ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ 15ನೇ ಶಾಖೆ ಉಪ್ಪಿನಂಗಡಿಯಲ್ಲಿ ಉದ್ಘಾಟನೆ

0

ಉಪ್ಪಿನಂಗಡಿ: ಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತದ 15ನೇ ಶಾಖೆಯು ಉಪ್ಪಿನಂಗಡಿಯ ಕೋಟೆ ಕೆಂಪಿಮಜಲಿನ ಗೌರಿ ಕಾಂಪ್ಲೆಕ್ಸ್‌ನಲ್ಲಿ ಜ.14ರಂದು ಶುಭಾರಂಭಗೊಂಡಿದ್ದು, ಶ್ರೀ ಧಾಮ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪಪ್ರಜ್ವಲನೆಗೊಳಿಸಿದರು.


ಬಳಿಕ ಆಶೀರ್ವಚನ ನೀಡಿದ ಅವರು, ಸಹಕಾರಿ ತತ್ವದಲ್ಲಿ ಸೌಹಾರ್ದತೆಯನ್ನೂ ಕಾಣಬಹುದಾಗಿದ್ದು, ಇಂದು ಕೃಷಿಯಿಂದ ಹಿಡಿದು ಉದ್ಯಮ ಕ್ಷೇತ್ರಗಳಲ್ಲೂ ಸಹಕಾರಿ ರಂಗ ವ್ಯಾಪಿಸಿದೆ. ಇದರಿಂದ ನಾಡಿನ ಪ್ರಗತಿಯಾಗಿದೆ. ಉಪ್ಪಿನಂಗಡಿಯಲ್ಲಿ ನೂತನವಾಗಿ ಶಾಖೆಯನ್ನು ತೆರೆದಿರುವ ಸಮಾಜ ಸೇವಾ ಸಹಕಾರಿ ಸಂಘ ಕೂಡಾ ಜಾತಿ- ಮತ- ಬೇಧ ರಹಿತವಾಗಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಇನ್ನಷ್ಟು ಬೆಳೆದು ಬೆಳಗಲಿ. ಇದರಿಂದ ಈ ಊರಿಗೂ ಅನುಕೂಲತೆಗಳಾಗಲಿ ಎಂದರು.

ಮುಖ್ಯ ಅತಿಥಿಯಾಗಿದ್ದ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ ಮಾತನಾಡಿ, ಉಪ್ಪಿನಂಗಡಿ ವಾಣಿಜ್ಯಿಕವಾಗಿ ಬೆಳೆಯುತ್ತಿದ್ದು, ಹಲವು ಸಹಕಾರಿ ಸಂಘ- ಸಂಸ್ಥೆ, ಬ್ಯಾಂಕ್‌ಗಳು ಇಲ್ಲಿಗೆ ಬರುವ ಮೂಲಕ ಇದರ ಬೆಳವಣಿಗೆಗೆ ಸಹಕಾರ ನೀಡಿವೆ. ಇದರಿಂದಾಗಿ ಉಪ್ಪಿನಂಗಡಿ ಇಂದು ಸ್ಮಾರ್ಟ್ ಸಿಟಿಯಂತೆ ಭಾಸವಾಗುತ್ತಿದೆ. ಈ ಸಂಸ್ಥೆಯೂ ಇಲ್ಲಿನವರಿಗೆ ಉತ್ತಮ ಸೇವೆ ನೀಡಲಿ. ಊರಿನ ಅಭಿವೃದ್ಧಿಯೊಂದಿಗೆ ಸಂಘದ ಅಭಿವೃದ್ದಿಯೂ ಆಗಲಿ ಎಂದು ಹಾರೈಸಿದರು.

ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಯೋಧ ಹಾಗೂ ಸಮಾಜರತ್ನ ಡಾ. ಅಮ್ಮೆಂಬಳ ಬಾಳಪ್ಪನವರ ನೇತೃತ್ವದಲ್ಲಿ ಹಾಗೂ ಸಹಕಾರಿ ಧುರೀಣ ಬಿ. ಹೂವಯ್ಯ ಮೂಲ್ಯರವರ ಸಾರಥ್ಯದಲ್ಲಿ 1981ರಲ್ಲಿ ಸ್ಥಾಪನೆಯಾದ ಈ ಬ್ಯಾಂಕ್ ಪ್ರಗತಿಯ ಹಾದಿಯಲ್ಲಿ ಮುನ್ನುಗ್ಗುತ್ತಿದ್ದು, ಈಗ ತನ್ನ 15 ಶಾಖೆಯನ್ನು ಉಪ್ಪಿನಂಗಡಿಯಲ್ಲಿ ತೆರೆದಿದೆ. ಗ್ರಾಹಕರ ಸಹಕಾರ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಶ್ರಮವೇ ಈ ಯಶಸ್ಸಿಗೆ ಕಾರಣ. ಇಲ್ಲಿಯೂ ಗ್ರಾಹಕರಿಂದ ಉತ್ತಮ ಸಹಕಾರ ಸಿಗಲಿ ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು. ಭದ್ರತಾ ಕೊಠಡಿ ಉದ್ಘಾಟಿಸಿದರು. ಮಂಗಳೂರು ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಲ್ಲಾಳ್, ಬಿಎಸ್‌ಎಫ್‌ನ ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಯು.ಟಿ. ತೌಸೀಫ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಉದ್ಯಮಿ ಯು.ರಾಮ ಶುಭ ಹಾರೈಸಿದರು.‌

ಕಾರ್ಯಕ್ರಮದಲ್ಲಿ ಪ್ರಮುಖರಾದ ಎನ್. ಉಮೇಶ್ ಶೆಣೈ, ನಾಗರಾಜ್ ಕೋಟೆ, ಅವಿನಾಶ್, ಡಾ. ಕೈಲಾರ್ ರಾಜಗೋಪಾಲ ಭಟ್, ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರಾದ ವಿಶ್ವನಾಥ ಕೆ.ಬಿ., ಎಂ. ವಾಮನ ಟೈಲರ್, ಜನಾರ್ದನ ಬೊಂಡಾಲ, ಅರುಣ್ ಕುಮಾರ್ ಕೆ., ರಮೇಶ್ ಸಾಲ್ಯಾನ್, ವಿ. ವಿಜಯಕುಮಾರ್, ಜಯಂತಿ,  ವಿದ್ಯಾ,  ವಿಜಯಲಕ್ಷ್ಮೀ, ಬಿ. ರಮೇಶ್ ಸಾಲ್ಯಾನ್, ಸತೀಶ, ಜಗನ್ನೀವಾಸ ಗೌಡ, ನಾಗೇಶ್ ಬಿ., ಎಂ.ಕೆ. ಗಣೇಶ ಸಮಗಾರ, ಸುರೇಶ್ ಎಸ್., ಶಾಖಾ ವ್ಯವಸ್ಥಾಪಕಿ ಸವಿತಾ, ಸಂಘದ ನೌಕರ ವೃಂದದವರು, ಸಂಘದ ಸ್ವ- ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

ದೀಪಿಕಾ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಪದ್ಮನಾಭ ಎ. ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಬೋಜ ಮೂಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಆಡಳಿತ ಮಂಡಳಿ ಸದಸ್ಯ ಸತೀಶ್ ವಂದಿಸಿದರು. ಶಿವರಾಮ್ ಮರ್ಕಜೆ ಹಾಗೂ ವೆಂಕಟೇಶ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here