ಪರಂಪರೆ ಉಳಿದರೆ ಹಿಂದು ಸಮಾಜ, ಸಂಸ್ಕೃತಿ ಉಳಿಯಲು ಸಾಧ್ಯ – ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿ
ಹಿಂದು ಧರ್ಮದ ಉನ್ನತಿಗಾಗಿ ಕಾರ್ಯಕ್ರಮ ಯಶಸ್ವಿಯಾಗಲಿ- ಕೇಶವಪ್ರಸಾದ್ ಮುಳಿಯ
ದೇಶಕ್ಕೆ ಸಂದೇಶ ಕೊಡುವ ಕಾರ್ಯಕ್ರಮ – ಸಂಜೀವ ಮಠಂದೂರು
ಪುತ್ತೂರು: : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದರು ಗದ್ದೆಯಲ್ಲಿ ಜ.22ರಂದು ಜರುಗಲಿರುವ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ 78ನೇ ಜಯಂತ್ಯೋತ್ಸವ ಸಂಸ್ಮರಣೆ ಹಾಗೂ ಗುರುವಂದನೆ ಕಾರ್ಯಕ್ರಮದ ವಿವಿಧ ಚಟುವಟಿಕೆಗೆ ಸಂಬಂಧಿಸಿ ಜ.೧೫ರಂದು ದೇವಳದ ಸಭಾಭವನದ ಕೊಠಡಿಯಲ್ಲಿ ಕಾರ್ಯಾಲಯ ಉದ್ಘಾಟನೆ ನಡೆಯಿತು. ಇದೇ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಿಗೆ ಆಮಂತ್ರಣ ಪತ್ರ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಪರಂಪರೆ ಉಳಿದರೆ ಹಿಂದು ಸಮಾಜ, ಸಂಸ್ಕೃತಿ ಉಳಿಯಲು ಸಾಧ್ಯ:
ಕಾರ್ಯಾಲಯ ಉದ್ಘಾಟಿಸಿದ ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು ಮಾತನಾಡಿ ಬೈರವೈಕ್ಯ ಡಾ| ಶ್ರೀ ಬಾಲಗಂಗಾಧರನಾಥ ಶ್ರೀಗಳ 58 ಮತ್ತು 68ನೇ ಜಯಂತ್ಯೋತ್ಸವ ಯಸ್ವಿಯಾಗಿ ನಡೆದಿದೆ. 68ನೇ ಜಯಂತ್ಯೋತ್ಸವ ಪುತ್ತೂರಿನಲ್ಲಿ ನಡೆಯುವುದು ಅತೀವ ಸಂತೋಷ ತಂದಿದೆ. ಧರ್ಮದ ಉಳಿವು ಮತ್ತು ಬೆಳೆವು ಸಮುದಾಯದ ಚೌಕಟ್ಟಿನಲ್ಲಿ ಪರಂಪರೆ ಉಳಿದಾಗ ಮಾತ್ರ ನಡೆಯುತ್ತದೆ. ಆಗ ಹಿಂದು ಸಮಾಜದ ಸಂಸ್ಕೃತಿ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಆಯಾ ಧರ್ಮಗುರುಗಳು ಆಯಾ ಸಮಾಜವನ್ನು ಸಂರಕ್ಷಣೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಹಿಂದು ಧರ್ಮದ ತಾಯಿ ಬೇರು ಗಟ್ಟಿಯಾಗುತ್ತದೆ ಎಂದರು.
ಹಿಂದು ಧರ್ಮದ ಉನ್ನತಿಗಾಗಿ ಕಾರ್ಯಕ್ರಮ ಯಶಸ್ವಿಯಾಗಲಿ:
ಶ್ರೀ ಮಹಾಲಿಂಗೆಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಅನೇಕತೆಯಲ್ಲಿ ಏಕತೆ ಇರುವ ಹಿಂದು ಧರ್ಮದಲ್ಲಿ ಜಾತಿ ಪದ್ಧತಿಯ ಮೂಲಕ ಆಯಾ ಜೀವನ ಕ್ರಮ ಅನುಸರಿಸುವುದು ಸಹಜ. ಇಂತಹ ಸಂದರ್ಭದಲ್ಲಿ ಜೀವನಕ್ಕೆ ಸರಿಯಾದ ಮಾರ್ಗದರ್ಶನ ನೀಡುವ ಮಠ ಮಂದಿರ ಅಗತ್ಯ. ಈ ನಿಟ್ಟಿನಲ್ಲಿ ಶ್ರೀ ಡಾ| ಬಾಲಗಂಗಾಧರನಾಥ ಶ್ರೀಗಳ ಜಯಂತ್ಯೋತ್ಸವ ಸಮಾಜದ ಹಿಂದು ಧರ್ಮದ ಉನ್ನತಿಗೆ ಅತ್ಯಂತ ಯಶಸ್ವಿಯಾಗಿ ಮೂಡಿ ಬರಲಿ ಎಂದರು.
ದೇಶಕ್ಕೆ ಸಂದೇಶ ಕೊಡುವ ಕಾರ್ಯಕ್ರಮ:
ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾಗಿರವ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಮುಂದಿನ ಪೀಳಿಗೆಗೆ ಆದರ್ಶ ಕೊಡುವ ಕಾರ್ಯಕ್ರಮವಾಗಿ ಜಯಂತ್ಯೋತ್ಸವ ಯಶಸ್ವಿಯಾಗಿ ನಡೆಯಲಿದೆ. ದೇಶಕ್ಕೆ ಸಂದೇಶ ಕೊಡುವ ಕಾರ್ಯಕ್ರಮವಾಗಲಿ ಮತ್ತು ಕಾರ್ಯಾಲಯದ ಮೂಲಕವೇ ಮುಂದೆ ಕಾರ್ಯಕ್ರಮದ ಜವಾಬ್ದಾರಿ ನಿರ್ವಹಿಸಲು ದೇವರ ಅನುಗ್ರಹ ಸಿಗಲಿ ಎಂದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರಾಮದಾಸ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಸ್ವಾಗತಿಸಿ, ವಂದಿಸಿದರು.
ಜಯಂತ್ಯೋತ್ಸವ ಜಿಲ್ಲಾ ಸಮಿತಿ ಸಂಚಾಲಕ ಚಿದಾನಂದ ಬೈಲಾಡಿ, ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ, ತಾಲೂಕು ಸಹ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ವಿಟ್ಲ ಗೌಡ ಸೇವಾ ಸಂಘ ಅಧ್ಯಕ್ಷ ಮೋನಪ್ಪ ಗೌಡ, ಸುಳ್ಯದ ಚಂದ್ರಕೋಲ್ಚಾರ್, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಮಹಿಳಾ ಗೌಡ ಸೇವಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಜಯಂತ್ಯೋತ್ಸವ ತಾಲೂಕು ಸಮಿತಿ ಕಾರ್ಯದರ್ಶಿ ಶ್ರೀಧರ್ ಗೌಡ ಕಣಜಾಲು, ಪುತ್ತೂರು ವಲಯದ ಸುಂದರ ಗೌಡ ನಡುಬೈಲು, ಉಪ್ಪಿನಂಗಡಿ ವಲಯದ ಸುರೇಶ್,ಸವಣೂರು ವಲಯದ ಪ್ರವೀಣ್ ಕುಂಟ್ಯಾನ, ಪ್ರೇಮಾನಂದ, ಲಿಂಗಪ್ಪ ಗೌಡ ತೆಂಕಿಲ, ಅಮರನಾಥ್ ಗೌಡ ಬಪ್ಪಳಿಗೆ, ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್, ಜಿನ್ನಪ್ಪ ಗೌಡ ಮಳವೇಲು, ರವಿ ಮುಂಗ್ಲಿಮನೆ, ಉಡುಪಿ ಗೌಡ ಸಂಘದ ಅಧ್ಯಕ್ಷ ಸುರೇಶ್, ಒಕ್ಕಲಿಗ ಸ್ವಸಹಾಯ ಒಕ್ಕೂಟದ ವೆಂಕಪ್ಪ ಗೌಡ, ನ್ಯಾಯವಾದಿ ಮಹಾಬಲ ಗೌಡ, ಒಕ್ಕಲಿಗ ಪತ್ತಿನ ಸಹಕಾರಿ ಸಂಘದ ಪ್ರಕಾಶ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.