯಲ್ಲಿ ಸಲಹೆ

0

ಪುತ್ತೂರು:ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಝೋನ್, ಒಳಚರಂಡಿ ಯೋಜನೆ, ರಸ್ತೆ ಸುಂದರೀಕರಣಕ್ಕೆ ಬಿಳಿ ಬಣ್ಣದ ಮಾರ್ಕ್ ಅಳವಡಿಕೆ ಸಹಿತ ಹಲವು ಯೋಜನೆಗಳನ್ನು 2023-24ರ ಬಜೆಟ್‌ನಲ್ಲಿ ಅಳವಡಿಸುವಂತೆ ಸಾರ್ವಜನಿಕರು ಪುತ್ತೂರು ನಗರಸಭೆ ಬಜೆಟ್ ಪೂರ್ವತಯಾರಿ ಸಭೆಯಲ್ಲಿ ಸಲಹೆ ಸೂಚನೆ ನೀಡಿದರು.

2023-24ರ ನಗರಸಭೆ ಬಜೆಟ್ ತಯಾರಿಯ 2ನೇ ಪೂರ್ವಭಾವಿ ಸಭೆ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಜ.13ರಂದು ಬೆಳಿಗ್ಗೆ ನಗರಸಭೆ ಸಭಾಂಗಣದಲ್ಲಿ ನಡೆಯಿತು.

ನಗರಸಭೆಯ ಒಳಗೆ ಒಳ್ಳೆಯ ಬಜೆಟ್ ಮಾಡಬೇಕು.ಈ ಕುರಿತು ಒಂದಷ್ಟು ಅಭಿಪ್ರಾಯ ಸಂಗ್ರಹ ಮಾಡಬೇಕು.ಇದಕ್ಕೆ ನಗರಸಭೆ ನಿಧಿ ಮತ್ತು ರಾಜ್ಯ ಸರಕಾರ, ಕೇಂದ್ರ ಸರಕಾರದ ಅನುದಾನ ಸೇರಿಸಿಕೊಂಡು ಕಳೆದ ಹಲವು ವರ್ಷಗಳಿಂದ ಬಜೆಟ್ ಮಾಡಲಾಗುತ್ತಿದೆ.ರಸ್ತೆಗಳ ಅಭಿವೃದ್ಧಿ, ದಾರಿದೀಪಗಳ ನಿರ್ವಹಣೆ, ಚರಂಡಿ ಅಭಿವೃದ್ಧಿ, ಪಾರ್ಕ್‌ಗಳು, ಬಸ್ ನಿಲ್ದಾಣ ನಿರ್ಮಾಣ, ಕಸವಿಲೇವಾರಿಯನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡುವ ಯೋಜನೆ ಇದರ ಜೊತೆಗೆ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಒತ್ತು ಕೊಡುವ ದೃಷ್ಟಿಯಿಂದ ಬಜೆಟ್ ಮಾಡಲಾಗುತ್ತದೆ.ಮುಂದೆ ನಗರಸಭೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.ಜಿಲ್ಲಾ ಕೇಂದ್ರ ಆಗುವ ಸೂಚನೆಗಳಿವೆ.ವಾಹನ ದಟ್ಟಣೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.ಈ ನಿಟ್ಟಿನಲ್ಲಿ ಒಟ್ಟು ಅಭಿವೃದ್ದಿಯ ದೃಷ್ಟಿಯಿಂದ ಸಾರ್ವಜನಿಕರ ಸಲಹೆ ಪಡೆದು ಬಜೆಟ್ ಮಾಡಲಾಗುವುದು ಎಂದು ಅಧ್ಯಕ್ಷ ಜೀವಂಧರ್ ಜೈನ್ ಹೇಳಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಝೋನ್ ಅಗತ್ಯ:
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ ಅವರು ಮಾತನಾಡಿ ಈಗಾಗಲೇ ನಗರಸಭೆಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಅನುಮತಿ ನೀಡಲಾಗಿದೆ.ಅವರು ಇತರ ಕಟ್ಟಡಗಳಲ್ಲಿರುವ ವ್ಯಾಪಾರಿಗಳ ಅಂಗಡಿ ಮುಂದೆ ಬಂದು ಅಂಗಡಿಯವರು ಮಾರಾಟ ಮಾಡುವ ವಸ್ತುಗಳನ್ನೇ ಮಾರಾಟ ಮಾಡಿದಾಗ ಅಂಗಡಿ ವ್ಯಾಪಾರಿಗಳಿಗೆ ತೊಂದರೆ ಆಗುತ್ತದೆ.ಅಂಗಡಿ ವ್ಯಾಪಾರಿಗಳು ತೆರಿಗೆ ಸಹಿತ ಇತರ ಶುಲ್ಕಗಳನ್ನು ಪಾವತಿಸಿ ವ್ಯಾಪಾರ ನಡೆಸುವವರು.ಬೀದಿ ಬದಿ ವ್ಯಾಪಾರಿಗಳು ಯಾವುದೇ ಪಾವತಿ ಇಲ್ಲದೆ ವ್ಯಾಪಾರ ಮಾಡುವವರು.ಅವರು ಅಂಗಡಿಗಳ ಮುಂದೆ ವ್ಯಾಪಾರ ಮಾಡುವುದರಿಂದ, ತೆರಿಗೆ ಪಾವತಿಸಿ ವ್ಯವಹಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ತೊಂದರೆ ಆಗಿರುವ ಕುರಿತು ವರ್ತಕ ಸಂಘಕ್ಕೆ ದೂರು ಬಂದಿದೆ.ಈ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಝೋನ್ ಅಗತ್ಯ ಎಂದು ಪ್ರಸ್ತಾಪಿಸಿದರು.ಉತ್ತರಿಸಿದ ಪೌರಾಯುಕ್ತ ಮಧು ಎಸ್.ಮನೋಹರ್ ಅವರು ಸರಕಾರದಿಂದ ಗೈಡ್ ಲೈನ್ ಪ್ರಕಾರ 531 ಮಂದಿ ಬೀದಿ ಬದಿ ವ್ಯಾಪಾರಿಗಳನ್ನು ಆಯ್ಕೆ ಮಾಡುವಂತೆ ಆದೇಶ ಬಂದಿತ್ತು.ಅದರಂತೆ ನಾವು ಪುತ್ತೂರಿನಲ್ಲಿ 844 ಮಂದಿ ಬೀದಿ ಬದಿ ವ್ಯಾಪಾರಿಗಳನ್ನು ಆಯ್ಕೆ ಮಾಡಿದ್ದೆವೆ.ಇದೀಗ ಮತ್ತೆ ಕೇಂದ್ರ ಸರಕಾರದಿಂದ ಮತ್ತೆ 1062 ಮಂದಿ ಬೀದಿ ಬದಿ ವ್ಯಾಪಾರಿಗಳನ್ನು ಆಯ್ಕೆ ಮಾಡುವ ಸೂಚನೆ ಬಂದಿದೆ.ಹಾಗಾಗಿ ಇದು ಅಂಗಡಿಯವರಿಗೂ ಸಮಸ್ಯೆ ಎಂಬುದು ನಮಗೂ ಅರ್ಥ ಆಗಿದೆ.ಈ ನಿಟ್ಟಿನಲ್ಲಿ ಸೂಕ್ತ ಸ್ಥಳದಲ್ಲಿ ಪ್ರತ್ಯೇಕ ಬೀದಿ ಬದಿ ವ್ಯಾಪಾರಕ್ಕೆ ಝೋನ್ ಮಾಡುವ ಚಿಂತನೆ ಇದೆ ಎಂದು ಹೇಳಿದರು.

ಅಂಗಡಿಗಳ ತೆರಿಗೆ ಕಡಿಮೆ ಮಾಡಿ:
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೋನ್ ಕುಟಿನ್ಹಾ ಅವರು ಮಾತನಾಡಿ ಅಂಗಡಿ ವ್ಯಾಪಾರಿಗಳಿಗೆ ಸಂಬಂಧಿಸಿ ತೆರಿಗೆ ಹೊರೆಯಾಗಿದೆ.ಕಸಕ್ಕೆ ತಾಂತ್ರಿಕ ದರಪಟ್ಟಿ ನೀಡಿರುವುದು ದೊಡ್ಡ ಹೊರೆಯಾಗಿದೆ.ಇದನ್ನು ಕಡಿಮೆ ಮಾಡುವಂತೆ ಹಿಂದೆಯೂ ಹೇಳಿದ್ದೆ ಎಂದರು.ಉತ್ತರಿಸಿದ ಅಧ್ಯಕ್ಷರು,ಅದರ ಸಾಧಕ ಬಾಧಕ ನಾವು ನೋಡಿದ್ದೆವೆ.ಕಾನೂನಿನ ಚೌಕಟ್ಟಿನಲ್ಲಿ ವರ್ತಕರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.ಪೌರಾಯುಕ್ತರು ಮಾತನಾಡಿ ಪ್ರಸ್ತುತ ಕಟ್ಟಡ ಪರವಾನಿಗೆ ಪ್ರತಿವರ್ಷ ನವೀಕರಣ ಮಾಡುವ ಅಗತ್ಯವಿಲ್ಲ.5  ವರ್ಷಕ್ಕೆ ಒಮ್ಮೆಯೂ ನವೀಕರಣ ಮಾಡುವ ಅವಕಾಶವಿದೆ.ಇದಕ್ಕಾಗಿ ಬಾಡಿಗೆದಾರರ ಎಗ್ರಿಮೆಂಟ್ ಕೂಡಾ 5 ವರ್ಷಕ್ಕೆ ಇರಬೇಕೆಂದರು.

ಯುಜಿಡಿ ಯೋಜನೆ ಬೇಕು:
ನಗರಸಭೆ ವ್ಯಾಪ್ತಿಯಲ್ಲಿ ಅತೀ ಮುಖ್ಯವಾಗಿ ಬೇಕಾಗಿರುವುದು ಒಳಚರಂಡಿ ಯೋಜನೆ.ಇದನ್ನು ಕಾರ್ಯಗತಗೊಳಿಸುವಂತೆ ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ ಪ್ರಸ್ತಾಪಿಸಿದರು.ಧ್ವನಿಗೂಡಿಸಿದ ಸಂಘದ ಸದಸ್ಯ ಸದಾನಂದ ಅವರು ಈ ಹಿಂದೆ ಒಮ್ಮೆ ಈ ಯೋಜನೆ ಪ್ರಚಲಿತದಲ್ಲಿತ್ತು.ಅದನ್ನು ಮತ್ತೆ ಕೈಬಿಟ್ಟದ್ದು ಯಾಕೆ ಎಂದು ಪ್ರಶ್ನಿಸಿದರು.ಉತ್ತರಿಸಿದ ಪೌರಾಯುಕ್ತರು ರೂ.3.5ಕೋಟಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವು 5 ಎಕ್ರೆ ಜಾಗದಲ್ಲಿ ನಿರ್ಮಾಣ ಆಗಲಿದೆ.ಈಗಾಗಲೇ ತ್ಯಾಜ್ಯ ನೀರು ಸಂಗ್ರಹಕ್ಕೆ ಹೊಸ ವಾಹನವೂ ಬಂದಿದೆ.ಅದೇ ರೀತಿ ಯುಜಿಡಿ ಯೋಜನೆಯು ಸರಕಾರದ ಹಂತದಲ್ಲಿದೆ ಎಂದರು. ಅಧ್ಯಕ್ಷರು ಮಾತನಾಡಿ ರೂ.154 ಕೋಟಿ ವೆಚ್ಚದಲ್ಲಿ ಯಜಿಡಿ ಯೋಜನೆಗೆ ಸಿದ್ಧತೆ ನಡೆದಾಗ ಸರ್ವೆ ಸಂದರ್ಭ ಭೂಒತ್ತುವರಿ ಸಮಸ್ಯೆಯಿಂದಾಗಿ ಸಮಸ್ಯೆ ಬಂತು.ಆದರೂ ಈಗಲೂ ಅದು ಸರಕಾರದ ಹಂತದಲ್ಲಿ ಮಾತುಕತೆ ನಡೆಸಲಾಗುತ್ತಿದೆ ಎಂದರು.

ಎಸ್ಸಿ,ಎಸ್ಟಿಯವರ ಜಮೀನು ದಾಖಲೆ ಪತ್ರ ಸರಿಪಡಿಸಿ:
ನಗರಸಭೆ ಮಾಜಿ ಸದಸ್ಯ ಮುಖೇಶ್ ಕೆಮ್ಮಿಂಜೆ ಅವರು ಮಾತನಾಡಿ ನಗರಸಭೆ ಸ್ವಚ್ಛ ಸುಂದರ ಆಗುತ್ತಿರುವ ಸಂದರ್ಭದಲ್ಲಿ ರಸ್ತೆಯನ್ನೂ ಸುಂದರ ಗೊಳಿಸಬೇಕು.ಅಲ್ಲಲ್ಲಿ ಜೀಬ್ರಾಕ್ರಾಸ್ ಮತ್ತು ರಸ್ತೆ ಬದಿಗೂ ಬಿಳಿ ಬಣ್ಣದ ಗುರುತು ಅಳವಡಿಸಿ, ವೃತ್ತಗಳನ್ನು ಸುಂದರಗೊಳಿಸಿ ಎಂದರು.ಜೊತೆಗೆ ಎಸ್ಸಿ ಎಸ್ಟಿಯವರಿಗೆ ವಿಶೇಷ ಯೋಜನೆಯಲ್ಲಿ ಮನೆ ನಿರ್ಮಾಣ, ಅವರ ದಾಖಲೆಪತ್ರ ಸರಿಡಿಸುವಂತೆ ಹಾಗು ಕಾಲೊನಿ ಅಭಿವೃದ್ದಿ ಮಾಡಿಸಿ ಎಂದರು.ಉತ್ತರಿಸಿದ ಅಧ್ಯಕ್ಷರು ಈಗಾಗಲೇ ಎಸ್ಸಿ ಎಸ್ಟಿಯವರಿಗೆ ಮನೆ ದುರಸ್ತಿ, ಹೊಸ ಮನೆ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ.ಇದರ ಜೊತೆಗೆ ಹಲವರಲ್ಲಿ ಮನೆ ದಾಖಲೆ ಪತ್ರ ಸರಿಯಿಲ್ಲ.ಇದನ್ನು ನಗರಸಭೆಯಿಂದ ಸರಿಪಡಿಸುವಂತೆ ಹಿಂದೊಮ್ಮೆ ಅವಕಾಶ ನೀಡಲಾಗಿತ್ತು.ಆದರೆ ಯಾರೂ ಇದರ ಪ್ರಯೋಜನ ಪಡೆದಿಲ್ಲ ಎಂದರು.

ಕಟ್‌ಕನ್ವರ್ಷನ್ ಸಮಸ್ಯೆಗೆ ಮಾರ್ಗೋಪಾಯ ತಿಳಿಸಿ:
ನಗರಸಭೆ ವ್ಯಾಪ್ತಿಯಲ್ಲಿ ಕಟ್‌ಕನ್ವರ್ಷನ್ ಸಮಸ್ಯೆ ಸಾಕಷ್ಟು ಇದೆ.ಇದಕ್ಕೆ ಮಾರ್ಗೋಪಾಯ ನೀಡಿದರೆ ನಗರಸಭೆ ಆದಾಯ ಹೆಚ್ಚಾಗುತ್ತದೆ,ಇಂಜಿನಿಯರ್,ಗುತ್ತಿಗೆದಾರರಿಗೂ ಕೆಲಸ ಸಿಗುತ್ತದೆ ಎಂದು ಪುತ್ತೂರು ವರ್ತಕ ಸಂಘದ ಸದಸ್ಯ ಸದಾನಂದ ಅವರು ಪ್ರಸ್ತಾಪಿಸಿದರು.ಮಹೇಶ್ ಕಲ್ಲೇಗ ಧ್ವನಿಗೂಡಿಸಿದರು.ಉತ್ತರಿಸಿದ ಪೌರಾಯುಕ್ತರು ಇದು ಇಲ್ಲಿ ಒಂದು ಕಡೆಯ ಸಮಸ್ಯೆಯಲ್ಲ.ಎಲ್ಲಾ ಕಡೆಯಲ್ಲಿ ಇದೆ.ಆದರೆ ಇದರ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ ಎಂದರು.ಅಧ್ಯಕ್ಷರು ಮಾತನಾಡಿ ಕಟ್‌ಕನ್ವರ್ಷನ್ ಸಮಸ್ಯೆ ಬಗೆಹರಿಸಲು ಶಾಸಕರು ಅದರ ಹಿಂದೆ ಪ್ರಯತ್ನ ಮಾಡುತ್ತಿದ್ದಾರೆ.ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಭಾಮಿ ಅಶೋಕ್ ಶೆಣೈ, ಶಾಸಕ ಸಂಜೀವ ಮಠಂದೂರು ಅವರು ಈ ಕುರಿತು ಬಹಳ ಪ್ರಯತ್ನ ಪಟ್ಟಿದ್ದಾರೆ.ಕೊನೆಗೆ ಒಂದು ಕುಟುಂಬದೊಳಗಿನ ಜಮೀನಿನಲ್ಲಿ ಇದಕ್ಕೆ ಅವಕಾಶ ನೀಡುವ ಕುರಿತು ಮಾತುಕತೆ ನಡೆಸಲಾಗಿದೆ ಎಂದರು.ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ ಅವರು ಮಾತನಾಡಿ ಸ್ವಯಂಘೋಷಿತ ಆಸ್ತಿ ತೆರಿಗೆಯ ಬಳಿಕ ಮತ್ತೆ ಕೆಲವೊಂದು ಕಡೆ ತಮ್ಮ ಕಟ್ಟಡದಲ್ಲಿ ಹೆಚ್ಚಿನ ವಿಸ್ತರಣೆ ಮಾಡಲಾಗಿದೆ.ಆದರೆ ಇದು ತಪ್ಪಾಗಿರುವುದು ಸಹಜ.ಅದಕ್ಕೆ ಪರಿಹಾರೋಪಾಯ ನೀಡಬೇಕು ಎಂದು ತಿಳಿಸಿದರು.ಉತ್ತರಿಸಿದ ಪೌರಾಯುಕ್ತರು ಈಗಾಗಲೇ ಮನೆ ಆಸ್ತಿಗಳಿಗೆ ಆನ್‌ಲೈನ್ ಅಪ್‌ಲೋಡ್ ಮಾಡಲು ಸರ್ವೆ ಕಾರ್ಯ ನಡೆಯುತ್ತಿದೆ.ಅವರು ಮನೆ ಮನೆಗೆ ಬಂದಾಗ ಮಾಹಿತಿ ನೀಡಬೇಕು ಮತ್ತು ಹೊಸ ಕಟ್ಟಡ ಕಟ್ಟಿದ್ದರೆ ಅದನ್ನು ಇಲ್ಲಿ ಸೇರಿಸಲು ಅವಕಾಶವಿಲ್ಲ ಎಂದರು.ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆರ್.ಹೆಚ್.ಸೆಂಟರ್‌ನ ಮಾಲಕ ಗೋಪಾಲ್ ಯು, ನಗರಸಭಾ ಸದಸ್ಯರಾದ ಸಂತೋಷ್ ಬೊಳುವಾರು, ಶೈಲಾ ಪೈ, ಮೋಹಿನಿ ವಿಶ್ವನಾಥ ಗೌಡ, ಇಂದಿರಾ ಪಿ, ಶಶಿಕಲಾ ಸಿ.ಎಸ್, ರೋಹಿಣಿ ಸಹಿತ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.

ನಗರಸಭೆ ಅಭಿನಂದನೆ
ನಗರಸಭೆಯಿಂದ ಹಲವು ಉತ್ತಮ ಅಭಿವೃದ್ಧಿ ಯೋಜನೆಗಳು ಜಾರಿಗೆ ಬರುತ್ತಿರುವುದು ಕಳೆದ ಸಾಮಾನ್ಯ ಸಭೆಯ ಪತ್ರಿಕಾ ವರದಿಯಿಂದ ಗಮನಿಸಿದ್ದೆವೆ.ಈ ನಿಟ್ಟಿನಲ್ಲಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪರವಾಗಿ ನಗರಸಭೆಯ ಆಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ ಹೇಳಿದರು.

ನಗರಸಭೆಗೊಂದು ಲೈಬ್ರೇರಿ
ನಗರಸಭೆಯ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಲೈಬ್ರೇರಿ ಬೇಕೆಂದು ಬಹುಜನರ ಬೇಡಿಕೆಯಂತೆ ನಗರಸಭೆ ಕಟ್ಟಡದಲ್ಲೇ ಲೈಬ್ರೇರಿ ಮಾಡುವ ಚಿಂತನೆ ಇದೆ.ಡಾ|ಶಿವರಾಮ ಕಾರಂತ, ಡಾ|ಬಿ.ಆರ್ ಅಂಬೇಡ್ಕರ್ ಸಹಿತ ಹಲವು ಮಹಾಪುರುಷರುಗಳ ಗ್ರಂಥಗಳ ಸಹಿತ ಉತ್ತಮ ಪುಸ್ತಕಗಳನ್ನು ತರಿಸಿ ಶಾಲಾ ಮಕ್ಕಳಿಗೆ ಸದುಪಯೋಗ ಆಗುವಂತೆ ಮಾಡಲಾಗುವುದು.ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪುಸ್ತಕ ಕೊಡುವ ಭರವಸೆ ನೀಡಿದ್ದಾರೆ.
ಕೆ.ಜೀವಂಧರ್ ಜೈನ್, ಅಧ್ಯಕ್ಷರು ನಗರಸಭೆ ಪುತ್ತೂರು

LEAVE A REPLY

Please enter your comment!
Please enter your name here