ನಗರಸಭೆಯಲ್ಲಿ ಜಲಸಿರಿ ಯೋಜನೆಯ ಪರಿಶೀಲನಾ ಸಭೆ

0

ಜಲಸಿರಿ ಯೋಜನೆ ಕಾಮಗಾರಿ ವಿಳಂಬ, ಅಸಮರ್ಪಕ

ಕೆಯುಐಡಿಎಫ್‌ಸಿ ಅಧಿಕಾರಿಗಳು, ಗುತ್ತಿಗೆದಾರರನ್ನು ತರಾಟೆಗೆತ್ತಿಕೊಂಡ ಶಾಸಕರು

ಪುತ್ತೂರು:ರೂ.117 ಕೋಟಿ ವೆಚ್ಚದಲ್ಲಿ ಪುತ್ತೂರಿಗೆ ಸಮಗ್ರ ಕುಡಿಯುವ ನೀರು ಪೂರೈಕೆಯ ಜಲಸಿರಿ ಯೋಜನೆ ಕಾಮಗಾರಿ 2019ರ ಜ.11ರಂದು ಆರಂಭಗೊಂಡಿದ್ದು, ವಿಸ್ತರಿತ ಅವಧಿಯನ್ನೂ ಸೇರಿಸಿದರೆ 2023ರ ಮಾರ್ಚ್ 10ರಂದು ಕಾಮಗಾರಿ ಮುಗಿಸಬೇಕಿದೆ. ಆದರೆ ಕೆಲಸದ ಸ್ಥಿತಿ ನೋಡಿದರೆ ಇನ್ನು 6 ತಿಂಗಳಾದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ, ಈ ರೀತಿ ವಿಳಂಬ ಯಾಕೆ ಎಂದು ಶಾಸಕ ಸಂಜೀವ ಮಠಂದೂರು ಅವರು ಕೆಯುಐಡಿಎಫ್‌ಸಿ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತರಾಟೆಗೆತ್ತಿಕೊಂಡ ಘಟನೆ ಜಲಸಿರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದಿದೆ. ನಗರಸಭೆ ಅಧ್ಯಕ್ಷ ಕೆ. ಜೀವಂಧರ್, ಸದಸ್ಯರು ಕೂಡಾ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.

ಸಾರ್ವಜನಿಕರಿಗೆ ಜಲಸಿರಿ ಯೋಜನೆಯಿಂದ ತೊಂದರೆ ಉಂಟಾಗುತ್ತಿರುವ ಕುರಿತು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ಜ.13ರಂದು ಸಂಜೆ ನಗರಸಭೆ ಸಭಾಂಗಣದಲ್ಲಿ ಸಭೆ ನಡೆಯಿತು. ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ(ಕೆಯುಐಡಿಎಫ್‌ಸಿ)ಸಾರಥ್ಯದಲ್ಲಿ ಜಲಸಿರಿ ಯೋಜನೆ ಜಾರಿಗೆ ಬರುತ್ತಿದ್ದು ಪ್ರತಿ ಕಾಮಗಾರಿ ಹಂತದಲ್ಲೂ ಅಲ್ಲಲ್ಲಿ ಗುಂಡಿ ತೆಗೆದು ರಸ್ತೆಗೆ ಹಾನಿ, ತೆಗೆದ ಗುಂಡಿಯನ್ನು ಮುಚ್ಚದೆ ತೊಂದರೆ ಉಂಟು ಮಾಡುವುದು, ಮನೆ ಸಂಪರ್ಕ ನೀಡಿದ ಕಡೆ ನೀರು ಸರಬರಾಜು ಆಗದೇ ಇರುವ ಕುರಿತು ಸದಸ್ಯರು ಆರೋಪ ವ್ಯಕ್ತಪಡಿಸಿದರು.ಜಲಸಿರಿಯ ಕೆಲಸದ ಬಗ್ಗೆ ಆರೋಪಗಳ ಸುರಿಮಳೆಯೇ ಇದೆ. ಈಗಾಗಲೇ ನಾಗರಿಕರಿಂದ 67 ದೂರುಗಳು ಬಂದಿವೆ. ಪ್ರತೀ ವಾರ ಆರೇಳು ದೂರು ಬರುತ್ತಲೇ ಇದೆ ಎಂದು ಹೇಳಿದ ಶಾಸಕರು, ಸಮರ್ಪಕ ಕೆಲಸ ಮಾಡಿ. ಪೈಪ್‌ಲೈನ್ ಪೂರ್ತಿಯಾಗದೆ ಹಳೆ ಲೈನ್‌ಗೆ ಲಿಂಕ್ ಕೊಡಬೇಡಿ. ಇದರಿಂದ ಹಳೆಯ ಲೈನ್‌ನಲ್ಲೂ ಲೋ ಪ್ರೆಶರ್ ಉಂಟಾಗಿ ನೀರು ಬರುತ್ತಿಲ್ಲ ಎಂಬ ದೂರು ವ್ಯಾಪಕವಾಗಿದೆ. ಎಲ್ಲ ಪೂರ್ತಿಯಾದ ಮೇಲೆ ಲಿಂಕ್ ಕೊಡಿ. ಅಲ್ಲಿಯವರೆಗೆ ಟ್ಯಾಂಕರ್‌ನಲ್ಲಿ ನೀರು ತಂದು ಸುರಿದು ತಪಾಸಣೆ ಮಾಡುತ್ತಿರಿ. ವಾರಕ್ಕೊಮ್ಮೆ ನಗರಸಭೆ ಅಧ್ಯಕ್ಷರ ನೇತೃತ್ವದ ತಂಡ ಕಾಮಗಾರಿ ಪರಿಶೀಲನೆ ಮಾಡುತ್ತಿರಿ ಎಂದು ಸೂಚನೆ ನೀಡಿದರಲ್ಲದೆ ಫೆ.17ರ ಬಜೆಟ್ ಬೆನ್ನಲ್ಲೇ ನೆಕ್ಕಿಲಾಡಿಯಿಂದ ಸೀಟಿ ಗುಡ್ಡೆಗೆ ನೀರು ಹರಿಸುವ ಮೊದಲ ಹಂತ ಉದ್ಘಾಟಿಸುವ ಉದ್ದೇಶವಿದೆ ಎಂದರು.

6,5೦೦ ಸಂಪರ್ಕ ಜೋಡಿಸಲಾಗಿದೆ: ಹೊಸ ಪೈಪ್‌ಲೈನ್ ಮೂಲಕ ಹೊಸದಾಗಿ 1500 ಸಂಪರ್ಕ ನೀಡಲಾಗಿದೆ. ಹಳತು ಸೇರಿದಂತೆ 6,500 ಸಂಪರ್ಕ ಜೋಡಿಸಲಾಗಿದೆ. ವರ್ಷಗಳ ಹಿಂದಿನ ಹಳೆಯ ಪೈಪ್‌ಗಳಲ್ಲಿ ಕೆಸರು ತುಂಬಿದೆ ಎಂದು ಅಧಿಕಾರಿಗಳು, ಗುತ್ತಿಗೆದಾರರು ತಿಳಿಸಿದರು. ಫೆಬ್ರವರಿಗೆ ಕಾಮಗಾರಿ ಮುಗಿಸಲು ಅಸಾಧ್ಯ ಎಂದು ಅಧಿಕಾರಿಗಳು, ಗುತ್ತಿಗೆದಾರ ಸಂಸ್ಥೆ ಪ್ರತಿನಿಧಿ ಹೇಳಿದರು.

ಸುಂದರ ರಸ್ತೆಗಳನ್ನು ಅಗೆದಿದ್ದಾರೆ: ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರಸಭೆಯ ಭಾಮಿ ಅಶೋಕ್ ಶೆಣೈ ಅವರು ಮಾತನಾಡಿ ಪೈಪ್‌ಲೈನ್‌ಗಾಗಿ ಸುಂದರ ರಸ್ತೆಗಳನ್ನು ಅಗೆದಿದ್ದಾರೆ. ಆದರೆ ಸರಿಯಾಗಿ ತೇಪೆ ನಡೆದಿಲ್ಲ.ಕೆಲವು ಕಡೆ ವರ್ಷದಿಂದಲೂ ಹಾಗೇ ಬಿಟ್ಟಿದ್ದಾರೆ. ಪೈಪ್‌ಲೈನ್ ಹೊಂಡ ಮುಚ್ಚುವಾಗ ಕೇವಲ ಮಣ್ಣು ಸುರಿಯಲಾಗಿದೆ. ಇದರಿಂದ ಭವಿಷ್ಯದಲ್ಲಿ ಈ ಹೊಂಡ ಜಗ್ಗಲಿದೆ. ಕೆಲಸ ಪೂರ್ತಿಯಾಗದೆ ನೀರಿನ ಲಿಂಕ್ ಕೊಟ್ಟ ಕಾರಣ ಅನೇಕ ಕಡೆ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ರಸ್ತೆಯನ್ನು ಅಗೆಯುವಾಗ ಅನುಮತಿ ಪಡೆದಿಲ್ಲ. ಅಗೆದ ಬಳಿಕ ಮೊದಲಿನಂತೆ ಮಾಡಿಕೊಟ್ಟಿಲ್ಲ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಕಾನಿಷ್ಕ್ ಹೇಳಿದರು.

ಪುಸ್ತಕದ ಪರ್ಸಂಟೇಜ್ ಬೇಡ: ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ 3 ವರ್ಷದಿಂದ ಜಲಸಿರಿ ಕಾಮಗಾರಿಯ ದೂರುಗಳನ್ನು ಕೇಳಿ ಕೇಳಿ ಸಾಕಾಗಿದೆ. ರಸ್ತೆ, ಕಾಂಕ್ರೀಟ್ ಅಗೆದ ಸ್ಥಳದಲ್ಲಿ ಯಾವಾಗ ಪೂರ್ತಿ ಮಾಡುತ್ತಾರೆ ಎಂದು ಇಲ್ಲೇ ಬರೆದುಕೊಟ್ಟು ಹೋಗಲಿ. ಕೇವಲ ಪುಸ್ತಕದಲ್ಲಿ ಪರ್ಸಂಟೇಜ್ ಕಾಮಗಾರಿ ತೋರಿಸಿದರೆ ಸಾಲದು. ಜನವರಿಯಲ್ಲಿ ಸೀಟಿ ಗುಡ್ಡೆಗೆ ನೀರು ಹರಿಸಬೇಕಿತ್ತು. ಇನ್ನು 6 ತಿಂಗಳಾದರೂ ಮುಗಿಯುವ ಸೂಚನೆ ಕಾಣುತ್ತಿಲ್ಲ. ಇನ್ನು ಮುಂದೆ ಇವರ ಮೀಟಿಂಗ್‌ಗೆ ನಾನು ಬರೋದಿಲ್ಲ ಎಂದು ನಗರಸಭೆ ಅಧ್ಯಕ್ಷ ಜೀವಂಧರ ಜೈನ್ ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಪೌರಾಯುಕ್ತರಾದ ಮಧು ಎಸ್. ಮನೋಹರ್, ಜಲಸಿರಿ ಯೋಜನೆಯ ಹಿರಿಯ ಎಂಜಿನಿಯರ್ ಜಯರಾಮ್ ವೇದಿಕೆಯಲ್ಲಿದ್ದರು. ಕೆಯುಐಡಿಎಫ್‌ಸಿ ಅಧಿಕಾರಿಗಳು, ಗುತ್ತಿಗೆದಾರ ಪ್ರತಿನಿಧಿಗಳು, ನಗರಸಭೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here