ಮಾಣಿಯಲ್ಲಿ `ಕುಂಭಶ್ರೀ ಸಹಕಾರ ಭವನ’ ಕಟ್ಟಡ ಲೋಕಾರ್ಪಣೆ

0

ಎಲ್ಲಾ ಸಮುದಾಯವನ್ನು ಪ್ರೀತಿಸುವ ಕೀರ್ತಿ ಕುಂಬಾರ ಸಮುದಾಯಕ್ಕಿದೆ-ಶ್ರೀ ಮೋಹನದಾಸ ಸ್ವಾಮೀಜಿ
ಕುಂಬಾರಿಕೆಯಲ್ಲಿ ತಾಂತ್ರಿಕತೆಯ ಅಭಿವೃದ್ದಿಗೆ ಹೆಚ್ಚಿನ ಪ್ರೋತ್ಸಾಹ- ರಾಜೇಶ್ ನಾಯ್ಕ್
ಎಲ್ಲಾ ಸಹಕಾರ ಸಂಘಗಳಿಗೂ ಮಾದರಿ ಸಂಘ -ಮಂಜಪ್ಪ
ಇದೊಂದು ಭದ್ರ ಸೊಸೈಟಿ -ಡಾ.ರೇಣುಕಾ ಪ್ರಸಾದ್ ಕೆ.ವಿ
ಸಹಕಾರ ಸಂಘಗಳಿಂದ ಊರಿನ ಅಭಿವೃದ್ಧಿ – ಶಶಿಕುಮಾರ್ ರೈ ಬಾಲ್ಯೊಟ್ಟು
ಬೆಳ್ಳಾರೆಯಲ್ಲೂ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮುಂದಡಿ – ಭಾಸ್ಕರ್ ಪೆರುವಾಯಿ
ಸಹಕಾರ ಸಂಘದಿಂದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಭದ್ರತೆ – ಕಸ್ತೂರಿ ಪಂಜ
ಹೊಸ ಯೋಜನೆಯ ತುಡಿತ ಸಾಕಾರಗೊಳ್ಳಲಿ -ಸಲೀಂ
ವೃತ್ತಿ ಮೌಲ್ಯ ಶಾಶ್ವತ – ಮನೋಹರ್ ಕೆ.ವಿ
ಸಮುದಾಯಕ್ಕೆ ಹೆಮ್ಮೆಯ ವಿಚಾರ-ಮಯೂರ್ ಉಳ್ಳಾಲ್
ಶಾಖೆಗಳನ್ನು ಮೈಸೂರು, ಮಡಿಕೇರಿ ಭಾಗಕ್ಕೆ ವಿಸ್ತರಿಸುವ ಚಿಂತನೆ-ಎಸ್.ಜನಾರ್ದನ ಮೂಲ್ಯ

ಪುತ್ತೂರು:ಪುತ್ತೂರಿನ ಹೃದಯ ಭಾಗದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿಕೊಂಡು ಕೌಡಿಚ್ಚಾರು, ಬೆಳ್ಳಾರೆ, ಗುರುವಾಯನಕೆರೆ, ಮಾಣಿ, ವಿಟ್ಲ, ಕುಡ್ತಮುಗೇರು, ಉಪ್ಪಿನಂಗಡಿ, ಬಿ.ಸಿ.ರೋಡ್, ಮೆಲ್ಕಾರು, ಬೆಳ್ತಂಗಡಿ, ಸಿದ್ದಕಟ್ಟೆ, ಮುಡಿಪು, ಫರಂಗಿಪೇಟೆ ಕಡೆಗಳಲ್ಲಿ ಶಾಖೆಗಳನ್ನು ಹೊಂದಿ ವ್ಯವಹಾರ ನಿರತವಾಗಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಾಣಿ ಶಾಖೆಯ ಕುಂಭಶ್ರೀ ಸಹಕಾರ ಭವನ ಕಟ್ಟಡ ಜ.14ರಂದು ಲೋಕಾರ್ಪಣೆಗೊಂಡಿತು.

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ ಅವರು ನೂತನ ಕುಂಭಶ್ರೀ ಸಹಕಾರ ಭವನವನ್ನು ಲೋಕಾರ್ಪಣೆಗೊಳಿಸಿದರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು.ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಗಣಕಯಂತ್ರವನ್ನು ಉದ್ಘಾಟಿಸಿದರು.ಕೆ.ವಿ.ಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ,ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರೂ ಆಗಿರುವ ಡಾ.ರೇಣುಕಾಪ್ರಸಾದ್ ಕೆ.ವಿ ಅವರು ಭದ್ರತಾ ಕೊಠಡಿ ಉದ್ಘಾಟಿಸಿದರು.ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಸಹಕಾರ ಸಂಘದ ಕಚೇರಿ, ಮಾರಾಟ ಮಳಿಗೆ ಮತ್ತು ಭದ್ರತಾ ಕೊಠಡಿಯಲ್ಲಿ ಆರತಿ ಬೆಳಗಿಸಿ ಅಕ್ಷತೆ ಸಮರ್ಪಣೆ ಮಾಡಿದರು.

ಎಲ್ಲಾ ಸಮುದಾಯವನ್ನು ಪ್ರೀತಿಸುವ ಕೀರ್ತಿ ಕುಂಬಾರ ಸಮುದಾಯಕ್ಕಿದೆ:
ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು, ನಮ್ಮದು ಎಂಬ ಭಾವನೆ ಬರಬೇಕು.ಜಾತಿ ಆಚರಣೆ, ಸ್ಥಾನಮಾನ, ಒಗ್ಗಟ್ಟಿನ ಕಾರ್ಯಕ್ರಮ ಇರಲಿ ಆದರೆ ಇದರಲ್ಲಿ ನಾವು ಒಂದಾಗುವ ಮನಸ್ಸು ಇರಬೇಕು.ಮಾನಸಿಕವಾಗಿ ಸಮಾಜವನ್ನು ಅತೃಪ್ತಿಗೊಳಿಸುವ ಕೆಲಸ ಆಗದೇ ಇರಲಿ.ಈ ನಿಟ್ಟಿನಲ್ಲಿ ಎಲ್ಲಾ ಸಮುದಾಯವನ್ನು ಪ್ರೀತಿಸುವ ಕೀರ್ತಿ ಕುಂಬಾರ ಸಮುದಾಯಕ್ಕಿದೆ ಎಂದರು.ಒಂದು ದೇವತಾ, ದೈವದ ಆರಾಧನೆಯಿರಲಿ ಪ್ರಾತಿನಿಧ್ಯವನ್ನು ಈ ಸಮಾಜ ಹೊಂದಿಕೊಂಡು ಬಂದಿದೆ.ಹತ್ತು ಜನ ಕಟ್ಟಿ ಬೆಳೆಸಿದ ಈ ಸಂಸ್ಥೆಯಲ್ಲಿ ಎಲ್ಲಾ ಸಮಾಜದವರ ವ್ಯವಹಾರದಿಂದಾಗಿ ಸಂಸ್ಥೆ ಅಭಿವೃದ್ಧಿ ಹೊಂದಿದೆ.ಕ್ಷೇತ್ರ ಬೆಳಗಿ ಬಳಲಿ.ಮುಂದಿನ ಅಭಿವೃದ್ದಿ ಪಥದಲ್ಲಿ ಇಡೀ ಸಮಾಜಕ್ಕೆ ಸಾಮರಸ್ಯದ ಸಂದೇಶದೊಂದಿಗೆ ಈ ಸಹಕಾರಿ ತತ್ವ ನಿರಂತರವಾಗಿ ಈ ಪ್ರದೇಶದಲ್ಲಿ ಬೆಳಗಿ ಬರಲಿ ಎಂದು ಹಾರೈಸಿದರು.

ಕುಂಬಾರಿಕೆಯಲ್ಲಿ ತಾಂತ್ರಿಕತೆಯ ಅಭಿವೃದ್ದಿಗೆ ಹೆಚ್ಚಿನ ಪ್ರೋತ್ಸಾಹ:
ಮಾರಾಟ ಮಳಿಗೆಯನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ ಶ್ರಮ ಜೀವಿ ಅಂದರೆ ಬಹಳ ಇಷ್ಟ. ಅದಕ್ಕೆ ತಕ್ಕಂತೆ ಇರುವ ಸಮಾಜದೊಂದಿಗೆ ನಾನು ಸದಾ ಇರುತ್ತೇನೆ.ಗುಜಾರಾತಿನಲ್ಲಿ ಗುಡಿ ಕೈಗಾರಿಕೆ ಬಹಳಷ್ಟು ದೊಡ್ಡಮಟ್ಟದಲ್ಲಿ ಬೆಳೆದಿದೆ.ಅಂತಹ ತಾಂತ್ರಿಕೆಯನ್ನು ಬಳಸಿಕೊಂಡು ನಮ್ಮಲ್ಲೂ ಗುಡಿಕೈಗಾರಿಕೆ ದೊಡ್ಡಮಟ್ಟದಲ್ಲಿ ಅಭಿವೃದ್ದಿ ಹೊಂದಬೇಕೆಂದು ಹೇಳಿದರು.

ಎಲ್ಲಾ ಸಹಕಾರ ಸಂಘಗಳಿಗೂ ಮಾದರಿ ಸಂಘ:
ಕುಂಭಶ್ರೀ ಸಹಕಾರ ಭವನವನ್ನು ಲೋಕಾಪರ್ಣೆಗೊಳಿಸಿದ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ ಅವರು ಮಾತನಾಡಿ ಅಭಿವೃದ್ದಿ ಪಥದಲ್ಲಿ ಸಾಗಲು ಆರ್ಥಿಕ ಶಿಸ್ತು ಬಹಳ ಅಗತ್ಯ. ಇದಕ್ಕೆ ಪೂರಕವಾಗಿ ಈ ನೂತನ ಕಟ್ಟಡ ಸಾಕ್ಷಿ ಆಗಿದೆ.ಸಾಲ ಮಾಡದೆ ಮುಂದಡಿ ಇಟ್ಟಿರುವುದು ಇತ್ತೀಚಿಗಿನ ದಿನದಲ್ಲಿ ಯಾರೂ ಇಲ್ಲ. ಆದರೆ ಕುಂಭಶ್ರೀ ಸಹಕಾರ ಭವನ ಸಾಲವಿಲ್ಲದೆ ನಿರ್ಮಾಣಗೊಂಡಿರುವುದು ಎಲ್ಲಾ ಸಹಕಾರ ಸಂಘಗಳಿಗೂ ಮಾದರಿಯಾಗಿದೆ ಎಂದರು.

ಇದೊಂದು ಭದ್ರ ಸೊಸೈಟಿ:
ಭದ್ರತಾ ಕೊಠಡಿ ಉದ್ಘಾಟಿಸಿದ ಡಾ.ರೇಣುಕಾಪ್ರಸಾದ್ ಕೆ.ವಿ ಅವರು ಮಾತನಾಡಿ ಸಾಲ ಮಾಡದೆ ಯಾವ ಕಾರ್ಯವೂ ಮುಂದುವರಿಯುವುದಿಲ್ಲ.ಅಂಥದ್ದರಲ್ಲಿ ಸಾಲ ಇಲ್ಲದೆ ಕಟ್ಟಿದ ಕಟ್ಟಡ ನನಗೆ ತುಂಬಾ ಸಂತೋಷ ಕೊಟ್ಟಿದೆ. ಪರಂಪರೆ ಸಂಸ್ಕೃತಿಯನ್ನು ಉಳಿಸಿ ಮುಂದೆ ಹೊಸತನವನ್ನು ತೋರಿಸುವ ಕೆಲಸ ಸಮುದಾಯ ಮಾಡುತ್ತಾ, ಸಂಖ್ಯೆಯಲ್ಲಿ ಕಡಿಮೆ ಇದ್ದರೂ ವ್ಯವಹಾರದಲ್ಲಿ ಮುಂದೆ ಇzವೆ ಎಂದು ತೋರಿಸಿಕೊಟ್ಟಿರುವುದು ಶ್ಲಾಘನೀಯ.ಹಾಗಾಗಿ ಇದೊಂದು ಭದ್ರ ಸೊಸೈಟಿಯಾಗಿ ಮೂಡಿ ಬಂದಿದೆ ಎಂದರು.

ಸಹಕಾರ ಸಂಘಗಳಿಂದ ಊರಿನ ಅಭಿವೃದ್ಧಿ: ಗಣಕಯಂತ್ರ ಉದ್ಘಾಟಿಸಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ ಸಂಘವು ಉತ್ತಮ ಹೆಜ್ಜೆ ಇಟ್ಟಿದೆ. ಇದು ಅಭಿವೃದ್ದಿಯ ಪಥ. 14 ನೇ ಶಾಖೆ 14ನೇ ತಾರೀಕಿನ ಮಕರ ಸಂಕ್ರಮಣದಲ್ಲಿ ಉದ್ಘಾಟನೆಗೊಂಡಿರುವುದು ಅಭಿವೃದ್ಧಿಯ ಸಂಕೇತವಾಗಿದೆ.ಸಹಕಾರಿ ಸಂಘಗಳ ಪೈಪೋಟಿಯ ಯುಗದಲ್ಲೂ ರೂ. ರೂ.59 ಕೋಟಿ ಠೇವಣಿ, 278 ಕೋಟಿ ವ್ಯವಹಾರ ನಡೆಸುವ ಮೂಲಕ ಉತ್ತಮ ಸಹಕಾರ ಸಂಘ ಎನಿಸಿಕೊಂಡಿದೆ.ಇದರ ಮೂಲಕ ಪ್ರಶಸ್ತಿಯನ್ನು ಪಡೆದಿದೆ.ರೂ.1 ಲಕ್ಷಕ್ಕೂ ಮೇಲೆ ಬಾಡಿಗೆ ಪಡೆಯುವ ಸಹಕಾರಿ ಸಂಘ ಅಂದರೆ ಅದು ಮಾಣಿ ಶಾಖೆ ಆಗಿದ್ದು, ಇವತ್ತು ಹಳ್ಳಿಯ ರೈತರ ಹಣವನ್ನು ಯಾವುದೋ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇಡುವ ಬದಲು ಸಹಕಾರಿ ಸಂಘದ ಮೂಲಕ ವ್ಯವಹಾರ ನಡೆಸಿ ಊರಿನ ಅಭಿವೃದ್ದಿಗೆ ಎಲ್ಲರು ಸಹಕಾರ ನೀಡಬೇಕೆಂದರು.

ಬೆಳ್ಳಾರೆಯಲ್ಲೂ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮುಂದಡಿ:
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ನ್ಯಾಯವಾದಿ ಭಾಸ್ಕರ್ ಪೆರುವಾಯಿ ಅವರು ಮಾತನಾಡಿ ಎಲ್ಲರ ಸಹಕಾರದಿಂದ ಇಷ್ಟು ದೊಡ್ಡ ಕಟ್ಟಡ ನಿರ್ಮಾಣ ಸಾಧ್ಯವಾಯಿತು. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಈ ಕಟ್ಟಡ ಕೇವಲ ಕುಂಬಾರ ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಯಾರೆಲ್ಲ ಸಹಕಾರ ಸಂಘದ ಸದಸ್ಯರಾಗಿದ್ದಾರೋ ಅವರಿಗೆಲ್ಲ ಸೇರಿದ್ದಾಗಿದೆ.ಮುಂದೆ ಇನ್ನೂ ೫ ಶಾಖೆಗಳನ್ನು ತೆರೆಯುವ ಚಿಂತನೆ ಇದೆ. ನಿಮ್ಮೆಲ್ಲರ ಸಹಕಾರ ಇದ್ದರೆ ಬೆಳ್ಳಾರೆಯಲ್ಲೂ ಇಂತಹ ಒಂದು ಕಟ್ಟಡ ಕಟ್ಟುವ ಯೋಜನೆ ಇದೆ. ನಿಮ್ಮ ಆಶೀರ್ವಾದ ಇದ್ದರೆ ಅದು ಕೂಡಾ ಸಾಕಾರಗೊಳ್ಳಲಿದೆ ಎಂದರು.

ಸಹಕಾರ ಸಂಘದಿಂದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಭದ್ರತೆ:
ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಅವರು ಮಾತನಾಡಿ ಕಟ್ಟ ಕಡೆಯ ವ್ಯಕ್ತಿಗೂ ಆರ್ಥಿಕ ಭದ್ರತೆ ಸಿಗುವುದು ಸಹಕಾರ ಸಂಘದಲ್ಲಿ ಮಾತ್ರ. ಪ್ರಧಾನಿ ನರೇಂದ್ರ ಮೋದಿಯವ ಆತ್ಮನಿರ್ಭರ ಭಾರತ ಸಹಕಾರ ಸಂಘ ಮಾಡುತ್ತಿದೆ ಎಂದರು.

ಹೊಸ ಯೋಜನೆಯ ತುಡಿತ ಸಾಕಾರಗೊಳ್ಳಲಿ:
ಬೆಂಗಳೂರು ಝೋನ್ 3 ಯ ಸಹಕಾರ ಸಂಘಗಳ ಉಪನಿಬಂಧಕ ಸಲೀಂ ಬಿ ಕೆ ಅವರು ಮಾತನಾಡಿ ಮಣ್ಣಿಗೆ ರೂಪ ಕೊಡುವ ಕೌಶಲ್ಯ ಹೊಂದಿರುವವರಿಗೆ ಬ್ಯಾಂಕಿಂಗ್ ಕೆಲಸ ದೊಡ್ಡ ಕೆಲಸ ಅಗುವುದಿಲ್ಲ.ಹಾಗಾಗಿ ಸಂಘ ಉತ್ತಮ ಅಭಿವೃದ್ದಿ ಹೊಂದಿದೆ. ಸಂಘದ ಅಧ್ಯಕ್ಷ ಭಾಸ್ಕರ್ ಪೆರುವಾಯಿ ಅವರ ಹೊಸ ಯೋಜನೆಯ ತುಡಿತ ಸಾಕಾರಗೊಳ್ಳಲಿ ಎಂದರು.

ವೃತ್ತಿ ಮೌಲ್ಯ ಶಾಶ್ವತ :
ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಅವರು ಮಾತನಾಡಿ ಸಮುದಾಯದ ಮೂಲ ಕಸುಬನ್ನು ಬಿಡದೆ ಉಳಿಸಿ ಸಹಕಾರ ತತ್ವದಲ್ಲಿ ಮಾಡುವ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ. ಯಾಕೆಂದರೆ ವೃತ್ತಿ ಯಾವತ್ತಿದ್ದರೂ ಶಾಶ್ವತ ಎಂದರು.

ಸಮುದಾಯಕ್ಕೆ ಹೆಮ್ಮೆಯ ವಿಚಾರ:
ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಂಬಾರರ ಮಾತೃಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಅವರು ಮಾತನಾಡಿ ದಕ್ಷಿಣ ಕನ್ನಡದಲ್ಲಿ ಒಂದೇ ದಿನ ನಾಲ್ಕು ಗುಡಿಕೈಗಾರಿಕ ಸಂಘಗಳು ನೊಂದಾವಣೆಗೊಂಡ ಈ ಸಂದರ್ಭದಲ್ಲಿ ನಮ್ಮ ಸಮುದಾಯಕ್ಕೆ ಹೆಮ್ಮೆಕೊಟ್ಟಿದೆ.ಕುಂಬಾರಿಕೆ ನಶಿಸಿ ಹೋಗುವ ಈ ಸಂದರ್ಭದಲ್ಲಿ ಸಹಕಾರ ಕೊಡುವ ಈ ಸೊಸೈಟಿಯ ಎಲ್ಲಾ ಆಡಳಿತ ವರ್ಗ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.

ಶಾಖೆಗಳನ್ನು ಮೈಸೂರು, ಮಡಿಕೇರಿ ಭಾಗಕ್ಕೆ ವಿಸ್ತರಿಸುವ ಚಿಂತನೆ:
ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜನಾರ್ದನ ಮೂಲ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಹಕಾರಿ ತತ್ವದಡಿಯಲ್ಲಿ ಸರ್ವ ಜನರ ಏಳಿಗೆಗಾಗಿ ದುಡಿಯುವ ಸಹಕಾರ ಸಂಘದ ಧ್ಯೇಯವಾಕ್ಯ ಸಹಕಾರದಿಂದ ಪ್ರಗತಿ, ಪ್ರಗತಿಗಾಗಿ ಸಹಕಾರವನ್ನು ಸಂಘದ ಸರ್ವ ಸದಸ್ಯರಿಗೆ ನೀಡುತ್ತಾ ಈ ಭಾಗದ ಅಪರೂಪದ ಸಹಕಾರ ಸಂಘವಾಗಿ ಹೊರಹೊಮ್ಮಿದೆ.ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಉತ್ತಮ ಸಹಕಾರ ಸಂಘ ಪ್ರಶಸ್ತಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದಿಂದ ಕೊಡಮಾಡುವ ಉತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ಕಳೆದ ಎರಡು ವರ್ಷಗಳಿಂದ ಪಡೆದಿದ್ದೆ ವೆ ಅಲ್ಲದೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಪ್ರಶಸ್ತಿಯನ್ನು ಪಡೆದಿರುತ್ತೇವೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಆದರ್ಶ ಆಡಳಿತ ಮಂಡಳಿಯಿಂದ ಈ ಪ್ರಗತಿ ಕಂಡಿದೆ.ಕುಂಬಾರಿಕೆಯ ಅಭಿವೃದ್ದಿಗಾಗಿ ಕೇಂದ್ರ ಸರಕಾರದ ಸ್ಪೂರ್ತಿ ಯೋಜನೆಯಲ್ಲಿ ಯಾಂತ್ರಿಕತೆಯೊಂದಿಗೆ ಸರಕಾರಕ್ಕೆ ಪ್ರಸ್ತಾಪ ಮಾಡಲಾಗಿದೆ.ಜೊತೆಗೆ ಕೌಡಿಚ್ಚಾರಿನಲ್ಲಿ ಸಭಾಭವನ ನಿರ್ಮಾಣದ ಚಿಂತನೆ ಮತ್ತು ಮೈಸೂರು, ಮಡಿಕೇರಿ ಭಾಗಕ್ಕೂ ಸಂಘದ ಶಾಖೆಗಳನ್ನು ವಿಸ್ತರಣೆ ಮಾಡುವ ಯೋಜನೆ ಹಾಕಿಕೊಂಡಿದ್ದೆವೆ ಎಂದರು.ಮಾಣಿ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಆಳ್ವ, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ ಚೇಂಡ್ಲ, ಬಂಟರ ಸಂಘ ಮಾಣಿ ಇದರ ಅಧ್ಯಕ್ಷ ಗಂಗಾಧರ ರೈ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಮಳಲಿ ಇಲ್ಲಿನ ಅಧ್ಯಕ್ಷ ಸುಂದರ ಬಂಗೇರ, ಶ್ರೀ ಧರ್ಮಶಾಸ್ತ ಟ್ರಸ್ಟ್‌ನ ಅಧ್ಯಕ್ಷರಾಗಿರುವ ನ್ಯಾಯವಾದಿ ರಾಮಪ್ರಸಾದ್ ಎಸ್ ಶುಭ ಹಾರೈಸಿದರು.

ಸನ್ಮಾನ:
ಸಂಘಕ್ಕೆ ವಿವಿಧ ರೀತಿಯಲ್ಲಿ ಅನುದಾನ ಒದಗಿಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮತ್ತು ಸಂಘಕ್ಕೆ ಮಾರ್ಗದರ್ಶನ ನೀಡುತ್ತಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ನಿರ್ದೇಶಕ ಹಿರಿಯರಾದ ಬಿ.ಎಸ್ ಕುಲಾಲ್, ಉತ್ತಮ ಪ್ರೋತ್ಸಾಹ ನೀಡುತ್ತಿರುವ ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಂಜಪ್ಪ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಸಂಘಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದವರನ್ನು ಮತ್ತು ಕಟ್ಟಡ ನಿರ್ಮಾಣದ ಕಾರ್ಯದಲ್ಲಿ ಸಹಕರಿಸಿದವರನ್ನು ಗೌರವಿಸಲಾಯಿತು.

ಮಾಣಿ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಮಾಣಿಗುತ್ತು ಸಚಿನ್ ರೈ, ನೇರಳಕಟ್ಟೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ, ಬಿ.ಎಸ್.ಎಫ್ ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಡಿ.ಚಂದಪ್ಪ ಮೂಲ್ಯ, ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಸುರೇಶ್ ಸೂರ್ಯ, ಮಾಣಿ ವಿಶ್ವಕರ್ಮ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ, ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಪಕ್ಕಾಳು, ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷ ನಾರಾಯಣ ಸಿ.ಪೆರ್ನೆ, ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಯು, ಬೆಳ್ಳಾರೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಶೈಲೇಶ್ ನೆಟ್ಟಾರು, ಮಾಣಿ ಕುಲಾಲ ಸಂಘದ ಅಧ್ಯಕ್ಷ ಭೋಜನಾರಾಯಣ ಮೂಲ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ನಿರ್ದೇಶಕ ಶಿವಪ್ಪ ಮೂಲ್ಯ ದಂಪತಿ ಶ್ರೀಗಳಿಗೆ ಫಲಪುಷ್ಪ ನೀಡಿ ಗೌರವಿಸಿದರು.ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಉಪಾಧ್ಯಕ್ಷ ದಾಮೋದರ, ನಿರ್ದೇಶಕರಾದ ಗಣೇಶ್ ಕುಲಾಲ್, ನಾಗೇಶ್ ಕುಲಾಲ್, ಪ್ರಶಾಂತ್ ಬಂಜನ್, ಶುಭ ಬಂಜನ್, ಸಚ್ಚಿದಾನಂದ ಡಿ, ಸೇಸಪ್ಪ ಕುಲಾಲ್, ಮೋಹನ್ ಕುಲಾಲ್ ಕಜೆ, ಗೋಪಾಲ್ ಕುಲಾಲ್ ಮಾಣಿ, ವಸಂತ ಬಿ.ಕೆ, ಶಿವಪ್ಪ ಮೂಲ್ಯ, ರಾಮಚಂದ್ರ ಮಾಸ್ಟರ್, ಕೇಶವ ಬೆಳ್ಳಾರೆ, ಚೆನ್ನಪ್ಪ ಕುಲಾಲ್ ಕಾಪಿಕಾಡು, ನ್ಯಾಯವಾದಿ ಉದಯ ಬಿ.ಕೆ, ವಿಟ್ಲ ಕುಲಾಲ ಸಂಘದ ಅಧ್ಯಕ್ಷ ಬಾಬು ಬಿ.ಕೆ, ಕರುಣಾಕರ ಕುಲಾಲ್, ನಾರಾಯಣ ಬರಿಮಾರ್, ನಾರಾಯಣ ಅತಿಥಿಗಳನ್ನು ಗೌರವಿಸಿದರು. ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ ಸಾರ್ಯ ಸ್ವಾಗತಿಸಿದರು. ನಿರ್ದೇಶಕ ಗಣೇಶ್ ವಂದಿಸಿದರು. ಭವ್ಯ ಪ್ರಾರ್ಥಿಸಿದರು. ಪುತ್ತೂರು ಕುಲಾಲ ಸಂಘದ ಅಧ್ಯಕ್ಷ ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಉಪಪ್ರಧಾನ ವ್ಯವಸ್ಥಾಪಕರಾದ ಆನಂದ ವೈ. ಮತ್ತು ಸುಜಾತ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕುಣಿತ ಭಜನೆ ವಿಶೇಷ ಆಕರ್ಷಣೆಯಾಗಿತ್ತು.

LEAVE A REPLY

Please enter your comment!
Please enter your name here